ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ: ಸೃಜನಶೀಲ ಸಂಘಟಕ ಜೆ.ಲೋಕೇಶ್

Last Updated 12 ಮಾರ್ಚ್ 2023, 0:15 IST
ಅಕ್ಷರ ಗಾತ್ರ

ರಂಗಭೂಮಿಯೇ ಜಗತ್ತು ಎನ್ನುವ ಜೆ. ಲೋಕೇಶ್‌ ಕನ್ನಡ ನಾಡು ಕಂಡ ಅಪರೂಪದ ರಂಗ ಸಂಘಟಕ. ಬಾಳಿನ ಎಪ್ಪತ್ತು ವಸಂತಗಳನ್ನು ಕಂಡಿರುವ ಅವರು ರಂಗಭೂಮಿಯಲ್ಲೇ ಐದು ದಶಕಗಳಿಂದ ತೊಡಗಿಸಿಕೊಂಡವರು. ಅವರ ಬದುಕಿನತ್ತ ಒಂದು ಹೊರಳುನೋಟ

ಜೆ.ಲೋಕೇಶ್ ಅವರ ಬಗ್ಗೆ ‘ಕನ್ನಡ ಹವ್ಯಾಸಿ ರಂಗಭೂಮಿಯ ಸೃಜನಾತ್ಮಕ ಪ್ರಕ್ರಿಯೆಯ ಅದೃಶ್ಯ ಅಂಟು’ ಎಂದು ಹಿರಿಯ ಕಲಾವಿದ ಸುದೇಶ್ ಮಹಾನ್ ಒಂದು ವಾಕ್ಯದಲ್ಲಿ ಹೇಳಿ ಬಿಡುತ್ತಾರೆ. ರಂಗಸಂಪದ ಲೋಕೇಶ್ ಕನ್ನಡ ರಂಗಭೂಮಿಯ ಅಂಟು ಅಷ್ಟೇ ಅಲ್ಲಾ, ನಂಟೂ ಬೆಸೆದ ಕ್ರಿಯಾಶೀಲ. ದೇವನೂರ ಮಹಾದೇವರ ‘ಸಂಬಂಜಾ ಅನ್ನೋದು ದೊಡ್ದು ಕನಾ...’ ಎಂಬ ಮಾತಿನಂತೆ ರಂಗಸಂಪದ ಲೋಕೇಶ್ ಇಂದಿಗೂ ಕನ್ನಡ ರಂಗಭೂಮಿಯಲ್ಲಿನ ಸಾವಯವ ಸಂಬಂಧವನ್ನು ನಿರೂಪಿಸುತ್ತಾ ಬಂದಿರುವ ಒಬ್ಬ ವಿಶಿಷ್ಟ ವ್ಯಕ್ತಿ. ಒಬ್ಬ ವ್ಯಕ್ತಿಯಾಗಿ ರಂಗಸಂಪದಕ್ಕೆ ಶಕ್ತಿಯನ್ನು ತುಂಬಿ ತುಂಬಿ ಕೊಟ್ಟ ಲೋಕೇಶ್ ಅವರಿಗೆ 70 ದಾಟಿದ ಪ್ರಾಯ. ತಮ್ಮ ರಂಗ ಬದುಕಿನ ಸುವರ್ಣ ಕಾಲಘಟ್ಟವನ್ನು ಅವರೀಗ ಸಂಭ್ರಮಿಸುತ್ತಿದ್ದಾರೆ.

60ರ ದಶಕದ ಕೊನೆಯ ಹಾಗೂ 70ರ ದಶಕದ ಮೊದಲ ಮೂರು ನಾಲ್ಕು ವರ್ಷಗಳು ಕನ್ನಡ ಹವ್ಯಾಸಿ ರಂಗಭೂಮಿಗೆ ಭದ್ರ ಬುನಾದಿ ಸಂದಕಾಲ. ಬೆಂಗಳೂರಿನ ಕಾಲೇಜುಗಳು ರಂಗಭೂಮಿಗೆ ಬಿತ್ತನೆ ಮಾಡಲು ಹಸನು ಮಾಡುತ್ತಿದ್ದ ಕಾಲ. ಹದವಾದ ಭೂಮಿಯನ್ನು ಉತ್ತು ಬಿತ್ತು ನೀರುಣಿಸಲು ಆದ್ಯ ಶ್ರೀರಂಗರು, ಬಿ.ವಿ.ಕಾರಂತರು, ಗ್ರೀನ್ ರೂಂ ನಾಣಿ, ಎಂ.ಎಸ್. ನಾಗರಾಜ್ ಮುಂದಾಗಿದ್ದರು. ನ್ಯಾಷನಲ್ ಕಾಲೇಜಿನ ಹಿಸ್ಟ್ರಿಯಾನಿಕ್ ಕ್ಲಬ್‍ನಲ್ಲಿ ಒಂದು ಪಡೆ ತಯಾರಾಗುತ್ತಿತ್ತು. ಇತ್ತ ಶ್ರೀ ರೇಣುಕಾಚಾರ್ಯ ಕಾಲೇಜಿನಲ್ಲಿ ಇನ್ನೊಂದು ಯುವ ಪಡೆ ಸಿದ್ಧವಾಗುತ್ತಿತ್ತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ‘ಮಿತ್ರಮೇಳ’ ರಂಗಬೆಳೆ ತೆಗೆಯಲು ಸಿದ್ಧವಾಗಿತ್ತು.

ರೇಣುಕಾಚಾರ್ಯ ಕಾಲೇಜಿನ ವಿದ್ಯಾರ್ಥಿಯಾಗಿ ರಂಗಪ್ರವೇಶ ಮಾಡಿದ ಲೋಕೇಶ್. ಅವರೊಂದಿಗೆ ಮತ್ತಷ್ಟು ಮಂದಿ-ಎನ್.ಕೆ.ಮೋಹನ್‌ರಾಂ, ಎನ್.ಎ.ಸೂರಿ, ಎನ್.ಕೆ.ರಾಮಕೃಷ್ಣ, ಟಿ.ಎಸ್.ನಾಗಾಭರಣ, ಚಂದ್ರಕುಮಾರ ಸಿಂಗ್ ಮುಂತಾದವರು. ಪ್ರತಿಷ್ಠಿತ ಉಲ್ಲಾಳ್ ಶೀಲ್ಡ್ ಪಾರಿತೋಷಕ ನಾಟಕ ಸ್ಪರ್ಧೆಯಲ್ಲಿ ಇವರೆಲ್ಲಾ ರಂಗಹುರಿಯಾಳುಗಳು.

1970ರ ಉಲ್ಲಾಳ್ ಶೀಲ್ಡ್ ನಾಟಕ ಸ್ಪರ್ಧೆಯಲ್ಲಿ ಎಂ.ಎಸ್.ನಾಗರಾಜ ಅವರ ನಿರ್ದೇಶನದಲ್ಲಿ ಶ್ರೀರಂಗರ ‘ಶೋಕಚಕ್ರ’ ನಾಟಕದಲ್ಲಿ ಲೋಕೇಶ್ ಮತ್ತು ಗೆಳೆಯರು ರಂಗಪ್ರವೇಶ ಮಾಡಿದರು. ಶರೀರ ಹಾಗೂ ಶಾರೀರ ಎರಡರಲ್ಲೂ ಸದೃಢರಾಗಿದ್ದ ಲೋಕೇಶ್ ತಮ್ಮ ಪಾತ್ರದ ಮೂಲಕ ಗಮನ ಸೆಳೆದರು. ಈ ಯುವಕರ ಗುಂಪನ್ನು ಗುರುತಿಸಿದ ಶ್ರೀರಂಗರು ನಾಟಕ ಅಕಾಡೆಮಿ ಆಯೋಜಿಸಿದ್ದ ಮೊದಲ ಹವ್ಯಾಸಿ ನಾಟಕ ತರಬೇತಿ ಶಿಬಿರಕ್ಕೆ ಶಿಬಿರಾರ್ಥಿಗಳನ್ನಾಗಿ ಆಹ್ವಾನಿಸಿದರು. ದಿನಕ್ಕೆ ಎರಡೂವರೆ ರೂಪಾಯಿ ಪ್ರೋತ್ಸಾಹಧನ ಸಿಗುತ್ತದೆ ಎಂಬುದೇ ಮುಖ್ಯ ಕಾರಣ ಹಲವರಿಗೆ. ಅಂದರೆ ಅವರ ಅಂದಿನ ಆರ್ಥಿಕ ಸಬಲತೆ ಅಷ್ಟಕ್ಕಷ್ಟೆ!

ಈ ಶಿಬಿರದಲ್ಲಿ ಬಿ.ವಿ.ಕಾರಂತ, ಪ್ರೇಮಾ ಕಾರಂತ, ಎನ್.ಎಸ್.ವೆಂಕಟರಾಂ, ಸಾಯಿ ಪರಾಂಜಪೆ, ಬಿ.ಎಂ.ಷಾ., ಬಿ.ಎನ್.ನಾಣಿ, ಜಿ.ವಿ.ಶಿವಾನಂದ, ಮುಂತಾದವರು ರಂಗಭೂಮಿಯ ಕಲಿಕೆಯ ದಿಕ್ಕುದೆಸೆ ತೋರಿದರು. ಶಿಬಿರದಲ್ಲಿ ಸಿದ್ಧಗೊಂಡ ನಾಟಕಗಳಲ್ಲೂ ಲೋಕೇಶ್ ಮುಖ್ಯ ಪಾತ್ರಗಳನ್ನೇ ಮಾಡಿದರು. ಮೈಕೈ ತುಂಬಿಕೊಂಡು, ಗುಂಪಿನಲ್ಲಿ ಎದ್ದು ಕಾಣುವಂತಿದ್ದ ಅವರಿಗೆ ರಾಜ, ಪೊಲೀಸ್ ಇನ್‌ಸ್ಪೆಕ್ಟರ್, ರಾಜಕಾರಣಿ, ಡಾಕ್ಟರ್, ಲಾಯರ್ ಮುಂತಾದ ಪಾತ್ರಗಳು ಸಹಜವಾಗಿಯೇ ದೊರಕುತ್ತಿದ್ದವು. ಕಂಚಿನ ಕಂಠವೂ ಇವರಿಗೆ ಉಪಕಾರಿಯಾಗಿತ್ತು.

1972ರಲ್ಲಿ ನಡೆದ ಐತಿಹಾಸಿಕ ಬಯಲು ರಂಗಭೂಮಿ ನಾಟಕೋತ್ಸವದ ‘ಈಡಿಪಸ್’ ನಾಟಕದ ಸ್ಟೇಜ್ ಮ್ಯಾನೇಜರ್ ಆಗಿ ಲೋಕೇಶ್‌ ಜವಾಬ್ದಾರಿ ನಿರ್ವಹಿಸಿದರು. ಅದೇ ಸಮಯದಲ್ಲಿ ಖ್ಯಾತ ನಿರ್ದೇಶಕ, ಕನ್ನಡ ಹೋರಾಟಗಾರ, ಆರ್.ನಾಗೇಶ್ ಅವರ ಸಂಪರ್ಕಕ್ಕೆ ಬಂದು ಮುಂದೆ ‘ರಂಗಸಂಪದ’ ರಂಗತಂಡದ ಸ್ಥಾಪನೆಗೆ ಕೈಜೋಡಿಸಿದರು.

ರಂಗಭೂಮಿ ಎಂದೂ ನಿಂತ ನೀರಲ್ಲ, ಸದಾ ಚಲನಶೀಲತೆಯನ್ನು ಮೈಗೂಡಿಸಿಕೊಂಡಿರುವ ಮಾಧ್ಯಮ. ವ್ಯಕ್ತಿವಿಕಸನ, ಸಂವಹನ ಕಲೆ, ನಾಯಕತ್ವಗುಣ, ಸಾಮುದಾಯಕ ಬದುಕಿನ ಎಲ್ಲಾ ಗುಣಗಳನ್ನು ಕಲಿಸುವ ಒಂದು ವಿಶಿಷ್ಟ ಕಲೆ. ಮೊದಲ ಹವ್ಯಾಸಿ ರಂಗ ತರಬೇತಿ ಶಿಬಿರದಲ್ಲಿ ಹುಟ್ಟಿಕೊಂಡ ‘ಶಕಶೈಲೂಷರು’ ರಂಗತಂಡ, ಬಯಲು ರಂಗಭೂಮಿ ಉತ್ಸವದ ನಂತರ ‘ಬೆನಕ’ ತಂಡವಾಗಿ ಒಂದಷ್ಟು ಮಂದಿ ಗುರುತಿಸಿಕೊಂಡರೆ ಲೋಕೇಶ್, ಆರ್.ನಾಗೇಶ್, ಸುಬ್ರಮಣ್ಯ, ಆರ್.ಕೇಶವರಾವ್, ‘ರಂಗಸಂಪದ’ ಹುಟ್ಟಿಗೆ ಕಾರಣರಾದರು. ನಂತರ ಹರಿಕೃಷ್ಣ, ಎಂ.ಸಿ.ಆನಂದ್ ಸೇರಿಕೊಂಡರು.

ಸರ್ಕಾರದಿಂದ ಸಹಾಯಧನ ತೆಗೆದುಕೊಂಡು ನಾಟಕ ಮಾಡುವುದನ್ನು ವಿರೋಧಿಸುತ್ತಲೇ ಅಸ್ತಿತ್ವಕ್ಕೆ ಬಂದ ‘ರಂಗಸಂಪದ’ ಇಂದಿಗೂ ತನ್ನ ನಿಲುವನ್ನು ಬದಲಿಸಿಕೊಂಡಿಲ್ಲ. ಸರ್ಕಾರದ ಸಹಾಯಧನಕ್ಕೆ ಕೈಯೊಡ್ಡದೆ, ಪ್ರೇಕ್ಷಕರ ಹಣದಲ್ಲೇ ನಾಟಕ ಮಾಡುತ್ತಾ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ರಂಗಪ್ರಯೋಗಗಳನ್ನು ಮಾಡದಿರುವುದರ ಬಗ್ಗೆ ಲೋಕೇಶ್ ಅವರಲ್ಲಿ ನೋವಿದೆ. ಆದರೆ ಅವರು ಕ್ರಿಯಾಶೀಲರಾಗಿದ್ದಷ್ಟು ಕಾಲ ‘ರಂಗಸಂಪದ’ ಕನ್ನಡ ರಂಗಭೂಮಿಗೆ ಅತ್ಯುತ್ತಮ ಪ್ರಯೋಗಗಳನ್ನು ನೀಡಿದ್ದು ದಾಖಲೆ ಬರೆದಿದೆ.

‘ರಂಗಸಂಪದ’ದ ಪ್ರಥಮ ರಂಗಪ್ರಯೋಗ ಗಿರೀಶ ಕಾರ್ನಾಡರ ‘ಯಯಾತಿ’ ಆರ್.ನಾಗೇಶರ ನಿರ್ದೇಶನದಲ್ಲಿ ಸಮರ್ಥವಾಗಿ ಮೂಡಿಬಂದ ಪ್ರಯೋಗ. ನಟನೆಯ ಬಗ್ಗೆ ಆಸಕ್ತಿ ಇದ್ದರೂ, ನಾಟಕಗಳಲ್ಲಿ ಅನೇಕ ಪಾತ್ರಗಳನ್ನು ಅಭಿನಯಿಸಿದ್ದರೂ, ಆರ್.ನಾಗೇಶರ ಒತ್ತಾಸೆಯಿಂದ ನೇಪಥ್ಯದ ಕೆಲಸದಲ್ಲೇ ಮುಂದುವರಿದರು. ಬೆಳಕು ವಿನ್ಯಾಸಕಾರರಾಗಿಯೂ ಕೆಲಸ ನಿರ್ವಹಿಸಿದ ಲೋಕೇಶ್ ಮುಖ್ಯವಾಗಿ ಸಂಘಟನೆಯಲ್ಲಿ ತಮ್ಮ ಸಾರ್ಥಕ್ಯವನ್ನು ಕಂಡುಕೊಂಡರು. ಬ್ಯಾಂಕ್ ಉದ್ಯೋಗಿಯಾಗಿ ಆರ್ಥಿಕ ಶಿಸ್ತು, ಹಾಗೂ ನಿರ್ವಹಣೆ ಕಲಿತಿದ್ದ ಅವರು ರಂಗಭೂಮಿಯಲ್ಲೂ ಆರ್ಥಿಕ ಶಿಸ್ತನ್ನು ಬಯಸಿದರು, ಹಾಗೆಯೇ ಅನುಷ್ಠಾನಕ್ಕೆ ತಂದರು. ಸಂಘಟನಾಕಾರರಾಗಿಯೇ ಉಳಿದು ಹಲವಾರು ಸಾಧನೆಗಳನ್ನು ಮಾಡಿದರು. ಸವಾಲುಗಳನ್ನು ಎದುರಿಸಿದರು.

ಚೋಮ, ಅಧೇ ಅಧೂರೆ, ತ್ರಿಶಂಕು, ಸನ್ನಿವೇಶ, ಒಡಲಾಳ, ಸಂದರ್ಭ, ಕದಡಿದ ನೀರು, ಹರಿಕೆಯಕುರಿ ಮುಂತಾದ ನಾಟಕಗಳನ್ನು ಸಮರ್ಥವಾಗಿ ಪ್ರದರ್ಶನ ಮಾಡಿದ ರಂಗಸಂಪದಕ್ಕೆ ಬೆನ್ನೆಲುಬಾದವರು ಲೋಕೇಶ್. ನಮ್ಮ ದೇಶ ಕಂಡ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ವಿರೋಧಿಸಿದ ರಂಗಸಂಪದ, ಶ್ರೀರಂಗರ ‘ಸಮಗ್ರ ಮಂಥನ’ ನಾಟಕವನ್ನು ಪ್ರದರ್ಶಿಸಿತು. ಇಂತಹ ನಾಟಕಗಳ ಆಯ್ಕೆ, ಪ್ರಯೋಗಗಳ ಹಿಂದೆ ಲೋಕೇಶ್ ಅವರಲ್ಲಿದ್ದ ಬಂಡಾಯಗಾರ ಕಾರಣ. ಸಿಜಿಕೆ ಕನ್ನಡದ ಮುಖ್ಯ ನಿರ್ದೇಶಕರಾಗಿ ಹೊರಹೊಮ್ಮಲು ಲೋಕೇಶ್ ಅವರ ಒತ್ತಾಸೆಯೇ ಕಾರಣ, ಒಡಲಾಳ, ಸುಲ್ತಾನ್ ಟಿಪ್ಪು, ಮಹಾಚೈತ್ರ, ನೀಗಿಕೊಂಡ ಸಂಸ ಮುಂತಾದ ಮಹತ್ವದ ನಾಟಕಗಳು ಇವರ ಸಾರಥ್ಯದಲ್ಲಿಯೇ ಮೂಡಿಬಂದವು.

ಬಿ.ವಿ.ವೈಕುಂಠರಾಜು, ಎಚ್.ಎಸ್.ಶಿವಪ್ರಕಾಶ್, ಕಿ.ರಂ.ನಾಗರಾಜ ಮುಂತಾದ ನಾಟಕಕಾರರನ್ನು ಕನ್ನಡ ರಂಗಭೂಮಿಯಲ್ಲಿ ತೊಡಗಿಸಲು ಲೋಕೇಶ್ ಅವರು ಹಾಕಿದ ಶ್ರಮ ಗಮನಾರ್ಹ. ಶ್ರೀರಂಗ, ಚಂದ್ರಶೇಖರ ಕಂಬಾರ, ಎಂ.ಎಸ್.ಕೆ. ಪ್ರಭು, ಗಿರೀಶ ಕಾರ್ನಾಡ, ಕೆ.ವೈ.ನಾರಾಯಣಸ್ವಾಮಿ ಅವರಂತಹ ನಾಟಕಕಾರರ ನಾಟಕಗಳು ರಂಗಸಂಪದದಲ್ಲಿ ಪ್ರದರ್ಶಿತವಾಗಿವೆ. ಪ್ರಸನ್ನ, ಎಚ್.ವಿ.ವೆಂಕಟಸುಬ್ಬಯ್ಯ, ಎನ್.ಎಸ್.ವೆಂಕಟರಾಂ, ಗೋಪಾಲಕೃಷ್ಣ ನಾಯರಿ, ಉಮಾಶಂಕರಸ್ವಾಮಿ, ಪ್ರಮೋದ್ ಶಿಗ್ಗಾಂವ್ ಮುಂತಾದ ನಿರ್ದೇಶಕರು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ನಾಟಕ, ನಿರ್ದೇಶಕರು, ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆಯಿಂದ ಮೊದಲ್ಗೊಂಡು, ತಾಲೀಮಿನ ದಿನಗಳು, ನಾಟಕದ ಪ್ರಚಾರಕಾರ್ಯ, ಹಾಗೂ ಪ್ರಯೋಗದಲ್ಲಿ ತಂಡದ ಎಲ್ಲರನ್ನು ಕ್ರಮಬದ್ಧವಾಗಿ, ಕ್ರಿಯಾಶೀಲರಾಗಿ ತೊಡಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದ ಲೋಕೇಶ್ ಅವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಯಶಸ್ವಿಯಾಗಿದ್ದು ಅವರಲ್ಲಿದ್ದ ಸಂಘಟನಾ ಚಾತುರ್ಯದಿಂದಲೇ.

ಅಪಾರ ಕನಸುಗಾರ ಲೋಕೇಶ್ ಅವರು ರಂಗದಾಖಲೆಯ ಡಿಜಿಟಲೀಕರಣದಂತಹ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದರು. ತಾಳ್ಮೆ ಹಾಗೂ ವ್ಯವಹಾರಿಕ ಜಾಣ್ಮೆಯಿಂದ ಸಂಸ್ಕೃತಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಹಲವು ಯೋಜನೆ ರೂಪಿಸಿ ಯಶಸ್ವಿಗೊಳಿಸಿದರು. ರಾಜ್ಯದಾದ್ಯಂತ ರಂಗತರಬೇತಿ ಶಿಬಿರಗಳು ಹಾಗೂ ನಾಟಕೋತ್ಸವಗಳನ್ನು ನಡೆಸಿದರು. ಕರ್ನಾಟಕ ರಂಗಭೂಮಿ ಪ್ರಾಧಿಕಾರವನ್ನು ಅನುಷ್ಠಾನ
ಗೊಳಿಸಬೇಕೆಂಬ ಅವರ ಒತ್ತಾಯಕ್ಕೆ ಸರ್ಕಾರ ಕಿವಿಗೊಡುವ ಮೊದಲೇ ಅವರ ಅಧ್ಯಕ್ಷ ಸ್ಥಾನ ರಾಜಕೀಯ ಸ್ಥಿತ್ಯಂತರಗಳಿಂದ ಮೊಟಕುಗೊಂಡಿತು.

ಅಧಿಕಾರಸ್ಥ ರಾಜಕಾರಣಿಗಳನ್ನು, ಸಂಸ್ಕೃತಿಗೆ ವಿಮುಖರಾದ ಅಧಿಕಾರಗಳನ್ನು ಯಾವ ಮುಲಾಜು ಇಲ್ಲದೆ ವಿರೋಧಿಸುವ, ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುವ ಶಕ್ತಿಯನ್ನು ಅಧಿಕಾರದಲ್ಲಿದ್ದೂ ಉಳಿಸಿಕೊಂಡಿದ್ದ ಲೋಕೇಶ್ ಇಂದಿಗೂ ಕನ್ನಡ ರಂಗಭೂಮಿಯ ಬಂಡಾಯಗಾರ. ಗೆಳೆಯ ಆರ್.ನಾಗೇಶ್ ಅವರೊಡಗೂಡಿ ಅವರು ದಾಖಲಿಸಿದ ‘ರಂಗವಿಹಂಗಮ’-ಕನ್ನಡ ಹವ್ಯಾಸಿ ರಂಗಭೂಮಿಯ ಅಪರೂಪದ ಸಾಕ್ಷ್ಯಚಿತ್ರ ಸರಣಿ. ಸಾರ್ಕ್ ಸಮ್ಮೇಳನ, ರಷ್ಯಾ ಉತ್ಸವ, ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ಸಂಘಟನೆಕಾರರಾಗಿ ಕೂಡ ಅವರ ಕೆಲಸ ಗಮನಾರ್ಹ.

ಬ್ಯಾಂಕ್ ಅಧಿಕಾರಿಯಾಗಿ, ಬ್ಯಾಂಕಿಂಗ್ ವಲಯದಲ್ಲಿ ಕಾರ್ಮಿಕ ಹೋರಾಟದ ಜೊತೆ ಜೊತೆಗೆ ಸಾಂಸ್ಕೃತಿಕ ವಾತಾವರಣವನ್ನು ಉಂಟುಮಾಡಿದ ಧೀಮಂತ. ಬ್ಯಾಂಕ್ ನೌಕರರಲ್ಲಿ ರಂಗಪ್ರಜ್ಞೆ ಮೂಡಿಸಿ, ಅಂತರ ಬ್ಯಾಂಕ್ ನೌಕರರ ರಂಗಸ್ಪರ್ಧೆಯ ಮೂಲಕ ಕನ್ನಡ ರಂಗಭೂಮಿಗೆ ನಟರನ್ನು, ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಟ್ಟ ಅವರು, ಬ್ಯಾಂಕ್ ನೌಕರರ ಬವಣೆಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ತಂದುಕೊಟ್ಟ ಮಾನವೀಯ ವ್ಯಕ್ತಿ.

ತಮ್ಮ ವೃತ್ತಿ ಮತ್ತು ಪ್ರವೃತ್ತಿ ಎರಡಕ್ಕೂ ನ್ಯಾಯ ಸಲ್ಲಿಸಿ, ನಿವೃತ್ತಿ ಜೀವನದಲ್ಲಿ ರಂಗ ಬದುಕಿನ ಸುವರ್ಣ ಕಾಲವನ್ನು ಮೆಲುಕು ಹಾಕುತ್ತಾ, ಮುಂದಿನ ದಿನಗಳಲ್ಲಿ ರಂಗಭೂಮಿಯ ಚೈತನ್ಯಕ್ಕೆ ಏನೆಲ್ಲಾ ಮಾಡಲು ಸಾಧ್ಯವೆಂಬ ಚಿಂತನೆಯಲ್ಲಿ ತೊಡಗಿರುವ ಲೋಕೇಶ್‌ ಪಾಲಿಗೆ ರಂಗಭೂಮಿಯೇ ಜಗತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT