ಸನ್ನಿ ಬಂದರೆ ಏನು ತೊಂದರೆ?

7

ಸನ್ನಿ ಬಂದರೆ ಏನು ತೊಂದರೆ?

Published:
Updated:

ಸನ್ನಿ ಲಿಯೊನ್‌ ಬೆಂಗಳೂರಿಗೆ ಬರಬಹುದೆ? ಬಂದು ಇಲ್ಲಿ ಹಾಡಿ ಕುಣಿಯಬಹುದೆ?

ಪ್ರತಿ ವರ್ಷ ಡಿಸೆಂಬರ್‌ ಚಳಿಯಲ್ಲಿ ಈ ಪ್ರಶ್ನೆ ಬೆಚ್ಚಗೆ ಮೇಲೇಳುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲೂ ಈ ಪ್ರಶ್ನೆ ಮೇಲೆದ್ದು ಬಿಸಿ ಬಿಸಿ ಚರ್ಚೆಗಳಾಗಿದ್ದವು. ಕೊನೆಗೆ ಸನ್ನಿ ಬಂದರೆ ನಮ್ಮ ಸಂಸ್ಕೃತಿ ಹಾಳಾಗುತ್ತದೆ ಎನ್ನುವವರ ಧ್ವನಿಯೇ ಗಟ್ಟಿಯಾಗಿ ಕೇಳಿ ಸನ್ನಿ ಬರದೆ, ಸಾಕಷ್ಟು ಯುವಜನರು ಸನ್ನಿ ಹಿಡಿದವರಂತೆ ಮೂಲೆ ಹಿಡಿದಿದ್ದೂ ಆಯಿತು.

ಈಗ ಮತ್ತದೇ ಪ್ರಶ್ನೆ. ವರ್ಷಾಂತ್ಯದ ಸಂಭ್ರಮದ ಆಚರಣೆಗೆ ಸನ್ನಿ ಬರುತ್ತಾಳಂತೆ. ಸುದ್ದಿ ಹರಡಿದ್ದೇ ತಡ, ‘ಬಂದರೆ ನಾವು ಸುಮ್ಮನಿರುವುದಿಲ್ಲ. ಪ್ರತಿಭಟನೆ ಮಾಡುತ್ತೇವೆ’ ಎಂದಿದ್ದಾರೆ ಕೆಲವು ಕನ್ನಡ ಸಂಸ್ಕೃತಿ ಹೋರಾಟಗಾರರು. ಕನ್ನಡದ ದೊರೆಯ ಕಥೆಯಿರುವ ಕನ್ನಡ ಚಿತ್ರದಲ್ಲಿ ನಟಿಸಲು ಈಕೆ ಒಪ್ಪಿಲ್ಲ, ಹಾಗಾಗಿ ಈಕೆಯ ಕಾರ್ಯಕ್ರಮ ಇಲ್ಲಿ ನಡೆಯುವುದನ್ನು ನಾವು ಒಪ್ಪಲ್ಲ ಎನ್ನುವುದು ಈ ಹೋರಾಟಗಾರರ ವಾದ.

 ಸಂಘಟಕರು ಈ ಬೆದರಿಕೆಗೆ ಜಗ್ಗಿಲ್ಲ. ‘ಕಳೆದ ವರ್ಷ ನಾವು ಪೊಲೀಸರಿಂದ, ಸಂಬಂಧಿಸಿದ ಅಧಿಕಾರಿಗಳಿಂದ ಸರಿಯಾದ ರೀತಿಯಲ್ಲಿ ಅನುಮತಿ ಪಡೆದಿರಲಿಲ್ಲ. ಈ ಸಲ ಎಲ್ಲ ವ್ಯವಸ್ಥೆಯನ್ನು ಕಾನೂನುಬದ್ಧವಾಗಿ ಮಾಡಿದ್ದೇವೆ. ಹಾಗಾಗಿ ಕಾರ್ಯಕ್ರಮ ನಡೆದೇ ತೀರುತ್ತದೆ’ ಎಂದಿದ್ದಾರೆ ಅವರು.

ಈ ಸಂಸ್ಕೃತಿ ಅನ್ನೋದೂ ಬಹಳ ವಿಚಿತ್ರ. ಬೆಂಗಳೂರು ಇಡೀ ದೇಶದ ಐಟಿ ಹಬ್‌. ಇಲ್ಲಿನ ಯಾವ ಮೂಲೆಯಲ್ಲಿ ಕುಳಿತು ಇಂಟರ್‌ನೆಟ್‌ ಓಪನ್‌ ಮಾಡಿದರೂ ಸನ್ನಿಯ ಚಿತ್ರ ವಿಚಿತ್ರ ಭಂಗಿಗಳು ಮುಕ್ತ ಮುಕ್ತ ಮುಕ್ತ! ಹಾಗಿದ್ದ ಮೇಲೆ ಸನ್ನಿ  ಇಲ್ಲಿಗೆ ಬಂದು  ಹಾಡಿ ಕುಣಿದರೆ ನಾಶವಾಗಲು ಅದ್ಯಾವ ಸಂಸ್ಕೃತಿ ಉಳಿದಿದೆ? ಎನ್ನುವುದು ಸನ್ನಿ ಅಭಿಮಾನಿಗಳ ಪ್ರಶ್ನೆ. ಈ ಮಧ್ಯೆ ಪೊಲೀಸರು ಮಧ್ಯೆ ಪ್ರವೇಶಿಸಿ ‘ಡಿಸೆಂಬರ್‌ ನಲ್ಲಿ ಪ್ರೋಗ್ರಾಂ ಮಾಡಬೇಡಿ. ನವೆಂಬರ್‌ 3ರಂದು ಮಾಡಿ’ ಎಂದು ಅನುಮತಿ ಕೊಟ್ಟಿದ್ದಾರೆ!

ಅದ್ಯಾಕೆ ನವೆಂಬರ್‌ ಮೂರು?  ಬಹುಶಃ ನವೆಂಬರ್‌ ಒಂದರಂದು ರಾಜ್ಯೋತ್ಸವ ಮುಗಿದ ಮೇಲೆ ಮಾಡಿದರೆ ಸಂಸ್ಕೃತಿ ಉಳಿಯಬಹುದು ಎನ್ನುವುದು ಪೊಲೀಸರ ಲೆಕ್ಕಾಚಾರ ಇರಬಹುದೆ.. ಎನ್ನುವುದು ಕುಹಕಿಗಳ ಪ್ರಶ್ನೆ. 

ಸನ್ನಿ ಬರೋದು, ಬಿಡೋದು ಆಮೇಲಿನ ಪ್ರಶ್ನೆ. ಆದರೆ ಈಗ ವಿವಾದ ಭುಗಿಲೆದ್ದರೆ ಸಂಘಟಕರ ಟಿಕೆಟ್‌ ಮಾರಾಟವಂತೂ ಭರದಿಂದ ಸಾಗುತ್ತದೆ ಎನ್ನುವುದು ನಿಸ್ಸಂಶಯ!

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !