ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣು ಹೇಳೇವ್ರಿ ಸ್ವಾಮೀ ನಾವು ನಿಮಗ...

Last Updated 26 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ವಿಶ್ವವೇ ಒಂದು ರಂಗಮಂಚ ಎಂದು ಪರಿಭಾವಿಸುತ್ತಾರೆ. ಜೀವನವೇ ಒಂದು ನಾಟಕ ಎನ್ನುವವರಿದ್ದಾರೆ. ರಂಗಮಂಚ ನಾಟಕಗಳಷ್ಟೇ ಅಲ್ಲ ಸಂಗೀತ, ನೃತ್ಯ ಮತ್ತಿತರ ಪ್ರದರ್ಶಕ ಕಲೆಗಳ ವೇದಿಕೆ. ನಮ್ಮಲ್ಲಿ ರಂಗಭೂಮಿ ಎಂದು ಬಾಯ್ತುಂಬ ಕರೆಯುತ್ತೇವೆ. ರಂಗ ಚಟುವಟಿಕೆಗಳು ವಿಶ್ವಮಾನ್ಯ. ಇತ್ತೀಚೆಗೆ ಅದಕ್ಕೊಂದು ದಿನ ನಿಗದಿಯಾಗಿ ಮಾರ್ಚ್‌ 27ರಂದು ವಿಶ್ವರಂಗ ದಿನ ಆಚರಿಸಲಾಗುತ್ತಿದೆ. .

ಇದರ ಆಚರಣೆಯ ಹಿಂದೆ ಒಂದು ಅಂತರರಾಷ್ಟ್ರೀಯ ಸಂಸ್ಥೆಯ ಶ್ರಮವಿದೆ. ಅದುವೇ ಇಂಟರ್‌ನ್ಯಾಷನಲ್‌ ಥಿಯೇಟರ್‌ ಇನ್‌ಸ್ಟಿಟ್ಯೂಟ್‌ (ಐಟಿಐ).

ಪ್ರಾಗ್‌ನಲ್ಲಿ 1948ರಲ್ಲಿ ಇಂಟರ್‌ನ್ಯಾಷನಲ್‌ ಥಿಯೇಟರ್‌ ಇನ್‌ಸ್ಟಿಟ್ಯೂಟ್‌ (ಐಟಿಐ) ಅಸ್ತಿತ್ವಕ್ಕೆ ಬಂದಿತು. ಅದರ ಪ್ರಧಾನ ಕಚೇರಿ ಪ್ಯಾರಿಸ್‌ನಲ್ಲಿದೆ. ಟೊಬ್ಲಾಸ್‌ ಬಿಯಾಸೊನೆ (Toblas Biancone) ಇದರ ಮುಖ್ಯಸ್ಥ. ನಾಟಕ, ನೃತ್ಯ, ಸಂಗೀತ ಮತ್ತಿತರ ರಂಗಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶ.

‘ಥಿಯೇಟರ್‌ ಆಫ್‌ ನೇಷನ್ಸ್‌’ ಅಭಿವೃದ್ಧಿ ಇದರ ಗುರಿ. ವಿಶ್ವದ ಎಲ್ಲೆಡೆ ಕಚೇರಿಗಳನ್ನು ಹೊಂದಿದೆ. ರಂಗಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳು, ಸಮಾವೇಶ, ಚರ್ಚೆಗಳನ್ನು ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲೂ ಹಮ್ಮಿಕೊಳ್ಳುವುದು ವಿಶೇಷ.

1961ರಲ್ಲಿ ಐಟಿಐ ಆರಂಭಿಸಿದ ವಿಶ್ವರಂಗ ದಿನ ಇದೀಗ ವಿಶ್ವದಾದ್ಯಂತ ಮಾರ್ಚ್‌ 27ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಐಟಿಐನ 9ನೇ ವಿಶ್ವ ಕಾಂಗ್ರೆಸ್‌ 1961ರ ಜೂನ್‌ನಲ್ಲಿ ಸಮಾವೇಶಗೊಂಡಿತ್ತು. ಅಧ್ಯಕ್ಷ ಅರ್ವಿ ಕಿವಿಮಾ ರಂಗಭೂಮಿ ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಿದ್ದರು.

ಸ್ಕ್ಯಾಂಡಿನೇವಿಯನ್‌ ದೇಶಗಳು ಅನುಮೋದಿಸಿದವು. ಅಭೂತಪೂರ್ವ ಬೆಂಬಲ ದಕ್ಕಿದ ಪರಿಣಾಮ ವಿಶ್ವವೇ ರಂಗಭೂಮಿ ದಿನಾಚರಣೆ ಆಚರಿಸುತ್ತಿದೆ.

ಅಂದು ವಿಶ್ವದ ಹೆಸರಾಂತ ರಂಗಕರ್ಮಿಯನ್ನು ಆಹ್ವಾನಿಸಿ ಅವರಿಂದ ವಿಶ್ವಕ್ಕೆ ಸಂದೇಶ ಹೊರಡಿಸುವ ಸಂಪ್ರದಾಯವನ್ನು ಐಟಿಐ ಹುಟ್ಟು ಹಾಕಿತು. ಆ ಸಂದೇಶವನ್ನು ವಿಶ್ವದ ಹಲವು ಭಾಷೆಗಳಿಗೆ ತರ್ಜುಮೆ ಮಾಡಿ ಜನತೆಗೆ ತಲುಪಿಸುವ ನಿರ್ಧಾರವನ್ನು ಕೈಗೊಂಡಿತು.

ಮೊದಲ ವಿಶ್ವಸಂದೇಶ 1962ರಲ್ಲಿ ಶುರುವಾಯಿತು. ಸಂದೇಶ ಬರೆದವರು ಫ್ರಾನ್ಸ್‌ನ ಜೀನ್‌ ರೋಕ್ತುವಾ. ಹೆಲ್ಸಿಂಕಿಯಲ್ಲಿ ಸಮಾವೇಶಗೊಂಡ ಸಂದರ್ಭದಲ್ಲಿ ಸಂದೇಶ ಹೊರಡಿಸಲಾಗಿತ್ತು. ಆನಂತರ ವಿಯೆನ್ನಾದಿಂದ ಮುಂದುವರಿಯಿತು. 2002ರಲ್ಲಿ ಕನ್ನಡದ ಗಿರೀಶ್‌ ಕಾರ್ನಾಡ್‌ ವಿಶ್ವಸಂದೇಶ ಬರೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

2019ರ ವಿಶ್ವಸಂದೇಶವನ್ನು ಕ್ಯೂಬಾದ ಹವಾನಾದಲ್ಲಿ ನೆಲೆಸಿರುವ ರಂಗನಿರ್ದೇಶಕ ಕಾರ್ಲಸ್‌ ಸೆಲ್‌ಡ್ರನ್‌ ಬರೆದಿದ್ದಾರೆ.

ಕಾರ್ಲಸ್‌ ಸೆಲ್‌ಡ್ರನ್‌
1963ರಲ್ಲಿ ಜನಿಸಿದ ಕಾರ್ಲಸ್‌ ಸೆಲ್‌ಡ್ರನ್‌ ಪ್ರದರ್ಶಕ ಕಲೆಗಳ ವಿಷಯದಲ್ಲಿ ಮ್ಯಾಡ್ರಿಡ್‌ನ ರೇ ಜುವಾನ್‌ ಕಾರ್ಲಸ್‌ ಯುನಿವರ್ಸಿಟಿ ಸ್ನಾತಕೋತ್ತರ ಪದವಿ ಪಡೆದವರು. ಪ್ರೊಫೆಸರ್‌ ಕೂಡ. ಯುರೋಪಿಯನ್‌ ಕ್ಲಾಸಿಕ್ಸ್‌, ಸಮಕಾಲೀನ ಲ್ಯಾಟಿನ್‌ ಅಮೆರಿಕನ್‌ ನಾಟಕಗಳು ಮತ್ತು ತಮ್ಮದೇ ಕಲ್ಪನೆಯ ಸ್ವಂತ ಕೃತಿಗಳನ್ನು ರಂಗಪ್ರಯೋಗಕ್ಕೊಳಪಡಿಸಿ ಹೆಸರಾದವರು.

‘ಟೆನ್‌ ಮಿಲಿಯನ್‌’ ಅವರ ಅತ್ಯಂತ ಜನಪ್ರಿಯ ರಂಗಪ್ರಯೋಗ. 1988ರಿಂದ 2018ರ ಅವಧಿಯಲ್ಲಿ ಒಟ್ಟು ಹದಿನಾರು ಸಲ ಪ್ರತಿಷ್ಠಿತ ಕ್ಯೂಬಾ ರಂಗ ವಿಮರ್ಶಕರ ಪ್ರಶಸ್ತಿಗೆ ಪಾತ್ರರಾಗಿದ್ದು ಒಂದು ದಾಖಲೆ.

**

ಜಾಗತೀಕರಣದಿಂದ ಏಕಾಂಗಿಯಾಗುತ್ತಿರುವ ಮನುಷ್ಯ ಕುಬ್ಜಗೊಳ್ಳುತ್ತಿದ್ದಾನೆ. ಜೇಡರ ಹುಳುವಿನಂತೆ ಬಲೆ ಕಟ್ಟಿಕೊಂಡು ತಾನೇ ಸಿಕ್ಕಿಹಾಕಿಕೊಂಡಿದ್ದಾನೆ. ಜಗತ್ತು ಯಾಂತ್ರಿಕಗೊಂಡು ಮಾನವೀಯ ಸಂವೇದನೆಗಳು ಮರೆಯಾಗಿ ಹಿಂಸೆ, ದ್ವೇಷ ಹೆಚ್ಚಿದೆ. ಇದಕ್ಕೆ ರಂಗಕಲೆ ಮದ್ದಾಗಬಹುದು. ಮನುಷ್ಯಕುಲವನ್ನು ಭಾವನಾತ್ಮಕವಾಗಿ ಬೆಸೆಯುವ ರಂಗಭೂಮಿ ಒಂದು ಸಮುದಾಯ ಕಲೆ. ಅದ್ಭುತ ಸಂವಹನ ಕಲೆ. ಭಾರತ ಧರ್ಮ, ಜಾತಿ ಗೊಂದಲಗಳಲ್ಲಿ ವಿಭಜಿತವಾಗುತ್ತಿರುವ ಸಮಯದಲ್ಲಿ ರಂಗಕರ್ಮಿಗಳು ಮನಸುಗಳ ಬೆಸೆಯುವ ಜವಾಬ್ದಾರಿಯನ್ನು ನಾಟಕಗಳ ಮೂಲಕ ಮಾಡಬೇಕಿದೆ.

–ಸಿ. ಬಸವಲಿಂಗಯ್ಯ (ನಿರ್ದೇಶಕರು, ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ)

****

ಕಾರ್ಲಸ್‌ ಸೆಲ್‌ಡ್ರನ್‌ ವಿಶ್ವ ಸಂದೇಶದ ಆಯ್ದ ಸಾಲುಗಳು

ಪ್ರತಿನಿತ್ಯ ಪ್ರದರ್ಶನ ಮಂದಿರಕ್ಕೆ ಭೇಟಿ ಕೊಡುವ ಸಮಾಜದ ತರಹೇವಾರಿ ವರ್ಗದ ಪ್ರೇಕ್ಷಕ ಬಂಧುಗಳು, ತಮ್ಮ ಬದುಕಿನ ಕೆಲಕಾಲವನ್ನು ಕಲಾವಿದರೊಂದಿಗೆ ಹಂಚಿಕೊಳ್ಳುವ ಅದೇ ಜಾಗವೇ ರಂಗಮನೆ.

*

ಮುಖವಾಡಗಳನ್ನು ತೊಟ್ಟು, ನಾವ್ಯಾರು ಎಂಬುದನ್ನು ಬಿಟ್ಟುಕೊಡಲಾಗದ ಆತಂಕದಲ್ಲಿ, ಯಾರದೋ ಮಾತುಗಳನ್ನು ಆಡುತ್ತಾ, ಕತ್ತಲಿನಲ್ಲಿ ಕೈಕೈ ಹಿಡಿಯುವ ಅವಕಾಶ ರಂಗಭೂಮಿ.

*

ರಂಗಭೂಮಿ ಎಂಬುದು ಜಗತ್ತನ್ನೇ ಆವರಿಸಿಕೊಂಡಿರುವ ಸ್ವತಂತ್ರ ದೇಶ. ಈ ಸತ್ಯ ನನಗೆ ತಿಳಿದ ಘಳಿಗೆಗಳಲ್ಲಿಯೇ ನನ್ನೊಳಗೆ ಒಂದು ನಿರ್ಧಾರ ಮೂಡಿತ್ತು. ಅದು ಬಿಡುಗಡೆ ದೊರೆವ ಅನುಭವ. ಅದಕ್ಕಾಗಿ ದೂರ ಪಯಣದ ಅಗತ್ಯವಿಲ್ಲ. ನೀವಿರುವ ತಾಣ ಬಿಡಬೇಕಾಗಿಲ್ಲ. ಎಲ್ಲಿಂದೆಲ್ಲಿಗೋ ಓಡಬೇಕಾಗಿಲ್ಲ. ನೀವಿರುವ ಜಾಗವೇ ಸಾರ್ವಜನಿಕವೂ ಹೌದು. ನಿಮಗೆ ಬೇಕಾದಂತಹ ತಂಡ ನಿಮ್ಮ ಜೊತೆಗೆ ಇದ್ದೇ ಇರುತ್ತದೆ. ಅಲ್ಲಿ, ಆ ನಿಮ್ಮ ಮನೆಯ ನೆರೆಹೊರೆಯಲ್ಲಿಯೇ ಬದುಕಿನ ವಾಸ್ತವ ಇರುತ್ತದೆ.

ನೀವು ಅದೇ ಜಾಗದಲ್ಲಿ ಹಿಂದೆಂದೂ ಕಂಡಿರದಂತಹ ಅಪರೂಪದ ರಂಗಪಯಣವೊಂದನ್ನು ರೂಪಿಸುತ್ತೀರಿ. ಆ ಮಹಾಕಾವ್ಯದಂತಿರುವ ಪಯಣ ರೂಪಿಸುವುದಕ್ಕೆ ನೀವು ಚಲಿಸದೆಯೇ ಪಯಣಿಗರಾಗುತ್ತೀರಿ. ನಿಮ್ಮ ಸುತ್ತಲ ಬದಲಾಗದ ಬದುಕಿನ ಒತ್ತಡಗಳನ್ನು ಅದರ ವೇಗದಲ್ಲಿಯೇ ರಂಗದ ಮೇಲೆ ಬರುವಂತೆ ಕಟ್ಟುತ್ತೀರಿ.
(ಕನ್ನಡಕ್ಕೆ: ಬಿ. ಸುರೇಶ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT