ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗ ಪ್ರಯೋಗ: ಕಾಲದ ಹಿಂಸೆಗೆ ಕಾವ್ಯ ಕನ್ನಡಿ

ವಿಕ್ರಮ ವಿಸಾಜಿ
Published : 17 ಆಗಸ್ಟ್ 2024, 23:25 IST
Last Updated : 17 ಆಗಸ್ಟ್ 2024, 23:25 IST
ಫಾಲೋ ಮಾಡಿ
Comments

ಕಾಲದ ಪ್ರಜ್ಞೆಯೇ ಕಲಾಪ್ರಜ್ಞೆ ಎಂಬಂತೆ ಬುಕ್‌ಬ್ರಹ್ಮ ಸಾಹಿತ್ಯೋತ್ಸವದಲ್ಲಿ ನಿರ್ದಿಗಂತ ತಂಡದಿಂದ ‘ಭಾಷೆ ಬೇರೆಯಾದರೂ ಭಾವವೊಂದೇ’ ಎಂಬ ಕಾವ್ಯಕಥಾರಂಗದ ಪ್ರಸ್ತುತಿಯಿತ್ತು. ಕನ್ನಡ, ತಮಿಳು, ಮಲಯಾಳಂ, ತೆಲುಗು ಕವಿತೆಗಳನ್ನು ಆಯಾ ಭಾಷೆಯಲ್ಲಿಯೇ ವಾಚಿಸುತ್ತ, ಭಾರತದ ಹಲವು ಭಾಷೆಯ ಅನುವಾದಗಳು, ಜಾಗತಿಕ ಕಾವ್ಯದ ತುಣುಕುಗಳು, ಅಲ್ಲಲ್ಲಿ ಕೆಲ ಕಥೆಯ ಪ್ರಸಂಗಗಳನ್ನು ಕನ್ನಡದಲ್ಲಿ ನಿರೂಪಿಸಲಾಯಿತು. ಇದೊಂದು ವಿಶಿಷ್ಟ ಸಂಯೋಜನೆ. ಕವಿತೆ, ಕಥೆ, ಹಾಡು ಮತ್ತು ಸಂಗೀತದ ಕೂಡುಕುಟುಂಬ. ಇದರ ಮುಖ್ಯ ಆಶಯ ಯುದ್ಧ, ಹಿಂಸೆ, ಅಸಮಾನತೆ ಮತ್ತು ಕೋಮುವಾದವನ್ನು ಎದುರುಗೊಳ್ಳವುದು. ನಮ್ಮ ಕಾಲದ ಹಿಂಸೆಗೆ, ತಲ್ಲಣಗಳಿಗೆ ಕನ್ನಡಿ ಹಿಡಿಯುವುದು. ಇದಕ್ಕಾಗಿ ಬ್ರೆಕ್ಟ್, ನೆರೂದಾ, ಗೌರೀಶ್ ಕಾಯ್ಕಿಣಿ, ಎ.ಕೆ.ರಾಮಾನುಜನ್, ಅಯ್ಯಪ್ಪ ಪಣಿಕ್ಕರ್, ಕ್ವಾಸಿರ್ ಹಸನ್, ಶ್ರೀಶ್ರೀ, ನಿಖಿಲ್ ಸಜ್ಜನ್, ಫೈಜ್ ಅಹಮ್ಮದ್ ಫೈಜ್, ಗುಲ್ಜಾರ್, ಆದವನ್, ಮುಕುಂದ ನಾಗರಾಜನ್, ವಿಡುಗಲೈ, ಬೋಳುವಾರು ಮಹಮ್ಮದ್ ಕುಂಞ, ಎಂ.ಡಿ.ವಕ್ಕುಂದ, ಸುಧಾ ಆಡುಕಳ ಮತ್ತು ಸಂವರ್ತ್ ಸಾಹಿಲ್ವಿ ಅವರ ರಚನೆಗಳನ್ನು ರಂಗಕ್ಕೆ ಅಳವಡಿಸಲಾಗಿತ್ತು. ಈ ಕಾವ್ಯ ಕೊಲಾಜ್ ಮಾನವೀಯ ಲೋಕದ ಹಂಬಲದಲ್ಲಿತ್ತು. ಕವಿತೆಯ ಮೂಲಕವೇ ಅಭಿವ್ಯಕ್ತಿ ಪಡೆದಿದ್ದರಿಂದ ಇದೊಂದು ಮಹತ್ವದ ವಿಭಿನ್ನ ಪ್ರಯೋಗ. ಇಡೀ ಪ್ರಸ್ತುತಿಯ ಶರೀರ ಕಾವ್ಯಮಯವಾಗಿದ್ದರೆ, ಆತ್ಮವು ವೈಚಾರಿಕವಾಗಿತ್ತು.

ಇದರ ಕೇಂದ್ರದಲ್ಲಿದ್ದವರು ಬಹುಭಾಷಾ ನಟ ಪ್ರಕಾಶ್ ರಾಜ್‌. ಅವರ ವಿಶಿಷ್ಟ ವಾಚನ ಶೈಲಿ, ಕವಿತೆಗಳ ತೀವ್ರಲೋಕ ಮತ್ತು ಹಿತಮಿತ ಸಂಗೀತದ ಸ್ಪರ್ಶ ಬೆರಗುಗೊಳಿಸಿದವು. ಒಂದು ಕವಿತೆಯಿಂದ ಇನ್ನೊಂದು ಕವಿತೆಗೆ ಸಾಗುತ್ತ, ಪ್ರೇಕ್ಷಕರನ್ನು ಒಳಗೊಳ್ಳುತ್ತ ಯೋಚನೆಗೆ ತೊಡಗಿಸಿದರು. ಪ್ರಕಾಶ್‌ ಕವಿತೆಗಳ ಓದಿನ ಮೂಲಕವೇ ರಂಗದಲ್ಲಿ ತುಂಬು ಕ್ರಿಯಾಶೀಲತೆಯನ್ನು ಉಂಟುಮಾಡಿದ್ದರು. ಇಲ್ಲಿನ ಕವಿತೆಗಳೇ ಹಲವು ಕತೆಗಳನ್ನು ಮಂಡಿಸಿದ್ದವು. ನೋವಿನ, ಸಂಕಟದ ಕತೆಗಳಿವು. ಯುದ್ಧದ ಚೀತ್ಕಾರ ಮತ್ತು ನಿರರ್ಥಕತೆಯ ಕತೆಗಳು. ಮನುಷ್ಯರ ಒಳಗಿನ ಪ್ರೇಮ ಮತ್ತು ಕನಸುಗಳು ಗಾಯಗೊಂಡ ಕತೆಗಳು. ಕವಿ ಇಂಥ ಗಾಯಗಳ ಸಂಗಾತಿ. ಇಲ್ಲಿನ ಅಧಿಕಾರದ ರಾಜಕಾರಣ ಮತ್ತು ಧರ್ಮ ಉಂಟು ಮಾಡಿರುವ ಗಾಯ, ಮನುಷ್ಯರು ತಮಗೆ ತಾವೇ ಮಾಡಿಕೊಂಡ ಗಾಯಗಳನ್ನು ಮಾಯಿಸಿಕೊಳ್ಳಲು ಶತಮಾನಗಳಿಂದಲೂ ನಡೆಯುತ್ತಿರುವ ಚಡಪಡಿಕೆ ಇಲ್ಲಿನ ಕವಿತೆಗಳಲ್ಲಿತ್ತು.

‘ತುಂಬಾ ಸರಳ ಅಸಮಾನತೆಯ, ಅನ್ಯಾಯದ ಜಗತ್ತನ್ನು ಬದಲಾಯಿಸೋದು. ಹೆಚ್ಚೇನೂ ಬೇಕಾಗಿಲ್ಲ ನಾವೆಲ್ಲಾ ಒಂದಾಗಿದ್ದರೆ ಸಾಕು’ ಎಂಬ ಆರಂಭದ ಮಾತು ಮುಂದಿನ ಕವಿತೆಗಳನ್ನು ಪೋಣಿಸಿದ ಸೂತ್ರವಾಗಿತ್ತು. ಜಾತಿ, ಧರ್ಮ, ಭಾಷೆ, ಲಿಂಗ, ಅಂತಸ್ತು, ಅಧಿಕಾರವು ನಿರ್ಮಿಸಿರುವ ಗೋಡೆಗಳು. ದೇಶ ದೇಶಗಳ ನಡುವೆ ಎದ್ದಿರುವ ಗೋಡೆಗಳು, ಮನುಷ್ಯರ ನಡುವೆ ನಿಂತಿರುವ ಗೋಡೆಗಳು, ರಕ್ತದ ಕಲೆ ಅಂಟಿಕೊಂಡಿರುವ ಗೋಡೆಗಳು. ಕಣ್ಣಿಗೆ ಕಾಣುವ ಗೋಡೆಗಳು, ಅದೃಶ್ಯ ಗೋಡೆಗಳು. ಎಷ್ಟೆಲ್ಲಾ ಗೋಡೆಗಳನ್ನು ದಾಟಿ ಮನುಷ್ಯರು ಮುನ್ನಡೆಯಬೇಕಾಗಿದೆ. ತನ್ನ ಬಿಡುಗಡೆಗಾಗಿ ತನ್ನದೇ ಆಂತರ್ಯದ ದನಿ ಆಲಿಸಬೇಕಾಗಿದೆ. ಈ ಎಚ್ಚರವನ್ನು ಧ್ವನಿಸುವಂತೆ ಕಾವ್ಯದ ಪ್ರಸ್ತುತಿಯಿತ್ತು. ಕವಿತೆಗಳ ಆಯ್ಕೆಯೂ ಒಂದು ಸವಾಲು. ಪುಟ್ಟ ಕವಿತೆಗಳು ಪ್ರೇಕ್ಷಕರನ್ನು ತಲುಪುವ ಮೊದಲೇ ಮುಗಿದುಹೋಗುತ್ತವೆ. ದೀರ್ಘ ಕವಿತೆಗಳು ಪ್ರೇಕ್ಷಕರನ್ನು ತಲುಪುವಷ್ಟರಲ್ಲಿ ದಣಿದುಹೋಗುತ್ತವೆ. ಇದರ ವಿನ್ಯಾಸ ಮತ್ತು ನಿರ್ದೇಶನ ಕೈಗೊಂಡ ಶ್ರೀಪಾದ ಭಟ್ಟರು ಕವಿತೆಗಳ ಆಯ್ಕೆ ಮತ್ತು ಪ್ರಮಾಣದಲ್ಲಿ ಸೂಕ್ಷ್ಮತೆ ಮೆರೆದಿದ್ದಾರೆ. ಜಟಿಲ, ಸಂಕೀರ್ಣವಲ್ಲದ ಆದರೆ ರಾಜಕೀಯ ಪ್ರಜ್ಞೆಯುಳ್ಳ ಕವಿತೆಗಳಿವು. ಸಂವಹನಕ್ಕೆ ತೊಡಕಾಗದ ಇವುಗಳ ಶೈಲಿ ಪ್ರೇಕ್ಷಕರನ್ನು ಬಹುಬೇಗ ತಲುಪುತ್ತಿತ್ತು.

ಪ್ರದರ್ಶನದಲ್ಲಿ ಧರ್ಮ ಮತ್ತೆ ಮತ್ತೆ ಉಲ್ಲೇಖಗೊಂಡಿತ್ತು. ಯಾವುದು ಧರ್ಮ? ದಯವೇ ಧರ್ಮವೊ? ಅಥವಾ ಯಾರನ್ನಾದರೂ ಕೊಂದು ಉಳಿಸಿಕೊಳ್ಳಬೇಕಾದ ಧರ್ಮವೊಂದಿದೆಯೊ? ಎಂಬ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಾತು ರಂಗಕ್ಕಿಳಿದಿತ್ತು. ಧರ್ಮಗಳ ನಡುವೆ ಪರಸ್ಪರ ಬೆಳೆದು ನಿಂತಿರುವ ಫೋಬಿಯಾ. ಈ ಭಯವನ್ನು ಹಬ್ಬಿಸುತ್ತಿರುವ ಗುಂಪುಗಳು, ಇದಕ್ಕಾಗಿ ಸೃಷ್ಟಿಸಲಾಗುತ್ತಿರುವ ಹೊಸ ಹೊಸ ನಿರೂಪಣೆಗಳ ನಡುವೆ ಕಾವ್ಯದ ನಿರೂಪಣೆಗಳು ಸಜ್ಜುಗೊಳ್ಳುತ್ತಿದ್ದವು. ಮನುಷ್ಯರಾಳದ ಈ ಭಯವೇ ದ್ವೇಷವನ್ನು ಹುಟ್ಟುಹಾಕುವುದು. ಯುದ್ಧಗಳನ್ನು ಸಂಭ್ರಮಿಸುವುದು. ಇದನ್ನು ಮೀರಲು ಇರುವ ಹಲವು ದಾರಿಗಳನ್ನು ತಡಕಾಡುತ್ತಿರುವಂತಿತ್ತು ಪ್ರದರ್ಶನ. ‘ಗೆದ್ದವರ ಪಾಳಯದಲ್ಲೂ ಸೋತವರ ಪಾಳಯದಲ್ಲೂ ಸತ್ತವರು ಸಾಮಾನ್ಯ ಜನರೇ ಆಗಿದ್ದರು’ ಎಂಬ ಬ್ರೆಕ್ಟ್ ಕವಿತೆ, ‘ಸೋತವನು ಚಕ್ರವರ್ತಿಯಾದ, ಗೆದ್ದವನು ಗೊಮ್ಮಟನಾದ’ ಭರತ ಬಾಹುಬಲಿಯ ಕವಿತೆ, ‘ಹಕ್ಕಿಗಳ ಕಲರವ ಕೇಳಬೇಕೆಂದರೆ ಯುದ್ಧ ವಿಮಾನಗಳ ಸದ್ದಡಗಬೇಕು’ ಎಂಬ ಕವಿತೆಗಳು ರಂಗದ ಮೇಲೆ ಕಾಲೂರಿ ನಿಂತಿದ್ದವು. ಪ್ರದರ್ಶನ ಮುಗಿದ ಮೇಲೂ ಅನುರಣಿಸುತ್ತಿದ್ದವು. ಉದ್ದಕ್ಕೂ ದ್ವೇಷ, ಹಿಂಸೆಯ ಎದುರು ಪ್ರೇಮ ಒಂದು ಭಾವವಾಗಿ, ಸಹಿಷ್ಣುತೆ ಒಂದು ನಂಬಿಕೆಯಾಗಿ, ಅಹಿಂಸೆ ಒಂದು ಮೌಲ್ಯವಾಗಿ ಕಲ್ಪಿಸಿಕೊಳ್ಳಲಾಗಿತ್ತು.

ಕವಿತೆಗಳನ್ನು ತಮ್ಮ ಗಡಸು ಕಂಠದಲ್ಲಿ ವಾಚಿಸುತ್ತ, ನಾಟಕೀಯವಾಗಿ ನಿರೂಪಿಸುತ್ತ, ಭಾಷೆಯ ಒತ್ತು, ಲಯ, ಮಾತಿನ ಸಹಜತೆಗೆ ಹತ್ತಿರವಾಗುತ್ತ ವೈವಿಧ್ಯಮಯವಾಗಿ ಕವಿತೆಗಳ ಲೋಕವನ್ನು ಪ್ರಕಾಶ್‌ ತೆರೆದಿಟ್ಟರು. ಪ್ರಶ್ನೆ, ವ್ಯಂಗ್ಯ, ಮೌನ, ಚೀರಾಟ, ವಿಷಾದದ ನಗುವನ್ನು ಉದ್ದಕ್ಕೂ ಬಳಸಿಕೊಂಡರು. ಈ ಪ್ರದರ್ಶನದಲ್ಲಿ ದೇಹದ ಭಂಗಿಗಳಿಗೆ ಅಷ್ಟು ಅವಕಾಶವಿರಲಿಲ್ಲ. ಮಾಂಸದೂಟದ ಕವಿತೆಯೊಂದರಲ್ಲಿ ಕೆಲಹೊತ್ತು ಕೆಳಗೆ ಕೂತು ಹಾವಭಾವಗಳನ್ನು ಪ್ರದರ್ಶಿಸಿದ್ದನ್ನು ಬಿಟ್ಟರೆ ಉಳಿದಂತೆ ಅವರ ಕಂಠವೇ ನಟನಾಗಿ, ದೇಹ ಪ್ರೇಕ್ಷಕನಾಗಿತ್ತು.

ಇಲ್ಲಿನ ಕವಿತೆಗಳು ಗ್ರಾಂಥಿಕ ಭಾಷೆಗೆ ಒಲಿದುಕೊಂಡಿದ್ದವು. ಪ್ರಕಾಶ್ ತರಹದ ಪಳಗಿದ ನಟರು ಇಂಥ ಕವಿತೆಗಳನ್ನು ಕಂಠಕ್ಕೆ ತಂದುಕೊಂಡಾಗ ಆಡುಮಾತಿನ ವರಸೆಗೆ ಬದಲಾಯಿಸಿಕೊಳ್ಳುವರು. ಬರಹದ ಲಯಗಳನ್ನು ಮಾತಿನ ಲಯಗಳಿಗೆ ಇಳಿಸಿದ್ದರು. ನಟನ ಮಾತು, ಮಾತಿನ ನಟನೆ ಎರಡೂ ಆಪ್ಯಾಯಮಾನವಾಗಿತ್ತು. ಹಲವು ಭಾಷೆಗಳಲ್ಲಿ ಇದನ್ನು ಏಕಕಾಲಕ್ಕೆ ಸಾಧಿಸುವುದು ಒಂದು ದೊಡ್ಡ ಸವಾಲು. ಅದನ್ನು ಅವರು ಯಶಸ್ವಿಯಾಗಿ ಎದುರಿಸಿದ್ದರು. ಜೊತೆಗೆ ಸಂಗೀತದ ಸಾಹಚರ್ಯ, ಆಲಾಪ, ಹಾಡಿನ ತುಣುಕುಗಳು (ಶಾಲೋಮ್ ಸನ್ನುತಾ, ಮುನ್ನಾ ಮೈಸೂರು) ಕಾವ್ಯಕಥಾರಂಗಕ್ಕೆ ಇನ್ನಷ್ಟು ತ್ರಾಣ ತುಂಬಿದ್ದವು. ರಂಗದ ಹಿಂಭಾಗದಲ್ಲಿದ್ದ ಚಿತ್ರಗಳಲ್ಲಿ ಮುಳ್ಳು ತಂತಿ ಬೇಲಿ ದಾಟಿನಿಂತ ಹೆಣ್ಣುಮಗಳು, ಹಲವು ಭಾಷೆಗಳ ಶಾಬ್ದಿಕ ಮರ, ಯುದ್ಧದ ವರದಿಗಳನ್ನು ಹೊತ್ತುನಿಂತ ಸುದ್ದಿಪತ್ರಿಕೆಯ ಶೀರ್ಷಿಕೆಗಳು ಕಾವ್ಯಕಥಾರಂಗದ ದೃಶ್ಯಕಾವ್ಯದಂತಿದ್ದವು. ಇಂಥದ್ದೊಂದು ಪ್ರದರ್ಶನದ ಮೂಲಕ ನಿರ್ದಿಗಂತವು ಕಾವ್ಯದ ಅನುಭೂತಿಯನ್ನೂ, ಕಾಲದ ಅನುಭೂತಿಯನ್ನೂ ಒಟ್ಟಿಗೆ ಮೂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT