ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯಲ್ಲೇ ಇಂಚರಗೆ ಜೋಷ್

Last Updated 16 ಮೇ 2019, 19:30 IST
ಅಕ್ಷರ ಗಾತ್ರ

ಶಾ ಲಾ ದಿನಗಳಿಂದಲೂ ನಟನೆಯ ಕನಸನ್ನು ಪೋಷಿಸಿಕೊಂಡು ಬಂದವರು ಇಂಚರ‌ ಜೋಷಿ. ಪ್ರತಿಭೆ ಮತ್ತು ಸೌಂದರ್ಯ ಎರಡೂ ಹೊಂದಿರುವ ಇವರು, ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

‘ಮರಳಿ ಬಂದಳು ಸೀತೆ’ ಧಾರಾವಾಹಿಯಲ್ಲಿ ನಟಿಸಿದ್ದ ಇವರು, ಸದ್ಯ ರಂಗನಾಯಕಿ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ.

ಓದಿನ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದಿದ್ದ ಇವರ ನಟನೆಯ ಕನಸಿಗೆ ಪೋಷಕರು ಬೆಂಬಲವಾಗಿದ್ದಾರೆ. ಇಂಚರ ಅವರ ಅಪ್ಪ ಧಾರವಾಡದವರು, ಅಮ್ಮ ಕುಂದಾಪುರದವರು. ಆದರೆ, ಇವರು ಹುಟ್ಟಿ, ಬೆಳೆದಿದ್ದು ಬೆಂಗಳೂರಿನಲ್ಲಿ. ಅಕ್ಕ ಮಾನಸಿ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ.

ಇಂಚರ, ಎಂಟನೇ ತರಗತಿಯಲ್ಲಿದ್ದಾಗ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವರದಕ್ಷಿಣಿಗೆ ಸಂಬಂಧಿಸಿದ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದರು. ಈ ನಾಟಕಕ್ಕೆ ಮೂರನೇ ಸ್ಥಾನ ದೊರಕಿತ್ತು. ಆಗಲೇ ಇವರಿಗೆ ನಟನೆಯ ಅಭಿರುಚಿ ಬೆಳೆದಿದ್ದು. ಒಂಒತ್ತನೇ ತರಗತಿಯಲ್ಲಿದ್ದಾಗ ವೃದ್ಧಾಶ್ರಮದ ಕಥೆಯನ್ನಿಟ್ಟುಕೊಂಡು ಮತ್ತೊಂದು ನಾಟಕ ಮಾಡಿದರು. ಪಿಯುಸಿಯಲ್ಲಿ ನೃತ್ಯ ರೂಪಕವನ್ನು ಮಾಡಿ ಭೇಷ್‌ ಎನಿಸಿಕೊಂಡಿದ್ದರು.

ಮನದೊಳಗೆ ಅಭಿನಯದ ವ್ಯಾಮೋಹ ಪುಟಿಯುತ್ತಿದ್ದರೂ ಶಿಕ್ಷಣ ಪಡೆಯುವ ಹಂಬಲದಿಂದಾಗಿ ಅತ್ತ ಹೆಚ್ಚು ಗಮನ ಹರಿಸಲಾಗಲಿಲ್ಲ. ಪದವಿ ಮೆಟ್ಟಿಲು ಏರಿದ ನಂತರವೇ ಇವರು ಕಿರುತೆರೆ ಅಂಗಳ ಪ್ರವೇಶಿಸಿದ್ದು.

‘ನನ್ನ ನಟನೆಯ ಹುರುಪನ್ನು ಮೊದಲು ಗುರುತಿಸಿದ್ದು ಅಪ್ಪ. ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದೆ. ಆಗ ಅಪ್ಪ ‘ನಿನಗೆ ನಟಿಯಾಗಲು ಇಷ್ಟ ಇದೆಯೇ?’ ಎಂದು ಕೇಳಿದರು. ಹೌದು, ಎಂದ ಕೂಡಲೇ ನಾಟಕ ತಂಡವೊಂದಕ್ಕೆ ಸೇರಿಸಿದರು. ಅಲ್ಲಿ ಕ್ಯಾಮೆರಾ ಎದುರಿಸುವುದರ ಜೊತೆಗೆ ಅಭಿನಯದ ಪಟ್ಟುಗಳನ್ನು ಕಲಿತುಕೊಂಡೆ’ ಎಂದು ನಟನೆಯ ಮೊದಲ ಹೆಜ್ಜೆಗಳನ್ನು ವಿವರಿಸುತ್ತಾರೆ.

‘ಒಟ್ಟಾರೆ ಅಭಿನಯದ ಬೀಸು ನಮಗೆ ತಿಳಿದಿರುತ್ತದೆ. ಆದರೆ, ತಂತ್ರಗಳ ಕುರಿತು ಹೆಚ್ಚು ತಿಳಿವಳಿಕೆ ಇರುವುದಿಲ್ಲ. ಆದರೆ ರಂಗಭೂಮಿ ನನಗೆ ಅಭಿನಯದ ಸೂಕ್ಷ್ಮಗಳನ್ನು ಪರಿಚಯಿಸಿಕೊಟ್ಟಿತು. ಒಂದೊಂದು ಭಾವಗಳ ಅಭಿವ್ಯಕ್ತಿಗೂ ಒಂದೊಂದು ತಂತ್ರಗಳಿರುತ್ತವೆ. ಅದು ನನಗೆ ತಿಳಿದಿದ್ದು ರಂಗಭೂಮಿಯಲ್ಲಿದ್ದಾಗಲೇ’ ಎಂದು ಇಂಚರ ವಿವರಿಸುತ್ತಾರೆ.

‘ಅಮ್ಮನಿಗೆ ಪ್ರಾರಂಭದಲ್ಲಿ ನಾನು ನಟಿಯಾಗುವುದು ಇಷ್ಟವಿರಲಿಲ್ಲ. ಅವರನ್ನು ಒಪ್ಪಿಸಿದ್ದು ಅಪ್ಪ. ಆದರೆ ಅಪ್ಪ ಕಳೆದ ಜನವರಿಯಲ್ಲಿ ತೀರಿಕೊಂಡರು. ಅವರು ಪರದೆಯ ಮೇಲೆ ನನ್ನನ್ನು ನೋಡಲೇ ಇಲ್ಲ ಎನ್ನುವ ಕೊರಗು ಇದೆ’ ಎಂದು ಬೇಸರಪಡುತ್ತಾರೆ ಇಂಚರ.

ಮಾಮೂಲಿ ಜಾಡಿಗಿಂತ ಕೊಂಚ ಭಿನ್ನ ದಾರಿಯಲ್ಲಿ ಸಾಗುವ ಪಾತ್ರಗಳಲ್ಲಿ ನಟಿಸಬೇಕು ಎಂಬ ಬಯಕೆ ಇವರದು. ‘ನಟಿಯಾಗಿ ಜನಪ್ರಿಯವಾಗವೇಕು ಎಂಬ ಹಂಬಲವೇನೋ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ, ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಬದ್ಧತೆ ಇದೆ’ ಎಂದು ಬಣ್ಣದ ಲೋಕದ ಶಿಸ್ತಿನ ವಿದ್ಯಾರ್ಥಿಯಂತೆ ವಿವರಣೆ ನೀಡುತ್ತಾರೆ ಈ ಉದಯೋನ್ಮುಖ ನಟಿ.

ಬಿ.ಕಾಂ ಓದುತ್ತಿರುವ ಇಂಚರ, ಸಿ.ಎ ಮಾಡುವ ಕನಸು ಹೊಂದಿದ್ದರು. ಸದ್ಯ ಕಿರುತೆರೆಯಲ್ಲಿ ಬ್ಯುಸಿ ಆಗಿರುವ ಇವರಿಗೆ, ಶಿಕ್ಷಣದ ಕನಸು ನನಸಾಗದಿರುವ ಬಗ್ಗೆ ಬೇಸರವಿಲ್ಲ.

‘ಯಾವುದೇ ಕೆಲಸವನ್ನಾದರೂ, ಇಷ್ಟಪಟ್ಟು ಮಾಡಬೇಕು. ಬಣ್ಣದ ಲೋಕ ಖುಷಿ ನೀಡುತ್ತಿದೆ. ಇಲ್ಲಿಯೇ ಖ್ಯಾತಿ ಗಳಿಸಬೇಕೆಂಬುದು ನನ್ನ ಸದ್ಯದ ಗುರಿ’ ಎನ್ನುವುದು ಅವರ ಸ್ಪಷ್ಟ ನುಡಿ.

‘ಬಾಲ್ಯದಿಂದಲೂ, ಸಿನಿಮಾ ನೋಡುವಾಗ ನಟನೆಯ ತಂತ್ರಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಆ ಪ್ರವೃತ್ತಿಯನ್ನು ಈಗಲೂ ಮುಂದುವರಿಸುತ್ತಿದ್ದೇನೆ. ಪರದೆಯ ಮೇಲಿನ ನನ್ನ ತಪ್ಪು, ಒಪ್ಪುಗಳನ್ನು ಬರೆದಿಟ್ಟುಕೊಂಡು ಸರಿಮಾಡಿಕೊಳ್ಳುತ್ತೇನೆ’ ಎಂದು ಬಣ್ಣದ ಲೋಕದ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಚಿತ್ರೀಕರಣದ ಸಮಯಲ್ಲಿ ಸೂಕ್ಷ್ಮ ಸಂಗತಿಗಳನ್ನು ಮುತುವರ್ಜಿಯಿಂದ ಗಮನಿಸುತ್ತೇನೆ ಎನ್ನುವ ಇವರು, ನಿರ್ದೇಶಕಿಯಾಗುವ ಗುರಿಯನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT