ಅಚ್ಚುವಿನ ಗುಬ್ಬಿ

7

ಅಚ್ಚುವಿನ ಗುಬ್ಬಿ

Published:
Updated:

ಅದೊಂದು ಕಡಲ ತಡಿಯ ಊರು. ಈ ಊರಿನಲ್ಲಿ ಬೊಂಬೆ ಮಾರಾಟ ಮಾಡುವ ಪುಟ್ಟ ಹುಡುಗಿ ಗುಬ್ಬಿ. ಆಕಸ್ಮಿಕವಾಗಿ ಅವಳಿಗೆ ಅಚ್ಚು ಸಿಗುತ್ತಾನೆ. ಕೆಲ ಸಮಯ ಜೊತೆಯಲ್ಲಿ ಕಳೆಯುವ ಅಚ್ಚು–ಗುಬ್ಬಿ ಪ್ರಾಣ ಸ್ನೇಹಿತರಾಗುತ್ತಾರೆ. ಅನಾಥ ಹುಡುಗಿಯಾದ ಗುಬ್ಬಿ ಅಚ್ಚುವನ್ನು ಹೇಗಾದರೂ ಮಾಡಿ ಅವನ ಮನೆಯವರ ಬಳಿ ಸೇರಿಸುತ್ತೇನೆ ಎಂದು ಮಾತು ನೀಡುತ್ತಾಳೆ. ಮಾತಿನಂತೆ ಅಚ್ಚುವನ್ನು ಕರೆದುಕೊಂಡು ಬೆಂಗಳೂರಿಗೆ ಹೊರಡುತ್ತಾಳೆ. ಆ ಪಯಣ ಅವರ ಜೀವನದಲ್ಲಿ ಬಿಡಿಸಲಾದರ ಬಾಂಧವ್ಯವನ್ನು ಹುಟ್ಟು ಹಾಕುತ್ತದೆ. 14ವರ್ಷಗಳ ನಂತರ ಮತ್ತೆ ನಿನ್ನನ್ನು ಭೇಟಿ ಮಾಡುತ್ತೇನೆ ಎಂದು ಅಚ್ಚು ಗುಬ್ಬಿಗೆ ಮಾತು ನೀಡುತ್ತಾನೆ. ಬೆಂಗಳೂರು ಸೇರಿದ ಈ ಇಬ್ಬರೂ ಪುಟಾಣಿಗಳು ಬೇರಾಗುತ್ತಾರೆ. ಹೀಗೆ ಹದಿನಾಲ್ಕು ವರ್ಷ ಕಳೆದು ಅಚ್ಚು ಆರ್ಯನಾಗಿ, ಗುಬ್ಬಿ ಮೈಥಿಲಿಯಾಗಿ ಮತ್ತೆ ಸೇರಲು ತವಕಿಸುತ್ತಿರುತ್ತಾರೆ. ಹೌದು ಇದು ‘ಸೀತಾ ವಲ್ಲಭ’ ಧಾರಾವಾಹಿಯ ಕತೆ. ಆ ಕತೆಯ ನಾಯಕಿ ಮೈಥಿಲಿ.

ಮೈಥಿಲಿ ಮುಗ್ಧ ಸ್ವಭಾವದ, ಗುಂಗುರು ಕೂದಲಿನ, ಎಲ್ಲರೊಂದಿಗೂ ಹೊಂದಿಕೊಂಡು ಬದುಕುವ ಸುಂದರ ಮೊಗದ ಚೆಲುವೆ.

ಈ ಸಿಗ್ಧಸೌಂದರ್ಯದ ಖನಿಯಾದ ಮೈಥಿಲಿಯ ನಿಜನಾಮದೇಯ ಸುಪ್ರಿತಾ ಸತ್ಯನಾರಾಯಣ. ಮೈಸೂರಿನವರಾದ ಇವರು ಎಂಜಿನಿಯರಿಂಗ್ ಪದವಿ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದೃಷ್ಟ ಎನ್ನುವುದು ಯಾರಿಗೆ ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಇದಕ್ಕೆ ಸಾಕ್ಷಿ ಈಕೆ. ಇವರು ಕಲರ್ಸ್ ಕನ್ನಡ ವಾಹಿನಿಯ ಸ್ಕ್ರಿಪ್ಟ್ ರೈಟರ್ ಹುದ್ದೆಗೆ ಪರೀಕ್ಷೆ ಬರೆಯಲು ಬಂದಿದ್ದರು. ಇವರನ್ನು ನೋಡಿದ ವಾಹಿನಿಯವರು ಆಡಿಷನ್‌ಗೆ ಕರೆದಿದ್ದರು. ಹೀಗೆ ಪರೀಕ್ಷೆ ಬರೆಯಲು ಬಂದ ಹುಡುಗಿ ಸೀತಾ ವಲ್ಲಭದಲ್ಲಿ ಆರ್ಯನ ವಲ್ಲಭೆಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದರು.

ಮೊದಲಿನಿಂದಲೂ ಕಲೆಯ ಒಲವು ಇವರನ್ನು ಆವರಿಸಿಕೊಂಡಿತ್ತು. ನೃತ್ಯ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಒಂದು ಹೆಜ್ಜೆ ಮುಂದಿದ್ದ ಇವರು ಕ್ರೀಡಾಯಲ್ಲೂ ಆಸಕ್ತಿ ಹೊಂದಿದವರು. 

ಕ್ಯಾಮೆರಾ ಎದುರಿಸಿದ ಮೊದಲ ಅನುಭವದ ಬಗ್ಗೆ ಸುಪ್ರೀತಾ ಹೇಳುವುದು ಹೀಗೆ ‘ಆಡಿಷನ್ ದಿನವೇ ನಾನು  ಮೊದಲ ಬಾರಿ ಕ್ಯಾಮೆರಾ ಮುಂದೆ ನಿಂತಿದ್ದು. ಆ ದಿನದ ಅನುಭವ ಚೆನ್ನಾಗಿತ್ತು. ಅಂದು ಅಲ್ಲಿ ಬೇರೆ ಬೇರೆ ನಟರಿದ್ದರು. ಅವರು ಆಡಿಷನ್ ನೀಡುತ್ತಿದ್ದ ರೀತಿಯನ್ನು ನೋಡಿ, ಕಲಿತು ಆಡಿಷನ್ ನೀಡಿದೆ. ಶೂಟಿಂಗ್ ಆರಂಭವಾದ ಮೊದಲ ದಿನ ನಟಿಸುವುದು ಸ್ಪಲ್ಪ ಕಷ್ಟ ಎನ್ನಿಸಿತ್ತು. ಕಾರಣ ಎಲ್ಲವೂ ಹೊಸತು. ಡೈಲಾಗ್ ಹೇಳುವುದು ಕಷ್ಟ ಎನ್ನಿಸುತ್ತಿತ್ತು. ಆದರೆ ಆಮೇಲಾಮೇಲೆ ಅದು ಒಗ್ಗಿಕೊಂಡಿತು. ದಿನ ಕಳೆದಂತೆ ನಟನೆ ತುಂಬಾನೇ ಸಲೀಸು ಎನ್ನಿಸಿತ್ತು ಎಂದು ಅನುಭವವನ್ನು ಬಿಚ್ಚಿಡುತ್ತಾರೆ.  

ಮೈಥಿಲಿ ಪಾತ್ರದಲ್ಲಿನ ಸ್ವಭಾವಕ್ಕೂ ನನ್ನ ನೈಜ ಸ್ವಭಾವಕ್ಕೂ ತುಂಬಾನೇ ಹೋಲಿಕೆ ಇದೆ ಎನ್ನುವ ಈ ಸುಂದರಿ ತನ್ನೆದುರೇ ತಪ್ಪು ನಡೆದಾಗ ಖಂಡಿಸದೇ ಸುಮ್ಮನೆ ಕುಳಿತುಕೊಳ್ಳುವ ಮನೋಭಾವದವರಲ್ಲವಂತೆ. 

ಮೈಥಿಲಿ ಪಾತ್ರ ಜನ ಮೆಚ್ಚುಗೆ ಗಳಿಸಿದ್ದು, ಇವರಿಗೆ ಸಿನಿಮಾದಲ್ಲೂ ಅವಕಾಶಗಳು ಬಂದಿವೆಯಂತೆ. ಆದರೆ ಇನ್ನು ಕಲಿಯುವ ಹಂತದಲ್ಲೇ ಇರುವ ಕಾರಣದಿಂದ ಸದ್ಯ ಸಿನಿಮಾದ ಕಡೆ ಗಮನ ಹರಿಸಿಲ್ಲ, ಮುಂದೆ ಅವಕಾಶಗಳು ಬಂದರೆ ಖಂಡಿತಾ ಸಿನಿಮಾ ಮಾಡುತ್ತೇನೆ ಎಂದು ಸೌಮ್ಯವಾಗಿ ಹೇಳುತ್ತಾರೆ.

ನಟನೆಯ ವಿಷಯಕ್ಕೆ ಬಂದರೆ ಎಲ್ಲಾ ರೀತಿಯ ಪಾತ್ರಗಳಿಗೂ ಬಣ್ಣ ಹಚಬೇಕು ಎನ್ನುವ ಇವರು, ಪೌರಾಣಿಕ ಪಾತ್ರಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸುತ್ತಾರೆ.

‘ನಾನು ನಟಿಯಾಗಿಲ್ಲ ಎಂದರೂ ಕಲಾಕ್ಷೇತ್ರಕ್ಕೆ ಅಡಿ ಇರಿಸುತ್ತಿದ್ದೆ. ಕಾರಣ ಕಲೆಯ ಮೇಲಿನ ಸೆಳೆತ ಬಹಳ ದಿನಗಳ ಕಾಲ ನನ್ನನ್ನು ಕಾರ್ಪೋರೇಟ್ ಜಗತ್ತಿನಲ್ಲಿ ನೆಲೆಸಲು ಬಿಡುತ್ತಿರಲಿಲ್ಲ ಎಂಬುದು ನನಗೆ ತಿಳಿದಿತ್ತು’ ಎಂದು ಕಲೆಯ ಮೇಲಿನ ಆಸ್ಥೆಯನ್ನು ವಿವರಿಸುತ್ತಾರೆ. 

‘ನಟನೆ ಎನ್ನುವುದು ಭೂಮಿತೂಕದ್ದು. ಅದನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಒಂದು ಪಾತ್ರಕ್ಕೆ ನಾವು ಜೀವ ತುಂಬುವುದು ಸಾಮಾನ್ಯವಾದ ವಿಷಯವಲ್ಲ. ಎಷ್ಡೋ ಬಾರಿ ಜನ ಟಿ.ವಿಯಲ್ಲಿ ಬರುವ ಪಾತ್ರಗಳನ್ನು ನೋಡಿ ಕಣ್ಣೀರು ಹಾಕುತ್ತಾರೆ, ಮರುಗುತ್ತಾರೆ. ಅಷ್ಟರಮಟ್ಟಿಗೆ ನಾವು ಪಾತ್ರಕ್ಕೆ ಜೀವ ತುಂಬುತ್ತೇವೆ. ನಟನೆ ಎಂದರೆ ಕ್ಯಾಮೆರಾ ಮುಂದೆ ಸುಮ್ಮನೆ ಬಂದು ನಿಂತು, ಡೈಲಾಗ್ ಹೇಳಿ ಹೋಗುವುದಲ್ಲ. ನಮ್ಮದಲ್ಲದ ಪಾತ್ರಕ್ಕೆ ನಾವು ಪಾತ್ರಕ್ಕೆ ಜೀವ ತುಂಬುವುದು, ಅದು ಜವಾಬ್ದಾರಿಯುತ ಕೆಲಸ’ ಎಂದು ನಟನೆಯ ಬಗ್ಗೆ ಅತಿ ಅಭಿಮಾನದಿಂದ ಹೇಳುತ್ತಾರೆ.

ಡಯೆಟ್ ಎಂದರೆ ದೂರ ಓಡುವ ಈ ಬೆಡಗಿ ಈ ಕ್ಷೇತ್ರಕ್ಕೆ ಡಯೆಟ್ ಬೇಕು ಎನ್ನುವ ಕಾರಣಕ್ಕೆ ಸ್ಪಲ್ಪ ಮಟ್ಟಿನ ಡಯೆಟ್‌ಗೆ ತಮ್ಮನ್ನು ತೆರೆದುಕೊಂಡಿದ್ದಾರೆ. ಸದ್ಯಕ್ಕೆ ಡಯೆಟ್ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳದ ಇವರು ಜಂಕ್‌ ಪುಡ್‌ಗಳನ್ನು ತಿನ್ನುವುದನ್ನು ನಿಲ್ಲಿಸಿ ತಾಜಾ ಹಣ್ಣು–ತರಕಾರಿಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ಬಿಡುವಿನ ವೇಳೆಯಲ್ಲಿ ನೃತ್ಯ ಮಾಡುವ ಇವರು ಡ್ರಾಯಿಂಗ್, ಪೇಂಟಿಂಗ್ ಕೂಡ ಮಾಡುತ್ತಾರೆ. ಕಸೂತಿ ಕಲೆಗಳಲ್ಲೂ ಇವರು ಹೆಚ್ಚು ಆಸಕ್ತಿ ಹೊಂದಿದವರಾಗಿದ್ದಾರೆ. ಬಾಡ್‌ಮಿಟನ್ ಆಟವನ್ನು ಆಡುತ್ತಾರೆ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !