ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸವಾಲು, ಅವಕಾಶಕ್ಕಾಗಿ ಕಾತುರ: ಚೈತ್ರಾ

Last Updated 25 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

‘ನಾನು ನೃತ್ಯ ಕಲಾವಿದೆ. ನೃತ್ಯದಲ್ಲೂ ಅಭಿನಯವಿದೆ ಅಲ್ವೇ? ಹೀಗಾಗಿ ನಟನೆಯ ಆಸಕ್ತಿ ಬೆಳೆಸಿಕೊಂಡೆ, ಕನ್ನಡ ಕಿರುತೆರೆಗೆ ಹೆಜ್ಜೆ ಇಟ್ಟೆ’ ಎಂದು ಚುರುಕಿನಿಂದಲೇ ಮಾತು ಆರಂಭಿಸಿದವರು ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ‘ನಯನತಾರಾ’ ಧಾರಾವಾಹಿಯ ‘ನಯನ’ ಎಂಬ ಪಾತ್ರ ನಿಭಾಯಿಸುತ್ತಿರುವ ಚೈತ್ರಾ.

ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ತಿಲಕ್‌ ಅವರು ಇದನ್ನು ನಿರ್ದೇಶಿಸುತ್ತಿದ್ದು, ಖ್ಯಾತ ಚಲನಚಿತ್ರ ನಿರ್ಮಾಪಕ ಜಯಣ್ಣ ಅವರು ಈ ಧಾರಾವಾಹಿ ಮುಖಾಂತರ ಮೊದಲ ಬಾರಿಗೆ ಕಿರುತೆರೆ ನಿರ್ಮಾಣಕ್ಕೆ ಕಾಲಿಟ್ಟಿದ್ದಾರೆ. ಬಹುನಿರೀಕ್ಷೆಯನ್ನು ಹೊಂದಿರುವ ಇಂತಹ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ಚೈತ್ರಾ ಬಣ್ಣ ಹಾಕಿದ್ದು, ತಮ್ಮ ಹೊಸ ಸವಾಲನ್ನು ‘ಸಿನಿಮಾ ಪುರವಣಿ’ಯ ಜೊತೆ ಹಂಚಿಕೊಂಡರು.

‘ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. ನಮ್ಮ ಮೂಲ ಊರು ವಿಜಯಪುರ. ನಾನು ನೃತ್ಯ ಕಲಾವಿದೆ. ಝೀ ಕನ್ನಡದಲ್ಲಿ ಬರುತ್ತಿದ್ದ ಕನ್ನಡದ ಡ್ಯಾನ್ಸ್‌ ರಿಯಾಲಿಟಿ ಶೋ ‘ಕುಣಿಯೋಣ ಬಾರ’ದಲ್ಲಿ ನಾನು ಭಾಗವಹಿಸಿದ್ದೆ. ನಂತರದಲ್ಲಿ ತೆಲುಗಿನ ಕೆಲ ಡ್ಯಾನ್ಸ್‌ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದೆ. ನಂತರದಲ್ಲಿ ನಟನೆಯಲ್ಲಿ ಆಸಕ್ತಿ ಬಂದು, ಕಿರುತೆರೆಗೆ ಹೆಜ್ಜೆ ಇಟ್ಟಿದ್ದೇನೆ. ಟಿಕ್‌ಟಾಕ್‌ನಲ್ಲಿ ನಟನೆಯ ತುಣುಕು ವಿಡಿಯೊಗಳನ್ನು ಮಾಡಿ ಹಾಕುತ್ತಿದ್ದೆ. ಅದನ್ನು ನೋಡಿ ನಯನತಾರಾ ಧಾರಾವಾಹಿಯ ತಂಡವು ಗಮನಿಸಿ ಆಡಿಷನ್‌ಗೆ ಕರೆದಿದ್ದರು. ಹೀಗೆ ದೊರಕಿದ್ದು ನಯನತಾರಾ’ ಎನ್ನುತ್ತಾರೆ ಚೈತ್ರಾ.

ಅಭಿನಯದ ಸವಾಲಿನ ಬಗ್ಗೆ ವಿವರಿಸಿದ ಅವರು, ‘‌ನನ್ನ ಜೊತೆಗಿನ ಪಾತ್ರವರ್ಗದವರೆಲ್ಲರೂ ನಟನೆಯಲ್ಲಿ ಅನುಭವ ಇದ್ದವರು. ಮೊದಲಿಗೆ ಸಣ್ಣ ಭಯವಿತ್ತು. ಅನುಭವಿಗಳ ಮುಂದೆ ನಾನೆಲ್ಲಿ ತಪ್ಪು ಮಾಡಿಬಿಡುತ್ತೇನೋ ಎಂದು. ಆದರೆ ತಮಿಳಿನಲ್ಲಿ ನಾನೊಂದು ಧಾರಾವಾಹಿ ಮಾಡಿದ್ದೆ. ‘ತಮಿಳ್‌ ಸೆಲ್ವಿ’ ಹೆಸರಿನ ಆ ಧಾರಾವಾಹಿಯ ಕೊಂಚ ಅನುಭವ ನನಗೆ ಇತ್ತು. ಜೊತೆಗೆ ತಂಡದ ಸಹಕಾರದಿಂದ ಈ ಸವಾಲು ಎದುರಿಸಿದ್ದೇನೆ’ ಎಂದು ಹೇಳುತ್ತಾರೆ.

ನಯನತಾರಾ ಬಹಳ ವಿಭಿನ್ನವಾದ ಕತೆಯಾಗಿದೆ ಎಂದ ಚೈತ್ರಾ, ‘ಧಾರಾವಾಹಿಯಲ್ಲಿ ತಾರಾ ಎಂಬ ತಂಗಿಯ ಪಾತ್ರಕ್ಕೆ ಅಕ್ಕ ‘ನಯನ’ಳಾಗಿ ನಾನು ಪಾತ್ರ ಮಾಡುತ್ತಿದ್ದೇನೆ. ಹಳ್ಳಿ ಹುಡುಗಿ ಪಾತ್ರವದು. ಪ್ರಾಮಾಣಿಕತೆ, ನಿಷ್ಠೆಯ ಮೂಲಕ ಮನಗೆಲ್ಲುವ ಸರಳ ಹುಡುಗಿ ನಾನು. ಬೇರೆಯವರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡು ತಂಗಿ ತಾರಾಳನ್ನು ಓದಿಸುವ, ಅವಳ ಮದುವೆ ಮಾಡಿ ದಡ ಸೇರಿಸುವ ಪಾತ್ರ ನನ್ನದು. ಆದರೆ ತನ್ನ ಜೀವನದ ಬಗ್ಗೆ ಎಂದೂ ಯೋಚಿಸುವವಳಲ್ಲ ನಯನಾ’ ಎಂದು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT