ಮಂಗಳವಾರ, ಆಗಸ್ಟ್ 9, 2022
20 °C

ಲೈಟ್ಸ್‌, ಕ್ಯಾಮೆರಾ, ಆ್ಯಕ್ಷನ್‌... ನಿರೀಕ್ಷೆ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ ತೆರವು ಹಂತಹಂತವಾಗಿ ಆರಂಭವಾಗಿದೆ. ಚಿತ್ರೀಕರಣಕ್ಕೆ ಸರ್ಕಾರ ಅಧಿಕೃತ ಅನುಮತಿ ನೀಡಬಹುದೇ ಎಂಬ ನಿರೀಕ್ಷೆಯಲ್ಲಿ ಆ ಕ್ಷೇತ್ರದ ಜನರು ಕಾಯುತ್ತಿದ್ದಾರೆ.

ಮನೋರಂಜನಾ ವಾಹಿನಿಗಳ ಕಾರ್ಯಕ್ರಮಕ್ಕೆ ಸಂಘಟಿತವಾಗಿ ಕೆಲಸ ಮಾಡುವ ತಂಡದವರು ತಮ್ಮ ಹಿಂದಿನ ಯೋಜನೆಗಳನ್ನೇ ಮುಂದುವರಿಸಲು (ರಿಯಾಲಿಟಿ ಷೋ, ಧಾರಾವಾಹಿ, ಸ್ಟುಡಿಯೊದೊಳಗಿನ ತಾಂತ್ರಿಕ ಕೆಲಸಗಳು ಇತ್ಯಾದಿ) ಸಜ್ಜಾಗುತ್ತಿದ್ದಾರೆ. ಆದರೆ, ನಿರ್ದಿಷ್ಟ ಯೋಜನೆಗಳಗಷ್ಟೇ ಸ್ವಂತ ತೆಗೆದುಕೊಂಡು ಕೆಲಸ ಮಾಡುತ್ತಿದ್ದವರು (ಕಿರುಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತು ಶೂಟಿಂಗ್‌, ನಿರ್ಮಾಣ ಮಾಡುವ ಕ್ಯಾಮೆರಾಮನ್‌, ಸಂಕಲನಕಾರರು, ತಂತ್ರಜ್ಞರು, ಮೇಕಪ್‌ ಕಲಾವಿದರು) ಇನ್ನು ಹೊಸದಾಗಿ ಕೆಲಸ ಹುಡುಕಿಕೊಳ್ಳಬೇಕಿದೆ.

 ಏಕೆಂದರೆ ಅದೆಷ್ಟೋ ಯೋಜನೆಗಳು ಕೊನೆಯ ಹಂತದಲ್ಲಿವೆ. ಒಂದು ವೇಳೆ ಸರ್ಕಾರದಿಂದ ಅನುಮತಿ ಸಿಕ್ಕರೂ ನಮ್ಮ ಸಣ್ಣಪುಟ್ಟ ನಿರ್ಮಾಣಗಳ ಕೆಲಸ ವಾರದೊಳಗೆ ಮುಗಿದುಹೋಗುತ್ತದೆ. ಹೊಸ ಯೋಜನೆಗಳಿಗೆ ಹೂಡಿಕೆ ಮಾಡುವವರೂ ತಕ್ಷಣಕ್ಕೆ ಮುಂದೆ ಬರುತ್ತಿಲ್ಲ. ನಮ್ಮ ಓರಗೆಯವರ ಹಳೆಯ ಯೋಜನೆಗಳ ದುಡ್ಡೂ ಬಂದಿಲ್ಲ. ಎಂಬುದು ಇವರ (ಸ್ವಂತ ಉದ್ಯೋಗಿಗಳ) ಅಸಹಾಯಕತೆ.

ಲಾಕ್‌ಡೌನ್‌ ನಂತರದ ಚೌಕಾಸಿ: ಹೊಸ ಸಹಜತೆಯ ಸನ್ನಿವೇಶದಲ್ಲಿ ಮೊದಲಿನಷ್ಟು ಆದಾಯ ಬರುವ ಸಾಧ್ಯತೆ ಕಡಿಮೆ. ಏಕೆಂದರೆ ನಿರ್ಮಾಪಕರು ನಮ್ಮ ವಿಚಾರದಲ್ಲಿ ತೀರಾ ಚೌಕಾಸಿಗೆ ಇಳಿದುಬಿಡುತ್ತಾರೆ. ಹಾಗೆಂದು ತಂತ್ರಜ್ಞರ ವೇತನ, ಉಪಕರಣಗಳು, ಒಟ್ಟಾರೆ ನಿರ್ಮಾಣಕ್ಕೆ ವ್ಯಯಿಸುವ ವೆಚ್ಚ ಏರುತ್ತಲೇ ಇದೆ. ಈ ದ್ವಂದ್ವದಲ್ಲಿ ಸಾಗಬೇಕಾದ ಅನಿವಾರ್ಯತೆ ಎನ್ನುತ್ತಾರೆ ತಂತ್ರಜ್ಞ ಸುಧಾಕರ್‌.

ಜೂನ್‌ 21ರ ಬಳಿಕ ಲಾಕ್‌ಡೌನ್‌ ಸಂಬಂಧಿಸಿದ ನಿಯಮಗಳಲ್ಲಿ ಇನ್ನಷ್ಟು ಸಡಿಲಿಕೆ ತರಬಹುದು. ಆ ವೇಳೆಗೆ ನಾವೂ ಕೂಡಾ ಸಜ್ಜಾಗಿರಬೇಕಾಗುತ್ತದೆ ಎಂದು ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ವಿ. ಶಿವಕುಮಾರ್‌ ತಿಳಿಸಿದರು.

ನಿಲ್ಲದ ಸರಣಿಗಳು
‘ಧಾರಾವಾಹಿ ಅಥವಾ ರಿಯಾಲಿಟಿ ಷೋಗಳನ್ನು ಚಿತ್ರೀಕರಿಸಬಾರದು ಎಂಬ ಆದೇಶವೇನೋ ಇತ್ತು. ಆದರೆ, ಯಾವ ಸಂಚಿಕೆಗಳೂ ನಿಂತಿಲ್ಲ. ಕಾರಣ ಅದೆಷ್ಟೋ ಸಂಚಿಕೆಗಳನ್ನು ಹೈದರಾಬಾದ್‌ನ ರಾಮೋಜಿ ರಾವ್‌ ಸ್ಟುಡಿಯೊದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ನಮ್ಮ ರಾಜ್ಯದಲ್ಲೂ ಒಳಾಂಗಣ ಚಿತ್ರೀಕರಣಕ್ಕೆ ಅಂಥ ಆಕ್ಷೇಪವೇನೂ ಬರಲಿಲ್ಲ. ಹೀಗಾಗಿ ಕಲಾವಿದರು, ತಂತ್ರಜ್ಞರು ಸುರಕ್ಷಾ ಕ್ರಮಗಳನ್ನು ಕೈಗೊಂಡು ನಿರ್ವಹಿಸಿದ್ದಾರೆ’ ಎಂದರು ಶಿವಕುಮಾರ್‌. 

ಲಸಿಕೆ ಹಾಕಿಸಿಕೊಂಡು ರೆಡಿ
ಅಸೋಸಿಯೇಷನ್‌ ವತಿಯಿಂದ ಮೂರು ಹಂತಗಳಲ್ಲಿ ಲಸಿಕೆ ಅಭಿಯಾನ ನಡೆಸಿದ್ದೇವೆ. ಸಂಘದಲ್ಲಿ 4 ಸಾವಿರ ಸದಸ್ಯರು ಇದ್ದೇವೆ. ಇದುವರೆಗೆ 1,800 ಮಂದಿಗೆ ಲಸಿಕೆ ಹಾಕಿಸಿದ್ದೇವೆ. ಸದಸ್ಯರ ಕುಟುಂಬಗಳಿಗೂ ಲಸಿಕೆ ಹಾಕಿಸಿದ್ದೇವೆ. ಹಾಗಾಗಿ ಆತಂಕದ ಪ್ರಮಾಣ ಕಡಿಮೆಯಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೀಗೆ ಟಿವಿ ಕಲಾವಿದರು ತಮ್ಮ ಧಿರಿಸು, ಮೇಕಪ್‌ ಕಿಟ್‌ಗಳನ್ನು ಸಜ್ಜುಗೊಳಿಸಿದ್ದಾರೆ. ಲೈಟ್ಸ್‌/ ಕ್ಯಾಮೆರಾ ಆ್ಯಕ್ಷನ್‌ ಹೇಳಲು ತಂತ್ರಜ್ಞರು, ನಿರ್ದೇಶಕರು ಕಾದು ನಿಂತಿದ್ದಾರೆ.


–ಎಸ್‌.ವಿ. ಶಿವಕುಮಾರ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು