ಕಿರುತೆರೆ ಜಗತ್ತಿನ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್’ 10ನೇ ಆವೃತ್ತಿ ಅಕ್ಟೋಬರ್‌ನಿಂದ ಪ್ರಾರಂಭಗೊಳ್ಳಲಿದೆ. ಈ ಸಲವೂ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಬಿಗ್‌ಬಾಸ್ ಪ್ರಸಾರಗೊಳ್ಳಲಿದ್ದು, ಕಿಚ್ಚ ಸುದೀಪ್ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಶೀಘ್ರದಲ್ಲೇ ಬಿಗ್‌ಬಾಸ್ ಆರಂಭದ ಮುನ್ಸೂಚನೆಯನ್ನು ಟೀಸರ್ ಮೂಲಕ ಕಲರ್ಸ್ ವಾಹಿನಿ ನೀಡಿದೆ. ಸುದೀಪ್ ಜನ್ಮದಿನದಂದೇ ಈ ಪ್ರೊಮೊ ಬಿಡುಗಡೆಗೊಂಡಿದ್ದು ವಿಶೇಷ.
‘ಅಕ್ಟೋಬರ್ ಎರಡನೇ ವಾರ ಅಥವಾ ಮೂರನೇ ವಾರದಿಂದ ಬಿಗ್‌ಬಾಸ್ ಪ್ರಾರಂಭವಾಗಲಿದೆ. ಈ ಸಲ ಶೋನ ಸ್ವರೂಪದಲ್ಲಿ ಒಂದಷ್ಟು ಬದಲಾವಣೆಗಳು ಇರಲಿವೆ. ಬಿಗ್‌ಬಾಸ್ ಪ್ರಾರಂಭವಾದಾಗ ಪುಣೆಯ ಲೋನಾವಾಲದಲ್ಲಿ ಸೆಟ್ ಹಾಕಲಾಗುತ್ತಿತ್ತು. ಬಳಿಕ ಅದನ್ನು ಬೆಂಗಳೂರಿನ ಇನೋವೇಟಿವ್ ಫಿಲಂ ಸಿಟಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಈ ವರ್ಷ ಜಾಗವೂ ಬದಲಾಗಿದೆ. ದೊಡ್ಡ ಆಲದ ಮರದ ಬಳಿ ಸೆಟ್ ಕೆಲಸ ನಡೆಯುತ್ತಿದೆ’ ಎಂದು ವಾಹಿನಿ ಮೂಲಗಳು ಹೇಳಿವೆ.
ಹಿಂದಿ ಭಾಷೆಯ ನಂತರ ಬಿಗ್‌ಬಾಸ್ ಅತಿ ಹೆಚ್ಚು ಆವೃತ್ತಿಗಳು ಪ್ರಸಾರಗೊಂಡಿರುವುದು ಕನ್ನಡದಲ್ಲಿ. ಆದಾಗ್ಯೂ ಟೆಲಿವಿಷನ್ ರೇಟಿಂಗ್(ಟಿಆರ್‌ಪಿ)ನಲ್ಲಿ ಬಿಗ್‌ಬಾಸ್ ಮೊದಲ ಆವೃತ್ತಿ ಹೊರತುಪಡಿಸಿ ಉಳಿದ ಆವೃತ್ತಿಗಳು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಹೀಗಾಗಿ ಕಳೆದ ವರ್ಷ ತನ್ನ ಒಟಿಟಿ ವೇದಿಕೆ ವೂಟ್‌ನಲ್ಲಿಯೂ ವಾಹಿನಿ ಮೊದಲು ಪ್ರತ್ಯೇಕವಾಗಿ ಬಿಗ್‌ಬಾಸ್ ಸೀಸನ್ ಪ್ರಾರಂಭಿಸಿತ್ತು. ಅಲ್ಲಿಂದ ನಾಲ್ವರಿಗೆ ನೇರವಾಗಿ ಬಿಗ್‌ಬಾಸ್ ಮನೆಗೆ ಪ್ರವೇಶ ನೀಡಿತ್ತು. ಆದರೆ ಈ ವರ್ಷ ಒಟಿಟಿ ಆವೃತ್ತಿಯನ್ನು ವಾಹಿನಿ ಕೈಬಿಟ್ಟಿದೆ ಎಂದು ಮೂಲಗಳು ಖಚಿತಪಡಿಸಿವೆ.
ಅರುಣ್ ಸಾಗರ್, ವಿಜಯ ರಾಘವೇಂದ್ರ ಮೊದಲಾದ ಸ್ಪರ್ಧಿಗಳಿದ್ದ ಬಿಗ್‌ಬಾಸ್ ಮೊದಲ ಆವೃತ್ತಿ ಅತ್ಯಂತ ಮನರಂಜನಾದಾಯಕವಾಗಿತ್ತು. ಅದಾದ ಬಳಿಕದ ಆವೃತ್ತಿಗಳು ನಿರೀಕ್ಷಿತ ಮಟ್ಟದ ಮನರಂಜನೆ ನೀಡಲಿಲ್ಲ. ಸಾಕಷ್ಟು ಜನಪ್ರಿಯ ವ್ಯಕ್ತಿಗಳ, ರಾಜಕಾರಣಿಗಳ ಹೆಸರು ಬಿಗ್‌ಬಾಸ್ ಪ್ರಾರಂಭಕ್ಕೂ ಮುನ್ನ ಕೇಳಿಬರುತ್ತವೆ. ಆದಾಗ್ಯೂ ಸೀಸನ್‌ನಿಂದ ಸೀಸನ್‌ಗೆ ಬಿಗ್‌ಬಾಸ್ ಮನೆಯ ಪ್ರವೇಶಿಸುವ ಗಣ್ಯರು, ಸಿನಿಮಾ ತಾರೆಯರ ಸಂಖ್ಯೆ ಕುಸಿದು, ಮುಖ್ಯ ಭೂಮಿಕೆಯಲ್ಲಿ ಅವಕಾಶವಂಚಿತರ, ಕಿರುತೆರೆ ತಾರೆಯರ ವೇದಿಕೆಯಾಗಿ ಮಾರ್ಪಟ್ಟಿತ್ತು. ಈ ವರ್ಷವೂ ಮೂರು–ನಾಲ್ಕು ಸಿನಿ ತಾರೆಯರನ್ನು ಬಿಗ್‌ಬಾಸ್ ಮನೆಯೊಳಗೆ ಕರೆತರಲು ವಾಹಿನಿ ಕಸರತ್ತು ನಡೆಸುತ್ತಿದೆ. ಇದಲ್ಲದೇ ಕಿರುತೆರೆ ಕಲಾವಿದರು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ ವ್ಯಕ್ತಿಗಳನ್ನು ಪಟ್ಟಿ ಮಾಡಿಕೊಂಡಿದೆ.
ಈ ಹಿಂದಿನಂತೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ರಿಂದ 10.30ವರೆಗೆ ಬಿಗ್‌ಬಾಸ್ ಪ್ರಸಾರಗೊಳ್ಳಲಿದೆ. ವಾರಾಂತ್ಯದಲ್ಲಿ ‘ವಾರದ ಕಥೆ ಕಿಚ್ಚನ ಜೊತೆ’ ಪ್ರಸಾರವಾಗಲಿದೆ. ಇಷ್ಟು ವರ್ಷ ಬಿಗ್‌ಬಾಸ್ ಕನ್ನಡ ಆವೃತ್ತಿ ನಿರ್ದೇಶಿಸುತ್ತಿದ್ದ ಪರಮೇಶ್ವರ್ ಗುಂಡ್ಕಲ್ ಈ ವರ್ಷ ಜಿಯೋ ಸ್ಟುಡಿಯೋಸ್‌ಗೆ ವರ್ಗಾವಣೆಗೊಂಡಿದ್ದಾರೆ. ಸದ್ಯ ವಾಹಿನಿಯ ನಾನ್‌ಫಿಕ್ಷನ್ ಹೆಡ್ ಆಗಿರುವ ಪ್ರಕಾಶ್ ಈ ವರ್ಷ ಬಿಗ್‌ಬಾಸ್ ನಿರ್ದೇಶಿಸುವ ಸಾಧ್ಯತೆ ಹೆಚ್ಚಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.