ಬುಧವಾರ, ಏಪ್ರಿಲ್ 14, 2021
23 °C

Big Boss 8: ನಾಮಿನೇಟ್ ಆಗಿರುವ ಈ 9 ಸ್ಪರ್ಧಿಗಳಲ್ಲಿ ಒಬ್ಬರು ಹೊರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ ಮೂರನೇ ವಾರದ ಎಲಿಮಿನೇಶನ್‌ಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ 9 ಮಂದಿ ನಾಮಿನೇಟ್ ಆಗಿದ್ದು, ನಿರೂಪಕ ಕಿಚ್ಚ ಸುದೀಪ್ ಎಲ್ಲರ ಕುತೂಹಲಕ್ಕೆ ತೆರೆ ಎಳೆಯಲಿದ್ದಾರೆ.

ಪ್ರಶಾಂತ್ ಸಂಬರಗಿ, ನಿಧಿ ಸುಬ್ಬಯ್ಯ, ಶಮಂತ್, ವಿಶ್ವನಾಥ್, ಅರವಿಂದ್, ದಿವ್ಯಾ ಉರುಡುಗ, ಗೀತಾ, ರಘು, ಹಾಗೂ ದಿವ್ಯಾ ಸುರೇಶ್ ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ಅರವಿಂದ್ ಕ್ಯಾಪ್ಟನ್ ಆಗಿರುವುದರಿಂದ ಸೇಫ್ ಆಗುವ ಸಾಧ್ಯತೆ ಇದೆ. ಇವರ ಜೊತೆಗೆ ಶಂಕರ್ ಅಶ್ವತ್ಥ್ ಸಹ ನಾಮಿನೇಟ್ ಆಗಿದ್ದರು. ಆದರೆ, ಕಳೆದ ವಾರದ ಕ್ಯಾಪ್ಟನ್ ರಾಜೀವ್, ಬಿಗ್ ಬಾಸ್ ಕೊಟ್ಟ ವಿಶೇಷ ಅಧಿಕಾರ ಬಳಸಿ ಅವರನ್ನು ಸೇಫ್ ಮಾಡಿದ್ದರು.

ಕಳಪೆಯಾದ ಶಂಕರ್ ಅಶ್ವತ್ಥ್: ಎಂದಿನಂತೆ ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ವಾರಪೂರ್ತಿ ಮನೆಯ ಟಾಸ್ಕ್‌ಗಳಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಉತ್ತಮ ಮತ್ತು ಕಳಪೆ ಸ್ಪರ್ಧಿಯನ್ನು ಆಯ್ಕೆ ಮಾಡಲಾಯಿತು. ಬಿಗ್ ಬಾಸ್ ಈ ಬಗ್ಗೆ ಪ್ರಸ್ತಾಪ ಇಡುತ್ತಿದ್ದಂತೆ ಶಂಕರ್ ಅಶ್ವತ್ಥ್ ನನ್ನ ಹೆಸರನ್ನು ಯಾರು ಬೇಕಾದರೂ ಹೇಳಬಹುದು. ನನಗೆ ಯಾರ ಬಗ್ಗೆಯೂ ಬೇಸರವಿಲ್ಲ ಎಂದು ಘೋಷಿಸಿದರು. ಏಕೆಂದರೆ, ಈ ವಾರದ ಫಿಸಿಕಲ್ ಟಾಸ್ಕ್‌ಗಳಲ್ಲಿ ಅವರು ಅಷ್ಟಾಗಿ ಭಾಗವಹಿಸಿರಲಿಲ್ಲ. ಯುಗಳ ಗೀತೆ, ಮೊಟ್ಟೆ ಹಿಡಿಯುವ ಟಾಸ್ಕ್ ಸೇರಿ ಹಲವು ಕ್ಯಾಪ್ಟೆನ್ಸಿ ಕಂಟೆಸ್ಟೆಂಟ್ ಟಾಸ್ಕ್‌ಗಳಲ್ಲಿ ಚಂದ್ರಕಲಾ ಅವರ ಜೊತೆಗೂಡಿ ಸೊನ್ನೆ ಸುತ್ತಿದ್ದರು. ಮಂಜು ಪಾವಗಡ, ಗೀತಾ, ಶಮಂತ್, ಪ್ರಶಾಂತ್ ಸಂಬರಗಿ, ಕ್ಯಾಪ್ಟನ್ ಅರವಿಂದ್ ಮತ್ತು ಶಂಕರ್ ಜೋಡಿಯಾಗಿದ್ದ ಚಂದ್ರಕಲಾ ಸಹ ಶಂಕರ್ ಅಶ್ವತ್ಥ್ ಕಳಪೆ ಸ್ಪರ್ಧಿ ಎಂದು ಹೇಳಿದರು. ಕಳಪೆ ಎಂದು ಘೋಷಿಸಿದ ಬಳಿಕ ಶಂಕರ್ ಅಶ್ವತ್ಥ್ ನಿಯಮದ ಪ್ರಕಾರ, ಕೈದಿ ಉಡುಪನ್ನು ತೊಟ್ಟು ಜೈಲು ಸೇರಿಕೊಂಡರು. ಬಿಗ್ ಬಾಸ್ ಮುಂದಿನ ಆದೆಶದವರೆಗೆ ಜೈಲಿನಲ್ಲೇ ಇರುವ ಅವರು ಗಂಜಿ ಮಾತ್ರ ಸೇವಿಸಬೇಕು. ಮನೆಯ ಯಾವುದೇ ಸೌಲಭ್ಯ ಬಳಸುವಂತಿಲ್ಲ. ಅಡುಗೆಗೆ ಬೇಕಾದ ತರಕಾರಿ ಕತ್ತರಿಸಿ ಕೊಡಬೇಕು.

ಗೆದ್ದು ಬೀಗಿದ ಕಿರಿಯ ಸ್ಪರ್ಧಿ ವಿಶ್ವನಾಥ್: ಆರಂಭದಲ್ಲಿ ಟೇಕಾಫ್ ಆಗಲು ಸಮಯ ತೆಗೆದುಕೊಂಡಿದ್ದ ಮನೆಯ ಕಿರಿಯ ಸ್ಪರ್ಧಿ ವಿಶ್ವನಾಥ್ ಈ ವಾರ ಟಾಸ್ಕ್‌ಗಳಲ್ಲಿ ದಿವ್ಯಾ ಸುರೇಶ್ ಜೊತೆಗೆ ಅತ್ಯಂತ ಹುಮ್ಮಸ್ಸಿನಿಂದ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಮೊಟ್ಟೆ ಟಾಸ್ಕ್, ಯುಗಳ ಗೀತೆ ಮತ್ತು ಶುಕ್ರವಾರದ ದಿನ ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ’ ಹಾಡನ್ನು ಹೊಸ ರೀತಿಯಲ್ಲಿ ಸ್ವರ ಸಂಯೋಜಿಸಿ ಹಾಡಿದ ಅವರ ಕಲೆ ಎಲ್ಲರ ಮೆಚ್ಚುಗೆ ಗಳಿಸಿತ್ತು. ಹಾಗಾಗಿ, ದಿವ್ಯಾ ಉರುಡುಗ, ಶುಭಾ ಪೂಂಜಾ, ಜೋಡಿಯಾಗಿದ್ದ ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ಶಂಕರ್ ಅಶ್ವತ್ಥ್, ವೈಷ್ಣವಿ, ಕ್ಯಾಪ್ಟನ್ ಅರವಿಂದ್ ಸೇರಿ ಹಲವರು ವಿಶ್ವನಾಥ್‌ಗೆ ವೋಟ್ ಹಾಕಿದ್ದರಿಂದ ಈ ವಾರದ ಬೆಸ್ಟ್ ಪರ್ಫಾಮರ್ ಆಗಿ ಗೋಲ್ಡ್ ಮೆಡಲ್ ಮುಡಿಗೇರಿಸಿದರು.

ಇದನ್ನೂ ಓದಿ.. Big Boss 8: ಕೆ.ಎಸ್. ಅಶ್ವತ್ಥ್ ಅವರಿಗಿತ್ತು ಆ ಕೊರಗು.. ಬಹಿರಂಗಪಡಿಸಿದ ಮಗ

ಈ ವಾರ ಯಾರು ಹೊರಕ್ಕೆ?: ಮೊದಲ ವಾರ ಧನುಶ್ರೀ ಮತ್ತು ಎರಡನೇ ವಾರ ನಿರ್ಮಲಾ ಅವರು ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದರು. ಈ ಬಾರಿ, ಯಾರು? ಎಂಬ ಕುತೂಹಲ ಮನೆ ಮಾಡಿದೆ. ಶಂಕರ್ ಅಶ್ವತ್ಥ್ ಬಳಿಕ ಟಾಸ್ಕ್‌ಗಳಲ್ಲಿ ಅತಿ ಹೆಚ್ಚು ವಿಫಲರಾದ ಜೋಡಿ ಶಮಂತ್ ಮತ್ತು ನಿಧಿ ಸುಬ್ಬಯ್ಯ. ಹಾಗಾಗಿ, ಈ ವಾರ ಇವರಿಬ್ಬರ ಮೇಲೆ ಗಮನ ನೆಟ್ಟಿದೆ. ಆದರೆ, ಪ್ರೇಕ್ಷಕರ ವೋಟ್ ಆಧಾರದ ಮೇಲೆ ಹೊರಹೋಗುವ ಸ್ಪರ್ಧಿಯನ್ನು ನಿರ್ಧರಿಸಲಾಗುತ್ತೆ.
 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.