ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷ್‌ ನಿರ್ಗಮನ: ಯುವ ನಾಯಕನಿಗೆ ಅವಕಾಶ

ಮಂಡ್ಯ ಕ್ಷೇತ್ರದಲ್ಲಿ ಗಣಿಗ ಪಿ ರವಿಕುಮಾರ್‌ಗೌಡ ಕಾಂಗ್ರೆಸ್‌ ಹುರಿಯಾಳು, ಗೊಂದಲಕ್ಕೆ ತೆರೆ
Last Updated 25 ಏಪ್ರಿಲ್ 2018, 11:17 IST
ಅಕ್ಷರ ಗಾತ್ರ

ಮಂಡ್ಯ: ಅಂಬರೀಷ್‌ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ನಿರಾಕರಿಸಿ ಚುನಾವಣಾ ನಿವೃತ್ತಿ ಘೋಷಿಸಿದ ಕಾರಣ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅವಕಾಶ ಯುವ ನಾಯಕ ಗಣಿಗ ಪಿ ರವಿಕುಮಾರ್‌ಗೌಡ ಅವರಿಗೆ ಸಿಕ್ಕಿದೆ. ಸಾಕಷ್ಟು ಸವಾಲುಗಳ ನಡುವೆ ವರಿಷ್ಠರ ಮನವೊಲಿಸಲು ಯಶಸ್ವಿಯಾಗಿರುವ ಅವರು ಬಿ.ಫಾರಂ ತಂದು ನಾಮಪತ್ರ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಕ್ಷ ಅಂಬರೀಷ್‌ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ ನಂತರ ರವಿಕುಮಾರ್‌ಗೌಡ ಬೆಂಬಲಿಗರು ಕಾಂಗ್ರೆಸ್‌ ಕಚೇರಿಯಲ್ಲಿ ದಾಂದಲೆ ನಡೆಸಿದರು. ಪೀಠೋಪಕರಣ ಹಾಗೂ ಕಚೇರಿಯ ಕಿಟಕಿ ಗಾಜುಗಳನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಕುರಿತು ರವಿಕುಮಾರ್‌ ಕುಮಾರ್‌ಗೌಡ ಕ್ಷಮೆ ಯಾಚಿಸಿದ್ದರು. ನಂತರ ಅಂಬರೀಷ್‌ ಅವರು ಸ್ಪರ್ಧಿಸುವುದು ಅನುಮಾನ ಎಂಬ ಸುದ್ದಿ ಹರಡಿದ ನಂತರ ಜಾಗೃತರಾದ ರವಿಕುಮಾರ್‌ಗೌಡ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಟಿಕೆಟ್‌ ಪಡೆಯಲು ಲಾಬಿ ಆರಂಭಿಸಿದರು. ವರಿಷ್ಠರು ಕಡೆಯ ಕ್ಷಣದವರೆಗೂ ಅಂಬರೀಷ್‌ ನಿರ್ಧಾರಕ್ಕೆ ಕಾದು ಕುಳಿತಿದ್ದರು. ಆದರೆ ಅಂಬರೀಷ್‌ ಸ್ಪರ್ಧೆ ಮಾಡುವ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಿಲ್ಲ.

ಇನ್ನೊಂದೆಡೆ ಅಂಬರೀಷ್‌ ಆಪ್ತ ಅಮರಾವತಿ ಚಂದ್ರಶೇಖರ್‌ ಟಿಕೆಟ್‌ ಪಡೆಯಲು ಲಾಬಿ ನಡೆಸಿದ್ದರು. ಅಂಬರೀಷ್‌ ತಮ್ಮ ಹೆಸರನ್ನೇ ಸೂಚನೆ ಮಾಡುತ್ತಾರೆ ಎಂದು ಕಾಯುತ್ತಿದ್ದರು. ಆದರೆ ಅಂಬರೀಷ್‌ ಆಪ್ತನ ಪರ ನಿಲ್ಲಲಿಲ್ಲ. ಚಂದ್ರಶೇಖರ್‌ ಅವರ ಆಪ್ತರು ಅಂಬರೀಷ್‌ ಹೋದಲ್ಲೆಲ್ಲಾ ಹಿಂದೆ ಓಡಾಡಿದರು. ಮೈಸೂರಿನ ಸಂದೇಶ್‌ ದಿ ಪ್ರಿನ್ಸ್‌ ಹೋಟೆಲ್‌ನಲ್ಲಿ ದಿನ ಪೂರ್ತಿ ಕಾದು ಕುಳಿತಿದ್ದರು. ಆದರೆ ಅಂಬರೀಷ್‌ ಅವರ ಜೊತೆ ಯಾವುದೇ ಮಾತುಕತೆ ನಡೆಸಲಿಲ್ಲ. ಬೆಂಬಲಿಗರಿಗೆ ಟಿಕೆಟ್‌ ನೀಡುವಂತೆಯೂ ಅವರು ಮನವಿ ಮಾಡಲಿಲ್ಲ.

ಸ್ಪರ್ಧಿಸುವ ಬಗ್ಗೆ ಸ್ಪಷ್ಟ ನಿಲುವು ತಿಳಿಸಿಬೇಕು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಅಂಬರೀಷ್‌ ಅವರಿಗೆ ಗಡುವು ನೀಡಿದ್ದರು. ಅದಕ್ಕೂ ಅವರು ಕ್ಯಾರೆ ಎನ್ನಲಿಲ್ಲ. ಹೀಗಾಗಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ವಿಚಾರ ಗೊಂದಲವಾಗಿಯೇ ಉಳಿದಿತ್ತು. ಅಂಬರೀಷ್‌ ಸ್ಪರ್ಧಿಸದಿದ್ದರೆ ಪಕ್ಷದ ಅಭ್ಯರ್ಥಿಯಾಗಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಆತ್ಮಾನಂದ, ಎಚ್‌.ವಿ.ರಾಮು ಪ್ರಮಾಣ ಪತ್ರ ತಯಾರಿಸಿ ಕಾದು ಕುಳಿತಿದ್ದರು. ಅವರ ಆಸೆಯೂ ಈಡೇರಲಿಲ್ಲ.

ಬೆನ್ನಿಗೆ ನಿಂತರಾ ಡಿಕೆಶಿ, ಸಿಆರ್‌ಎಸ್‌?
ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ನಾಗಮಂಗಲ ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಅವರ ಮೂಲಕ ವರಿಷ್ಠರನ್ನು ಮನವೊಲಿಸಲು ರವಿಕುಮಾರ್‌ಗೌಡ ಯತ್ನಿಸಿದ್ದರು ಎಂಬ ಸುದ್ದಿ ಕ್ಷೇತ್ರದಾದ್ಯಂತ ಇದೆ. ಯುವ ಮುಖಂಡನೂ ಆಗಿರುವ ಕಾರಣ ಅವರು ಅಂಬರೀಷ್‌ ಸ್ಥಾನ ತುಂಬಬಲ್ಲರು ಎಂಬ ಮುಂದಾಲೋಚನೆಯೊಂದಿಗೆ ವರಿಷ್ಠರು ಗಣಿಗ ಅವರ ಹೆಸರನ್ನೇ ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಅಲ್ಲದೆ ಅಮರಾವತಿ ಚಂದ್ರಶೇಖರ್‌ ಅವರಿಗೆ ಟಿಕೆಟ್‌ ನೀಡಲು ಪಕ್ಷದ ವರಿಷ್ಠರಿಗೆ ಮನಸ್ಸು ಇರಲಿಲ್ಲ. ಈ ಬಗ್ಗೆ ಪಕ್ಷದ ಮುಖಂಡರಿಗೆ ವರಿಷ್ಠರು ತಿಳಿಸಿದ್ದರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮನವೊಲಿಕೆಗೆ ಯತ್ನ:
ಅಂಬರೀಷ್‌ ಅವರಿಗೆ ಟಿಕೆಟ್‌ ಘೋಷಣೆಯಾದ ನಂತರ ಅವರು ಸ್ಪರ್ಧೆಯಿಂದ ಹಿಂದೆ ಸರಿಯದಂತೆ ಮನವೊಲಿಸಲು ಸರ್ಕಾರ ಕೆಲವು ಸಚಿವರು ಯತ್ನಿಸಿದ್ದರು. ಸಚಿವ ಜಾರ್ಜ್‌ ಅವರು ಅಂಬರೀಷ್‌ ಅವರ ಮನೆಗೆ ಭೇಟಿ ನೀಡಿ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ಡಿ.ಕೆ.ಶಿವಕುಮಾರ್‌ ಕೂಡ ಅಂಬರೀಷ್‌ ಮನವೊಲಿಸಲು ಯತ್ನಿಸಿದ್ದರು. ಜೊತೆಗೆ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರೂ ಸ್ಪರ್ಧಿಸುವಂತೆ ಕೋರಿದ್ದರು. ಆದರೆ ಯಾರ ಮಾತಿಗೂ ಸೊಪ್ಪು ಹಾಕದ ಅಂಬರೀಷ್‌ ತಟಸ್ಥವಾಗಿ ಉಳಿದಿದ್ದರು.

ಮನೆಗೆ ಬಾರದ ಮುಖ್ಯಮಂತ್ರಿ:
ಅಂಬರೀಷ್‌ ಅವರ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಸುತ್ತಾರೆ ಎಂಬ ನಿರೀಕ್ಷೆ ಎಲ್ಲೆಡೆ ಇತ್ತು. ಎರಡು ಬಾರಿ ಮಹೂರ್ತ ನಿಗದಿಯಾದರೂ ಅವರು ಅಂಬರೀಷ್‌ ಮನೆಗೆ ತೆರಳಲಿಲ್ಲ. ಇದರಿಂದ ಅಂಬರೀಷ್‌ ಮುಖ್ಯಮಂತ್ರಿಗಳ ವಿರುದ್ಧ ಗರಂ ಆಗಿದ್ದರು. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು ಅಂಬರೀಷ್‌ ಕಣದಿಂದ ನಿರ್ಗಮಿಸಿದ್ದು ಯುವ ನಾಯಕನಿಗೆ ಅವಕಾಶ ದೊರೆತಂತಾಗಿದೆ.

ಫಲ ನೀಡಿದ ಶ್ರೀನಿವಾಸ ಕಲ್ಯಾಣ!

ಗಣಿಗ ಪಿ.ರವಿಕುಮಾರ್‌ಗೌಡ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ.10ರಂದು ಆಯೋಜಿಸಿದ್ದ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಫಲ ನೀಡಿದೆ ಎಂದು ಎಲ್ಲೆಡೆ ಬಣ್ಣಿಸಲಾಗುತ್ತಿದೆ. ತಿರುಪತಿ ತಿರುಮಲದಿಂದ ಬಂದಿದ್ದ ಪ್ರಧಾನ ಅರ್ಚಕ ರಮಣ ದೀಕ್ಷಿತ್ ಹಾಗೂ 20 ಜನರ ಅರ್ಚಕರ ತಂಡ ಪೂಜಾ ಕೈಂಕರ್ಯ ನೆರವೇರಿದ್ದರು. ತಿರುಪರಿ ತಿರುಮಲ ದೇವಾಲಯದ ಮಾದರಿಯಲ್ಲಿ ದೇವಾಲಯ ಕೃತ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಬಾಹುಬಲಿ ಚಲನಚಿತ್ರದ ಸೆಟ್ ನಿರ್ಮಾಣ ಮಾಡಿದ್ದ ಕಲಾವಿದರು 24 ಅಡಿ ತಿರುಪತಿ ಕಿರೀಟ ಗೋಪುರ, 12 ಅಡಿ ಶ್ರೀನಿವಾಸ ಮೂರ್ತಿ ಸೆಟ್‌ ನಿರ್ಮಿಸಿದ್ದರು. ಭಕ್ತರಿಗೆ 1.5 ಲಕ್ಷ ಲಾಡು ಹಾಗೂ ಮೇಲುಕೋಟೆ ಪುಳಿಯೊಗರೆ ಪ್ರಸಾದ ವಿತರಣೆ ಮಾಡಿದ್ದರು. ಜೊತೆಗೆ ನಗರದ ಎರಡು ಕಡೆ ಗಣಿಗ ಕ್ಯಾಂಟೀನ್‌ ಆರಂಭಿಸಿ ₹ 10ಕ್ಕೆ ಊಟ ತಿಂಡಿ ನೀಡುತ್ತಿದ್ದರು.

‘ಮಂಡ್ಯದ ಗಂಡು ’ ಇಲ್ಲದ ಚುನಾವಣೆ

ಕಳೆದ ಎರಡೂವರೆ ದಶಕದಿಂದ ಜಿಲ್ಲೆಯ ರಾಜಕಾರಣದಲ್ಲಿ ‘ಮಂಡ್ಯದ ಗಂಡು’ ಎಂದೇ ಮಿಂಚಿದ್ದ ಅಂಬರೀಷ್‌ ಈ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವ ಮೂಲಕ ಕ್ಷೇತ್ರದಲ್ಲಿನ ಅಬ್ಬರವನ್ನು ತಗ್ಗಿಸಿದ್ದಾರೆ.

ಬೆಳಿಗ್ಗೆವರೆಗೂ ಅಂಬರೀಷ್‌ ಹೆಸರು ನಗರದೆಲ್ಲೆಡೆ ರಾರಾಜಿಸುತ್ತಿತ್ತು. ಆದರೆ ರವಿಕುಮಾರ್‌ ಹೆಸರು ಘೋಷಣೆಯಾದ ಕೂಡಲೇ ಕ್ಷೇತ್ರದ ಚಿತ್ರಣವೇ ಬದಲಾಯಿತು. ಎರಡು ತಿಂಗಳಿಂದ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದ ಕ್ಷೇತ್ರ ಕಡೇ ಕ್ಷಣದಲ್ಲಿ ತಣ್ಣಗಾಗಿದ್ದು ವಿಶೇಷ.

‘ಅಂಬರೀಷ್‌ ಒಳ್ಳೆಯವರೇ. ಆದರೆ ಅವರ ಬೆಂಬಲಿಗರು ಬೇರೆ ರೀತಿಯಾಗಿ ಬಿಂಬಿಸಿದ್ದರು. ಅವರು ಈ ಚುನಾವಣೆಯಿಂದ ದೂರ ಉಳಿದರೂ ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT