ಶನಿವಾರ, ಜುಲೈ 31, 2021
27 °C
ಬ್ರೀದ್–2 ಟ್ರೇಲರ್‌ ಬಿಡುಗಡೆ: ಆನ್‌ಲೈನ್‌ ಸರಣಿಗೂ ಅಭಿಷೇಕ್‌ ಪದಾರ್ಪಣೆ

ಮಗಳಿಗಾಗಿ ಹಂತಕನಾದ ಅಭಿಷೇಕ್ ಬಚ್ಚನ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

'ರೆಫ್ಯೂಜಿ' ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದ ಅಭಿಷೇಕ್ ಬಚ್ಚನ್ ಇದೀಗ ‘ಬ್ರೀದ್‌ 2 ಇನ್‌ ಟು ದ ಶಾಡೋಸ್’‌ ಸರಣಿಯೊಂದಿಗೆ ಆ‌ನ್‌ಲೈನ್‌ಗೂ ಪದಾರ್ಪಣೆ ಮಾಡಿದ್ದಾರೆ.

ಭಾರಿ ಕುತೂಹಲ ಕೆರಳಿಸಿರುವ ಈ ಥ್ರಿಲ್ಲರ್‌ ಸಸ್ಪೆನ್ಸ್‌ ಸರಣಿ ‘ಬ್ರೀದ್‌–2 ಇನ್‌ ಟು ದ ಶಾಡೋಸ್’ ಜುಲೈ 10ರಿಂದ ಅಮೆಜಾನ್‌ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗಲಿದೆ. ಮೊದಲ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ಈ ಟ್ರೇಲರ್ ಅನ್ನು ಅಭಿಷೇಕ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಹಠಾತ್‌ ಕಾಣೆಯಾಗುವ ಮಗಳನ್ನು ಹುಡುಕುವ ಹತಾಶ ಅಪ್ಪನ ಪಾತ್ರದಲ್ಲಿ ಅಭಿಷೇಕ್‌ ಕಾಣಿಸಿಕೊಂಡಿದ್ದಾರೆ. ದಕ್ಷಿಣದ ಬೆಡಗಿ ನಿತ್ಯಾ ಮೆನನ್‌ ಮತ್ತು ಅಮಿತ್ ಸಾಧ್ ಇಬ್ಬರೂ ಜೂನಿಯರ್‌ ಬಚ್ಚನ್‌ಗೆ ಸಾಥ್‌ ನೀಡಿದ್ದಾರೆ. ಮಗಳನ್ನು ಹುಡುಕಲು ಹೊರಡುವ ದಂಪತಿಗೆ ಎದುರಾಗುವ ಕಷ್ಟ, ಕೋಟಲೆಗಳು, ಪರಿಚಯವಾಗುವ ಕರಾಳಮುಖಗಳೇ ಈ ಚಿತ್ರದ ಹೂರಣ.

ವೃತ್ತಿಯಿಂದ ಮಾನಸಿಕ ತಜ್ಞನಾದ ಅಪ್ಪ ಕಾಣೆಯಾದ ತನ್ನ ಮಗಳನ್ನು ಹೇಗಾದರೂ ಸರಿ ಹುಡಕಬೇಕು ಎಂದು ಪೊಲೀಸರ ಜತೆ ತಾನೂ ತನಿಖೆಯಲ್ಲಿ ತೊಡಗುತ್ತಾನೆ. ಮಗಳ ನಾಪತ್ತೆ ರಹಸ್ಯ ಭೇದಿಸಲು ಹೊರಡುವ ಆತ ಒಂದು ಹಂತದಲ್ಲಿ ಹಂತಕನಾಗಲು ಸಿದ್ಧನಾಗುತ್ತಾನೆ. 

ಕಾಣೆಯಾದ ಮೂರು ತಿಂಗಳಿಂದ ಮಗಳ ಹುಡುಕಾಟದಲ್ಲಿ ತೊಡಗುವ ದಂಪತಿಗೆ ಮಗಳು ಜೀವಂತವಾಗಿ ಸಿಗುತ್ತಾಳಾ ಎಂಬುವುದೇ ಈ ಸರಣಿಯ ಸಸ್ಪೆನ್ಸ್‌. ಆತನ ಮುದ್ದು ಮಗಳನ್ನು ಅಪಹರಿಸಿದ  ಮುಸುಕುಧಾರಿ ಖಳನಾಯಕ ಯಾರಿರಬಹುದು ಎಂಬ ಕುತೂಹಲ ಕೊನೆಯವರೆಗೂ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸುತ್ತದೆ.    ‌ 

‘ಇದು ನನ್ನ ಮೊದಲ ಡಿಜಿಟಲ್‌ ಸಿರೀಸ್‌. ವಿಭಿನ್ನ ಅನುಭವ, ಖುಷಿ ನೀಡಿದೆ. ಈ ಪ್ಲಾಟ್‌ಫಾರ್ಮ್ ಮೂಲಕ  ಹೊಸ ಪ್ರೇಕ್ಷಕರನ್ನು ತಲುಪುವ ಪ್ರಯತ್ನ ಮಾಡಿದ್ದೇನೆ. ಜನರ ನಿರೀಕ್ಷೆ, ಪ್ರತಿಕ್ರಿಯೆ ಹೇಗಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದು ಅಭಿಷೇಕ್‌ ಬಚ್ಚನ್‌ ಹೇಳಿದ್ದಾರೆ. 

ಮೊದಲ ಸೀಸನ್‌ನಲ್ಲಿ ಪ್ರಸಾರವಾಗಿದ್ದ ‘ಬ್ರೀದ್‌’ ಸರಣಿಯಲ್ಲಿ ಆರ್. ಮಾಧವನ್‌ ಜತೆ ನಟಿಸಿದ್ದ ಅಮಿತ್‌ ಸಾಧ್ ಎರಡನೇ ಸರಣಿಯಲ್ಲೂ ಇದ್ದಾರೆ. ಮೊದಲ ಸರಣಿಯಲ್ಲಿ ಶ್ವಾಸಕೋಶದ ತೊಂದರೆಯಿಂದ ಜೀವನ್ಮರಣದೊಂದಿಗೆ ಹೋರಾಡುತ್ತಿರುವ ಮಗುವಿನ ತಂದೆಯಾಗಿ ಮಾಧವನ್‌ ಮನೋಜ್ಞವಾಗಿ ನಟಿಸಿದ್ದರು.

ದಾನಿಗಳಿಂದ ಶಾಸಕೋಶ ಪಡೆಯುವ ಪಟ್ಟಿಯಲ್ಲಿ ತನ್ನ ಮಗನಿಗಿಂತ ಮೇಲಿರುವ ರೋಗಿಗಳನ್ನು ನಾಯಕ ಕೊಲ್ಲುತ್ತಾ ಸಾಗುತ್ತಾನೆ. ಹೇಗಾದರೂ ಸರಿ ಮಗನನ್ನು ಉಳಿಸಿಕೊಳ್ಳಬೇಕು ಎಂದು ಹೊರಡುವ ಅಪ್ಪ ಅನಿವಾರ್ಯವಾಗಿ ಹಂತಕನಾಗಿ ಬದಲಾಗುತ್ತಾನೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು