‘ಬಂಚ್ ಆಫ್ ಟ್ಯಾಲೆಂಟ್ಸ್’ ಆಕರ್ಷ!

7

‘ಬಂಚ್ ಆಫ್ ಟ್ಯಾಲೆಂಟ್ಸ್’ ಆಕರ್ಷ!

Published:
Updated:
Deccan Herald

ಇವರು ಆಕರ್ಷ ಆದಿತ್ಯ. ಇವರನ್ನು ‘ಬಂಚ್ ಆಫ್ ಟ್ಯಾಲೆಂಟ್ಸ್’ ಅಂತ ಕರೆಯಬಹುದು. ತಮ್ಮ ಬಹುಮುಖ ಪ್ರತಿಭೆಗಳ ಮೂಲಕ, ಗ್ಲಾಮರ್ ಲುಕ್‌ನಿಂದ ಯುವಜನತೆಯನ್ನು ತಮ್ಮತ್ತ ಆಕರ್ಷಿಸುವ ಗುಣ ಇವರದ್ದು. ನಟನೆಯ ಜೊತೆ, ಯೋಗ ತರಬೇತಿ, ಜುಂಬಾ ಟ್ರೇನಿಂಗ್, ಏರೋಬಿಕ್ಸ್ ತರಬೇತಿ, ಹಾಡುವುದು, ಡಾನ್ಸ್ ಕೋರಿಯೋಗ್ರಫಿ, ಲಿರಿಸಿಸ್ಟ್, ರಿಯಾಲಿಟಿ ಷೋನಲ್ಲಿ ಭಾಗವಹಿಸಿರುವುದು, ನ್ಯೂಟ್ರಿಷನಿಷ್ಟ್ ಹೀಗೆ ಅನೇಕ ಕಾಯಕಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಚಾಚೂ ತಪ್ಪದೆ ಪಾಲಿಸಿಕೊಂಡಿರುವ ಆಕರ್ಷ ಆದಿತ್ಯ ‘ಮೆಟ್ರೊ’ ಜೊತೆ ಮಾತನಾಡಿದ್ದಾರೆ.

ಆಕರ್ಷ ಆದಿತ್ಯ. ಮೂಲತಃ ಬೆಂಗಳೂರಿನವರು. ಐಐಎಂಇ ಗಾಜಿಯಾಬಾದ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ನಟನೆಯತ್ತ ಅಷ್ಟೇನೋ ಒಲವಿಲ್ಲದಿದ್ದ ಆಕರ್ಷಗೆ ಅವರ ಕುಟುಂಬದವರ ಅಭಿಲಾಷೆಯಂತೆ ನಟನಾ ಕ್ಷೇತ್ರಕ್ಕೆ ಕಾಲಿಡಲು ಅವಕಾಶ ಸಿಕ್ಕಿತು.

2006 ರಿಂದ ಎಚ್‌ಆರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಆಕರ್ಷ ಮುಂದೆ ಎಎನ್‌ಜೆಡ್ ಎನ್ನುವ ಬ್ಯಾಂಕಿನಲ್ಲಿ ಆರು ವರ್ಷ ಕೆಲಸ ಮಾಡಿದರು. ಜೊತೆಗೆ 2009 ಮತ್ತು 2010 ರಲ್ಲಿ ಒಂದು ಲೋಕಲ್ ನೆಟ್‌ವರ್ಕ್‌ನಲ್ಲಿ ವಿಜೆಯಾಗಿದ್ದವರು.

2013 ರಲ್ಲಿ ವೃತ್ತಿ ಜೀವನಕ್ಕೆ ಫುಲ್‌ಪಾಯಿಂಟ್ ಇಟ್ಟ ನಂತರ ತಮ್ಮ ಕನಸುಗಳ ಬೆನ್ನತ್ತಿದರು. ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದ ಆದಿತ್ಯ ತಮ್ಮ ಲಕ್ಷ್ಯ ಸಾಧನೆಗಾಗಿ ಕಿರುತೆರೆಗೆ ಹಾರಿದ್ದು ಅಚ್ಚರಿಯೇ ಸರಿ. ಆದರೆ ಹಠ, ಪರಿಶ್ರಮ, ಛಲ, ದೃಢನಿಶ್ಚಯದಿಂದ ಇಂದು ಅವರೆಲ್ಲರ ಕನಸುಗಳನ್ನು ಸಾಕಾರಗೊಳಿಸಿದ್ದೇನೆ ಎನ್ನುವ ಹೆಮ್ಮೆ ಅವರಿಗಿದೆ. ಜೊತೆಗೆ ಫೇಸಸ್ ಬೆಂಗಳೂರ್-2014 ಸ್ಪರ್ಧೆಯ ರನ್ನರ್ ಅಪ್ ಆಗಿ ಹೊರಹೊಮ್ಮಿದ ಹೈದ ಆಕರ್ಷ ಆದಿತ್ಯ.

2013ರಲ್ಲಿ ಕನ್ನಡದ ಕಿರುತೆರೆಗೆ ಪದಾರ್ಪಣೆ ಮಾಡಿದ ಆಕರ್ಷ, ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗೊಂಬೆ ಆಟವಯ್ಯಾ’ ಧಾರಾವಾಹಿಯಲ್ಲಿ ಅಭಿನಯಿಸಿದರು. ನಂತರ ಬೆಳ್ಳಿ ಕಾಲುಂಗುರ, ದುರ್ಗಾ, ಅಮ್ಮ, ಸಪ್ತಮಾತೃಕಾ, ಸಿಂಧೂರ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರು. ಕೆಲವು ಧಾರಾವಾಹಿಗಳಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡದ ಜೊತೆಗೆ ‘ಅಳಗ್’ ಎನ್ನುವ ತಮಿಳು ಧಾರಾವಾಹಿಯಲ್ಲೂ ತಮ್ಮ ನಟನೆಯಿಂದ ಮಿಂಚಿದವರು ಆಕರ್ಷ. ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಸಿಂಧೂರ ಧಾರಾವಾಹಿಯಲ್ಲಿ ‘ಗೌತಮ್’ ಎನ್ನುವ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದರ ಹೊರತಾಗಿ ಆಕರ್ಷ ವೃಕ್ಷಾ ಪ್ಲೈವುಡ್ ಮ್ಯಾನುಫಾಕ್ಚರರ್ಸ್‌, ಸಾಧನಾ ಆಯುರ್ ಯೋಗ, ನ್ಯೂಟ್ರಿ ಆಕ್ಟಿವ್ ಮತ್ತು ಸ್ವ್ಕಯರ್ ಎಂ ಡಿಸೈನ್ ಕೆಫೆ ಎನ್ನುವ ನಾಲ್ಕು ಬ್ರಾಂಡ್‌ಗಳ ಸ್ಟ್ರ್ಯಾಟರ್ಜಿ ಮತ್ತು ಪ್ಲಾನಿಂಗ್ ಹೆಡ್ ಆಗಿದ್ದಾರೆ.

ಸ್ವತಃ ತಾವೇ ಲಿರಿಕ್ಸ್ ಕಂಪೋಸ್ ಮಾಡಿ, ತಾವೇ ಹಾಡಿ, ನಟಿಸಿ, ನಿರ್ದೇಶನ ಮಾಡುವುದು ಇವರ ಶೈಲಿ. ಎ2 (ಆಕರ್ಷ ಆದಿತ್ಯ) ಕನ್ನಡ ಮ್ಯೂಸಿಕ್ ಸಿರೀಸ್ ಪ್ರಾರಂಭಿಸಿರುವ ಆಕರ್ಷ ಕಳೆದ ಜನವರಿಯಲ್ಲಿ ಪಾರ್ಟಿ ಆಂಥಮ್ ಎನ್ನುವ ಸಾಂಗ್ ಅನ್ನು ಬಿಡುಗಡೆ ಮಾಡಿ ಕನ್ನಡದ ಜನತೆಯಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಸ್ಟೆಪ್ ಅಪ್ ಲ್ಯಾಬ್ ಎನ್ನುವ ತಮ್ಮದೇ ಐದು ನೃತ್ಯ ಕೇಂದ್ರಗಳನ್ನು ಹೊಂದಿರುವ ಇವರು ಸಾವಿರಾರು ಜನರಿಗೆ ಡಾನ್ಸ್ ಹೇಳಿಕೊಡುತ್ತಾರೆ. ಆಕರ್ಷ ಅವರು 12 ಮತ್ತು ಅದಕ್ಕಿಂತ ಹೆಚ್ಚು ಡಾನ್ಸ್ ಸ್ಟೈಲ್‌ಗಳು ಗೊತ್ತು ಎಂದರೆ ಎಲ್ಲರ ಕಣ್ಣರಳುವುದುಂಟು. ಆಹಾರ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಆದಿತ್ಯ ಡಯಟ್ ಪ್ಲಾನ್ ಮಾಡುವುದರಲ್ಲಿ ನಿಸ್ಸೀಮರು. ಅವರಿಗೆ ತಮಿಳು ಮತ್ತು ತೆಲುಗಿನಲ್ಲಿ ಅವಕಾಶಗಳು ವಿಪುಲ. ಆದರೆ ಇವರಿಗೆ ಕನ್ನಡದಲ್ಲೇ ಸಿನಿಮಾ ಮಾಡುವ ಕನಸು. ಪೊಲೀಸ್ ಪಾತ್ರದಲ್ಲಿ ಮಿಂಚುವ ಅಭಿಲಾಷೆ ಹೊಂದಿರುವ ಆಕರ್ಷ ಅವರು ನಟ ಸುದೀಪ್ ಅವರ ಜೊತೆ ತೆರೆ ಹಂಚಿಕೊಳ್ಳುವ ಬಯಕೆ ಹೊಂದಿದ್ದಾರೆ. ಡಾನ್ಸ್-ಓರಿಯೆಂಟೆಡ್ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕರೆ ಥಟ್ ಅಂತ ಒಪ್ಪಿಕೊಳ್ಳುವೆ ಎನ್ನುವ ಆಕರ್ಷ ಥ್ರಿಲ್ಲರ್ ಸಿನಿಮಾಗಳಿಗೆ ಪ್ರಾಶಸ್ತ್ಯ ನೀಡುತ್ತಾರಂತೆ.

ವಿವಿಧ ಭಾಷೆಯ ಸಿನಿಮಾ ನೋಡುವುದು, ಪಾತ್ರಗಳ ಅವಲೋಕನ ಮಾಡುವುದು, ಹಾಡು ಕೇಳುವುದು, ಹಾಡುಗಳನ್ನು ಕಂಪೋಸ್ ಮಾಡುವುದು ಮತ್ತು ಸುಮ್ಮನೆ ಕೂಡದಿರುವುದು ಇವರ ಹವ್ಯಾಸಗಳಲ್ಲಿ ಕೆಲವು. ದಿನದ 24 ಗಂಟೆಗಳಲ್ಲಿ ವೈಯಕ್ತಿಕವಾಗಿ ಸಮಯ ಮೀಸಲಿಡುವುದು ತುಂಬಾ ಕಡಿಮೆ. ಹೀಗಾಗಿ ಇವರು ಯುವಜನತೆಗೆ ಪ್ರೇರಣೆ ಎಂದರೆ ತಪ್ಪಾಗದು.

ಯಾವುದೇ ಗಾಡ್‌ಫಾದರ್ ಇಲ್ಲದೇ ನಟನಾ ಕ್ಷೇತ್ರಕ್ಕೆ ಧುಮುಕಿದ ಆಕರ್ಷ ಅವರಿಗೆ ಐದು ವರ್ಷದ ಕಿರುತೆರೆ ಪಯಣದಲ್ಲಿ ಆದ ಅನುಭವಗಳು ಅತಿ ಹೆಚ್ಚು. ಇವರೋ ಬಂಚ್ ಆಫ್ ಟ್ಯಾಲೆಂಟ್ಸ್ ಹೊಂದಿರುವ ಚಿಗುರು ಮೀಸೆ ಹುಡುಗ. ಹೀಗಾಗಿ ಹೊಸ ಹೊಸ ಪ್ರಯತ್ನಗಳಿಗೆ ಮೈಯೊಡ್ಡಿ ತಮ್ಮ ನೈಜ ಅಭಿನಯದ ಮೂಲಕ ಕನ್ನಡದ ಜನತೆಯ ಮನೆಮಾತಾದವರು. ಹೀಗಾಗಿ ಹೊಸದಾಗಿ ಕಿರುತೆರೆಗೆ ಬರಲು ಬಯಸುವ ಯುವ ಮನಸ್ಸುಗಳಿಗೆ ಆಕರ್ಷ ಹೇಳುವುದಿಷ್ಟೇ ‘ಕಮ್ ಪ್ರಿಪೇರ್ಡ್‌, ಬಿ ಕಾನ್ಫಿಡೆಂಟ್ ಆಂಡ್ ಶೋ ಯುವರ್ ಇನ್ನರ್ ಟ್ಯಾಲೆಂಟ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !