ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಅಭಿರುಚಿಯ ಧಾರಾವಾಹಿ ‘ಕನ್ನಡತಿ’ ಇಂದು ಕೊನೆ

Last Updated 3 ಫೆಬ್ರುವರಿ 2023, 10:39 IST
ಅಕ್ಷರ ಗಾತ್ರ

ಕನ್ನಡತಿ, ಕನ್ನಡತಿ...ರಾತ್ರಿ 7.30 ಆಗುತ್ತಿದ್ದಂತೆ ಬಹುತೇಕ ಮನೆಗಳಲ್ಲಿ ಕೇಳುತ್ತಿದ್ದ ಶೀರ್ಷಿಕೆ ಗೀತೆ. ಕನ್ನಡ ಧಾರಾವಾಹಿ ಇತಿಹಾಸದಲ್ಲಿ ಸಿದ್ಧ ಸೂತ್ರಗಳನ್ನು ಮೀರಿ ನಿಂತು ಟಿಆರ್‌ಪಿ, ಜನಪ್ರಿಯತೆ ಎರಡನ್ನೂ ಗಳಿಸಿದ ಕೆಲವೇ ಧಾರಾವಾಹಿಗಳ ಪಟ್ಟಿಗೆ ಸೇರಿಸಬಹುದಾದ ಈ ಧಾರಾವಾಹಿ ಇಂದು ಮುಕ್ತಾಯಗೊಳ್ಳುತ್ತಿದೆ.

‘ಒಂದು ಉತ್ತಮ ಅಭಿರುಚಿ ಇಟ್ಟುಕೊಂಡು ಶುರುವಾದ ಧಾರಾವಾಹಿ. ಮೆಗಾ ಧಾರಾವಾಹಿಗಳನ್ನು 500 ಎಪಿಸೋಡ್‌ ದಾಟಿದ ನಂತರ ಜನ ಮುಗಿಸಿದ್ರೆ ಸಾಕಪ್ಪ ಎನ್ನುತ್ತಿರುತ್ತಾರೆ. ನಮ್ಮದು ಇವತ್ತಿಗೆ ಸರಿಯಾಗಿ 800ನೇ ಸಂಚಿಕೆಗಳು. ಆದರೂ ಯಾಕೆ ಮುಗಿಸ್ತಾ ಇದಾರೆ ಎಂದು ಇವತ್ತು ಸಾವಿರಾರು ಸಂದೇಶಗಳು ಬಂದಿವೆ. ಇದೇ ಒಂದು ಸಾಧನೆ ಅನ್ನಿಸುತ್ತೆ. ಈ ಯಶಸ್ಸಿನಲ್ಲಿ ಮುಖ್ಯ ಪಾಲು ಕಥೆ ಬರೆದು, ಈ ರೀತಿ ಒಂದು ಧಾರಾವಾಹಿಯನ್ನು ಹೀಗೆಯೇ ಮಾಡಬೇಕು ಎಂದು ಕನಸು ಕಂಡ ಕಲರ್ಸ್‌ ಕನ್ನಡ ಮುಖ್ಯಸ್ಥರಾದ ಪರಮೇಶ್ವರ್‌ ಗುಂಡ್ಕಲ್‌ ಅವರಿಗೆ ಮತ್ತು ಎಲ್ಲಿಯೂ ಮೌಲ್ಯ ಕುಸಿಯದಂತೆ ಚಿತ್ರಕಥೆ ಹೆಣೆದ ವಿಕಾಸ್‌ ನೆಗಿಲೋಣಿ ಅವರಿಗೆ ಸೇರಬೇಕು’ ಎಂದು ನಟಿ ರಂಜನಿ ರಾಘವನ್‌ ಪ್ರಜಾವಾಣಿಗೆ ತಿಳಿಸಿದ್ದಾರೆ.

ಭುವನಗಿರಿಯ ಕಥೆ...
'ಕನ್ನಡತಿ' ಧಾರಾವಾಹಿಯಲ್ಲಿ ರಂಜನಿ ರಾಘವನ್‌ ಭುವಿಯಾಗಿ ಕಾಣಿಸಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪುಟ್ಟ ಊರು ಭುವನಗಿರಿ. ಕನ್ನಡ ತಾಯಿ ಭುವನೇಶ್ವರಿ ದೇವಾಲಯವನ್ನು ಹೊಂದಿರುವ ಊರದು. ಅಲ್ಲಿಯದ್ದೇ ಕಥೆಯನ್ನು ಇಟ್ಟುಕೊಂಡು 2020ರಲ್ಲಿ ಶುರುವಾಗಿದ್ದು ಕನ್ನಡತಿ. ಮೊದಲ ಕೆಲ ಸಂಚಿಕೆಗಳು ಸಿದ್ದಾಪುರ, ಸಾಗರ ಸುತ್ತಮುತ್ತಲೇ ಚಿತ್ರೀಕರಣಗೊಂಡಿದ್ದವು. ಹಸಿರುಪೇಟೆ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆಯಲ್ಲಿ ಅರೆಕಾಲಿಕ ಉಪನ್ಯಾಸಕಿಯಿಂದ ಕಂಪೆನಿಯೊಂದರ ಎಂಡಿಯಾಗಿ ಇಡೀ ಕುಟುಂಬ, ಕಚೇರಿಯ ಆಗುಹೋಗುಗಳನ್ನು ನಿಭಾಯಿಸುವ ಭುವಿ ಪಾತ್ರ ರಂಜನಿ ರಾಘವನ್‌ ಅವರಿಗೆ ಒಂದು ವಿಭಿನ್ನ ವರ್ಚಸ್ಸು ನೀಡಿದ್ದಂತೂ ಸುಳ್ಳಲ್ಲ. ಹಾಗೆಯೇ ರಂಜನಿ ರಾಘವನ್‌ ಕೂಡ ಭುವಿ ಪಾತ್ರಕ್ಕೆ ಮೆರಗು ನೀಡಿದ್ದರು ಎಂದರೂ ತಪ್ಪಲ್ಲ. ಅವರಿಗೆ ನಾಯಕರಾಗಿ ಕಿರಣ್‌ರಾಜ್‌ ಕೂಡ ಜನರ ಮನಸ್ಸು ಗೆದ್ದಿದ್ದರು. ಮನೆಯ ಅಮ್ಮಮ್ಮನಾಗಿ ಚಿತ್ಕಲಾ ಬಿರಾದಾರ್‌ ಪಾತ್ರ ಮರೆಯುವಂತಿಲ್ಲ.

‘ಒಂದು ಗಟ್ಟಿಯಾದ ಪಾತ್ರ ಹೇಗೆ ಜನಕ್ಕೆ ಇಷ್ಟವಾಗಬಹುದು ಎಂಬುದಕ್ಕೆ ಕನ್ನಡತಿ ಉತ್ತಮ ಉದಾರಹಣೆ. ಈ ರೀತಿ ಧಾರಾವಾಹಿಗಳು ಹೆಚ್ಚಾಗಬೇಕು. ಕಲರ್ಸ್‌ ಕನ್ನಡದ ಒಟಿಟಿ ವೇದಿಕೆ ವೂಟ್‌ನಲ್ಲಿ ಇದು ಶುರುವಾದಾಗಿನಿಂದ ಇಲ್ಲಿವರೆಗೆ ನಂಬರ್‌ ಒನ್‌ ಧಾರಾವಾಹಿ. ಮನೆಯಲ್ಲಿ ಕುಳಿತ ಮಹಿಳೆಯರು ಮಾತ್ರ ಧಾರಾವಾಹಿ ನೋಡುತ್ತಾರೆ ಎಂಬ ಆರೋಪವಿದೆ. ಆದರೆ ಗಂಡಸರು, ಹೈಪ್ರೊಫೈಲ್‌ ಜನ ಈ ಧಾರಾವಾಹಿ ನೋಡುತ್ತಿದ್ದರು. ತುಂಬ ಜನ ಪ್ರತಿಕ್ರಿಯಿಸಿದ್ದಾರೆ. ವಿದೇಶಕ್ಕೆ ಹೊರಟು ನಿಂತವರು ಬಂದು ಭೇಟಿಯಾಗಿ ಫೋಟೊ ತೆಗೆಸಿಕೊಂಡು ಹೋದ ಉದಾರಹಣೆಗಳಿವೆಸಸ. ಅಷ್ಟರ ಮಟ್ಟಿಗೆ ಈ ಪಾತ್ರ ಯಶಸ್ವಿಯಾಗಿತ್ತು. ಧಾರಾವಾಹಿ ಅಂತ್ಯಕ್ಕೆ ಬರುತ್ತಿದ್ದ ‘ಸರಿಗನ್ನಡಂ ಗೆಲ್ಗೆ’ ರಘು ಅಪಾರ ಅವರ ಪರಿಕಲ್ಪನೆ. ಅವರಿಗೂ ಧನ್ಯವಾದ’ ಎನ್ನುತ್ತಾರೆ ರಂಜನಿ.

ಮುಂದಿನ ಬದಲಾವಣೆ ಅಂತರಪಟ?
ಸ್ವತಃ ಕಥೆಗಾರರೂ ಆಗಿರುವ ಕಲರ್ಸ್‌ ಕನ್ನಡ ಮುಖ್ಯಸ್ಥ ಪರಮೇಶ್ವರ್‌ ಗುಂಡ್ಕಲ್‌ ಅವರ ಕನಸು ಕನ್ನಡತಿ. ಟಿಆರ್‌ಪಿ ದೃಷ್ಟಿಯಿಂದ ವಾಹಿನಿ ಸಂಕಷ್ಟದಲ್ಲಿದ್ದಾಗ ಬ್ರ್ಯಾಂಡ್‌ ನೀಡಿದ ಧಾರಾವಾಹಿ ಕೂಡ ಹೌದು. ತಮ್ಮದೇ ಊರಿನ ಸುತ್ತಮುತ್ತಲ ಪಾತ್ರಗಳು, ಕಥೆಯನ್ನು ಧಾರಾವಾಹಿ ತಂದು ಹಚ್ಚ ಹಸಿರಾದ ಮಲೆನಾಡನ್ನು ತೋರಿಸಿದ್ದರು. ತಂಡದ ಪ್ರಯತ್ನವಿದು. ಎಲ್ಲ ಕಮರ್ಷಿಯಲ್‌ ಕಥೆಗಳ ನಡುವೆ ಜನಕ್ಕೆ ಆಪ್ತವಾಗುವ, ಕನ್ನಡದ ಸೊಬಗನ್ನು ಬಿಂಬಿಸುವ ಈ ರೀತಿ ಕಥೆಯನ್ನು ಇಷ್ಟು ದಿನ ತೋರಿಸಿಕೊಂಡು ಬಂದಿರುವುದಕ್ಕೆ ಹೆಮ್ಮೆಯಿದೆ ಎನ್ನುತ್ತಾರೆ ಪರಮೇಶ್ವರ್‌ ಗುಂಡ್ಕಲ್‌.

ಸದ್ಯಕ್ಕೆ 7.30–8 ಗಂಟೆವರೆಗೆ ಭಾಗ್ಯಲಕ್ಷ್ಮಿ ಧಾರಾವಾಹಿಯ ಮದುವೆ ಸಂಚಿಕೆಗಳು ಪ್ರಸಾರವಾಗುತ್ತವೆ ಎಂಬ ಸುದ್ದಿಯಿದೆ. ಬಳಿಕ ರಾಮ್‌ಜಿ ನಿರ್ಮಾಣ ‘ಅಂತರ್‌ಪಟ’ ಧಾರಾವಾಹಿ ಪ್ರಸಾರವಾಗಬಹುದು ಎನ್ನುತ್ತಿವೆ ಮೂಲಗಳು. ಆದರೆ ವಾಹಿನಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸರಿಗನ್ನಡಂ ಗೆಲ್ಗೆ: ಕನ್ನಡತಿ ಧಾರಾವಾಹಿಯ ಕೊನೆಯಲ್ಲಿ ಬರುತ್ತಿದ್ದ ‘ಸರಿಗನ್ನಡಂ ಗೆಲ್ಗೆ’ ಎಂಬ ವಿಶೇಷ ಭಾಗ ಜನರ ಮನಸ್ಸು ಗೆದ್ದಿತ್ತು. ಅದರಲ್ಲಿ ದಿನಕ್ಕೊಂದು ಕನ್ನಡ ಪದ, ಅದರ ಸರಿಯಾದ ಬಳಕೆ ಪರಿಚಯಿಸಿಕೊಡಲಾಗುತ್ತಿತ್ತು. ವಾರದ ಕೊನೆಯಲ್ಲಿ ಅರ್ಧಗಂಟೆ ವಿಶೇಷ ಕಾರ್ಯಕ್ರಮವೂ ಪ್ರಸಾರವಾಗುತ್ತಿತ್ತು. ತಪ್ಪಾಗಿ ಬಳಕೆಯಾಗುತ್ತಿದ್ದ ಅನೇಕ ಕನ್ನಡ ಪದಗಳ ಸರಿಯಾದ ಬಳಕೆಯನ್ನು ಈ ಕಾರ್ಯಕ್ರಮ ಜನರಿಗೆ ತಿಳಿಸಿಕೊಟ್ಟಿದೆ.


ಜನ ಕನ್ನಡತಿ ಬಳಿಕ ಮುಂದೇನು ಎನ್ನುತ್ತಿದ್ದಾರೆ. ನನ್ನ ನಟನೆಯ ಎರಡು ಸಿನಿಮಾ ರಿಲೀಸ್‌ಗಿದೆ. ಎರಡು ಮಹಿಳಾ ಪ್ರಧಾನ ಆಂಥೋಲಜಿ ಸಿನಿಮಾಗಳು ಪೂರ್ತಿಗೊಂಡಿದೆ. ಧಾರಾವಾಹಿ ಆಫರ್‌ಗಳಿವೆ. ಆದರೆ ಮಾಡಲು ಮನಸ್ಸಿಲ್ಲ. ಒಂದೊಳ್ಳೆ ಪಾತ್ರವಿರುವ ಉತ್ತಮ ಕಥೆ ನೋಡುತ್ತಿರುವೆ. ಕನ್ನಡತಿ ಪ್ರೇಕ್ಷಕರಿಗೆ ವಿಶೇಷ ಕೃತಜ್ಞತೆ. ಈ ಥರ ಕಥೆ ಕನ್ನಡದಲ್ಲಿ ಹೆಚ್ಚು ಬರಬೇಕು.
ರಂಜನಿ ರಾಘವನ್‌, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT