ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಟೆಸ್ಟಂಟ್‌ರ ಮೊದಲ ಮಂದಿರ ‘ಲೂಕ್ಸ್‌ ಚರ್ಚ್‌’

Last Updated 30 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ವಿದೆಡೆ ಸಂಸ್ಕೃತ ವಿಶ್ವವಿದ್ಯಾಲಯ, ಇನ್ನೊಂದೆಡೆ ಟಿಪ್ಪು ಸುಲ್ತಾನ್‌ ಅರಮನೆ, ಸಮೀಪದಲ್ಲಿಯೇ ಕೋಟೆ ವೆಂಕಟರಮಣ ದೇವಾಲಯ, ಕೂಗಳತೆ ದೂರದಲ್ಲಿಯೇ ವಾಣಿ ವಿಲಾಸ, ಮಿಂಟೊ, ವಿಕ್ಟೋರಿಯಾ ಆಸ್ಪತ್ರೆಗಳಿವೆ. ಇವುಗಳ ಇತಿಹಾಸದೊಂದಿಗೆ ತನ್ನ ಇತಿಹಾಸವನ್ನೂ ಬೆಸೆದುಕೊಂಡಿರುವುದೇ ಸೇಂಟ್‌ ಲೂಕ್ಸ್‌ ಚರ್ಚ್‌. ಅದು ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿದೆ.

ಬೆಂಗಳೂರಿನಲ್ಲಿ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾದ ಇದು, ನಗರದಲ್ಲಿ ನಿರ್ಮಾಣವಾಗಿರುವ ಪ್ರಾಟೆಸ್ಟಂಟ್‌ರ ಮೊದಲ ಚರ್ಚ್. ಬೆಂಗಳೂರಿನ ಕೋಟೆಯ ಆವರಣದೊಳಗಿದ್ದ ಈ ಚರ್ಚ್‌ಗೆ ‘ಕೋಟೆ ಚರ್ಚ್‌’ ಎನ್ನಲಾಗುತ್ತಿತ್ತು. ನಗರದ ಪಾರಂಪರಿಕ ಚರ್ಚ್‌ಗಳಲ್ಲಿ ಇದೂ ಒಂದು.

ಈ ‘ಕೋಟೆ ಚರ್ಚ್‌’ಗೆ ಎರಡು ಶತಮಾನಕ್ಕೂ ಹಿಂದಿನ ಇತಿಹಾಸವಿದೆ. ಕ್ರಿ.ಶ 1799ರಲ್ಲಿ ನಾಲ್ಕನೇ ಆಂಗ್ಲೊ– ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ ಮರಣ ಹೊಂದಿದ ಬಳಿಕ ಬ್ರಿಟಿಷರು ಬೆಂಗಳೂರಿನ ಕೋಟೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರು. ಆಗ ಬ್ರಿಟಿಷ್‌ ಸೈನಿಕರಿಗೆಂದು ಕೋಟೆ ಆವರಣದಲ್ಲಿ ಕ್ರಿ.ಶ 1803ರಲ್ಲಿ ಸಣ್ಣದಾದ ಗುಡಿಯೊಂದನ್ನು ಕಟ್ಟಲಾಯಿತು. ಅದನ್ನು ‘ಡ್ರೂಮರ್ಸ್‌ ಚಾಪೆಲ್‌’ ಎಂದು ಕರೆಯಲಾಗುತ್ತಿತ್ತು. ಕೋಟೆಯ ಆವರಣದಲ್ಲಿದ್ದ ಈ ಗುಡಿ ಹರ್ಡಿಂಜ್‌ ರಸ್ತೆಯಲ್ಲಿ (ಈಗಿರುವ ಪಂಪ ಮಹಾಕವಿ ರಸ್ತೆ) ಸ್ಥಳಾಂತರವಾಗಿದ್ದು 1935ರಲ್ಲಿ. ಅಲ್ಲಿ ಇದಕ್ಕೆ ‘ಸೇಂಟ್‌ ಲೂಕ್ಸ್‌ ಚರ್ಚ್‌’ ಎಂದು ನಾಮಕರಣ ಮಾಡಲಾಯಿತು.

ಸ್ಥಳಾಂತರ ಏಕೆ?: ಕ್ರಿ.ಶ 1900ರಲ್ಲಿ ವಿಕ್ಟೋರಿಯಾ ಆಸ್ಪತ್ರೆ, 1915ರಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆ ಸಮೀಪದಲ್ಲಿ ನಿರ್ಮಾಣವಾಯಿತು. ಇದೇ ಆಸ್ಪತ್ರೆ ಆವರಣವನ್ನು ವಿಸ್ತರಿಸಿ ಹೆರಿಗೆ ಆಸ್ಪತ್ರೆ (ವಾಣಿ ವಿಲಾಸ) ನಿರ್ಮಿಸುವ ಯೋಜನೆಯನ್ನು ಮೈಸೂರು ಸಂಸ್ಥಾನ ಹೊಂದಿತ್ತು. ಅದಕ್ಕೆ ಅಗತ್ಯವಾಗಿದ್ದ ಜಾಗ ಪಡೆಯಲು 1932ರಲ್ಲಿ ಕೋಟೆ ಚರ್ಚ್ ಅನ್ನು ಸ್ಥಳಾಂತರಿಸಿತು.

ಈಗಿನ ಪಂಪ ಮಹಾಕವಿ ರಸ್ತೆಯಲ್ಲಿ ಚರ್ಚ್‌ ನಿರ್ಮಾಣಕ್ಕೆ ನಿವೇಶನ ನೀಡಿದ ಮೈಸೂರು ಸಂಸ್ಥಾನ, ಕೋಟೆ ಚರ್ಚ್‌ನ ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದಕ್ಕೆ ₹ 7,000 ಪರಿಹಾರವನ್ನೂ ನೀಡಿತ್ತು. ಹೊಸ ಚರ್ಚ್‌ ನಿರ್ಮಾಣ ಕಾಮಗಾರಿಗೆ ಮೈಸೂರಿನ ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಅವರು 1932ರ ಸೆಪ್ಟೆಂಬರ್‌ 29ರಂದು ಗುದ್ದಲಿ ಪೂಜೆ ಮಾಡಿದ್ದರು. ಚರ್ಚ್‌ ನಿರ್ಮಾಣಕ್ಕೆ ₹ 32 ಸಾವಿರ ಖರ್ಚಾಗುತ್ತಿತ್ತು.

ಪರಿಹಾರ ಮೊತ್ತದ ಜತೆಗೆ ಕೇಂದ್ರ ಸರ್ಕಾರ ನೀಡಿದ ₹ 3,000, ಮದ್ರಾಸ್‌ ಡೈಯಾಸಿಸ್‌ನ ₹ 5,855, ದಾನಿಗಳಿಂದ ಸಂಗ್ರಹಿಸಿದ ₹ 13,693, ಇತರ ಚರ್ಚ್‌ಗಳ ನೆರವಿನಿಂದ ಬಂದ ₹ 2,937 ಹಾಗೂ ಇತರ ಮೂಲಗಳಿಂದ ₹ 3,829 (ಒಟ್ಟು ₹ 36,314) ಸಂಗ್ರಹಿಸಿ ಈಗಿನ ಅತ್ಯಾಧುನಿಕ ಶೈಲಿಯ ಚರ್ಚ್ (ಕಲ್ಲಿನ ಕಟ್ಟಡ) ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ಚರ್ಚ್‌ನ ಗೌರವ ಖಜಾಂಚಿ ಚಂದ್ರಹಾಸನ್‌.

ನೂತನ ಚರ್ಚ್‌ ಕಟ್ಟಡವನ್ನು 1935ರ ಮಾರ್ಚ್‌ 9ರಂದು ಮದ್ರಾಸಿನ ಬಿಷಪ್‌ ಆಗಿದ್ದ ರೆವರೆಂಡ್‌ ವಾಲರ್‌ ಉದ್ಘಾಟಿಸಿ ಸೇಂಟ್‌ ಲೂಕ್ಸ್‌ ಅವರಿಗೆ ಸಮರ್ಪಿಸಿದರು.

ಆರಂಭದಲ್ಲಿ ಕೇವಲ 25 ಕುಟುಂಬಗಳ ಸದಸ್ಯತ್ವ ಹೊಂದಿದ್ದ ಈ ಚರ್ಚ್‌ನಲ್ಲೀಗ 500 ಸದಸ್ಯ ಕುಟುಂಬಗಳಿವೆ. ಪ್ರತಿ ಭಾನುವಾರ ಇಂಗ್ಲಿಷ್‌ ಮತ್ತು ತಮಿಳಿನಲ್ಲಿ ವಿಶೇಷ ಪೂಜಾ ಕಾರ್ಯಗಳು, ಪ್ರಾರ್ಥನೆಗಳು ನಡೆಯುತ್ತವೆ. ಕ್ರಿಸ್‌ಮಸ್‌, ಈಸ್ಟರ್‌, ಗುಡ್‌ಫ್ರೈಡೆ, ಲೂಕ್ಸ್‌ ಡೇ (ಅಕ್ಟೋಬರ್‌ 18), ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಚರ್ಚ್‌ ತನ್ನದೇ ಆದ ಕ್ಯಾರಲ್‌ ತಂಡ ಹೊಂದಿದೆ. ಚರ್ಚ್‌ನ ಈಗಿನ ಫಾದರ್‌ ವಿಲ್ಸನ್‌ದಾಸನ್‌.

ಸಾಮಾಜ ಮುಖಿ ಕಾರ್ಯ: ಧಾರ್ಮಿಕ ಕಾರ್ಯದ ಜತೆಗೆ ಲೂಕ್ಸ್‌ ಚರ್ಚ್‌ ಸಾಮಾಜಿಕ ಕಾರ್ಯವನ್ನೂ ನಡೆಸುತ್ತಿದೆ. ಕಾಟನ್‌ಪೇಟೆಯಲ್ಲಿನ ‘ಮಕ್ಕಳ ಆಶ್ರಯ ಕೇಂದ್ರ’ದ 35 ಮಕ್ಕಳಿಗೆ ಊಟ, ಶಿಕ್ಷಣ, ಬಟ್ಟೆಯ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದೆ. ರಸ್ತೆ ಬದಿಯಲ್ಲಿ ಮಲಗುವ ನೂರು ಭಿಕ್ಷುಕರಿಗೆ ರಗ್ಗು, ಕಂಬಳಿಯನ್ನು (ಅವರಿಗೆ ಗೊತ್ತಿಲ್ಲದೆ) ಪ್ರತಿ ವರ್ಷ ಕ್ರಿಸ್‌ಮಸ್‌ ಸಂದರ್ಭದಲ್ಲಿ ಹೊದಿಸುತ್ತದೆ. ಚರ್ಚ್‌ನ ಸದಸ್ಯ ಕುಟುಂಬದ ಕೆಲ ವಿಧವೆಯರಿಗೆ ಆರೋಗ್ಯ ಚಿಕಿತ್ಸಾ ವೆಚ್ಚವನ್ನು ನೀಡುತ್ತಿದೆ ಎಂದು ಚಂದ್ರಹಾಸನ್‌ ಅವರು ವಿವರಿಸುತ್ತಾರೆ.

ಚರ್ಚ್‌ನ ವಾಸ್ತು ವಿನ್ಯಾಸ
ಚರ್ಚ್‌ನ ವಾಸ್ತುಶಿಲ್ಪ ವಿಶೇಷವಾಗಿದ್ದು ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯ ಮಿಶ್ರಣವಾಗಿದೆ. ಚರ್ಚ್‌ನ ಬಲಿಪೀಠ, ಭವ್ಯವಾದ ಕಂಬಗಳು, ಕಿಟಕಿಯ ಮೇಲಿನ ವರ್ಣರಂಜಿತ ಗಾಜು, ಬೋಧನಾ ಸ್ಥಳ, ವಾಚನ ಪೀಠ, ಪ್ರವಚನ ವೇದಿಕೆ, ಗಾಯಕರ ಮೇಲಂತಸ್ತು, ಆರ್ಗನ್‌ ವಾದ್ಯದ ಸ್ಥಳಗಳೆಲ್ಲವೂ ಪಾಶ್ಚಿಮಾತ್ಯ ವಾಸ್ತುಶೈಲಿಯಲ್ಲಿದ್ದರೆ, ಚರ್ಚ್‌ನ ಗೋಪುರ ಭಾರತೀಯ ಶೈಲಿಯಲ್ಲಿದೆ. ಅತ್ಯಾಕರ್ಶಕವಾಗಿ ನಿರ್ಮಿಸಲಾಗಿರುವ ಲೆಕ್ಟರ್ನ್‌ (ವಾಚನ ಪೀಠ) ಅನ್ನು ತೇಗದ ಮರದಲ್ಲಿ ಮಾಡಿಸಲಾಗಿದೆ. ಇದನ್ನು ಕೊಟ್ಟಾಯಂನ ಕಲಾವಿದರು ಸಿದ್ಧಪಡಿಸಿದ್ದು ಡಾ. ಬಿ.ಮನೋಹರ್‌ಸಿಂಗ್‌ ಎಂಬುವರು ದಾನವಾಗಿ ನೀಡಿದ್ದಾರೆ.

ಈ ಚರ್ಚ್‌ನ ಆಕರ್ಷಕ ಗೋಪುರ ನಿರ್ಮಾಣಕ್ಕೆ ಕೊಡುಗೆ ನೀಡಿದವರು ‘ಪ್ರಜಾವಾಣಿ’ ಪತ್ರಿಕೆ ಮಾಲೀಕ ಸಂಸ್ಥೆಯಾದ ದಿ ಪ್ರಿಂಟರ್ಸ್‌ (ಮೈಸೂರು) ಪ್ರವೇಟ್‌ ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ದಾನಿಯಾದ ಕೆ.ಎನ್‌. ಗುರುಸ್ವಾಮಿ ಅವರು. ಆರ್ಗನ್‌ ವಾದ್ಯದ ಕೀಬೋರ್ಡ್‌ ಅನ್ನು ಮೈಸೂರು ಮಹಾರಾಜರು, ಕರ್ತರ ಮೇಜನ್ನು ಮಿರ್ಜಾ ಇಸ್ಮಾಯಿಲ್‌ ದಾನವಾಗಿ ನೀಡಿದ್ದಾರೆ. ಇಲ್ಲಿನ ಬಲಿಪೀಠವನ್ನು ಹಳೆಯ ‘ಕೋಟೆ ಚರ್ಚ್‌’ನಿಂದಲೇ ತಂದಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT