ಗಾನವಿ ಜಾನಕಿಯಾದಾಗ...

7

ಗಾನವಿ ಜಾನಕಿಯಾದಾಗ...

Published:
Updated:

ಕ ಣ್ಣುಗಳಲ್ಲಿ ಆತ್ಮವಿಶ್ವಾಸದ ಹೊಳಪು, ಸದಾ ಮಂದಹಾಸ ಬೀರುವ ತುಟಿಗಳು, ಅರಳಿದ ಕೆಂದಾವರೆಯಂತಹ ಮುಖ, ಬದುಕಿನ ಅನುಭವಗಳ ಸಾರವನ್ನು ತಕ್ಕಡಿಯಲ್ಲಿಟ್ಟು ತೂಗುವಂತಹ ಮಾತುಗಾರಿಕೆ... ಇವೆಲ್ಲವೂ ಆಕೆಯನ್ನು ನೋಡಿ, ಮಾತನಾಡಿಸಿದಾಗ ಮನಸ್ಸಿನಲ್ಲಿ ಮೂಡುವ ಅಂಶಗಳು. ಆಕೆಯೇ ‘ಮಗಳು ಜಾನಕಿ’ ಧಾರವಾಹಿಯ ‘ಜಾನಕಿ’.

ಇವರ ನಿಜ ಹೆಸರು ಗಾನವಿ ಲಕ್ಷ್ಮಣ್‌. ಚಿಕ್ಕಮಗಳೂರಿನವರಾದ ಇವರು ಬಾಲ್ಯದಿಂದಲೂ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದೆ. ಅದರಲ್ಲೂ ನೃತ್ಯ ಮಾಡುವುದೆಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಐದಾರು ಬಾರಿ ರಾಜ್ಯಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡಿದ್ದರು. ನೃತ್ಯದ ಮೇಲಿನ ಪ್ರೀತಿ ಇವರನ್ನು ನೃತ್ಯ ಶಿಕ್ಷಕಿಯನ್ನಾಗಿಸಿತ್ತು. ನೃತ್ಯದ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವುದು ಇವರ ಮುಖ್ಯ ಬಯಕೆ.

ಇವರು ತಮ್ಮ ವೃತ್ತಿಜೀವನವನ್ನು ಮೊದಲು ಆರಂಭಿಸಿದ್ದು ವಸತಿ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ. ಶಿಕ್ಷಕಿಯಾಗಿ ಕೆಲಸ ಶುರು ಮಾಡಿದ ನಂತರ ಕಲೆಯ ಕಡೆಗಿನ ಸೆಳೆತ ಇನ್ನಷ್ಟು ಹೆಚ್ಚಿತು. ಹಾಗಾಗಿ, ಅಲ್ಲಿಂದ ಹೊರಬಂದು ದೇಶ ಸುತ್ತಲು ಆರಂಭಿಸಿದರು. ದೇಶ ಸುತ್ತುವ ಜೊತೆಗೆ ಬೇರೆ ಬೇರೆ ರಾಜ್ಯಗಳ ಕಲೆಗಳನ್ನು ಕರಗತ ಮಾಡಿಕೊಂಡರು. ಡಾನ್ಸ್, ಮಾರ್ಷಲ್ ಆರ್ಟ್ಸ್‌, ನಟನೆ ಹೀಗೆ ಅನೇಕ ಬಗೆಯ ಕಲಾ ಪ್ರಕಾರಗಳನ್ನು ಅನುಭವಿಸಿ ಕಲಿತರು.

ರಂಗಭೂಮಿಯಲ್ಲಿ ಎಂಟು ವರ್ಷಗಳ ಕಾಲ ಪಳಗಿದ್ದಾರೆ. ರಂಗಭೂಮಿ, ಪ್ರವಾಸ ಎಲ್ಲವನ್ನೂ ಬದುಕಿನ ಭಾಗವಾಗಿಸಿಕೊಂಡಿದ್ದ ಇವರು ಕ್ಯಾಮೆರಾ ಮುಂದೆ ಬರಬೇಕು ಎಂಬ ಕಾರಣಕ್ಕೆ ಆಡಿಷನ್‌ಗಳಲ್ಲಿ ಭಾಗವಹಿಸಲು ಆರಂಭಿಸಿದರು. ಅನೇಕ ಕಡೆ ಆಡಿಷನ್‌ನಲ್ಲಿ ಭಾಗವಹಿಸಿದಾಗ ಇವರಿಗೆ ಸಿಕ್ಕಿದ್ದು ನಕಾರಾತ್ಮಕ ಉತ್ತರ. ‘ನೀವು ಈ ಪಾತ್ರಕ್ಕೆ ಹೊಂದುವುದಿಲ್ಲ’ ಎಂದು ವಾಪಸ್ ಕಳುಹಿಸುತ್ತಿದ್ದರು. ಆದರೆ ಅದೃಷ್ಟವೋ, ಆಕೆಯ ಅಭಿನಯದ ಕಸುವು ನಿರ್ದೇಶಕರಿಗೆ ಇಷ್ಟವಾದ ಕಾರಣಕ್ಕೋ ‘ಮಗಳು ಜಾನಕಿ’ ಧಾರಾವಾಹಿಗೆ ಆಯ್ಕೆಯಾದರು.

‘ನಾನು ನೈಜತೆಗೆ ಹತ್ತಿರವಿರುವ ಪಾತ್ರಗಳಲ್ಲಿ ನಟಿಸಬೇಕು ಎಂದು ಕಾಯುತ್ತಿದ್ದೆ. ನಮ್ಮದಲ್ಲದ ಪಾತ್ರದಲ್ಲಿ ಅಥವಾ ನಟನೆ ಅತಿಯಾಯಿತು ಎಂದು ಜನ ಮನಸ್ಸಿನಲ್ಲೇ ಅಂದುಕೊಳ್ಳುವಂತೆ ಮಾಡುವ ಪಾತ್ರಗಳು ನನಗೆ ಇಷ್ಟವಿರಲಿಲ್ಲ. ನಾಟಕೀಯವಾಗಿ ಅಭಿನಯಿಸುವ ಬದಲು ನೈಜತೆಗೆ ಹತ್ತಿರವಿರುವ ಪಾತ್ರದಲ್ಲಿ ನಟಿಸಿದರೆ ಬಹಳ ಬೇಗ ಜನರ ಮನಸ್ಸನ್ನು ತಲುಪಬಹುದು ಎಂಬುದು ನನ್ನ ಅನಿಸಿಕೆಯಾಗಿತ್ತು. ನನ್ನ ಅದೃಷ್ಟಕ್ಕೆ ಮೊದಲ ಧಾರಾವಾಹಿಯಲ್ಲೇ ಅಂತಹ ಪಾತ್ರ ಸಿಕ್ಕಿತು’ ಎಂದು ಮಾತಿನಲ್ಲೇ ಹರ್ಷದ ಹೊನಲು ಹರಿಸಿದರು ಗಾನವಿ.

ಕಿರುತೆರೆ ಜೀವನದ ಮೊದಲ ಧಾರಾವಾಹಿಯಲ್ಲೇ ಟಿ.ಎನ್‌. ಸೀತಾರಾಮ್‌ ಅವರ ಜೊತೆ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುವ ಇವರು ‘ನಾನು ತೀರಾ ಬಯಸದೇ ಸಿಕ್ಕ ಅವಕಾಶವಿದು. ಮೊದಲ ದಿನ ಆಡಿಷನ್‌ಗೆ ಹೋದಾಗ ಸೀತಾರಾಮ್‌ ಸರ್ ಸ್ಟುಡಿಯೋದಲ್ಲಿ ಇರುತ್ತಾರೆ ಅಂದುಕೊಂಡಿರಲೇ ಇಲ್ಲ. ಅವರ ಎದುರು ಆಡಿಷನ್ ನೀಡಿದ ಅನುಭವ ಭಿನ್ನವಾಗಿತ್ತು. ಅದನ್ನು ನಾನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರಲ್ಲಿ ಒಂದು ಪಾಸಿಟಿವ್ ಎನರ್ಜಿ ಇದೆ. ಆ ಎನರ್ಜಿಯನ್ನು ಅವರು ತಮ್ಮ ಜೊತೆ ಇರುವವರಲ್ಲೂ ಮೂಡುವಂತೆ ಮಾಡುತ್ತಾರೆ. ಯಾವುದೇ ನಟ–ನಟಿ ಆ ಥರದ ಅನುಭವಕ್ಕಾಗಿ ಎದುರು ನೋಡುತ್ತಿರುತ್ತಾರೆ. ನನ್ನ ಹಾಗೂ ಸೀತಾರಾಮ್‌ ಸರ್ ಅವರ ಮೊದಲ ಭೇಟಿಯೇ ನನಗೆ ಅದ್ಭುತ ಅನುಭವ ನೀಡಿತ್ತು. ಇನ್ನು ಅವರು ಧಾರಾವಾಹಿ ಸೆಟ್‌ಗೆ ಬಂದರೆ ಇರುವ ಸ್ಫೂರ್ತಿ, ಅವರು ಕೊಡುವ ಸಲಹೆಗಳು ಜೀವನದ ಕೊನೆವರೆಗೂ ನಮ್ಮೊಂದಿಗೆ ಉಳಿಯುತ್ತವೆ ಎಂಬುದು ನನ್ನ ಅನಿಸಿಕೆ. ನನ್ನ ಮನಸ್ಸಿಗೆ ತೃಪ್ತಿ ಕೊಡುವ ಪಾತ್ರ ಸಿಕ್ಕಿದ್ದು ನನಗೆ ನಿಜಕ್ಕೂ ಖುಷಿ ತಂದಿದೆ’ ಎನ್ನುತ್ತಾರೆ.

‘ನನ್ನ ಮನಸ್ಸಿನಲ್ಲಿ ಎಲ್ಲಾ ರೀತಿಯ ಭಾವನೆಗಳೂ ಇವೆ. ಕಲಾವಿದೆಯಾಗಿ ನಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ಜೀವನದಲ್ಲಿ ಒಬ್ಬಳೇ ನಿಂತು ಎಲ್ಲವನ್ನೂ ಎದುರಿಸಬೇಕು, ಮುಂದೆ ಬರಬೇಕು ಎಂಬ ಛಲ ಇರಿಸಿಕೊಂಡು ಬಂದವಳು ನಾನು. ಕಷ್ಟ ಅನುಭವಿಸಿ ಮುಂದೆ ಸಾಗಬೇಕು ಎಂಬುದು ನನ್ನ ಕನಸು. ನಾನು ಎಷ್ಟು ಸೌಮ್ಯವೋ ಅಷ್ಟೇ ಡೈನಾಮಿಕ್ ಕೂಡ ಹೌದು’ ಎನ್ನುತ್ತಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ವಿವರಿದರು.

ಮನೆಯವರು, ಸ್ನೇಹಿತರು ಹಾಗೂ ಊರಿನವರು ನೀಡಿದ ಸಹಕಾರವನ್ನು ಮಾತಿನ ನಡುವೆ ನೆನಪಿಸಿಕೊಳ್ಳುವುದನ್ನು ಮರೆಯುವುದಿಲ್ಲ ಈಕೆ.

‌‘ನಾನು ಗ್ರಾಮೀಣ ಪ್ರದೇಶದಿಂದ ಬಂದವಳು. ನಮ್ಮ ಕಡೆಯವರು ನಟನೆಯಂತಹ ವಿಷಯಗಳಲ್ಲಿ ಸ್ವಲ್ಪ ದೂರವೇ ಇರುತ್ತಾರೆ. ಆದರೆ ನಮ್ಮ ಕುಟುಂಬದಲ್ಲಿ ನಾನು ಆ ಗಡಿಯನ್ನು ದಾಟಿ ಮುಂದೆ ಬಂದವಳು. ಅಪ್ಪ ನನಗೆ ತುಂಬಾನೇ ಸಹಕಾರ ನೀಡಿದ್ದರು. ನನ್ನ ಪ್ರತಿ ಹೆಜ್ಜೆಯಲ್ಲೂ ನನ್ನ ಮನೆಯವರು ಜೊತೆಗಿದ್ದರು. ನನ್ನ ಹಳ್ಳಿಯವರಿಗೆ ಮೊದಮೊದಲು ನನಗೆ ಸಹಕಾರ ನೀಡಲಾಗದಿದ್ದರೂ ನನ್ನ ಬೆಳವಣಿಗೆ ನೋಡಿ ಖುಷಿಪಟ್ಟಿದ್ದರು. ಸ್ನೇಹಿತರು ನನ್ನ ಪ್ರತಿ ಕಷ್ಟದಲ್ಲೂ ದೇವರಂತೆ ಜೊತೆಗಿದ್ದರು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಸೈಕಾಲಜಿ ಹಾಗೂ ಕ್ರಿಮಿನಾಲಜಿ ಓದಿರುವ ಇವರು ನಟನೆ ಅವಕಾಶ ಸಿಕ್ಕಿಲ್ಲವಾಗಿದ್ದರೆ ಫೊರೆನ್ಸಿಕ್ (ವಿಧಿವಿಜ್ಞಾನ) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರಂತೆ. 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !