ರಂಗು ರಂಗಿನ ಹುಡುಗರು

7

ರಂಗು ರಂಗಿನ ಹುಡುಗರು

Published:
Updated:

ವೇದಿಕೆ ಮೇಲೆ ಮೂವರು ‘ರಂಗಾದ ಹುಡುಗರು’ ಕುಳಿತಿದ್ದರು. ಆದರೆ, ಮೂವರು ನಾಯಕಿಯರ ಪೈಕಿ ಒಬ್ಬರೇ ಆಸೀನರಾಗಿದ್ದರು. ‘ಈ ಪಡ್ಡೆಹುಡುಗರಿಗೆ ಅಡ್ಡಮಾರ್ಗದಲ್ಲಿ ದುಡ್ಡು ಮಾಡುವಾಸೆ. ಆದರೆ, ದೇಶಭಕ್ತಿಯ ವಿಷಯ ಬಂದಾಗ ಎಲ್ಲ ಆಸೆಗಳನ್ನು ಬದಿಗೊತ್ತಿ ಹೋರಾಡುವ ಛಲ ಅವರದು’ ಎಂದು ಮಾತಿಗಿಳಿದರು ನಿರ್ದೇಶಕ ಯು.ಎಸ್‌. ತೇಜೇಸ್‌ಕುಮಾರ್. 

ತೇಜೇಸ್‌ಕುಮಾರ್‌ ಚಿತ್ರರಂಗಕ್ಕೆ ಬಂದು ಎರಡು ದಶಕ ಉರುಳಿದೆ. ನೂರೈವತ್ತಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಅವರದ್ದು. ಮೊದಲ ಬಾರಿಗೆ ‘ರಂಗಾದ ಹುಡುಗರು’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವ ಅವರು ಯುವಜನರನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆದಿದ್ದಾರಂತೆ. ಚಿತ್ರೀಕರಣ ಪೂರ್ಣಗೊಳಿಸಿ ಸುದ್ದಿಗೋಷ್ಠಿಗೆ ಚಿತ್ರತಂಡದ ಸಮೇತ ಹಾಜರಾಗಿದ್ದರು.

‘ಪ್ರೀತಿಯೊಂದಿಗೆ ಸಸ್ಪೆನ್ಸ್‌, ಥ್ರಿಲ್ಲರ್‌ ಕೂಡ ಚಿತ್ರದಲ್ಲಿದೆ. ಟೆರರಿಸಂ ಬಗ್ಗೆಯೂ ಹೇಳಿದ್ದೇವೆ’ ಎಂದು ಮಾಹಿತಿ ನೀಡಿದರು.


ಯು.ಎಸ್. ತೇಜೇಶ್‌ಕುಮಾರ್

ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿಗಳೊಟ್ಟಿಗೆ ಚರ್ಚಿಸಿದ ಬಳಿಕವೇ ಚಿತ್ರದಲ್ಲಿ ಟೆರರಿಸಂ ವಿಷಯವನ್ನು ಅಳವಡಿದ್ದಾರಂತೆ. ಸಿನಿಮಾದಲ್ಲಿ ದ್ವಂದ್ವಾರ್ಥದ ಸಂಭಾಷಣೆಗೂ ಬರವಿಲ್ಲ. ಬಿಡುಗಡೆಯಾದ ಟೀಸರ್‌ ಇದನ್ನು ಸಾಕ್ಷೀಕರಿಸಿತ್ತು.

ಹಲವು ಧಾರಾವಾಹಿಗಳಿಗೆ ಸಂಭಾಷಣೆ ಬರೆದಿರುವ ರುದ್ರೇಶ್‌ ನಾಗಸಂದ್ರ ಅವರೇ ಈ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ‘ಆತುರ ಮತ್ತು ಅಬ್ಬರದಿಂದ ಸಿನಿಮಾ ಮಾಡಲು ಸಾಧ್ಯವಿಲ್ಲ. ಇದನ್ನು ಬದಿಗೊತ್ತಿ ಕೆಲಸ ಮಾಡಿದ್ದೇವೆ. ಯುವಪೀಳಿಗೆಯ ವರ್ತನೆ ನಡುವೆಯೇ ಅವರಿಗೆ ಅರಿವು ಇಲ್ಲದಂತೆಯೇ ಹಲವು ವಿಷಯಗಳು ಪ್ರವಹಿಸುತ್ತಿರುತ್ತವೆ. ಅದನ್ನೇ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ವಿವರಿಸಿದರು.

ಮೂವರು ನಾಯಕರ ಪೈಕಿ ಸಾಗರ್‌ ಕೂಡ ಒಬ್ಬರು. ಜೀವನದಲ್ಲಿ ಅವರು ಕ್ರಿಕೆಟರ್‌ ಆಗುವ ಕನಸು ಕಂಡಿದ್ದರಂತೆ. ‘ನನ್ನ ತಂದೆ ಸಿನಿಮಾದಲ್ಲಿ ಮಾಡಿರುವ ಸಾಧನೆ ಕಂಡು ಚಿತ್ರರಂಗದತ್ತ ಹೊರಳಿದೆ’ ಎಂದು ಹೇಳಿಕೊಂಡರು. 

ಇನ್ನೊಬ್ಬ ನಾಯಕ ಮನು ಹೆಗಡೆ, ‘ಕಮರ್ಷಿಯಲ್‌ ಚಿತ್ರಗಳಲ್ಲಿ ನಟಿಸುತ್ತಿರುವುದು ನನಗೆ ಹೊಸ ಅನುಭವ. ಇಲ್ಲಿಯವರೆಗೆ ಪರ್ಯಾಯ ಚಿತ್ರಗಳಲ್ಲಿ ನಟಿಸಿದ್ದ ನಾನು ಈ ಚಿತ್ರದ ಮೂಲಕ ಹೊಸ ಪಯಣದ ಹಾದಿಯಲ್ಲಿ ಸಾಗಿದ್ದೇನೆ’ ಎಂದು ಹೇಳಿದರು.

ಟಿ.ಎಂ. ಬಸವರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೂರು ಹಾಡುಗಳಿಗೆ ಪಳನಿ ಸೇನಾಪತಿ ಸಂಗೀತ ಸಂಯೋಜಿಸಿದ್ದಾರೆ. ಸಿನಿಟೆಕ್ಸ್‌ ಸೂರಿ ಅವರ ಛಾಯಾಗ್ರಹಣವಿದೆ. ಭರತ್‌, ಜ್ಯೋತಿ, ಅಮಿತಾ ಕುಲಾಲ್, ಸಹನಾ ಪೊನ್ನಮ್ಮ ತಾರಾಗಣದಲ್ಲಿದ್ದಾರೆ.


ಮನು ಹೆಗಡೆ


ಸಾಗರ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !