ಬುಧವಾರ, ಜನವರಿ 29, 2020
28 °C

ಟಿಕ್‌ಟಾಕ್‌ನಿಂದ ಬಂದ ‘ಗೀತಾ’

ರೇಷ್ಮಾ Updated:

ಅಕ್ಷರ ಗಾತ್ರ : | |

ಗಗನಸಕಿಯಾಗುವ ಕನಸು ಕಟ್ಟಿದ್ದ ಚೆಲುವೆ ಭವ್ಯಾಗೌಡ ಈಗ ಕಿರುತೆರೆ ವೀಕ್ಷಕರ ಹೃದಯ ಗೆಲ್ಲಲು ಬಣ್ಣದ ಲೋಕಕ್ಕೆ ಬಂದಿದ್ದಾರೆ. ‘ಗೀತಾ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಆಕೆ ಕನಸು ಕಂಗಳ ಹುಡುಗಿ. ಗಗನಸಖಿಯಾಗುವ ಕನಸು ಹೊತ್ತ ಚೆಲುವೆ. ಅದಕ್ಕಾಗಿ ತಯಾರಿಯನ್ನೂ ನಡೆಸಿದ್ದರು. ಆದರೆ ಅದೇಕೋ ಏನೋ ನಟನೆಯತ್ತ ಮನಸ್ಸು ಹೊರಳಿತು. ತಾಯಿಯ ಬೆಂಬಲವೂ ಅದಕ್ಕೆ ಸಾಥ್ ನೀಡಿತ್ತು. ಆಡಿಷನ್‌ಗಳಲ್ಲಿ ಭಾಗವಹಿಸಿದಾಗ ಆಯ್ಕೆಯಾಗಿದ್ದು ಕಲರ್ಸ್‌ ಕನ್ನಡದ ‘ಗೀತಾ’ ಧಾರಾವಾಹಿಗೆ.

ಹೌದು, ಇದು ‘ಗೀತಾ’ ಧಾರಾವಾಹಿಯ ನಾಯಕಿ ಭವ್ಯಾಗೌಡ ಅವರ ಕತೆ. ಬೆಂಗಳೂರಿನ ಭವ್ಯಾ ನಟಿಯಾಗುವ ಕನಸು ಕಂಡವರಲ್ಲ. ಸಿನಿಮಾ, ಧಾರಾವಾಹಿಗಳಲ್ಲಿ ನಟಿಯರ ಅಭಿನಯವನ್ನು ನೋಡುವಾಗ ತಂದೆ-ತಾಯಿ ‘ನೀನೂ ಅವರಂತೆ ಆಗಬೇಕು, ನಿನ್ನಿಂದ ಅಭಿನಯ ಸಾಧ್ಯ’ ಎನ್ನುತ್ತಿದ್ದರು. ತಂದೆ-ತಾಯಿಯ ಆಸೆ, ಕನಸನ್ನು ನನಸಾಗಿಸಲು ಭವ್ಯಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ಟಿಕ್‌ಟಾಕ್ ಸ್ಟಾರ್: ‘ಗೀತಾ’ ಧಾರಾವಾಹಿಯ ಪ್ರೋಮೊ ಟಿ.ವಿಯಲ್ಲಿ ಪ್ರಸಾರವಾಗುವ ಮೊದಲೇ ಭವ್ಯಾ, ಸಾಮಾಜಿಕ ಜಾಲತಾಣಿಗರ ಕಣ್ಮಣಿಯಾಗಿದ್ದರು. ಅದಕ್ಕೆ ಕಾರಣ ಟಿಕ್‌ಟಾಕ್ ಆ್ಯಪ್‌. ಕಿರುತೆರೆಗೆ ಬರುವ ಮೊದಲು ಈ ಚೆಲುವೆ ಟಿಕ್‌ಟಾಕ್‌ ವಿಡಿಯೊ ಮಾಡುತ್ತಿದ್ದರು. ಸದಾ ಟಿಕ್‌ಟಾಕ್‌ನಲ್ಲಿ ವಿಡಿಯೊ ಹರಿಬಿಡುವ ಮೂಲಕ ಗಮನ ಸೆಳೆಯುತ್ತಿದ್ದರು. ಆದರೆ, ಧಾರಾವಾಹಿಯಲ್ಲಿ ತನಗೆ ಸಿಕ್ಕ ಅವಕಾಶಕ್ಕೂ ಟಿಕ್‌ಟಾಕ್‌ಗೂ ಸಂಬಂಧವಿಲ್ಲ ಎನ್ನುವ ಇವರು ಈ ಬಗ್ಗೆ ಹೇಳುವುದು ಹೀಗೆ:  ‘ನಾನು ಟಿಕ್‌ಟಾಕ್ ಸ್ಟಾರ್ ನಿಜ. ಆದರೆ ಟಿಕ್‌ಟಾಕ್‌ನಿಂದ ಖಂಡಿತ ಧಾರಾವಾಹಿಗೆ ಬಂದಿಲ್ಲ. ಧಾರಾವಾಹಿಯವರು ನನ್ನನ್ನು ಟಿಕ್‌ಟಾಕ್‌ನಿಂದ ಗುರುತಿಸಿರಲಿಲ್ಲ. ನಾನು ನಟನೆಗೆ ಬರುವ ಮೊದಲು ಸಾಕಷ್ಟು ಶ್ರಮ ವಹಿಸಿದ್ದೇನೆ’ ಎಂದು ಖಡಾಖಂಡಿತವಾಗಿ ನುಡಿಯುತ್ತಾರೆ.

‘ನಾನು ಟಿಕ್‌ಟಾಕ್‌ ಮಾಡುತ್ತಿದ್ದದ್ದು ಕೇವಲ ಟೈಮ್‌ಪಾಸ್‌ಗಾಗಿ. ಇನ್‌ಸ್ಟಾಗ್ರಾಂನಲ್ಲಿ ಬರುತ್ತಿದ್ದ ಟಿಕ್‌ಟಾಕ್‌ ವಿಡಿಯೊಗಳನ್ನು ಕುತೂಹಲದಿಂದ ನೋಡುತ್ತಿದ್ದ ನನಗೆ ಸಮಯ ಕಳೆಯಲು ಇದೊಂದು ಮಾರ್ಗವಾಯಿತು’ ಎನ್ನುತ್ತಾರೆ ಅವರು.

ನಟನೆ ಕಲಿಸುವ ಕಿರುತೆರೆ: ‘ಧಾರಾವಾಹಿಯಲ್ಲಿ ನಟಿಸುವುದಕ್ಕೂ ಟಿಕ್‌ಟಾಕ್‌ನಲ್ಲಿ ವಿಡಿಯೊ ಮಾಡುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಧಾರಾವಾಹಿಯಲ್ಲಿ ಕಲಿಯುವುದು ಸಾಕಷ್ಟಿದೆ. ಟಿಕ್‌ಟಾಕ್‌ನಲ್ಲಿ ನಾವು ಬೇರೆಯವರ ಸ್ವರವನ್ನು ಮಾತ್ರ ಡಬ್ ಮಾಡುತ್ತೇವೆ. ಅಲ್ಲಿ ಕೇವಲ ಅಭಿವ್ಯಕ್ತಿಯಷ್ಟೇ ನಮ್ಮದು. ಆದರೆ ಧಾರಾವಾಹಿಯಲ್ಲಿ ಅಭಿನಯ, ಕಂಠ, ಅಭಿವ್ಯಕ್ತಿ ಎಲ್ಲವೂ ನಮ್ಮದೇ ಆಗಿರುತ್ತದೆ. ಧಾರಾವಾಹಿಯಲ್ಲಿ ಪ್ರತಿದಿನವೂ ಕಲಿಯುತ್ತಲೇ ಇರಬೇಕು. ಧಾರಾವಾಹಿ ನಿಜಕ್ಕೂ ನಟನೆಯ ಆಳವನ್ನು ಕಲಿಸುತ್ತದೆ’ ಎನ್ನುತ್ತಾರೆ ಅವರು.  

ಗೀತಾ ಹಿನ್ನೆಲೆ: ‘ಗೀತಾ  ಸ್ವಾಭಿಮಾನದ ಹುಡುಗಿ. ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎಂದು ಬಯಸುವವಳು. ಆದರೆ ನನ್ನ ಅಪ್ಪನಿಗೆ ಹೆಣ್ಣುಮಕ್ಕಳು ಎಂದರೆ ಆಗುವುದಿಲ್ಲ. ಹೆಣ್ಣಿದ್ದರೆ ಖರ್ಚು ಜಾಸ್ತಿ ಎಂಬ ಮನೋಭಾವದವರು. ಆ ಭಾವನೆಯನ್ನು ಹೋಗಲಾಡಿಸುವಂತೆ ಮಾಡಿ ಹೆಣ್ಣಿಗೂ ಬದುಕಲು ಬರುತ್ತದೆ ಎನ್ನುವುದನ್ನು ಸಾಧಿಸಿ ತೋರಿಸುವುದು ಗೀತಾ ಪಾತ್ರದ ಸ್ವರೂಪ. ಹೂವು ಮಾರಿಕೊಂಡು, ಕಾಲೇಜು ಶಿಕ್ಷಣದ ಖರ್ಚಿನ ಜೊತೆಗೆ ಮನೆಯ ಅರ್ಧ ಜವಾಬ್ದಾರಿಯನ್ನು ಹೊರುವ ದಿಟ್ಟ ಹೆಣ್ಣು ಗೀತಾ’ ಎನ್ನುತ್ತಾರೆ ಭವ್ಯಾ.

ಮೊದಲ ಧಾರಾವಾಹಿಯಲ್ಲೇ ನಾಯಕಿಯಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸುವ ಇವರು, ನಿರ್ದೇಶಕ ರಾಮ್‌ಜಿ ಅವರನ್ನು ನೆನೆಯಲು ಮರೆಯುವುದಿಲ್ಲ. ‘ನನಗೆ ಧಾರಾವಾಹಿ ಕ್ಷೇತ್ರ ಹೊಸತು. ನಮ್ಮ ನಿರ್ದೇಶಕರು, ಮಗುವಿಗೆ ತಿದ್ದಿಕಲಿಸುವಂತೆ ಪ್ರತಿ ದೃಶ್ಯದ ಚಿತ್ರೀಕರಣದಲ್ಲೂ ನನಗೆ ನಟನೆಯನ್ನು ಹೇಳಿಕೊಡುತ್ತಾರೆ. ಸಹಕಲಾವಿದರು ತುಂಬಾನೇ ಸಹಕಾರ ನೀಡುತ್ತಾರೆ’ ಎಂದು ಖುಷಿಯಿಂದ ಹೇಳುತ್ತಾರೆ.

‘ಗೀತಾ’ ಧಾರಾವಾಹಿ ಟಿಆರ್‌ಪಿಯಲ್ಲಿ ಅಗ್ರಸ್ಥಾನಕ್ಕೆ ಬರಬೇಕು ಎನ್ನುವುದು ಭವ್ಯಾಗೆ ಸದ್ಯದ ಕನಸು ಮತ್ತು ಗುರಿ. 

ಪ್ರತಿಕ್ರಿಯಿಸಿ (+)