ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ, ಮೂಲಸೌಕರ್ಯಕ್ಕೆ ಆದ್ಯತೆ

ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್‌ ಭರವಸೆ
Last Updated 13 ಜೂನ್ 2018, 11:24 IST
ಅಕ್ಷರ ಗಾತ್ರ

ಕೊಪ್ಪಳ: ಎರಡನೇ ಬಾರಿಗೆ ಕಾಂಗ್ರೆಸ್ಸಿನಿಂದ ಶಾಸಕರಾಗಿ ಆಯ್ಕೆ ಆದ ರಾಘವೇಂದ್ರ ಹಿಟ್ನಾಳ್‌ ಮೊದಲ ಬಾರಿಗೆ ನಗರದ ಶಾಸಕರ ಅಧಿಕೃತ ಕಚೇರಿಗೆ ಭೇಟಿ ನೀಡಿ, ಪೂಜೆಯ ಗಡಿಬಿಡಿಯಲ್ಲಿದ್ದರು. ತಮ್ಮನ್ನು ಚುನಾಯಿಸಿದ ಮತದಾರರಿಗೆ ಕೃತಜ್ಞತೆ ಅರ್ಪಿಸುವ ಜೊತೆಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವ  ಮಧ್ಯೆ ಪ್ರಜಾವಾಣಿ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡರು.

ನೀವು ಗೆದ್ದಾಗಿದೆ. ತಕ್ಷಣಕ್ಕೆ ಮಾಡುವ ಅಭಿವೃದ್ಧಿ ಕೆಲಸಗಳೇನು?

ನೋಡಿ ಜನ ನಮ್ಮ ಮೇಲೆ ತುಂಬಾ ಅಭಿಮಾನ ಇಟ್ಟು ಚುನಾಯಿಸಿ ಕಳುಹಿಸಿದ್ದಾರೆ. ಕೊಪ್ಪಳ ಭಾಗದಲ್ಲಿ ಅನೇಕ ಸಂಪನ್ಮೂಲಗಳು ಇದ್ದರೂ ಜನರಿಗೆ ದೊರೆತಿಲ್ಲ. ಈ ಕುರಿತು ಗಮನ ಹರಿಸಿ ಪ್ರಾಮಾಣಿಕ ಪ್ರಯತ್ನದಿಂದ ಮೂಲಸೌಕರ್ಯಕ್ಕೆ ಆದ್ಯತೆ ನೀಡುತ್ತೇನೆ. ಕ್ಷೇತ್ರದ ಎಲ್ಲ ರಸ್ತೆಗಳನ್ನು ಉನ್ನತ ದರ್ಜೆಗೆ ಏರಿಸುವುದು, ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡುವುದಕ್ಕೆ ಪ್ರಥಮ ಆದ್ಯತೆ ನೀಡುತ್ತೇನೆ. ಯುವಕರಿಗೆ ಉದ್ಯೋಗ ಕಲ್ಪಿಸಲು ಶ್ರಮ ವಹಿಸುತ್ತೇನೆ.

ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಾಕಿಕೊಂಡಿರುವ ನೀಲ ನಕ್ಷೆ ಏನು?

ಕಾಂಗ್ರೆಸ್ ಸರ್ಕಾರ ಕಳೆದ ಬಾರಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ವಿಷನ್ 2025 ಎಂಬ ದೂರದೃಷ್ಟಿಯನ್ನು ಇಟ್ಟುಕೊಂಡು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಅದರಂತೆ ನಾವು ಕ್ಷೇತ್ರದಲ್ಲಿ ಐದು ವರ್ಷಗಳಲ್ಲಿ ಏನು ಮಾಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದೇವೆ. ಕೊಪ್ಪಳ ತಾಲ್ಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ಎರಡು ಏತ ನೀರಾವರಿಗೆ ಚಾಲನೆ ನೀಡಿದ್ದೇವೆ. ಸಿಂಗಟಾಲೂರ ನೀರಾವರಿ ಯೋಜನೆ ಈಗಾಗಲೇ ಆರಂಭವಾಗಿದೆ. ಬಹದ್ದೂರ ಬಂಡಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಕಾಮಗಾರಿಗೆ ಟೆಂಡರ್ ಆಗಿದ್ದು, ಶೀಘ್ರ ಕಾರ್ಯಾರಂಭ ಆಗಲಿದೆ. ಇದರಿಂದ ಈ ಭಾಗ ಸಂಪೂರ್ಣ ಹಸಿರುಮಯವಾಗುತ್ತದೆ. ಇದು ನಮಗೆ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಆಗಿದ್ದು, ಪೂರ್ಣಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು.

ಕ್ಷೇತ್ರದ ಜ್ವಲಂತ ಸಮಸ್ಯೆಗೆ ಪರಿಹಾರ ಸಾಧ್ಯವೇ?

ನಮ್ಮದೇ ಸಮ್ಮಿಶ್ರ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ನಗರದ ಎಲ್ಲ ರಸ್ತೆ, ಕುಡಿಯುವ ನೀರು, ಚರಂಡಿ ನಿರ್ಮಾಣ, ಸ್ವಚ್ಛತೆಗೆ ಪ್ರಾಮುಖ್ಯ ನೀಡಲಾಗುತ್ತದೆ. ಅದರಂತೆ ಎಲ್ಲ ಇಲಾಖೆಗಳ ಸಹಯೋಗದಿಂದ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಯತ್ನಿಸಲಾಗುತ್ತದೆ. ಈ ಕುರಿತು ಸ್ಪಷ್ಟ ಸೂಚನೆಯನ್ನು ನೀಡಿದ್ದೇನೆ ಎಂದರು ಹೇಳಿದರು.

ಕ್ಷೇತ್ರದ ವ್ಯಾಪ್ತಿಗೆ ಹಲವಾರು ಬೃಹತ್ ಕೈಗಾರಿಕೆಗಳು ಬರುತ್ತವೆ. ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿವೆ. ಆದರೆ ಹೊರರಾಜ್ಯಗಳ ಜನರೇ ಹೆಚ್ಚಿನ ಉದ್ಯೋಗ ಪಡೆದಿದ್ದಾರೆ ಎಂಬ ಆರೋಪ ಇದೆ. ಆದರೆ, ಕೈಗಾರಿಕೆಗಳು ಇದ್ದರೂ ಕೆಲವು ಸಮಸ್ಯೆಗಳಿಂದ ಲಾಕ್ಔಟ್ ಆಗಿದ್ದವು. ಉತ್ಪಾದನೆಯಿಲ್ಲದೆ ಸ್ಥಗಿತಗೊಂಡಿದ್ದವು. ಈಗ ಮತ್ತೆ ಆರಂಭವಾಗಿದ್ದು, ಈ ಭಾಗದ ಯುವಕರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ನಗರದ ದೂಳು, ಅಸ್ವಚ್ಛತೆಗೆ ಪರಿಹಾರವೇನಾದರೂ ಕಂಡು ಕೊಂಡಿದ್ದೀರಾ?

ಕೊಪ್ಪಳ ನಗರ ಈಚೆಗೆ ಅಭಿವೃದ್ಧಿ ಆಗುತ್ತಿರುವ ನಗರ. ಮೊದಲಿಗೆ ಇಲ್ಲಿ ಸೌಲಭ್ಯಗಳೇ ಇದ್ದಿಲ್ಲ. ಹಂತಹಂತವಾಗಿ ಆಸಕ್ತಿ ವಹಿಸಿ ಅನೇಕ ಯೋಜನೆಗಳನ್ನು ತಂದಿದ್ದೇವೆ. ನಗರದ ಪ್ರಮುಖ ರಸ್ತೆ ಈಗ ಉನ್ನತದರ್ಜೆಗೆ ಏರುತ್ತಿದ್ದು, ಉಳಿದ ಕಾಮಗಾರಿಗಳನ್ನು ನಗರಸಭೆಗೆ ಸೂಚಿಸಿ ಕೈಗೊಳ್ಳಲಾಗುತ್ತದೆ. ಸ್ವಚ್ಛತೆಗೆ ಪೌರ ಕಾರ್ಮಿಕರ ಸಮಸ್ಯೆಯೂ ಇದ್ದು ಅದನ್ನು ಬಗೆ ಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಕೊಪ್ಪಳ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದೇ ನಮ್ಮ ಗುರಿ. ಆ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು

 ಹಿಂದಿನ ಅವಧಿಗೂ ಈ ಅವಧಿಗೂ ಕಾರ್ಯ ವೈಖರಿ ಹೇಗೆ ಬದಲಾಗಿರುತ್ತದೆ?

ಬದಲಾವಣೆ ಏನಿಲ್ಲ. ಜನರ ಸೇವೆ ಮಾಡಬೇಕು ಎಂಬ ಧ್ಯೇಯದೊಂದಿಗೆ ರಾಜಕೀಯಕ್ಕೆ ಬಂದಿದ್ದು, ನಿರಂತರ ಕಾರ್ಯ ಮಾಡಲೇಬೇಕಾಗುತ್ತದೆ. ಹಳೆಯ ಕಾಮಗಾರಿ ಕೆಲವು ಅಪೂರ್ಣಗೊಂಡಿದ್ದು, ಪೂರ್ಣಗೊಳಿಸಲು ಅವಕಾಶ ದೊರೆತಿದೆ. ಇದನ್ನು ನಾವು ಸವಾಲಾಗಿ ಸ್ವೀಕರಿಸಿ ಕೆಲಸಕ್ಕೆ ವೇಗವನ್ನು ನೀಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT