ಹನುಮನ ಜೀವನಗಾಥೆ

7

ಹನುಮನ ಜೀವನಗಾಥೆ

Published:
Updated:
Deccan Herald

ಪ್ರೀತಿ-ಪ್ರೇಮಕ್ಕೊಂದು ಕಾಲಘಟ್ಟ, ಅತ್ತೆ-ಸೊಸೆ ಜಗಳದ ಜಲಕ್ ಗೆ ಒಂದು ಅವಧಿ, ಕಾಮಿಡಿಗೊಂದು ಜಮಾನ - ಹೀಗೆ ಒಂದೊಂದು ಕಾಲಘಟ್ಟಕ್ಕೂ ಒಂದೊಂದು ರೀತಿಯ ಪರಿಕಲ್ಪನೆಗಳುಳ್ಳ ಧಾರಾವಾಹಿಗಳು ಕನ್ನಡ ಕಿರುತೆರೆಯನ್ನು ಆಳಿದ್ದವು. ಈ ನಡುವೆ ಕಿರುತೆರೆಯ ಅಂಗಳಕ್ಕೆ ಹೊಸ ಸೇಪರ್ಡೆಯಾಗಿ ಯಶಸ್ಸು ಕಂಡಿದ್ದು ಪೌರಾಣಿಕ ಧಾರಾವಾಹಿಗಳು. ಹರಹರಮಹಾದೇವ, ಶನಿ, ಮಹಾಕಾಳಿ, ಹೀಗೆ ಭಕ್ತಿ ಪ್ರಧಾನವಾದ ಕತೆಗಳನ್ನು ಧಾರಾವಾಹಿ ರೂಪದಲ್ಲಿ ಪ್ರಸಾರ ಮಾಡಿ ಈ ಮೂಲಕ ವೀಕ್ಷಕರ ಮನಸ್ಸನ್ನು ರಂಜಿಸುತ್ತಿವೆ ವಾಹಿನಿಗಳು. ಈ ಸಾಲಿಗೆ ಈಗ ಮತ್ತೊಂದು ಸೇಪರ್ಡೆ ಎಂದರೆ ‘ಜೈ ಹನುಮಾನ್’
ಹನುಮಂತನ ಜನ್ಮವೃತ್ತಾಂತದಿಂದ ಹಿಡಿದು ಜೀವನದ ಸಂಪೂರ್ಣ ಚಿತ್ರಣವನ್ನು ನೀಡಲಿರುವ ಈ ಧಾರಾವಾಹಿ ಇದೇ 8 ರಿಂದ ರಾತ್ರಿ 7.30ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕಾಂಟಿಲಿಯೊ ಎಂಬ ಮುಂಬೈ ಮೂಲದ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಧಾರಾವಾಹಿಯ ನಿರ್ದೇಶಕರು ಬುಕ್ಕಾಪಟ್ಟಣ ವಾಸು, ನಿರ್ಮಾಪಕರು ಅಭಿಮನ್ಯು ಸಿಂಗ್.

ಕಾಂಟಿಲಿಯೊ ಅವರದ್ದೇ ಪ್ರೊಡಕ್ಷನ್ ಹೌಸ್ ಗುಜರಾತ್ ನಲ್ಲಿದ್ದು ಧಾರಾವಾಹಿಯ ಸಂಪೂರ್ಣ ಚಿತ್ರೀಕರಣ ಗುಜರಾತ್ ನಲ್ಲೇ ನಡೆದಿದೆ. ಧಾರಾವಾಹಿಗಾಗಿ ವಿಶೇಷವಾದ ಸೆಟ್ ವೊಂದನ್ನು ರಚಿಸಿದ್ದು ಸುಮೇರು ಪ್ರಾಂತ್ಯವನ್ನು ಅಲ್ಲಿ ಸೃಷ್ಟಿಸಲಾಗಿದೆಯಂತೆ.

ಹುನುಮನ ಕತೆಯನ್ನೇ ಧಾರಾವಾಹಿಯನ್ನಾಗಲಿ ಮಾಡಲು ಕಾರಣವನ್ನು ವಾಸು ವಿವರಿಸುವುದು ಹೀಗೆ: ಕರ್ನಾಟಕವನ್ನೇ ಆಧರಿಸಿದ ಒಂದು ಪೌರಾಣಿಕ ಕತೆಯನ್ನು ಧಾರಾವಾಹಿ ಮಾಡಬೇಕು ಎಂದುಕೊಂಡಾಗ ನಮಗೆ ಹೊಳೆದಿದ್ದು ಹನುಮ. ಕಾರಣ ಅಂಜನಾದ್ರಿ ಬೆಟ್ಟ ಇರುವುದು ಕರ್ನಾಟಕದಲ್ಲಿ. ಅಷ್ಟೇ ಅಲ್ಲದೇ ನಮ್ಮ ರಾಜ್ಯದಲ್ಲಿ ಪ್ರತಿ ಊರಿಗೂ ಒಂದೊಂದು ಹನುಮನ ಗುಡಿ ಇರುತ್ತದೆ. ಅನೇಕರ ಮನೆ ದೇವರು ಹನುಮ. ಅದೂ ಅಲ್ಲದೇ ಈಗಾಗಲೇ ಅನೇಕ ಪೌರಾಣಿಕ ಕತೆಗಳು ಬಂದು ಹೋಗಿವೆ. ಆದರೆ ಹನುಮನ ಕತೆಯನ್ನು ಯಾರೂ ಹೇಳಿಲ್ಲ. ಅಲ್ಲದೆ ಸುಮೇರು ಪ್ರಾಂತ್ಯದ ಕತೆಯ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಅದರ ಬಗ್ಗೆ ತಿಳಿಸುವ ಕೆಲಸವು ನಮ್ಮಿಂದ ಆಗಲಿ ಎಂಬ ಸದಾಶಯವು ನಮ್ಮದು’ ಎನ್ನುತ್ತಾರೆ.

ಇಂದು ದೇಹ ದಂಡಿಸುವುದು ಫ್ಯಾಷನ್. ಜಿಮ್ ಗಳಲ್ಲಿ ಗಂಟೆಗಟ್ಟಲೆ ದೇಹದಂಡನೆ ಮಾಡುವ ಯುವಕರಿಗೆಲ್ಲಾ ಮೊದಲ ಗುರು ಎಂದರೆ ಹನುಮ. ಜಿಮ್ ಗಳಲ್ಲಿ ಹುನುಮಂತನ ಪೋಟೊವನ್ನು ಇಟ್ಟು ಪೂಜಿಸುವುದು ಸಾಮಾನ್ಯ. ಧೈರ್ಯ ಹಾಗೂ ಶಕ್ತಿಗೆ ಇನ್ನೊಂದು ಹೆಸರು ಅಂಜನೇಯ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಈ ಕತೆಯು ಯುವಪೀಳಿಗೆಗೂ ಇಷ್ಟವಾಗಬಹುದು ಎಂಬುದು ನಿರ್ದೇಶಕರ ಅಭಿಮತ.

 ಧಾರಾವಾಹಿಯಲ್ಲಿ ತಂತ್ರಜ್ಞಾನ ಹಾಗೂ ಗ್ರಾಫಿಕ್ಸ್ ಗಳನ್ನು ಸಮರ್ಥವಾಗಿ ಬಳಸಲಾಗಿದ್ದು 2ಡಿ ಹಾಗೂ 3ಡಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. 3ಡಿ ತಂತ್ರಜ್ಞಾನ ಎಳೆ ಹೆಚ್ಚಿದೆ ಎನ್ನುವುದನ್ನು ಪ್ರೋಮೊ ನೋಡಿ ಅಂದಾಜಿಸಬಹುದು.

“ಯಾವುದೇ ಒಂದು ಅಂತ್ಯಕ್ಕೆ ಒಂದು ಉದಯ ಎನ್ನುವುದಿರುತ್ತದೆ. ಅಂತ್ಯಕ್ಕೆ ಕಾರಣ ಅಟ್ಟಹಾಸ, ದುರ್ನಡತೆ ಇತ್ಯಾದಿ. ಅದನ್ನು ಮಟ್ಟ ಹಾಕಲು ದೈವಾಂಶ ಸಂಭೂತನಾದ ವ್ಯಕ್ತಿಯೊಬ್ಬ ಜನ್ಮ ತಾಳುತ್ತಾನೆ ಎಂಬುದು ಕತೆ. ಹೀಗೆ ಶಿವನ 11ನೇ ಅವತಾರವಾಗಿ ಹನುಮನ ಜನನವಾಗುತ್ತದೆ. ಅಂಜನೇಯ ಜನಿಸಿದ್ದು ಸುಮೇರು ಪ್ರಾಂತ್ಯದಲ್ಲಿ. ಸುಮೇರು ಎಂಬ ವಾನರ ಸಾಮ್ರಾಜ್ಯದ ಪ್ರಾಂತ್ಯದಲ್ಲಿ ಅಂಜನಾದೇವಿ ಎಂಬ ಗಂದರ್ವಕನ್ಯೆ ಕೇಸರಿ ಮಹಾರಾಜನನ್ನು ಮದುವೆ ಆಗುತ್ತಾಳೆ. ಅವರಿಗೆ ಮಕ್ಕಳಾಗುವುದಿಲ್ಲ. ಅಂಜನಾದೇವಿ ತಪಸ್ಸಿಗೆ ಕೂರುತ್ತಾಳೆ. ಅದೇ ಸಮಯದಲ್ಲಿ ರಾವಣನ ತಾನು ಲೋಕದ ಅಧಿಪತಿಯಾಗಬೇಕು ಎಂದುಕೊಂಡು ಅಟ್ಟಹಾಸ ಮೆರೆಯುತ್ತಿರುತ್ತಾನೆ. ಹೀಗೆ ಅಸುರನನ್ನು ಮಟ್ಟ ಹಾಕುವ ಸಲುವಾಗಿ ಅಂಜನಾದೇವಿಯ ತಪಸ್ಸಿನ ಫಲವಾಗಿ ಲೋಕಕಲ್ಯಾಣಕ್ಕಾಗಿ ಒಬ್ಬ ದೈವೀ ಪುರುಷನ ಜನನವಾಗುತ್ತದೆ. ಅವನೇ ಹುನುಮ’ ಹೀಗೆ ವಾಯುಪುತ್ರನ ಹುಟ್ಟಿನ ಕತೆಯನ್ನು ವಾಸು ಸವಿಸ್ತಾರವಾಗಿ ವಿವರಿಸುತ್ತಾರೆ.

ಪೌರಾಣಿಕ ಕತೆಗಳನ್ನೇ ಆರಿಸಿಕೊಳ್ಳಲು ಕಾರಣ ಏನೆಂದು ಕೇಳಿದರೆ ಮೆಲುನಗೆಯೊಂದಿಗೆ ಉತ್ತರಿಸುವ ಅವರು “ಪ್ರತಿಯೊಂದು ವಾಹಿನಿಯೂ ಭಿನ್ನತೆಯನ್ನು ಬಯಸುತ್ತದೆ. ಹಿರಿಯರು, ಕಿರಿಯರು , ಮದ್ಯಮ ವರ್ಗದವರು, ಕ್ಲಾಸ್ ಪ್ರೇಕ್ಷಕರು, ಮಾಸ್ ಪ್ರೇಕ್ಷಕರು ಹೀಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕು ಎಂಬ ಭಾವನೆ ವಾಹಿನಿಯವರಿಗಿರುತ್ತದೆ. ಹಾಗಿದ್ದಾಗ ಭಕ್ತಿ ಪ್ರಧಾನವಾದ ಧಾರಾವಾಹಿಯೊಂದು ನಮ್ಮ ವಾಹಿನಿಯಲ್ಲೂ ಪ್ರಸಾರವಾಗಬೇಕು ಎಂದುಕೊಳ್ಳುವುದರಲ್ಲಿ ವಿಶೇಷವೆನಿಲ್ಲ. ವೈವಿದ್ಯತೆ ಬೇಕು ಎನ್ನುವ ಕಾರಣಕ್ಕೆ ಉದಯ ವಾಹಿನಿಗೆ ಪೌರಾಣಿಕ ಕತೆಯ ಅವಶ್ಯಕತೆ ಇತ್ತು. ಹಾಗಾಗಿ ಈ ಕತೆಯನ್ನು ಆರಿಸಿಕೊಂಡೆವು ಎಂದು ಜಾಣ್ಮೆಯ ಉತ್ತರ ನೀಡುತ್ತಾರೆ.

ಈ ಧಾರಾವಾಹಿಗೆ ಬಾ.ಲಾ. ಸುರೇಶ್ ಕತೆ-ಸಂಭಾಷಣೆ ಬರೆಯುತ್ತಿದ್ದು, ನೀರಜ್ ಸ್ಕ್ರೀನ್ ಪ್ಲೇ ಮಾಡುತ್ತಿದ್ದಾರೆ. ಕಲಾವಿದರೆಲ್ಲರೂ ಕರ್ನಾಟಕದವರೇ ಇದ್ದು ಪ್ರಧ್ಯುಮ್ನ ಎಂಬ ಹುಡುಗ ಬಾಲ ಹನುಮನಾಗಿ ನಟಿಸುತ್ತಿದ್ದಾನೆ. ವಿನಯ್ ಗೌಡ ರಾವಣನಾಗಿ ಮಾಡುತ್ತಿದ್ದಾನೆ. ಪ್ರಸನ್ನ ಶೆಟ್ಟಿ ಕೇಸರಿ ಮಹಾರಾಜನಾಗಿ, ಪ್ರಿಯಾಂಕ ಅಂಜನಾದೇವಿಯಾಗಿ ಮಾಡುತ್ತಿದ್ದಾರೆ ಎಂದು ಪಾತ್ರವರ್ಗವನ್ನು ವಿವರಿಸುತ್ತಾರೆ ವಾಸು.

ಪೌರಾಣಿಕ ಧಾರವಾಹಿ ಮಾಡುವುದು ಒಂದು ಸವಾಲಿನ ಕೆಲಸ ಎನ್ನುವ ಇವರು “ಇಲ್ಲಿ ಸಣ್ಣ-ಪುಟ್ಟ ಅಂಶಗಳನ್ನು ನಾವು ಗಮನಿಸಬೇಕು. ಹಾಗಾಗಿ ಧಾರಾವಾಹಿ ಆರಂಭವಾಗುವ 6 ತಿಂಗಳ ಮೊದಲಿನಿಂದ ಪೂರ್ವ ತಯಾರಿ ನಡೆಸಿದ್ದೆವು. ಪಾತ್ರ ವರ್ಗಗಳ ಆಯ್ಕೆ, ಸಮೇರು ಸಾಮ್ರಾಜ್ಯದ ಸೆಟ್, ಕಾಸ್ಟ್ಯೂಮ್, ಗ್ರಾಫಿಕ್ಸ್, ವಸ್ತ್ರವಿನ್ಯಾಸ ಹಾಗೂ ರಾಜ ಸಂಸ್ಥಾನದ ಪರಿಕರಗಳು ಎಲ್ಲವನ್ನೂ ನೋಡಿ ಪರಿಶೀಲಿಸಿ ಸಂಪೂರ್ಣ ತಯಾರಿಯೊಂದಿಗೆ ಧಾರಾವಾಹಿ ಆರಂಭಿಸಿದ್ದೇವೆ. ಜನರು ನಮ್ಮ ಧಾರಾವಾಹಿಯನ್ನು ನೋಡಿ ಮೆಚ್ಚಿ ಹರಸುತ್ತಾರೆ ಎಂಬ ನಂಬಿಕೆ ನಮ್ಮದು ಎನ್ನುತ್ತಾ ಮಾತು ಮುಗಿಸುತ್ತಾರೆ ವಾಸು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !