ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತನಿಗೊಲಿದ ಹನುಮ

Last Updated 20 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಆ ರು ಅಡಿ ಮೂರು ಇಂಚು ಎತ್ತರದ ಕಾಯ, ಕಡುಕಪ್ಪು ಕೇಶರಾಶಿ, ಕುರುಚಲು ಗಡ್ಡ, ಕೆಂಪು ಮಿಶ್ರಿತ ಶ್ವೇತ ಮೈಬಣ್ಣ, ಜಿಮ್‌ನಲ್ಲಿ ದಂಡಿಸಿದ ದೃಢವಾದ ಶರೀರ, ನೋಟದಲ್ಲಿ ತೀಕ್ಷ್ಣತೆ, ಮೊಗದಲ್ಲಿ ಗಾಂಭೀರ್ಯ, ಪೌರಾಣಿಕ ಪಾತ್ರಗಳಿಗೆ ಎಂಬಂತೆ ಕಟೆದ ದೇಹಸಿರಿ, ವಿಲನ್‌ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಮೈಕಟ್ಟು

– ಇದು ಪೌರಾಣಿಕ ಧಾರಾವಾಹಿ ‘ಜೈ ಹನುಮಾನ್‌’ನಲ್ಲಿ ‘ಕೇಸರಿ’ ಪಾತ್ರಕ್ಕೆ ಜೀವ ತುಂಬಿರುವ ನಟ ಪ್ರಸನ್ನ ಅವರು ಮೊದಲ ನೋಟಕ್ಕೆ ನಿಲುಕುವ ಪರಿ.

‘ಜೈ ಹನುಮಾನ್‌’. ಇದು ಹೆಸರೇ ಹೇಳುವಂತೆ ರಾಮನ ಬಂಟ ಹನುಮನ ಜನ್ಮ ವೃತ್ತಾಂತದಿಂದ ಆರಂಭಿಸಿ ಸಂಪೂರ್ಣ ಜೀವನಗಾಥೆ ಹೇಳುವ ಕಥೆ. ತೆರೆಯ ಮೇಲೆ ಹನುಮನ ತಂದೆ ‘ಕೇಸರಿ’ಯ ಪಾತ್ರದಲ್ಲಿ ನಟ ಪ್ರಸನ್ನ ವೀಕ್ಷಕರ ಮನ ಗೆದ್ದಿದ್ದಾರೆ. ಪುತ್ತೂರಿನವರಾದ ಪ್ರಸನ್ನ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗ ಬಿಟ್ಟು ನಟನಾ ಕ್ಷೇತ್ರಕ್ಕೆ ತೆರೆದುಕೊಂಡಿರುವ ಇವರು, ತಮ್ಮ ಒಲವಿನ ಕ್ಷೇತ್ರದಲ್ಲಿ ಕನಸಿನ ಚಿಗುರಿಗೆ ನೀರೆರೆಯುತ್ತಿದ್ದಾರೆ.

ನಟನಾ ಕ್ಷೇತ್ರದಲ್ಲಿ ಸಿಕ್ಕ ಪುಟ್ಟ ಪುಟ್ಟ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾ, ಯಶಸ್ಸಿನ ಏಣಿಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರುತ್ತಿರುವ ಇವರು, ‘ಜೈ ಹನುಮಾನ್‌’ ಧಾರಾವಾಹಿಗೂ ಮೊದಲು ‘ಹರ ಹರ ಮಹಾದೇವ’ದಲ್ಲಿ ತಾರಕಾಕ್ಷನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

‘ಕಿರಿಕ್‌ ಪಾರ್ಟಿ’, ‘ಮಫ್ತಿ’, ‘ಆರೆಂಜ್‌’, ‘ಕೆಜಿಎಫ್‌’ ಸಿನಿಮಾಗಳ ಕೆಲ ಪಾತ್ರಗಳಲ್ಲಿ ನಟಿಸುವ ಮುಖೇನ ಬೆಳ್ಳಿ ಪರದೆಗೂ ಪದಾರ್ಪಣೆ ಮಾಡಿದ್ದಾರೆ. ಹಿರಿತೆರೆಯಲ್ಲಿ ಇನ್ನೂ ಕನಸಿನ ಪಾತ್ರ ಸಿಗಲಿಲ್ಲ ಎನ್ನುವ ಬೇಸರಕ್ಕಿಂತ, ನಟನೆಯ ಹೊಸ ಕೌಶಲ ಕಲಿತ ತೃಪ್ತ ಭಾವ ಅವರದ್ದು.

‘ಸದ್ಯ ಕೇಸರಿ ಪಾತ್ರದ ಮೂಲಕ ನನ್ನ ಗಮ್ಯಕ್ಕೆ ಹತ್ತಿರವಾಗುತ್ತಿದ್ದೇನೆ’ ಎಂಬ ಸಂತಸದಲ್ಲಿರುವ ಪ್ರಸನ್ನ, ನಿಜ ಜೀವನದಲ್ಲಿ ಆಂಜನೇಯನ ಪರಮ ಭಕ್ತ. ಚಿಕ್ಕಂದಿನಿಂದಲೇ ಆಂಜನೇಯನ ಆರಾಧಕರಾಗಿದ್ದ ಪ್ರಸನ್ನ ಜಿಮ್‌ನಲ್ಲಿ ದೇಹ ದಂಡಿಸಲು ಆರಂಭಿಸಿದಾಗಿನಿಂದ ಆಂಜನೇಯನನ್ನು ಗುರುವಾಗಿ, ಆದರ್ಶಪ್ರಾಯ ವ್ಯಕ್ತಿಯಾಗಿ ಸ್ವೀಕರಿಸಿದ್ದಾರೆ. ಈ ಧಾರಾವಾಹಿಯ ಅವಕಾಶವೂ ಹನುಮನ ಕೃಪೆ ಎನ್ನುವುದು ಅವರ ದೃಢವಾದ ನಂಬಿಕೆ.

‘ನನ್ನ ಎಲ್ಲ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿ ಪುತ್ತೂರಿನ ಮಹಾಲಿಂಗೇಶ್ವರ’ ಎಂದು ವಿನೀತರಾಗಿ ನೆನೆಯುತ್ತಾರೆ ಪ್ರಸನ್ನ.

ಸದ್ಯ ಕಿರುತೆರೆಯಲ್ಲಿ ಹೆಸರು ಮಾಡುತ್ತಿರುವ ಪ್ರಸನ್ನ ಬೆಳ್ಳಿತೆರೆಯ ಉತ್ತಮ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ತಮ್ಮ ನೆಚ್ಚಿನ ನಟ ದರ್ಶನ್‌ ತೂಗುದೀಪ ಎದುರು ವಿಲನ್‌ ಆಗಿ ನಟಿಸಬೇಕೆನ್ನುವುದು ಅವರ ಹೆಬ್ಬಯಕೆ.

‘ನಾನು ಹೆಚ್ಚು ಕಡಿಮೆ ದರ್ಶನ್‌ ಅಷ್ಟೇ ಎತ್ತರ ಇರುವುದರಿಂದ ಅವರ ಎದುರು ಖಳನಾಯಕನಾಗಿ ನಟಿಸಬೇಕು ಎನ್ನುವ ಹಂಬಲವಿದೆ. ಸ್ನೇಹಿತರು, ಹಿತೈಷಿಗಳು ಸಹ ಇದನ್ನೇ ಹೇಳುತ್ತಾ ನನ್ನಲ್ಲಿನ ಆ ಕನಸನ್ನು ಮತ್ತಷ್ಟು ಗಟ್ಟಿಯಾಗಿಸಿದ್ದಾರೆ’ ಎನ್ನುತ್ತಾರೆ.

‘ಈಗ ಚಿತ್ರದಲ್ಲಿ ನಟ ಸುದೀಪ್ ನಿರ್ವಹಿಸಿದಂತಹ ಪಾತ್ರಗಳು ಸಿಕ್ಕರೆ ಖುಷಿಯಿಂದ ನಟಿಸುತ್ತೇನೆ’ ಎನ್ನುವ ಪ್ರಸನ್ನ ಪೌರಾಣಿಕ ಪಾತ್ರಗಳ ಬಗ್ಗೆ ಹೆಚ್ಚು ಒಲವು ಇರಿಸಿಕೊಂಡಿದ್ದಾರೆ. ಬಾಹುಬಲಿಯಂತಹ ಚಿತ್ರವೊಂದರಲ್ಲಿ ಕೆಲಸ ಮಾಡಿ ಸಾರ್ಥಕ ಭಾವ ಪಡೆಯುವ ಆಸೆಯನ್ನೂ ಹೊತ್ತಿದ್ದಾರೆ.

‘ವಜ್ರಮುನಿ ನನ್ನ ಸಾರ್ವಕಾಲಿಕ ನೆಚ್ಚಿನ ಖಳನಟ. ನೋಟ, ಭಾವ, ಮಾತು ಎಲ್ಲದರಲ್ಲೂ ಖಳನಟನ ಗುರುತು ಎದ್ದು ಕಾಣುವಂತೆ ನಟಿಸುತ್ತಿದ್ದ ಅವರ ನಟನೆ ನನಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ ಪ್ರಸನ್ನ.

ಇಷ್ಟಪಟ್ಟ ಯಾವ ಖಾದ್ಯವನ್ನೂ ತಟ್ಟೆಯಿಂದ ಹೊರಗಿಡದ ಇವರು ‘ವರ್ಕೌಟ್‌ ಒಂದೇ ಫಿಟ್ನೆಸ್‌ ಮಂತ್ರ’ ಎನ್ನುತ್ತಾರೆ. ಕೋರಿ ರೊಟ್ಟಿ, ಚಿಕನ್‌ ಪುಳಿಮುಂಚಿಯನ್ನು ಇಷ್ಟಪಟ್ಟು ತಿನ್ನುವ ಇವರು ಜಿಮ್‌ನಲ್ಲಿ ನಿತ್ಯ ಕನಿಷ್ಠ 2 ಗಂಟೆ ಬೆವರಿಳಿಸುತ್ತಾರೆ.

‘ಜೈ ಹನುಮಾನ್‌’ನಲ್ಲಿ ಸುಮೇರು ಪ್ರಾಂತ್ಯದ ರಾಜನಾಗಿ ‘ಕೇಸರಿ’ ಪಾತ್ರದ ನಟನೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ ಎಂದು ಸಂತಸದಿಂದ ನುಡಿಯುತ್ತಾರೆ ಅವರು. ‘ಅಂಜನಾ ಸುತನ ಕಥೆಯಲ್ಲಿನ ಮುಂದಿನ ಅನಿರೀಕ್ಷಿತ ತಿರುವುಗಳಿಗಾಗಿ ಮತ್ತಷ್ಟು ಅದ್ಧೂರಿತನಕ್ಕಾಗಿ ಕಾದು ನೋಡಿ’ ಎನ್ನುತ್ತಾ ವೀಕ್ಷಕರ ಕುತೂಹಲ ಕೆರಳಿಸುತ್ತಾರೆ.

ಉದಯ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗುವ ‘ಜೈ ಹನುಮಾನ್‌’ ಧಾರಾವಾಹಿಯನ್ನು ಕಾಂಟಿಲಿಯಾ ಎಂಬ ಮುಂಬೈ ಮೂಲದ ಸಂಸ್ಥೆ ನಿರ್ಮಾಣ ಮಾಡಿದೆ. ಗುಜರಾತ್‌ನಲ್ಲಿ ಈ ಧಾರಾವಾಹಿಗಾಗಿಯೇ ಅದ್ಧೂರಿ ಸೆಟ್‌ ನಿರ್ಮಿಸಲಾಗಿದೆ. 2ಡಿ, 3ಡಿ ತಂತ್ರಜ್ಞಾನ ಬಳಸಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಗೆ ಬುಕ್ಕಾಪಟ್ಟಣ ವಾಸು ಅವರ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT