ಕನ್ನಡಿಗರ ‘ಕಣ್ಮಣಿ’ ಕಿಶನ್‌

7

ಕನ್ನಡಿಗರ ‘ಕಣ್ಮಣಿ’ ಕಿಶನ್‌

Published:
Updated:
Deccan Herald

ನೀಳಕಾಯ, ಶ್ವೇತವರ್ಣ, ಕಪ್ಪು ಕೇಶರಾಶಿ, ಕುರುಚಲು ಗಡ್ಡ, ಮುಖದಲ್ಲಿ ಮಾಸದ ಮಂದಹಾಸ, ತುಟಿಮೇಲೆ ತುಂಟ ನಗು, ತನ್ನ ಮುಗ್ಧತೆಯಿಂದಲೇ ಮನದನ್ನೆಯ ಮನಸು ಕದಿಯುವ ನಂದೀಶ್‌ ‘ಕಣ್ಮಣಿ’ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

ತ್ರಿಕೋನ ಪ್ರೇಮಕತೆಯ ಧಾರಾವಾಹಿ ‘ಕಣ್ಮಣಿ’ ನೂರು ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಯಶಸ್ಸಿನ ಪಯಣದ ಜೊತೆಗಾರ, ಧಾರಾವಾಹಿಯ ‘ಕಿಶನ್‌’ ಎನ್ನುವ ಮುಗ್ಧ ಹುಡುಗನ ಪಾತ್ರಕ್ಕೆ ಜೀವ ತುಂಬಿರುವ ನಂದೀಶ್‌ ಮಾನಿನಿಯರ ಮನ ಗೆದ್ದ ಖುಷಿಯಲ್ಲಿದ್ದಾರೆ!

‘ಕಣ್ಮಣಿ’ ಎನ್ನುವ ಹೆಸರೇ ಹೇಳುವಂತೆ ಇದು ಎಲ್ಲರ ಪ್ರೀತಿಗೆ ಪಾತ್ರಳಾಗುವ ನಾಯಕಿ ಕೇಂದ್ರಿತ ಧಾರಾವಾಹಿ. ತನ್ನೆಲ್ಲ ಸಮಸ್ಯೆಗಳ ನಡುವೆಯೂ ಸುತ್ತಲಿನವರಿಗೆ ಪ್ರೀತಿ ಹಂಚುವ ಯುವತಿ ಈಕೆ. ಜೀವನದ ಕಹಿ ಘಟನೆಗಳನ್ನು ಮರೆತು ಹೊಸ ಬದುಕು ಕಟ್ಟಿಕೊಳ್ಳಲು ಹವಣಿಸುವ ನಾಯಕಿಯ ಗುಣಕ್ಕೆ ಮರುಳಾಗುವ ಕಿಶನ್‌ನ ಪಾತ್ರದಲ್ಲಿ ನಂದೀಶ್ ಅವರದ್ದು ಮುಗ್ಧತೆಯೇ ಮೈವೆತ್ತ ಅಭಿನಯ.

ಸ್ವಂತ ಕಂಪನಿ ಇದ್ದರೂ ಪ್ರೀತಿಗಾಗಿ ಕೂಲಿ ಮಾಡಲು ಕೂಡ ಸಿದ್ಧವಿರುವ ವ್ಯಕ್ತಿತ್ವ ಅವನದು. ನಾಯಕಿಯಲ್ಲಿ ಪ್ರೇಮ ಭಿಕ್ಷೆ ಬೇಡುತ್ತಲೇ, ಕೆಲವೊಮ್ಮೆ ತನ್ನ ಮುಗ್ಧತೆಯಿಂದ ಮತ್ತೆ ಕೆಲವೊಮ್ಮೆ ತುಂಟತನದಿಂದ ವೀಕ್ಷಕರ ಮನಗೆಲ್ಲುತ್ತಾನೆ.

ಬೆಂಗಳೂರಿನ ಮಾಗಡಿಯವರಾದ ನಂದೀಶ್‌ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪೂರೈಸಿದ್ದಾರೆ. ಆದರೆ ನಟನೆಯ ಕುರಿತು ಅವರಿಗಿದ್ದ ಒಲವು ಅವರನ್ನು ವೈದ್ಯಕೀಯ ಕ್ಷೇತ್ರದಿಂದ ‘ಗಾಳಿಪಟ’ ಧಾರಾವಾಹಿ ಆಡಿಷನ್‌ ಕೇಂದ್ರಕ್ಕೆ ಕರೆತಂದಿತು.

ನಂದೀಶ್‌ಗೆ ನಟನಾ ಕ್ಷೇತ್ರದ ಒಲವು ಮೊಳೆತದ್ದು ಬಾಲ್ಯದಿಂದಲೇ. ಆದರೆ ಅವರ ಆಸಕ್ತಿಯ ಕ್ಷೇತ್ರ ಪೋಷಣೆಯಿಲ್ಲದೆ ಮುದುಡಿತ್ತು. ಶಿಕ್ಷಣ ಪೂರೈಸಿದ ನಂತರ ತನ್ನ ಖುಷಿಯ ವೃತ್ತಿಗೆ (ನಟನೆ) ಮರುಜೀವ ನೀಡಿದ ನಂದೀಶ್‌ ಈಗ ತಮ್ಮ ಒಲವಿನ ಚಿಗುರಿಗೆ ಪರಿಶ್ರಮದ ನೀರೆರೆಯುತ್ತಿದ್ದಾರೆ.

ನಟನಾ ಕ್ಷೇತ್ರದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾ, ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಿರುವ ಅವರು, ‘ಕಣ್ಮಣಿ’ಗೂ ಮೊದಲು ‘ಗಾಳಿಪಟ’, ‘ಜನುಮದ ಜೋಡಿ’, ‘ನೀಲಿ’ ಧಾರಾವಾಹಿಗಳ ವಿವಿಧ ಪಾತ್ರಗಳಿಗೆ ಬಣ್ಣಹಚ್ಚಿ ಸೈ ಎನಿಸಿಕೊಂಡಿದ್ದರು. ‘ಅಂದಗಾರ’ ಚಿತ್ರದ ಮೂಲಕ ಬೆಳ್ಳಿತೆರೆಗೂ ಪದಾರ್ಪಣೆ ಮಾಡಿರುವ ನಂದೀಶ್‌, ‘ಬೆಳ್ಳಿತೆರೆಯಲ್ಲಿ ಛಾಪು ಮೂಡಿಸಲು ಸಾಧ್ಯವಾಗಿಲ್ಲ’ ಎಂಬ ಬೇಸರದ ಜೊತೆಗೂ ನಟನೆಯ ಹೊಸ ಕೌಶಲ ಕಲಿತ ತೃಪ್ತ ಭಾವವನ್ನು ಅನುಭವಿಸಿದ್ದಾರೆ.

‘ಅಂದಗಾರ’ ಚಿತ್ರದ ಕತೆ ಚೆನ್ನಾಗಿತ್ತು. ಆದರೆ, ಪ್ರಚಾರದ ಕೊರತೆಯಿಂದಾಗಿ ಸಿನಿಮಾ ಯಶಸ್ಸು ಕಾಣಲಿಲ್ಲ ಎನ್ನುವ ಕೊರಗು ಅವರಲ್ಲಿ ಇದೆ. ಆದರೆ, ಪ್ರತಿ ಸೋಲು ಕೂಡ ಯಶಸ್ಸಿನ ಮೆಟ್ಟಿಲು. ‘ನಾನು ಕ್ರಮೇಣ ನನ್ನ ಗಮ್ಯಕ್ಕೆ ಹತ್ತಿರವಾಗುತ್ತಿದ್ದೇನೆ’ ಎನ್ನುತ್ತಾ ತಮ್ಮನ್ನು ಸಮಾಧಾನ ಮಾಡಿಕೊಂಡಿದ್ದಾರೆ.

ಸದ್ಯ ಕಿರುತೆರೆಯಲ್ಲಿ ಹೆಸರು ಮಾಡುತ್ತಿರುವ ನಂದೀಶ್‌ ಬೆಳ್ಳಿತೆರೆಯಲ್ಲಿ ಉತ್ತಮ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಹಿರಿತೆರೆಯ ಮೇಲೂ ಮುಗ್ಧ, ಅಮಾಯಕ ಪಾತ್ರಗಳು ಸಿಕ್ಕರೆ ಬಣ್ಣಹಚ್ಚುತ್ತಾರಂತೆ. ‘ನಟನೆಯಲ್ಲಿ ಯಾವುದೇ ಆದರ್ಶ ವ್ಯಕ್ತಿಗಳಿಲ್ಲ’ ಎನ್ನುವ ನಂದೀಶ್, ಯಾವ ನಟನನ್ನೂ ಅನುಕರಿಸದೆ, ಭಿನ್ನ ಅಸ್ಮಿತೆ ಪಡೆಯುವ ಹಂಬಲ ಹೊಂದಿದ್ದಾರೆ. 

‘ಕಣ್ಮಣಿ ಧಾರಾವಾಹಿಯಲ್ಲಿ ನನ್ನದು ಆಕರ್ಷಕ ಪಾತ್ರ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಮೆಚ್ಚುಗೆಯಾಗುವ ಪಾತ್ರವದು. ಆರಂಭದ ದಿನಗಳಲ್ಲಿ ಜನರು ನನ್ನ ಪಾತ್ರವನ್ನು ಗುರುತಿಸುತ್ತಾರೆಯೋ ಇಲ್ಲವೋ ಎನ್ನುವ ಭಯವಿತ್ತು. ಆದರೆ ಈಗ ಅನೇಕರು ಮೆಚ್ಚಿಕೊಂಡಿದ್ದಾರೆ. ನಟನೆಯನ್ನೂ ಇಷ್ಟಪಟ್ಟಿದ್ದಾರೆ’ ಎಂದು ಸಂತಸದಿಂದ ನುಡಿಯುತ್ತಾರೆ ನಂದೀಶ್.

ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ‘ಕಿಶನ್’ ಪಾತ್ರ ನೋಡುಗರಿಗೆ ಮತ್ತಷ್ಟು ಆಪ್ತವಾಗುತ್ತದೆ ಎಂದು ನಂಬಿರುವ  ನಂದೀಶ್‌, ‘ಅನಿರೀಕ್ಷಿತ ತಿರುವುಗಳನ್ನು ಕಾದು ನೋಡಿ’ ಎನ್ನುತ್ತಾ ವೀಕ್ಷಕರ ಕುತೂಹಲ ಕೆರಳಿಸುತ್ತಾರೆ. ‘ಉದಯ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕಣ್ಮಣಿ’ ಧಾರಾವಾಹಿಯನ್ನು ಪಾರಿಜಾತ ಟೆಲಿ ಎಂಟರ್‌ಟೈನರ್ಸ್ ನಿರ್ಮಾಣ ಮಾಡುತ್ತಿದೆ. ದೇವ್, ವೆಂಕಟ್ ರಾಮ್ ಚಿತ್ರಕಥೆ, ಪೃಥ್ವಿರಾಜ್ ಕುಲಕರ್ಣಿ ನಿರ್ದೇಶನ ಇದಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !