ಸೋಮವಾರ, ಜೂನ್ 21, 2021
29 °C

ಭುವಿಯ ತಂಗಿ ಬಿಂದು

ರೇಷ್ಮಾ Updated:

ಅಕ್ಷರ ಗಾತ್ರ : | |

ಮುದ್ದು ಮುಖದ, ಅರಳು ಹುರಿದಂತೆ ಪಟ ಪಟನೆ ಮಾತನಾಡುತ್ತಾ, ಅಕ್ಕನ ಕಾಲೆಳೆಯುವ ತುಂಟ ಹುಡುಗಿ ಬಿಂದು. ಈಕೆ ಕಲರ್ಸ್ ಕನ್ನಡ ವಾಹಿನಿಯ ‘ಕನ್ನಡತಿ’ ಧಾರಾವಾಹಿಯ ನಾಯಕಿ ಭುವನೇಶ್ವರಿ (ಭುವಿ)ಯ ತಂಗಿ. ಈ ಧಾರಾವಾಹಿಯ ಪ್ರತಿ ಪಾತ್ರವೂ ಕರ್ನಾಟಕದಾದ್ಯಂತ ಮನೆಮಾತಾಗಿದೆ. ಬಿಂದು ಪಾತ್ರವೂ ಹಾಗೆ, ಕನ್ನಡರಿಗೆ ಈಗ ಅಚ್ಚುಮೆಚ್ಚು. ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿರುವ ಬಿಂದು ಪಾತ್ರದಾರಿಯ ಹೆಸರು ಮೋಹಿರಾ ಆಚಾರ್ಯ. ಶಿವಮೊಗ್ಗ ಮೂಲದ ಇವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಈಕೆ ತಮ್ಮ ನಟನಾ ಪಯಣದ ಬಗ್ಗೆ ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದ್ದಾರೆ.

ನಟನಾ ಪಯಣದ ಬಗ್ಗೆ
ನನಗೆ ಬಾಲ್ಯದಿಂದಲೂ ನೃತ್ಯದ ಮೇಲೆ ಒಲವಿತ್ತು. ಆದರೆ ನಟಿಯಾಗಬೇಕು ಎಂದುಕೊಂಡವಳಲ್ಲ. ಎಂಜಿನಿಯರಿಂಗ್‌ ಕೊನೆಯ ವರ್ಷದಲ್ಲಿ ಓದುತ್ತಿದ್ದಾಗ ಆಕಸ್ಮಿಕವಾಗಿ ನಟನೆಯ ಅವಕಾಶ ಸಿಕ್ಕಿತ್ತು. ಮೊದಲ ಬಾರಿ ನಟಿಸಿದ್ದು ‘ಪ್ರೇಮಲೋಕ’ ಧಾರಾವಾಹಿಯಲ್ಲಿ. ಅದರಲ್ಲಿ ನನ್ನದು ನೆಗೆಟಿವ್‌ ಪಾತ್ರ. ಕನ್ನಡತಿಯಲ್ಲಿ ಬೇರೆಯವರು ಮಾಡುತ್ತಿದ್ದ ಪಾತ್ರವನ್ನು ನಾನು ಮಾಡಬೇಕಾಯ್ತು. ಅವಕಾಶ ಸಿಕ್ಕಾಗ ಬೇಡ ಎನ್ನದೇ ಒಪ್ಪಿಕೊಂಡೆ. ಮೊದಲಿಗೆ ಸವಾಲು ಎನ್ನಿಸಿತ್ತು. ಆದರೆ ಈಗ ಧಾರಾವಾಹಿ ನನಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ.

ಕನ್ನಡತಿ ಧಾರಾವಾಹಿ ಹಾಗೂ ನಿಮ್ಮ ಪಾತ್ರ
ಕನ್ನಡತಿ ಧಾರಾವಾಹಿಯ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ಪಾತ್ರವರ್ಗ ಈ ಎಲ್ಲವೂ ಧಾರಾವಾಹಿಯ ಯಶಸ್ಸಿಗೆ ಕಾರಣ. ನಮ್ಮ ಧಾರಾವಾಹಿ ಕರ್ನಾಟಕದಾದ್ಯಂತ ಅಚ್ಚುಮೆಚ್ಚಾಗಿದೆ. ಪ್ರತಿಯೊಂದು ಡೈಲಾಗ್‌ಗಳನ್ನು ಜನ ಮೆಚ್ಚುತ್ತಿದ್ದಾರೆ. ಇದರೊಂದಿಗೆ ಬಿಂದು ಹಾಗೂ ಭುವಿಯಂತಹ ಅಕ್ಕ–ತಂಗಿ ಕರ್ನಾಟಕದ ಪ್ರತಿ ಮನೆಯಲ್ಲೂ ಇರುತ್ತಾರೆ. ಇದರಲ್ಲಿ ಅಕ್ಕ–ತಂಗಿಯರ ನಡುವಿನ ಮಧುರ ಬಾಂಧವ್ಯವನ್ನು  ತುಂಬಾ ಚೆನ್ನಾಗಿ ತೋರಿಸಲಾಗಿದೆ. ಬಿಂದು ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದ್ದು ನಮ್ಮ ನಿರ್ದೇಶಕರು. ಅವರ ಕಾರಣದಿಂದಲೇ ನಾನು ಇಂದು ಈ ಪಾತ್ರವನ್ನು ಇಷ್ಟು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ.

ಸಿನಿಮಾದಲ್ಲಿ ಅವಕಾಶಗಳು ಸಿಕ್ಕಿವೆಯೇ?
ಕನ್ನಡತಿಯಲ್ಲಿ ಇವರ ನಟನೆಯನ್ನು ನೋಡಿದ ತೆಲುಗಿನ ನಿರ್ದೇಶಕರೊಬ್ಬರು ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಾರೆ. ಕೌಟುಂಬಿಕ ಹಿನ್ನೆಲೆಯುಳ್ಳ ತೆಲುಗು ಚಿತ್ರದಲ್ಲಿ ಇವರದ್ದು ನಾಯಕಿಯ ಪಾತ್ರ. ಈ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಅಪ್ಪಟ ಕನ್ನಡತಿಯಾಗಿರುವ ಮೋಹಿರಾಗೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಒಳ್ಳೆಯ ಕಥೆ ಸಿಕ್ಕಿ ನಟಿಸುವ ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಖಂಡಿತ ನಟಿಸುತ್ತೇನೆ.

ತಂಡದ ಸಹಕಾರ ಹೇಗಿದೆ?
ಕನ್ನಡತಿ ಧಾರಾವಾಹಿ ತಂಡದ ಬಗ್ಗೆ ಹೆಮ್ಮೆ ಹಾಗೂ ಖುಷಿಯಿಂದ ಮಾತನಾಡುವ ಇವರು ನಮ್ಮ ತಂಡದಲ್ಲಿ ಪ್ರತಿಯೊಬ್ಬರು ಸಹಕಾರ ನೀಡುತ್ತಾರೆ. ನನ್ನ ಪಾತ್ರ ಹೆಚ್ಚಾಗಿ ಬರುವುದು ಭುವಿ (ರಂಜನಿ) ಅವರ ಜೊತೆ. ಅವರು ನನಗೆ ನಟನೆಯ ವೇಳೆ ಧೈರ್ಯ ತುಂಬುತ್ತಾರೆ.  ಒಟ್ಟಾರೆ ಹೇಳಬೇಕು ಎಂದರೆ ಇಂದು ನಾನು ಏನಾಗಿದ್ದೇನೆ ಅದಕ್ಕೆ ನಮ್ಮ ತಂಡವೇ ಕಾರಣ.

ಯಾವ ರೀತಿಯ ಪಾತ್ರ ನಿಮಗೆ ಇಷ್ಟ?
ಒಬ್ಬ ನಟಿಯಾಗಿ ನನಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಅಭಿನಯಿಸಬೇಕು, ಎಲ್ಲಾ ಪಾತ್ರಗಳನ್ನು ಸಂಭಾಳಿಸುವ ಸಾಮರ್ಥ್ಯ ನನ್ನಲ್ಲಿ ಇದೆ ಎಂಬುದನ್ನು ತೋರಿಸಬೇಕು. ನನ್ನ ಪ್ರತಿಭೆಯನ್ನು ಒರೆಗೆ ಹಚ್ಚಲು ಒಬ್ಬ ಉತ್ತಮ ನಿರ್ದೇಶಕ ಸಿಗಬೇಕು. ಒಳ್ಳೆಯ ಕಥೆ ಹಾಗೂ ನಿರ್ದೇಶಕರ ಜೊತೆ ಕೆಲಸ ಮಾಡುವ ಕನಸೂ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು