‘ದಶಾವತಾರ’ದಲ್ಲಿ ಪ್ರೇಮಕಾವ್ಯದ ಘಮ

7

‘ದಶಾವತಾರ’ದಲ್ಲಿ ಪ್ರೇಮಕಾವ್ಯದ ಘಮ

Published:
Updated:

ಪತ್ರಿಕಾಗೋಷ್ಠಿಗೆಂದು ಹೋಗಿದ್ದ ಪತ್ರಕರ್ತರಿಗೆ ಅಲ್ಲಿ ಅನಿರೀಕ್ಷಿತವೊಂದು ಕಾದಿತ್ತು. ವೇದಿಕೆಯ ಮೇಲೆ ಕುರ್ಚಿಯ ಬದಲು ಮಂಟಪದಲ್ಲಿ ವಿಷ್ಣುವಿನ ಮೂರ್ತಿಯಿತ್ತು. ಇನ್ನೇನು ಮೈಕ್‌ ಹಿಡಿದು ಮಾತಿಗಿಳಿಯತ್ತಾರೆ ಎಂಬ ನಿರೀಕ್ಷೆಯಲ್ಲಿ ಪತ್ರಕರ್ತರು ಕೂತಿದ್ದಾಗ ‘ಜೀ ಕನ್ನಡ’ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಂಟಪದೊಳಗಿನ ಮಣೆಯ ಮೇಲೆ ಕೂತು ಪೂಜೆಯಲ್ಲಿ ತೊಡಗಿದರು. ಮೈಕಿನಲ್ಲಿ ಮಂತ್ರಗಳು ಮೊಳಗಲಾರಂಭಿಸಿದವು. ಮುಂದಿನ ಅರ್ಧಗಂಟೆ ಮಂತ್ರಘೋಷ. ಆ ಪೂಜೆಯ ನೇತೃತ್ವ ವಹಿಸಿದ್ದ ಆನಂದ ಗುರೂಜಿ ಪತ್ರಕರ್ತರಿಂದಲೂ ಪ್ರಾರ್ಥನೆಯನ್ನು ಮಾಡಿಸಿದರು.

ಇವೆಲ್ಲ ಮುಗಿದ ಮೇಲೆ ಮಾತಿಗಿಳಿದರು ರಾಘವೇಂದ್ರ ಹುಣಸೂರು.

ಅಕ್ಟೋಬರ್ 15ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ‘ಶ್ರೀ ವಿಷ್ಣು ದಶಾವತಾರ’ ಪೌರಾಣಿಕ ಧಾರಾವಾಹಿ ಪ್ರಸಾರವಾಗಲಿದೆ. ಸಂತೋಷ್ ಬಾದಲ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ‘ಕ್ರಿಯೇಟಿವ್ ಐ’ ಕಂಪನಿ ಅಗತ್ಯ ಗ್ರಾಫಿಕ್ಸ್‌ಗಳನ್ನು ರೂಪಿಸುವ ಹೊಣೆ ಹೊತ್ತಿದೆ.

ಕನ್ನಡದ ಜತೆಯಲ್ಲಿ ತಮಿಳು ಭಾಷೆಯಲ್ಲಿಯೂ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ. ಮುಂಬೈನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. 

‘ಕಳೆದ ಒಂದು ವರ್ಷದಿಂದ ಈ ಧಾರಾವಾಹಿಯ ಕೆಲಸ ನಡೆಯುತ್ತಿದೆ. ಆದರೆ ಇಂಥದ್ದೊಂದು ವಸ್ತುವನ್ನಿಟ್ಟುಕೊಂಡು ಧಾರಾವಾಹಿ ಮಾಡಬೇಕು ಎಂದು ನಾವು ನಿರ್ಧರಿಸಿದ್ದು ಎರಡು ವರ್ಷಗಳ ಹಿಂದೆ. ಅದಕ್ಕಾಗಿ ಸಾಕಷ್ಟು ಸಂಶೋಧನೆ ನಡೆಸಿದ್ದೇವೆ. ಈ ಯೋಜನೆಗೆ ಹಲವು ಅಡೆತಡೆಗಳೂ ಬಂದವು. ಆದರೆ ಅವೆಲ್ಲವನ್ನೂ ಮೀರಿ ‘ವಿಷ್ಣು ದಶಾವತಾರ’ ಪ್ರಸಾರಕ್ಕೆ ಸಿದ್ಧವಾಗಿದೆ ಎಂದರು ಹುಣಸೂರು.

‘ಕಳೆದ ಒಂದು ವರ್ಷದಲ್ಲಿ ಇಡೀ ಭಾರತದಲ್ಲಿ ಮೈಥಾಲಾಜಿಕಲ್ ಧಾರಾವಾಹಿಗಳ ಒಂದು ಅಲೆ ಸೃಷ್ಟಿಯಾಯಿತು. ಹಿಂದಿಯಲ್ಲಿಯೂ ಹಲವು ಅಂಥ ಧಾರಾವಾಹಿಗಳು ಬಂದವು. ಆದರೆ ದಕ್ಷಿಣ ಭಾರತದಲ್ಲಿ ಬಂದ ಪೌರಾಣಿಕ ಧಾರಾವಾಹಿಗಳೆಲ್ಲವೂ ಒಂದೋ ರಿಮೇಕ್ ಇಲ್ಲವೇ ಡಬ್ಬಿಂಗ್ ಆದವು. ಆದರೆ ನಾವು ಮೊಟ್ಟ ಮೊದಲ ಬಾರಿಗೆ ಸ್ವಮೇಕ್ ಮೈಥಾಲಾಜಿಕಲ್ ಧಾರಾವಾಹಿ ಮಾಡುತ್ತಿದ್ದೇವೆ’ ಎಂದೂ ಅವರು ಹೇಳಿಕೊಂಡರು.

350 ಕಂತುಗಳಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ಕಾಣಿಸುವ ಉದ್ದೇಶವನ್ನು ಈ ಧಾರಾವಾಹಿ ಹೊಂದಿದೆ. ‘ಈ ಕಥೆಯನ್ನು ಕೇವಲ ಒಂದು ಉಪದೇಶದ ರೂಪದಲ್ಲಿ ಹೇಳುವುದು ನಮಗೆ ಇಷ್ಟವಿರಲಿಲ್ಲ. ಇದರ ಜತೆಗೆ ಒಂದು ಪ್ರೇಮಕಥೆಯೂ ಇರಬೇಕು ಅನಿಸಿತು. ವಿಷ್ಣು ಮತ್ತು ಲಕ್ಷ್ಮಿಯ ಪ್ರೇಮಕಥೆಯೇ ಅಪೂರ್ವವಾದದ್ದು. ಆಶ್ಚರ್ಯ ಎಂದರೆ ವಿಷ್ಣುವಿಗೆ ಲಕ್ಷ್ಮಿಯ ಮೇಲೆ ನೋಟಕ್ಕೇ ಪ್ರೇಮಾಂಕುರವಾಗುತ್ತದೆ. ಅವನು ಪ್ರೇಮನಿವೇದನೆಯನ್ನೂ ಮಾಡುತ್ತಾನೆ. ಅವಳು ತಿರಸ್ಕರಿಸುತ್ತಾಳೆ. ಇಂಥ ಹಲವು ಕುತೂಹಲಕಾರಿ ಸಂಗತಿಗಳನ್ನು ಈ ಧಾರಾವಾಹಿ ಹೊಂದಿದೆ’ ಎಂದ ಅವರು ಮೈಕ್‌ ಅನ್ನು ಕ್ರಿಯೆಟಿವ್ ಐನ ಧೀರಜ್ ಕುಮಾರ್ ಅವರಿಗೆ ವರ್ಗಾಯಿಸಿದರು.

‘ವಿಷ್ಣುವಿನ ಪರಿಚಯ ಮಾಡಿಕೊಡಲು ಭಾಷೆ ಸಾಲದು. ಅಂಥ ಪ್ರಯತ್ನಕ್ಕೆ ಇಳಿದಾಗ ಹಲವು ಮಿತಿಗಳು ಇರುವುದೂ ಸಹಜ. ಆದರೆ ಅಂಥ ಮಿತಿಗಳನ್ನು ನಮ್ಮ ಸೃಜನಶೀಲತೆ ಮತ್ತು ಬದ್ಧತೆಗಳಿಂದ ಮೀರಿದ್ದೇವೆ. ಕಿರುತೆರೆ ಜಗತ್ತಿನಲ್ಲಿ ಈ ಧಾರಾವಾಹಿಯೊದು ಮೈಲಿಗಲ್ಲಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು ಧೀರಜ್ ಕುಮಾರ್. 

ವಿಷ್ಣುವಿನ ಪಾತ್ರವನ್ನು ಅಮಿತ್ ಕಶ್ಯಪ್ ನಿರ್ವಹಿಸಿದ್ದಾರೆ. ‘ಕಳೆದ ಒಂದು ವರ್ಷದಿಂದ ನಾನು ಈ ಯೋಜನೆಯ ಭಾಗವಾಗಿದ್ದೇನೆ. ಸಾಫ್ಟ್‌ವೇರ್ ಎಂಜಿನಿಯರ್ ಕೆಲಸದಲ್ಲಿದ್ದ ನಾನು ಈ ಧಾರಾವಾಹಿಗಾಗಿಯೇ ಕೆಲಸ ಬಿಟ್ಟಿದ್ದೇನೆ. ನಾನು ತೆಗೆದುಕೊಂಡು ನಿರ್ಧಾರ ಸರಿಯಾಗಿದೆ ಎಂದು ಈಗ ಅನಿಸುತ್ತಿದೆ’ ಎಂದರು ಅಮಿತ್. ಈ ಪಾತ್ರಕ್ಕಾಗಿ ಮಹಾಭಾರತ, ರಾಮಾಯಣ ಧಾರಾವಾಹಿಗಳನ್ನು ನೋಡಿ ಮಾನಸಿಕವಾಗಿ ಸಿದ್ಧಗೊಂಡಿದ್ದಾರಂತೆ.  ಅನುದಿನ ಧ್ಯಾನ ಮಾಡುವ, ವಿಷ್ಣುವನ್ನು ಮನಸಲ್ಲಿಯೇ ತಪಿಸುವ ಮೂಲಕವೂ ಅವರು ಈ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಲು ಪ್ರಯತ್ನಿಸಿದ್ದಾರೆ.

ನಿಶಾ ಲಕ್ಷ್ಮಿಯಾಗಿ ನಟಿಸುತ್ತಿದ್ದಾರೆ. ‘ಬಾಲ್ಯದಿಂದಲೂ ನಾನು ವಿಷ್ಣುವನ್ನು ಪೂಜಿಸುತ್ತಲೇ ಬಂದವಳು. ವಿಷ್ಣುವಿನ ಕಥೆ, ಪುರಾಣಗಳು ನನ್ನ ಬದುಕಿನ ಭಾಗವಾಗಿದ್ದವು. ಈಗ ಅದೇ ಕಥೆಗಳಲ್ಲಿ ನಾನು ಅಭಿನಯಿಸುತ್ತಿರುವುದು ತುಂಬ ಹೆಮ್ಮೆಯ ವಿಷಯ. ನಾವು ಏನೇ ಕಷ್ಟ ಬಂದರೂ ದೇವರನ್ನು ಪ್ರಾರ್ಥಿಸುತ್ತೇವೆ. ಆದರೆ ನಾವೇ ದೇವರಾಗುವ ಅನುಭವ ತುಂಬ ವಿಭಿನ್ನವಾದದ್ದು’ ಎಂದು ಹೇಳಿಕೊಂಡರು ನಿಶಾ.


ರಾಘವೇಂದ್ರ ಹುಣಸೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !