ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ | ಟಿವಿಗಳಲ್ಲಿ ಕನ್ನಡ ಧಾರಾವಾಹಿ ಸ್ಥಿತಿಗತಿ: 12 ದಿನ ಪರ್ವಾಗಿಲ್ಲ!

Last Updated 20 ಮಾರ್ಚ್ 2020, 19:45 IST
ಅಕ್ಷರ ಗಾತ್ರ

‘ಕೊರೊನಾ’ದಿಂದಾಗಿ ಚಿತ್ರೋದ್ಯಮ ಸ್ಥಗಿತಗೊಂಡಿದೆ. ಭಾನುವಾರದಿಂದ ಟಿ.ವಿ. ಶೂಟಿಂಗ್ ಕೂಡ ಬಂದ್ ಆಗಲಿದೆ. ಈ ವೈರಾಣುವಿನ ಹಾವಳಿಯಿಂದ ಕಿರುತೆರೆ ಮೇಲೆ ಏನು ಪ್ರಭಾವ ಆಗಬಹುದು?

ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮವಾಗಿ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಇಲ್ಲ. ಸಿನಿಮಾ ನೋಡಬೇಕು ಎಂದಾದರೆ, ಒಟಿಟಿ ವೇದಿಕೆಗಳನ್ನು ಆಶ್ರಯಿಸಿಕೊಳ್ಳಬೇಕು ಅಥವಾ ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗುವ ಸಿನಿಮಾ ನೆಚ್ಚಿಕೊಳ್ಳಬೇಕು.

ಇವೆರಡನ್ನೂ ಹೊರತುಪಡಿಸಿದ ಧಾರಾವಾಹಿಗಳು ಇವೆಯಲ್ಲ ಎಂದು ಸಮಾಧಾನಪಡುವಂತೆ ಇಲ್ಲ. ಭಾನುವಾರದಿಂದ (ಮಾ. 22) ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳಿಸಲು ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ತೀರ್ಮಾನಿಸಿದೆ. ಇದು ಮಾರ್ಚ್‌ 31ರವರೆಗೆ ಜಾರಿಯಲ್ಲಿ ಇರುತ್ತದೆ.

ಚಿತ್ರೀಕರಣ ಬಂದ್ ಆದ ನಂತರವೂ ಧಾರಾವಾಹಿಗಳ ಹೊಸ ಕಂತುಗಳು ಎಷ್ಟು ದಿನ ವೀಕ್ಷಣೆಗೆ ಸಿಗುತ್ತವೆ ಎಂಬ ಪ್ರಶ್ನೆ ಇಟ್ಟುಕೊಂಡು ‘ಪ್ರಜಾಪ್ಲಸ್‌’ ಕೆಲವು ನಿರ್ದೇಶಕರನ್ನು ಪ್ರಶ್ನಿಸಿತು. ‘ಸರಿಸುಮಾರು ಹದಿನೈದು ದಿನ ತೊಂದರೆ ಇಲ್ಲ’ ಎಂಬುದು ಅವರಿಂದ ಬಂದ ಉತ್ತರ.

‘ನಾವು ಎರಡು ದಿನಗಳ ಹಿಂದೆಯೇ ಚಿತ್ರೀಕರಣ ಸ್ಥಗಿತಗೊಳಿಸಿದ್ದೇವೆ. ಬೇರೆ ಹಲವು ಧಾರಾವಾಹಿ ತಂಡಗಳೂ ಈಗಾಗಲೇ ಚಿತ್ರೀಕರಣ ಸ್ಥಗಿತಗೊಳಿಸಿರುವಂತಿದೆ. ಏಕೆಂದರೆ, ಸಾರ್ವಜನಿಕರ ಹಿತ ಇಲ್ಲಿ ಮುಖ್ಯ’ ಎಂದರು ‘ಮಗಳು ಜಾನಕಿ’ ನಿರ್ದೇಶಕ ಟಿ.ಎನ್. ಸೀತಾರಾಮ್. ಅವರ ಬಳಿ ಇನ್ನು ಎರಡು ವಾರಗಳಿಗೆ ಸಾಕಾಗುವಷ್ಟು ಕಂತುಗಳು ಸಿದ್ಧವಿವೆಯಂತೆ.

‘ನಾನು ಈಗ ಮನೆಯಲ್ಲೇ ಕುಳಿತು ಒಟಿಟಿ ವೇದಿಕೆಗಳ ಮೂಲಕ ಒಳ್ಳೆಯ ಸಿನಿಮಾಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಪುಸ್ತಕಗಳ ಓದು ಕೂಡ ಸಾಧ್ಯವಾಗುತ್ತಿದೆ’ ಎಂದು ಸೀತಾರಾಮ್ ಹೇಳಿದರು.

ಧಾರಾವಾಹಿಗಳ ನಿರ್ಮಾಪಕರು ಈಗ ವಿಧಿಸಿಕೊಂಡಿರುವ ಸ್ವಯಂ ನಿರ್ಬಂಧ ಮುಂದುವರಿದು, ಮಾರ್ಚ್‌ 31ರ ನಂತರವೂ ಚಿತ್ರೀಕರಣ ಆರಂಭ ಆಗದಿದ್ದರೆ ಎನ್ನುವ ಪ್ರಶ್ನೆಯೂ ಟಿ.ವಿ. ವಾಹಿನಿಗಳ ವಲಯದಲ್ಲಿ ಮೂಡಿದೆ. ‘ನಮ್ಮಲ್ಲಿ ಈಗಾಗಲೇ ಪ್ರಸಾರ ಆಗಿರುವ ರಿಯಾಲಿಟಿ ಶೋಗಳ ಕೆಲವು ಆಯ್ದ ಕಂತುಗಳನ್ನು ಮರುಪ್ರಸಾರ ಮಾಡುವ ಸಾಧ್ಯತೆ ಇದೆ. ಆದರೆ, ಈ ರೀತಿಯ ಸಂದರ್ಭ ಎದುರಾಗಿರುವುದು ಇದೇ ಮೊದಲು’ ಎಂದು ಮನರಂಜನಾ ವಾಹಿನಿಯೊಂದರ ಪ್ರತಿನಿಧಿ ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಹೇಳಿದರು.

‘ಉಘೇ ಉಘೇ ಮಾದೇಶ್ವರ ಧಾರಾವಾಹಿಯ ಬಹುಪಾಲು ಚಿತ್ರೀಕರಣವು ಗ್ರೀನ್ ಮ್ಯಾಟ್ ಮೇಲೆ ನಡೆಯುತ್ತಿತ್ತು. ಇದಕ್ಕೆ ಪೂರ್ವ ತಯಾರಿ ಸಾಕಷ್ಟು ಇರುತ್ತಿತ್ತು. ನಮ್ಮಂತಹ ಧಾರಾವಾಹಿಗಳಿಗೆ ಕಂಪ್ಯೂಟರ್‌ ಗ್ರಾಫಿಕ್ಸ್‌ ಕೆಲಸಗಳು ಹೆಚ್ಚಿರುತ್ತವೆ. ಈ ತಿಂಗಳ 31ರವರೆಗೆ ಪ್ರಸಾರ ಮಾಡಲು ಅಗತ್ಯವಿರುವ ಕಂತುಗಳು ನಮ್ಮಲ್ಲಿ ಇವೆ’ ಎಂದು ಈ ಧಾರಾವಾಹಿಯ ನಿರ್ದೇಶಕ ಮಹೇಶ್ ಸುಖಧರೆ ಹೇಳಿದರು.

‘ಉಘೇ ಉಘೇ...’ ಪ್ರಸಾರ ಆಗುವುದು ವಾರಕ್ಕೆ ಎರಡು ದಿನ ಮಾತ್ರ. ‘ಚಿತ್ರೀಕರಣ ಸ್ಥಗಿತದ ತೀರ್ಮಾನವು ಮಾರ್ಚ್‌ 31ರ ನಂತರವೂ ಮುಂದುವರಿದರೆ ತೊಂದರೆ ಆಗಬಹುದು. ಆಗ ಧಾರಾವಾಹಿಯ ಕಂತುಗಳ ಮರುಪ್ರಸಾರದ ಮೊರೆ ಹೋಗಬೇಕಾಗಬಹುದು’ ಎಂದು ಮಹೇಶ್ ಹೇಳಿದರು.

ಬಿ. ಸುರೇಶ ಅವರ ನಿರ್ಮಾಣ ಸಂಸ್ಥೆಯಿಂದ ಮೂಡಿಬರುತ್ತಿರುವ ‘ಜೀವನದಿ’ ಧಾರಾವಾಹಿಯ ಹತ್ತು ಕಂತುಗಳು ಸಿದ್ಧವಿವೆ. ‘ಮೊದಲೆಲ್ಲ 25ರಿಂದ 30 ಕಂತುಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುತ್ತ ಇದ್ದರು. ಆದರೆ ಈಗ ಕಾಲ ಹಾಗಿಲ್ಲ. ಧಾರಾವಾಹಿಗಳ ಕಥೆಯ ಹರಿವು ವಾರಕ್ಕೊಮ್ಮೆ ಬದಲಾಗುವುದೂ ಇದೆ. ಹಾಗಾಗಿ, ಯಾರೂ ಬಹಳ ದೊಡ್ಡ ಸಂಖ್ಯೆಯಲ್ಲಿ ಕಂತುಗಳನ್ನು ಸಿದ್ಧಪಡಿಸಿಕೊಂಡು ಇಟ್ಟುಕೊಳ್ಳುವುದಿಲ್ಲ. ಈಗಿನ ಸ್ಥಿತಿ ಮಾ. 31ರ ನಂತರವೂ ಮುಂದುವರಿದರೆ ಒಂದು ವಾರ ಕಾರ್ಯಕ್ರಮ ಇಲ್ಲದಂತೆ ಆಗಬಹುದು’ ಎಂದು ಸುರೇಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT