ಜಾನಕಿಯ ಹಾಡಿಗೆ ಜನರ ಮೆಚ್ಚುಗೆ

7

ಜಾನಕಿಯ ಹಾಡಿಗೆ ಜನರ ಮೆಚ್ಚುಗೆ

Published:
Updated:

ಐದು ವರ್ಷಗಳ ನಂತರ ‘ಮಗಳು ಜಾನಕಿ’ ಧಾರಾವಾಹಿ ಮೂಲಕ ಟಿ.ಎನ್. ಸೀತಾರಾಮ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಸೀತಾರಾಮ್ ಧಾರಾವಾಹಿಗಳೆಂದರೆ ಕೋರ್ಟ್‌ ದೃಶ್ಯಗಳು ಮತ್ತು ಮತ್ತೆ ಮತ್ತೆ ಸವಿಯುವಂಥ ಶೀರ್ಷಿಕೆ ಗೀತೆಗಳಿಂದಲೇ ಜನಮಾನಸದಲ್ಲಿ ನೆಲೆಯೂರಿರುವಂಥವು. ‘ಮಾಯಾಮೃಗ’ ಧಾರಾವಾಹಿಯಿಂದ ‘ಮುಕ್ತ ಮುಕ್ತ’ದವರೆಗೂ ಈ ಮಾತು ಸತ್ಯ. ಆದ್ದರಿಂದ ಹೊಸ ಧಾರಾವಾಹಿಯ ಶೀರ್ಷಿಕೆ ಗೀತೆ ಹೇಗಿರುತ್ತದೆ ಎಂಬ ಕುತೂಹಲವಂತೂ ಇದ್ದೇ ಇತ್ತು. ಜನರ ನಿರೀಕ್ಷೆಯನ್ನು ತಣಿಸುವ ಹಾಗಿತ್ತು ‘ಮಗಳು ಜಾನಕಿ’ಯ ಶೀರ್ಷಿಕೆಗೀತೆ. ಎಚ್‌.ಎಸ್‌. ವೆಂಕಟೇಶಮೂರ್ತಿ ಬರೆದಿರುವ ಸಾಲುಗಳಿಗೆ ಪ್ರವೀಣ್ ಡಿ. ರಾವ್ ಹಾಕಿರುವ ಸಂಗೀತದ ಮಟ್ಟು, ಅವೆರಡಕ್ಕೆ ಜೀವನೀಡುವಂಥ ವಿಜಯಪ್ರಕಾಶ್‌ ಹಾಡುಗಾರಿಕೆ ಎಲ್ಲವೂ ಕೂಡಿ ‘ಮಗಳು ಜಾನಕಿ’ಯನ್ನು ಬಹುಬೇಗ ಜನರ ಮನಸ್ಸಿನೊಳಗೆ ಕೊಂಡೊಯ್ದಿದೆ ಶೀರ್ಷಿಕೆ ಗೀತೆ.

‘ಗುರಿಯ ಸೇರಬಹುದೇ ನೀನು ದಾರಿ ಮುಗಿಯದೆ

ಹೊನ್ನು ದೊರೆಯಬಹುದೇ ಹೇಳು ಮಣ್ಣ ಬಗೆಯದೆ

ಬಾಳ ದಾರಿಯಲ್ಲಿ ಇರುಳು ಕವಿದ ಹೊತ್ತಲಿ

ಪ್ರೀತಿ ಕಣ್ಣು ತೆರೆದ ದೀಪ ಮಗಳು ಜಾನಕಿ’ ಎಂದು ಆರಂಭವಾಗುವ ಈ ಭಾವಗೀತೆ ಸ್ವಾದವನ್ನೂ ಮಾಧುರ್ಯವನ್ನೂ ಹೊಂದಿರುವ ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಲಕ್ಷಾಂತರ ವೀಕ್ಷಣೆ ಕಂಡಿದೆ.

‘ಕಿರುತೆರೆ ಧಾರಾವಾಹಿಯ ಹಾಡೊಂದಕ್ಕೆ ಈ ಪರಿಯ ಒಳ್ಳೆಯ ಪ್ರತಿಸ್ಪಂದನ ದೊರಕುತ್ತಿರುವುದು ಇದೇ ಮೊದಲು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಟಿ.ಎನ್. ಸೀತಾರಾಮ್.

‘ಪರಿತ್ಯಕ್ತ ಮಗಳೊಬ್ಬಳ ವಿವಿಧ ಭಾವಗಳು ಇರುವಂತೆ ಒಂದು ಹಾಡು ಬರೆದುಕೊಡಿ ಎಂದು ಎಚ್‌ಎಸ್‌ವಿ ಅವರಲ್ಲಿ ಕೇಳಿದ್ದೆ. ಅಂದರೆ ಬದುಕಿನಲ್ಲಿ ಆಸೆ ಇರುವ, ಮುಂದೆ ಏನೋ ಒಳ್ಳೆಯದಾಗುತ್ತದೆ ಎಂಬ ಭರವಸೆ ಇರುವ, ಹಿಂದೆ ಆದ ಕಹಿಗಳ ಮರೆಯುವ ಭಾವದ ಹಾಡು ನನಗೆ ಬೇಕಿತ್ತು. ಎಚ್‌ಎಸ್‌ವಿ ಅದನ್ನು ಸರಿಯಾಗಿ ಗ್ರಹಿಸಿ ಒಳ್ಳೆಯ ಹಾಡನ್ನು ಬರೆದುಕೊಟ್ಟರು. ಇದು ಜನರಿಗೂ ಇಷ್ಟವಾಗಿದೆ’ ಎಂದು ಅವರು ವಿವರಿಸುತ್ತಾರೆ. 

‘ಇದುವರೆಗೂ ಕೋರ್ಟ್‌ಗೋಸ್ಕರ ಕಥೆ ಮಾಡುತ್ತಿದ್ದೆ. ಆದರೆ ಇಲ್ಲಿ ಕಥೆಗೋಸ್ಕರ ಕೋರ್ಟ್‌ ಬರಬಹುದು. ಅದೂ ಗೊತ್ತಿಲ್ಲ. ಇಲ್ಲಿ ಕಥೆಯೇ ಮುಖ್ಯ. ಐದು ವರ್ಷದ ಹಿಂದಿನ ನನ್ನ ಧಾರಾವಾಹಿಗಳಿಗೂ ಈ ಧಾರಾವಾಹಿಗೂ ವೇಗದಲ್ಲಿ ವ್ಯತ್ಯಾಸವಿದೆ. ಇಂದಿನ ವೀಕ್ಷಕರ ಮನಃಸ್ಥಿತಿಗೆ ತಕ್ಕಂತೆ ವೇಗ ಹೆಚ್ಚಿಸಿಕೊಂಡಿದ್ದೇನೆ’ ಎನ್ನುತ್ತಾರೆ ಸೀತಾರಾಮ್. 

ಜುಲೈ 2ರಿಂದ ಕಲರ್ಸ್‌ ಸೂಪರ್ ವಾಹಿನಿಯಲ್ಲಿ ಸಂಜೆ 9.30ಕ್ಕೆ ‘ಮಗಳು ಜಾನಕಿ‍’ ಧಾರಾವಾಹಿ ಪ್ರಸಾರವಾಗಲಿದೆ. 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !