ಬುಧವಾರ, ಸೆಪ್ಟೆಂಬರ್ 23, 2020
23 °C

ನಾನು ನನ್ನ ಕನಸು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಂದೆಯಿಂದ ಪೂರ್ಣ ಮಾಡಲಾಗದ ಕನಸೊಂದನ್ನು ಪುಟ್ಟ ಮಗಳು ತನ್ನದಾಗಿಸಿಕೊಂಡು ಅದನ್ನು ನನಸಾಗಿಸುವ ಕಥೆಯೇ ಈ ‘ನಾನು ನನ್ನ ಕನಸು’. ಪುಟಾಣಿ ಅನು ಡಾಕ್ಟರ್‌ ಆಗುವ ಕನಸಿನ ದಾರಿಯಲ್ಲಿ ಎಲ್ಲವೂ ಸುಗಮವಾಗಿರದೆ, ದೊಡ್ಡ ಆಘಾತವೊಂದನ್ನು ಅನು ಎದುರಿಸಬೇಕಾಗುತ್ತದೆ. ಅನುಳ ಕನಸಿಗೆ ಅಡ್ಡಗಾಲಾಗಿರುವ ವಿಲನ್‍ಗಳು ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನೇ ಒಡ್ಡುತ್ತಾರೆ. ಆ ಎಲ್ಲ ಅಡೆತಡೆಗಳನ್ನು ಎದುರಿಸಿ ತನ್ನ ಕನಸನ್ನ ಹೇಗೆ ಸಾಕಾರಗೊಳಿಸಿಕೊಳ್ಳುತ್ತಾಳೆ ಎಂಬುದೇ ಈ ಕಥೆಯ ಜೀವಾಳ. ಹಾಗಂತ ಬಹುತೇಕ ಧಾರಾವಾಹಿಗಳಂತೆ, ಹೆಣ್ಣೊಬ್ಬಳ ಗೋಳಿನ ಕಥೆಯಂತೂ ಖಂಡಿತ ಅಲ್ಲ. ಕಷ್ಟಗಳನ್ನು ಧೈರ್ಯವಾಗಿ ಎದುರಿಸುತ್ತಾ ಲವಲವಿಕೆಯಿಂದ ಇರುವ ಹುಡುಗಿ ಅನು ಎನ್ನುವುದು ಈ ಧಾರಾವಾಹಿಯ ತಂಡದ ಅಂಬೋಣ.

ಈ ಹೊಸ ಧಾರಾವಾಹಿ ಉದಯ ಟಿ.ವಿಯಲ್ಲಿ ಆಗಸ್ಟ್ 5ರಿಂದ ಆರಂಭವಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಕಿರುತೆರೆಯಲ್ಲಿ ಮಿಂಚಿದ ಪುಟಾಣಿ ತಾರೆ ‘ಶೃತಾ’ ಅನು ಪಾತ್ರ ನಿರ್ವಹಿಸುತ್ತಿದ್ದರೆ, ಕನಸನ್ನು ಹೇಳಿಕೊಟ್ಟ ತಂದೆಯಾಗಿ ನಟ ರಾಜೇಶ್ ನಟರಂಗ ನಿರ್ವಹಿಸುತ್ತಿದ್ದಾರೆ. ಅನುವಿನ ತಾಯಿಯಾಗಿ ಆರತಿ ಕುಲಕರ್ಣಿ ಮತ್ತು ಅನುವಿನ ಕನಸಿಗೆ ಅಡ್ಡವಾಗಿರುವ ಖಳನಾಯಕಿಯಾಗಿ ನಿಶಿತಾ ಗೌಡ ನಟಿಸುತ್ತಿದ್ದಾರೆ. ಹಲವು ವರ್ಷಗಳ ವಿರಾಮದ ನಂತರ ನಿಶಿತಾ ಗೌಡ ಮತ್ತೆ ಕಿರುತೆರೆಗೆ ಮರು ಪ್ರವೇಶ ಮಾಡಿದ್ದಾರೆ. ಉಳಿದ ಮುಖ್ಯ ಪಾತ್ರಗಳಲ್ಲಿ ವಿಶಾಲ್ ರಘು, ಹರೀಶ್, ಬಾಲನಟರಾಗಿ ಸ್ಕಂದ ಕಾಣಿಸಿಕೊಳ್ಳುತ್ತಿದ್ದಾರೆ.

‘ನಾನು ನನ್ನ ಕನಸು’ ಧಾರಾವಾಹಿಯ ಪ್ರಚಾರಕ್ಕೆ ನಟಿ ಪ್ರಿಯಾಂಕ ಉಪೇಂದ್ರ ಕೂಡ ಕೈಜೋಡಿಸಿದ್ದಾರೆ. ಪ್ರೋಮೊಗಳಲ್ಲಿ ಕಾಣಿಸಿಕೊಂಡಿರುವುದಷ್ಟೇ ಅಲ್ಲದೆ, ತೆರೆಯ ಮೇಲೆ ಬಂದು ಕಥೆಯ ಮುಖ್ಯ ಘಟ್ಟಗಳನ್ನು ಪ್ರಿಯಾಂಕ ನಿರೂಪಿಸಲಿದ್ದಾರೆ.

ಹಿಂದಿ ಟೆಲಿವಿಷನ್‍ನ ‘ಶಶಿ ಸುಮೀತ್ ಗ್ರೂಪ್’, ಈ ಧಾರಾವಾಹಿ ನಿರ್ಮಾಣದ ಹೊಣೆ ಹೊತ್ತಿದೆ. ಹೈದರಾಬಾದ್‍ನ ಅದ್ದೂರಿ ಸೆಟ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಸೆಟ್ ವೀಕ್ಷಕರ ಗಮನವನ್ನೂ ಸೆಳೆಯುವಂತಿದೆ.

ಛಾಯಾಗ್ರಾಹಕ ಮತ್ತು ನಿರ್ದೇಶಕ ಬಿ.ಕುಮಾರ್ ಈ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ. ಪಂಚಿಂಗ್‌ ಡೈಲಾಗ್‌ಗಳಿಗೆ ಹೆಸರುವಾಸಿಯಾದ ಶ್ರೀಕಾಂತ್, ಸಂಭಾಷಣೆ ಬರೆಯುತ್ತಿದ್ದಾರೆ. ಡಾ.ನಾಗೇಂದ್ರ ಪ್ರಸಾದ್ ಸೊಗಸಾದ ಶೀರ್ಷಿಕೆ ಗೀತೆ ಬರೆದಿದ್ದಾರೆ. ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಹಿರಿತೆರೆಯಲ್ಲಿ ಜನಪ್ರಿಯತೆ ಪಡೆದಿರುವ ‘ಅಪ್ಪಾ ಐ ಲವ್ ಯೂ ಪಾ’ ಹಾಡಿನ ತರಹವೇ ‘ನಾನು ನನ್ನ ಕನಸು’ ಶೀರ್ಷಿಕೆ ಗೀತೆಯೂ ಜನಪ್ರಿಯವಾಗಲಿದೆ ಎನ್ನುವುದು ಈ ಧಾರಾವಾಹಿ ತಂಡದ ವಿಶ್ವಾಸದ ನುಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು