ಶುಕ್ರವಾರ, ಏಪ್ರಿಲ್ 23, 2021
31 °C
ಉದಯ ಟಿವಿಯಲ್ಲಿ ಒಂದೇ ದಿನ 2 ಧಾರಾವಾಹಿಗಳು

ಬರುತ್ತಿದ್ದಾರೆ ‘ಗೌರಿಪುರದ ಗಯ್ಯಾಳಿಗಳು’, ʻನೇತ್ರಾವತಿʼ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉದಯ ಟಿವಿಯಲ್ಲಿ ಎರಡು ಹೊಸ ಧಾರಾವಾಹಿಗಳು ಮಾರ್ಚ್‌ 15ರಿಂದ ಆರಂಭವಾಗಲಿವೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ‘ಗೌರಿಪುರದ ಗಯ್ಯಾಳಿಗಳು’ ಮತ್ತು ಸಂಜೆ 7.30ಕ್ಕೆ ‘ನೇತ್ರಾವತಿ’ ಪ್ರಸಾರಗೊಳ್ಳಲಿದೆ.

‘ಗೌರಿಪುರದ ಗಯ್ಯಾಳಿಗಳು’ ಹಾಸ್ಯಮಯ ಸಸ್ಪೆನ್ಸ್‌ ಕಥೆ ಹೊಂದಿದೆ. ‘ನೇತ್ರಾವತಿ’ ಮಂಜುನಾಥಸ್ವಾಮಿಯ ಭಕ್ತೆಯೂ ಆಗಿರುವ ಆಶಾ ಕಾರ್ಯಕರ್ತೆಯೊಬ್ಬಳ ಜೀವನ ಪಯಣದ ಕಥೆ ಇದು.

‘ಗೌರಿಪುರದ ಗಯ್ಯಾಳಿಗಳು’

ಗೌರಿಪುರ ಎಂಬ ಮಧ್ಯಮ ವರ್ಗದವರ ಕಾಲನಿಯಲ್ಲಿ ಇರುವ ನಾಲ್ವರು ಮಧ್ಯಮವರ್ಗದ ಗಯ್ಯಾಳಿಗಳು ಸ್ತ್ರೀ ಸಂಘ ಸ್ಥಾಪಿಸಿಕೊಂಡು ಹಪ್ಪಳ ಸಂಡಿಗೆ ತಯಾರು ಮಾಡುವವರು. ಇವರ ಬಾಯಿಗೆ ಕಾಲೊನಿಯೇ ಹೆದರುತ್ತದೆ. ಇವರ ನಡುವೆ ಸಮಸ್ಯೆಗಳಿವೆ. ಆದರೆ ಹೊರಗಿನವರು ಬಂದರೆ ಒಗ್ಗಟ್ಟಾಗುತ್ತಾರೆ. ಇಂಥವರ ನಡುವೆ ಗುಲಾಬಿಯಂಥ ಹುಡುಗಿ ತನ್ನ ತಂದೆಯ ನಿಗೂಢ ಸಾವಿಗೆ ಸಾಕ್ಷಿ ಹುಡುಕಿಕೊಂಡು ಬರುತ್ತಾಳೆ. ಈ ಗಯ್ಯಾಳಿಗಳ ನಡುವೆ ನಡೆಯುವ ಹಾಸ್ಯಮಯ ಪ್ರಸಂಗಗಳು ಹಾಗೂ ಗುಲಾಬಿಯ ನಿಗೂಢ ನಡೆಗಳು ಕಥೆಗೆ ಹೊಸತನದ ಸ್ಪರ್ಶ ನೀಡಿವೆ.

ರವಿತೇಜ ನಿರ್ದೇಶಕರು. ತಾರಾಗಣದಲ್ಲಿ ನವ್ಯ, ರೋಹಿಣಿ, ದಿವ್ಯ, ವೀಣಾ, ರಚನಾ, ಆರ್ವ ಬಸವಟ್ಟಿ, ರವಿತೇಜ ಇದ್ದಾರೆ.

ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ತಮ್ಮ ʻಸುರಾಗ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿʼ ಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಇದು ಕಿರುತೆರೆಯಲ್ಲಿ ಅವರ ಮೊದಲ ಪ್ರಯತ್ನ.

‘ನೇತ್ರಾವತಿ’

ತನ್ನೊಳಗೆ ನೋವಿದ್ದರೂ ತೋರಿಸಿಕೊಳ್ಳದೇ ಇತರರಿಗೆ ನಗು ಹಂಚುವ, ಸಮಾಧಾನ ನೀಡುವ, ಆಶಾಕಾರ್ಯಕರ್ತೆ, ಮಂಜುನಾಥ ಸ್ವಾಮಿಯ ಭಕ್ತೆ ನೇತ್ರಾವತಿ. ವೃತ್ತಿ ಜೀವನದ ಏರಿಳಿತಗಳು ಇವಳನ್ನು ಒಬ್ಬ ಒರಟ ನಾಯಕನ ಮನೆಗೆ ತಂದು ನಿಲ್ಲಿಸುತ್ತದೆ. ಶರೀರದ ಗಾಯಕ್ಕೆ ಮುಲಾಮು ಹಚ್ಚಬಲ್ಲ ನೇತ್ರಾವತಿ, ಆ ಒರಟನ ಮನಸ್ಸಿನ ಗಾಯಕ್ಕೆ ಮದ್ದು ಮಾಡಿ ಅವನಿಗೆ ಸತ್ಯದ ಅರಿವು ಮೂಡಿಸುವುದು ಮುಂದಿನ ಪಯಣ. 

ಡಾ.ರಾಜ್‌ಕುಮಾರ್‌ ಕುಟುಂಬದ ಪೂರ್ಣಿಮಾ ಪ್ರೊಡಕ್ಷನ್ಸ್‌ ಲಾಂಛನದಡಿ ʻನೇತ್ರಾವತಿʼ ಧಾರಾವಾಹಿ ಮೂಡಿಬರಲಿದೆ. ಸಂತೋಷ್‌ಗೌಡ ಅವರು ʻನೇತ್ರಾವತಿʼಯನ್ನು ಹೊಸ ನಿರೂಪಣಾ ಶೈಲಿಯಲ್ಲಿ ನಿರ್ದೇಶಿಸುತ್ತಿದ್ದಾರೆ.  

ತಾರಾಗಣದಲ್ಲಿ ದುರ್ಗಾಶ್ರೀ, ಸನ್ನಿ ಮಹಿಪಾಲ್, ಸಚಿನ್‌, ಚೈತ್ರಾ ರಾವ್‌,‌ ದಾನಪ್ಪ, ಐಶ್ವರ್ಯ ಇದ್ದಾರೆ. ಛಾಯಾಗ್ರಹಣ ದಯಾಕರ್‌, ಸಂಕಲನ ಗುರುಮೂರ್ತಿ ಹೆಗಡೆ ಅವರದ್ದು.

ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತೆ ಕಾಣಿಸುತ್ತಿದ್ದಾರೆ ಅಂಜಲಿ

‘ಅನಂತನ ಆವಾಂತರ’, ‘ತರ್ಲೆ ನನ್ನ ಮಗ’, ‘ನೀನು ನಕ್ಕರೆ ಹಾಲು ಸಕ್ಕರೆ’ ಮುಂತಾದ ಚಿತ್ರಗಳ ನಾಯಕಿಯಾಗಿ ತೊಂಬತ್ತರ ದಶಕದಲ್ಲಿ ಮಿಂಚಿದ್ದ ಕಲಾವಿದೆ ಅಂಜಲಿ 22 ವರ್ಷಗಳ ನಂತರ ‘ನೇತ್ರಾವತಿ’ ಧಾರಾವಾಹಿಯ ಮೂಲಕ ಬಣ್ಣ ಹಚ್ಚುತ್ತಿದ್ದಾರೆ. ನೇತ್ರಾವತಿಯ ತಾಯಿ ಭಾಗೀರಥಿಯಾಗಿ ಕಾಣಿಸಿಕೊಳ್ಳುತ್ತಿರುವ ಅಂಜಲಿ ಈ ಥರದ ಭಾವನಾತ್ಮಕ ಪಾತ್ರವನ್ನು ಮೊದಲ ಸಲ ನಿರ್ವಹಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು