ಬುಧವಾರ, ಅಕ್ಟೋಬರ್ 28, 2020
28 °C

ಕೊರೊನಾ ಕಾಲದಲ್ಲಿ ಮತ್ತೆ ಬಂತು ‘ಕಾವ್ಯಾಂಜಲಿ’

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

‘ನಂದಿನಿ’, ‘ಕಸ್ತೂರಿ ನಿವಾಸ’, ‘ಸೇವಂತಿ’, ‘ಮನಸಾರೆ’ಯಂತಹ ಕೌಟುಂಬಿಕ ಧಾರಾವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಉದಯ ಟಿ.ವಿ, ಈಗ ಮತ್ತೊಂದು ನವಿರಾದ ಪ್ರೇಮ ಕಥಾಹಂದರದ ಹೊಸ ಧಾರಾವಾಹಿ ‘ಕಾವ್ಯಾಂಜಲಿ’ಯನ್ನು ಇದೇ ಆಗಸ್ಟ್ 3ರಿಂದ ಪ್ರೇಕ್ಷಕರ ಮುಂದಿಡುತ್ತಿದೆ.

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಇದು ಪ್ರಸಾರವಾಗಲಿದೆ. ‘ಕಾವ್ಯಾಂಜಲಿ’ ಶೀರ್ಷಿಕೆ ಕೇಳಿದ ತಕ್ಷಣ ಕಿರುತೆರೆ ವೀಕ್ಷಕರಿಗೆ ಕುತೂಹಲ ಹುಟ್ಟುವುದು ಸಹಜ. ಜೊತೆಗೆ ಎರಡು ದಶಕಗಳ ಹಿಂದೆ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾವ್ಯಾಂಜಲಿ’ಯತ್ತ ನೆನಪು ಹೊರಳಬಹುದು. ಈ ಧಾರಾವಾಹಿ ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು ಕೂಡ. ಈಗ ಅದೇ ಹೆಸರಿನಲ್ಲಿ ಹೊಸ ಧಾರಾವಾಹಿ ಶುರುವಾಗುತ್ತಿದೆ. ಇದು ಪರಿಪೂರ್ಣ ಮನರಂಜನೆಯ ಜೊತೆಗೆ ಪರಿಶುದ್ಧ ಪ್ರೀತಿಯ ಸವಿಯನ್ನು ವೀಕ್ಷಕರ ಮುಂದಿಡಲಿದೆ. ಹೊಸ ಕಲ್ಪನೆಯ ತ್ರಿಕೋನ ಪ್ರೇಮಕಥೆಗೆ ಸಂಗೀತದ ಮಾಂತ್ರಿಕತೆಯ ಸ್ಪರ್ಶ ನೀಡಲಾಗಿದೆಯಂತೆ.

ಅಕ್ಕ –ತಂಗಿಯ ಬಾಂಧವ್ಯ ಕಾವ್ಯಾಂಜಲಿಯ ಕೇಂದ್ರಬಿಂದು. ಜಗತ್ತಿನಲ್ಲಿ ಪ್ರೀತಿಗೆ ಅತಿಹೆಚ್ಚು ಮಹತ್ವವಿದೆ. ಆದರೆ ಪ್ರಾಣ ಉಳಿಸುವ ಅಮೃತದಂತಹ ಪ್ರೀತಿ ಕೆಲವೊಮ್ಮೆ ಉಸಿರುಗಟ್ಟಿಸುತ್ತದೆ. ಇಂತಹದೇ ಪ್ರೀತಿಯಲ್ಲಿ ಉಸಿರು ಕಟ್ಟಿರೊ ನಾಯಕನಿಗೆ ನಿಷ್ಕಲ್ಮಶ ಪ್ರೀತಿಯ ತಂಪೆರೆಯುವ ನಾಯಕಿ ಹೇಗೆ ಜೊತೆಯಾಗುತ್ತಾಳೆ ಎನ್ನುವುದು ಈ ಸೀರಿಯಲ್‌ನ ಕೂತೂಹಲ.

ಶ್ಯಾಕ್ ಸ್ಟುಡಿಯೊ ಸಂಸ್ಥೆಯಡಿ ಶಂಕರ್ ವೆಂಕಟರಾಮನ್ ಈ ಧಾರಾವಾಹಿ ನಿರ್ಮಿಸುತ್ತಿದ್ದು, ಆದರ್ಶ್ ಹೆಗಡೆ ನಿರ್ದೇಶಿಸುತ್ತಿದ್ದಾರೆ. ರುದ್ರಮುನಿ ಬೆಳೆಗೆರೆ ಅವರ ಛಾಯಾಗ್ರಹಣವಿದೆ. 

ಅಂಜಲಿ ಪಾತ್ರದ ಮೂಲಕ ಸುಷ್ಮಿತಾ ಎಂಬ ಹೊಸ ಪ್ರತಿಭೆ ಕನ್ನಡ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಕಾವ್ಯ ಪಾತ್ರವನ್ನು ವಿದ್ಯಾಶ್ರಿ ಜಯರಾಂ ನಿರ್ವಹಿಸುತ್ತಿದ್ದು, ಪವನ್ ರವೀಂದ್ರ ಇವರಿಬ್ಬರ ನಡುವಿನ ಕೇಂದ್ರಬಿಂದು. ಕಣ್ಮಣಿ ಖ್ಯಾತಿಯ ದರ್ಶಕ್ ಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿರಿಯ ಕಲಾವಿದ ಶಂಕರ್ ಅಶ್ವಥ್ ಅವರು ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಮಿಥುನ್ ತೇಜಸ್ವಿ, ರವಿ ಭಟ್, ಮಹಾಲಕ್ಷ್ಮಿ, ಮರಿನಾ ತಾರಾ, ರಾಮಸ್ವಾಮಿ, ನಿಸರ್ಗ, ಸಿಂಚನಾ ಅವರ ತಾರಾಬಳಗವಿದೆ.

ಕೊರೊನಾ ನಂತರದಲ್ಲಿ ‘ಬದಲಾಗಿದೆ ಸಮಯ, ಬದಲಾಗ್ತಿದೆ ಉದಯ’ ಅಡಿಬರಹದಲ್ಲಿ ಪ್ರಸಾರವಾಗಲಿರುವ ಮೊದಲ ಧಾರಾವಾಹಿ ಎನ್ನುವ ಹೆಗ್ಗಳಿಕೆಯೂ ಕಾವ್ಯಾಂಜಲಿ ಪಾತ್ರವಾಗ್ತಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.