ಶನಿವಾರ, ಆಗಸ್ಟ್ 8, 2020
26 °C

ನಟನೆಯ ಕನಸಿನೊಂದಿಗೆ ಪ್ರಿಯಾ ಹೆಜ್ಜೆ

ರೇಷ್ಮಾ Updated:

ಅಕ್ಷರ ಗಾತ್ರ : | |

ಈಕೆ ಬಾಲ್ಯದಿಂದಲೂ ನಟನೆಯ ಕನಸಿನೊಂದಿಗೆ ಜೀವಿಸಿದವರು. ಚಿಕ್ಕ ವಯಸ್ಸಿನಿಂದಲೇ ನೃತ್ಯದ ಮೇಲೆ ವಿಪರೀತ ಒಲವು. ‘ನಟನೆಯ ಹೊರತು ನಾನು ಬೇರೇನೂ ಯೋಚಿಸಿಯೇ ಇಲ್ಲ’ ಎನ್ನುವ ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಜೊತೆ ಜೊತೆಯಲಿ’ ಧಾರಾವಾಹಿಯ ರಮ್ಯಾ ಪಾತ್ರಧಾರಿ. ನಿಜವಾದ ಹೆಸರು ಪ್ರಿಯದರ್ಶಿನಿ. ‘ಆದರೆ ಬಹಳ ಮಂದಿಗೆ ನನ್ನ ನಿಜ ಹೆಸರು ಮರೆತೇ ಹೋಗಿದೆ. ಅಷ್ಟರ ಮಟ್ಟಿಗೆ ರಮ್ಯಾ ಪಾತ್ರ ನನ್ನನ್ನು ಬದಲಿಸಿದೆ’ ಎಂಬ ಖುಷಿ ಇವರದ್ದು.

ಮಂಡ್ಯದ ಪ್ರಿಯದರ್ಶಿನಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸ್ಯಾಂಡಲ್‌ವುಡ್‌ ಮೋಹಕತಾರೆ ರಮ್ಯಾ ಅವರನ್ನು ಆರಾಧಿಸುವ ‘ಜೊತೆ ಜೊತೆಯಲಿ’ ಧಾರಾವಾಹಿಯ ರಮ್ಯಾ ಮೊದಲು ನಟಿಸಿದ್ದು ‘ಸೀತಾರಾಮ ಕಲ್ಯಾಣ’ ಸಿನಿಮಾದಲ್ಲಿ. ಈಗ ‘ಕ್ಷಿಪ್ರ’ ಸಿನಿಮಾದಲ್ಲಿ ನಾಯಕಿಯಾಗಿಯೂ ನಟಿಸುತ್ತಿದ್ದಾರೆ.

ಮೊದಲಿನಿಂದಲೂ ಓದಿಗಿಂತ ನಟನೆ ಹಾಗೂ ನೃತ್ಯದ ಮೇಲೆ ಹೆಚ್ಚು ಆಸಕ್ತಿ. ಆ ಕಾರಣಕ್ಕೆ ಓದು ಮುಗಿದ ಮೇಲೆ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾ ತರಬೇತಿ ಪಡೆದರು. ಅಲ್ಲಿಂದ ಇವರ ನಟನೆಯ ಪಯಣ ಆರಂಭವಾಗಿದೆ.

‘ಜೊತೆ ಜೊತೆಯಲಿ’ ಪ್ರಿಯಾ ನಟಿಸಿದ ಮೊದಲ ಧಾರಾವಾಹಿ. ಆಡಿಷನ್‌ ಮೂಲಕ ಧಾರಾವಾಹಿಗೆ ಆಯ್ಕೆಯಾದ ರಮ್ಯಾ, ಈಗ ಹಲವರ ಅಚ್ಚುಮೆಚ್ಚಿನ ನಟಿ. ಎಷ್ಟೋ ಮಂದಿ ಫ್ರೆಂಡ್‌ಶಿಪ್‌ ಅಂದ್ರೆ ಅನು–ರಮ್ಯಾ ಥರ ಇರಬೇಕು ಎನ್ನುವಷ್ಟರ ಮಟ್ಟಿಗೆ ಅವರ ಕೆಮಿಸ್ಟ್ರಿ ತೆರೆ ಮೇಲೆ ಯಶಸ್ಸು ಕಂಡಿದೆ. ಸ್ನೇಹಿತೆ ಅನುಗೆ ಬೆಂಬಲವಾಗಿ ನಿಲ್ಲುವ, ಮನೆಯವರಿಗಿಂತಲೂ ಸ್ನೇಹಿತೆಯ ಮನೆಯವರನ್ನೇ ವಹಿಸಿಕೊಂಡು ಮಾತನಾಡುವ, ನ್ಯಾಯದ ಪರ ಇರುವ ಹುಡುಗಿಯ ಪಾತ್ರದಲ್ಲಿ ಪ್ರಿಯಾ ನಟಿಸಿದ್ದಾರೆ.

ಧಾರಾವಾಹಿ ಪಯಣದ ಬಗ್ಗೆ ಮಾತನಾಡುವ ಪ್ರಿಯಾ ‘ನಾನು ಮೊದಲು ಆಡಿಷನ್‌ಗೆ ಹೋದಾಗ ಧಾರಾವಾಹಿಗೆ ಅನಿರುದ್ಧ್ ಅವರು ನಾಯಕ ಎಂಬುದು ತಿಳಿದಿರಲಿಲ್ಲ. ಧಾರಾವಾಹಿ ಹೆಸರು ಕೂಡ ಗೊತ್ತಿರಲಿಲ್ಲ. ಆಯ್ಕೆಯಾದ ಮೇಲೆ ಹೀರೊಯಿನ್‌ಗೆ ಜೊತೆಯಾಗಿರುವ ಪಾತ್ರ ಎಂದು ಹೇಳಿದ್ದರು. ಸ್ವಲ್ಪದಿನ ಆದ ಮೇಲೆ ಅನಿರುದ್ಧ್ ಅವರು ನಾಯಕ ಎಂಬುದು ತಿಳಿಯಿತು. ನಂತರ ಅನೇಕ ಹಿರಿಯ ಹಾಗೂ ಅನುಭವಿ ನಟ–ನಟಿಯರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂದಾಗ ಕೊಂಚ ಭಯವಾಗಿತ್ತು. ಆದರೆ ತಂಡದಲ್ಲಿ ಎಲ್ಲರೂ ತುಂಬಾನೇ ಸಪೋರ್ಟ್ ಮಾಡುತ್ತಾರೆ. ಈಗ ನನಗೆ ಇದೂ ಒಂದು ಕುಟುಂಬ ಎನ್ನಿಸುತ್ತದೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ.

‘ಚಿಕ್ಕ ಹುಡುಗಿ ಇದ್ದಾಗಿನಿಂದಲೂ ನನಗೆ ನಟಿ ರಮ್ಯಾ ತುಂಬಾ ಇಷ್ಟ. ಆ ಹೆಸರಿನ ಮೇಲೆ ನನಗೆ ವಿಪರೀತ ಒಲವು. ನಾನು ನಟಿಯಾಗಬೇಕು ಎಂದುಕೊಂಡಿದ್ದೇ ರಮ್ಯಾ ಅವರ ನಟನೆ ನೋಡಿದ ಮೇಲೆ. ಈ ಧಾರಾವಾಹಿಯಲ್ಲಿ ನಾನು ಮಾಡುತ್ತಿರುವ ಪಾತ್ರಕ್ಕೆ ಬೇರೆ ಹೆಸರಿತ್ತು. ಆದರೆ ನನಗೆ ರಮ್ಯಾ ಎಂದರೆ ಇಷ್ಟ ಎಂಬುದನ್ನು ತಿಳಿದ ನಿರ್ದೇಶಕ ಆರೂರು ಜಗದೀಶ್‌ ಅವರು ಆ ಪಾತ್ರಕ್ಕೆ ರಮ್ಯಾ ಎಂದು ಹೆಸರು ಬದಲಿಸಿದರು. ನಾನು ಈಗ ರಮ್ಯಾ ಆಗಿ ಬದಲಾಗಿದ್ದೇನೆ’ ಎನ್ನುವ ಸಂಭ್ರಮ ಅವರದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು