ಸೇಕ್ರೆಡ್ ಗೇಮ್ಸ್‌ನಲ್ಲಿ ದಿಟ್ಟ ನಟನೆ: ವಿರೋಧಕ್ಕೆ ಗುರಿಯಾದ ರಾಜಶ್ರೀ ದೇಶಪಾಂಡೆ

7
ಶೃಂಗಾರದ ‘ಬಿಚ್ಚು’ ನಟನೆಗೆ ಅಪಹಾಸ್ಯ

ಸೇಕ್ರೆಡ್ ಗೇಮ್ಸ್‌ನಲ್ಲಿ ದಿಟ್ಟ ನಟನೆ: ವಿರೋಧಕ್ಕೆ ಗುರಿಯಾದ ರಾಜಶ್ರೀ ದೇಶಪಾಂಡೆ

Published:
Updated:

ಮುಂಬೈ: ಸೇಕ್ರೆಡ್ ಗೇಮ್ಸ್‌ ಧಾರವಾಹಿಯ ಶೃಂಗಾರ ದೃಶ್ಯವೊಂದರಲ್ಲಿ ದಿಟ್ಟವಾಗಿ ನಟಿಸಿರುವುದಕ್ಕೆ ನಟಿ ರಾಜಶ್ರೀ ದೇಶಪಾಂಡೆ ಈಗ ವಿರೋಧ ಎದುರಿಸುವಂತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ವಿರುದ್ಧ ಅಪಹಾಸ್ಯ ಮಾಡಲಾಗುತ್ತಿದೆ. ಆಕೆಯನ್ನು ‘ನೀಲಿ ಚಿತ್ರಗಳ’ ತಾರೆ ಎಂದೂ ಅವಹೇಳನ ಮಾಡಲಾಗಿದೆ. 

ಯಾಕೆ ವಿರೋಧ?
ಸೇಕ್ರೆಡ್ ಗೇಮ್ಸ್‌ ಧಾರಾವಾಹಿಯಲ್ಲಿ ರಾಜಶ್ರೀ ದೇಶಪಾಂಡೆ ಅವರು ಸುಭದ್ರಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಭದ್ರಾ ಪತಿ ಗಣೇಶ್ ಗಾಯಿತೋಂಡೆ ಪಾತ್ರವನ್ನು ನಟ ನವಾಜುದ್ದೀನ್ ಸಿದ್ದಿಕಿ ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಪತಿ–ಪತ್ನಿಯರನ್ನು ತೋರಿಸುವುದಕ್ಕಿಂತ ಭಿನ್ನವಾಗಿ ಇಲ್ಲಿ ಬಿಂಬಿಸಲಾಗಿದೆ. ನವಿರಾದ ಸನ್ನಿವೇಶವೊಂದರಲ್ಲಿ ಸುಭದ್ರಾ ಮತ್ತು ಆಕೆಯ ಪತಿ ಪರಸ್ಪರ ಜತೆಯಾಗಿ ತಮಾಷೆ ಮಾಡುತ್ತಾ ಭಾವೋದ್ರೇಕಗೊಂಡವರಂತೆ ವರ್ತಿಸುವ ದೃಶ್ಯವಿದೆ. ಈ ವೇಳೆ, ಸುಭದ್ರಾರ ಎದೆ ಭಾಗ ಪ್ರದರ್ಶಿತಗೊಂಡಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಇಂತಹ ದೃಶ್ಯಗಳಲ್ಲಿ ಮಹಿಳೆಯರು ಕಂಡುಬಂದರೆ ಭಾರತೀಯ ಪುರುಷರು ತಕ್ಷಣವೇ ವಿರೋಧ ವ್ಯಕ್ತಪಡಿಸುತ್ತಾರೆ. ದೇಶಪಾಂಡೆಯವರೂ ಇದಕ್ಕೆ ಹೊರತಲ್ಲ. ಲೈಂಗಿಕತೆಯ ದೃಶ್ಯಗಳನ್ನು ಅಶ್ಲೀಲ ಚಿತ್ರಗಳ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿರುವುದಲ್ಲದೆ ವಾಟ್ಸ್‌ಆ್ಯಪ್‌ನಲ್ಲೂ ಹಂಚಿಕೊಳ್ಳಲಾಗುತ್ತಿದೆ. ‘ಮಂಗಳ ಸೂತ್ರದ ಜತೆ ಸೇಕ್ರೆಡ್ ಗೇಮ್ಸ್‌ನ ಹಾಟ್ ನಟಿ’ ಎಂಬ ಅಡಿಬರಹವುಳ್ಳ ಅಸಹ್ಯಕರ ಫೋಟೊಗಳನ್ನೂ ಅಪ್‌ಲೋಡ್ ಮಾಡಲಾಗಿದೆ. ಮಹಿಳೆಯರ ಮತ್ತು ಲೈಂಗಿಕತೆ ವಿಚಾರಕ್ಕೆ ಬಂದಾಗ ಕ್ಷುಲ್ಲಕವಾಗಿ ವರ್ತಿಸುವ ಮನೋಭಾವವನ್ನು ಭಾರತೀಯ ಪುರುಷರು ಈಗಲೂ ಹೊಂದಿರುವುದನ್ನು ಇದು ತೋರಿಸುತ್ತದೆ ಎಂದು ದಿ ವೈರ್ ಜಾಲತಾಣ ಅಭಿಪ್ರಾಯಪಟ್ಟಿದೆ.

ವಿಶ್ವದಲ್ಲಿ ಅತಿ ಹೆಚ್ಚು ನೀಲಿಚಿತ್ರಗಳನ್ನು ವೀಕ್ಷಿಸುವವರು ಪುರುಷರೇ ಆಗಿದ್ದಾರೆ. ಇಂತಹ ಪುರುಷರು ಮಹಿಳೆಯರ ವಿರುದ್ಧ ಪೂರ್ವಾಗ್ರಹವನ್ನೂ ಹೊಂದಿದ್ದಾರೆ. ಈ ರೀತಿಯ ಟೀಕೆಗಳು ವಿಶೇಷವೇನೂ ಅಲ್ಲ. ಲೈಂಗಿಕವಾಗಿ ಮಹಿಳೆಯರನ್ನು ನೋಡಬಯಸುವ ಪುರುಷರು ಅದಕ್ಕಾಗಿ ಮಹಿಳೆಯರನ್ನೇ ಅವಹೇಳನ ಮಾಡುವುದನ್ನು ಇಷ್ಟಪಡುತ್ತಾರೆ ಎಂದೂ ಜಾಲತಾಣದ ವರದಿಯಲ್ಲಿ ವಿಶ್ಲೇಷಿಸಲಾಗಿದೆ.


ರಾಜಶ್ರೀ ದೇಶಪಾಂಡೆ ವಿರುದ್ಧ ಆಕ್ಷೇಪ ವ್ಯಕ್ತವಾಗಲು ಕಾರಣವಾದ ಸೇಕ್ರೆಡ್ ಗೇಮ್ಸ್‌ನ ದೃಶ್ಯ

ರಾಜಶ್ರೀ ಪ್ರತಿಕ್ರಿಯೆ ಏನು?
‘ಅದೊಂದು ಪತಿ–ಪತ್ನಿಯರ ನಡುವಣ ನವಿರಾದ ಕ್ಷಣದ ದೃಶ್ಯವಾಗಿತ್ತು. ಲೈಂಗಿಕತೆ ಎಂಬುದು ಸುಂದರವಾದದ್ದು. ಪರಸ್ಪರ ಹತ್ತಿರವಾಗುವುದೂ ಹಾಗೆಯೇ. ಅದರ ಬಗ್ಗೆ ಜನ ಈ ರೀತಿ ಮಾತನಾಡುತ್ತಿರುವುದು ದೌರ್ಭಾಗ್ಯಕರ. ಅವರು ಪ್ರೌಢಿಮೆಯಿಲ್ಲದವರು ಮಾತ್ರವಲ್ಲದೆ ಇಂತಹ (ಲೈಂಗಿಕತೆಗೆ ಸಂಬಂಧಿಸಿದ) ದೃಶ್ಯಗಳ ಪ್ರಸ್ತುತತೆಯನ್ನು ಅರ್ಥ ಮಾಡಿಕೊಳ್ಳರು. ನಾನೇನೂ ಅವಹೇಳನಕಾರಿಯಾಗಿ ನೃತ್ಯ ಮಾಡಿಲ್ಲ. ಪಾತ್ರವಾಗಿ ನನ್ನ ಪತಿಗೆ ಪ್ರೀತಿ ತೋರಿದ್ದೆ, ಅದೂ ತೀರಾ ಕೆಟ್ಟದಾಗಿ ಅಲ್ಲ’ ಎಂದು ರಾಜಶ್ರೀ ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಟೀಕೆಯ ಬಗ್ಗೆ ನನಗೆ ಖೇದವಾಗಿದೆ. ಆದರೆ, ಹಾಗೆ ಮಾಡಲೇಬೇಕಿತ್ತು. ಸುಭದ್ರಾಳ ಪಾತ್ರದಲ್ಲಿ ನಾನು ಹಾಗೆ ಕಾಣಿಸಿಕೊಂಡೆ. ಒಬ್ಬ ಕಲಾವಿದೆಯಾಗಿ ನಾನು ನನ್ನ ಕೆಲಸ ಮಾಡಬೇಕು. ನನ್ನ ಉದ್ದೇಶ ಕೆಟ್ಟದಲ್ಲ ಎಂಬುದು ನನಗೆ ತಿಳಿದಿದೆ. ಬರಹಗಾರರು (ಸ್ಮಿತಾ ಸಿಂಗ್, ವಸಂತ್ ನಾಥ್ ಮತ್ತು ವರುಣ್ ಗ್ರೋವರ್) ಅವರ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ಅಸಂಬದ್ಧವಾದದ್ದನ್ನು ಅವರು ಬರೆಯಲಾರರು’ ಎಂದು ರಾಜಶ್ರೀ ಹೇಳಿದ್ದಾರೆ.

ಇದೇ ಮೊದಲಲ್ಲ
ಸ್ತ್ರೀಯೊಬ್ಬಳ ತೆರೆದೆದೆಯ ಚಿತ್ರ ಪ್ರದರ್ಶಿತಗೊಂಡ ವಿಚಾರ ವಿವಾದಕ್ಕೀಡಾಗಿರುವುದು ಇದೇ ಮೊದಲಲ್ಲ. ಮಾರ್ಚ್‌ನಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಮಲಯಾಳಂ ಪಾಕ್ಷಿಕ ಗೃಹಲಕ್ಷ್ಮಿ ಮುಖಪುಟದಲ್ಲಿ ಅಮ್ಮ ಮಗುವಿಗೆ ಹಾಲುಣಿಸುತ್ತಿರುವ ಚಿತ್ರದಲ್ಲಿ ತೆರೆದೆದೆಯ ಚಿತ್ರವನ್ನು ಪ್ರಕಟಿಸಲಾಗಿತ್ತು.

ಇದನ್ನೂ ಓದಿ: ತಾಯ್ತನ ಎಂದರೆ ಮಾರ್ಕೆಟಿಂಗ್ ಅಲ್ಲ; 'ಗೃಹಲಕ್ಷ್ಮಿ' ಮುಖಪುಟದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ

‘ನಮ್ಮನ್ನು ದುರುಗಟ್ಟಿ ನೋಡಬೇಡಿ, ನಾವು ಹಾಲುಣಿಸುತ್ತಿದ್ದೇವೆ, ಕೇರಳದ ಜನತೆಗೆ ಅಮ್ಮಂದಿರ ಮಾತು’ ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಪ್ರಕಟಿಸಲಾಗಿತ್ತು. ಇದೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !