ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ನಲ್ಲಿ ಕಿರುತೆರೆ ಬಿಡಾರ!

Last Updated 27 ಮೇ 2021, 19:30 IST
ಅಕ್ಷರ ಗಾತ್ರ

ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಸಿನಿಮಾ ಹಾಗೂ ಕಿರುತರೆ ಚಿತ್ರೀಕರಣ ಸಂಪೂರ್ಣ ಸ್ತಬ್ಧವಾಗಿದೆ. ಲಾಕ್‌ಡೌನ್‌ ಜೂನ್‌ 7ರವರೆಗೂ ವಿಸ್ತರಣೆಯಾಗಿರುವ ಕಾರಣ, ಇದೀಗ ವಾಹಿನಿಗಳಿಗೆ ಸಂಚಿಕೆಗಳ ಸಂಗ್ರಹದ(ಬ್ಯಾಂಕಿಂಗ್‌) ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜೀ ಕನ್ನಡ ಹಾಗೂ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳ ತಂಡವು ಚಿತ್ರೀಕರಣಕ್ಕಾಗಿ ಹೈದರಾಬಾದ್‌ನತ್ತ ಮುಖಮಾಡಿವೆ.

ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಣೆಯಾದಾಗ ಕೆಲ ಧಾರಾವಾಹಿ ತಂಡಗಳು ರೆಸಾರ್ಟ್‌ನಲ್ಲಿದ್ದುಕೊಂಡು ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದ್ದವು. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ, ಈ ಚಿಂತನೆಯನ್ನು ತಂಡಗಳು ಕೈಬಿಟ್ಟಿದ್ದವು.‘ಈ ಬಾರಿಯ ಲಾಕ್‌ಡೌನ್‌ ಸ್ವಲ್ಪ ವಿಸ್ತರಣೆಯಾದರೆ, ಸಂಚಿಕೆಗಳು ನಿಧಾನ ಹೋಗಲಿವೆ. ಕಳೆದ ಬಾರಿಯಂತೆ ತಿಂಗಳುಗಟ್ಟಲೆ ಲಾಕ್‌ಡೌನ್‌ ವಿಸ್ತರಣೆಯಾದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ’ ಎಂದು ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಪರಮೇಶ್ವರ ಗುಂಡ್ಕಲ್ ಈ ಹಿಂದೆ ತಿಳಿಸಿದ್ದರು.

ಇದೀಗ ರಾಜ್ಯದಲ್ಲಿ ಸತತ 29 ದಿನ ಲಾಕ್‌ಡೌನ್‌ ಇರಲಿದ್ದು, ಕೋವಿಡ್‌ ನಿಯಂತ್ರಣಕ್ಕೆ ಬರದೇ ಇದ್ದರೆ ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಹೈದರಾಬಾದ್‌ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಇರುವುದರಿಂದ ಸಣ್ಣ ತಂಡದೊಂದಿಗೆ ‘ನಾಗಿಣಿ–2’, ‘ಸತ್ಯ’, ‘ನನ್ನರಸಿ ರಾಧೆ’,‘ಜೊತೆ ಜೊತೆಯಲಿ’ ಮುಂತಾದ ಧಾರಾವಾಹಿ ತಂಡಗಳು ಅಲ್ಲಿಗೆ ತೆರಳಿವೆ. ‘ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕೆಲ ಧಾರಾವಾಹಿಗಳ ಬ್ಯಾಂಕಿಂಗ್‌ ಈ ತಿಂಗಳಾಂತ್ಯದವರೆಗಷ್ಟೇ ಇದೆ. ಲಾಕ್‌ಡೌನ್‌ ವಿಸ್ತರಣೆಯಾದರೆ ಸಮಸ್ಯೆ ಎದುರಾಗಲಿದೆ, ಹೀಗಾಗಿ ಆ ತಂಡಗಳು ಹೈದರಾಬಾದ್‌ಗೆ ತೆರಳಿವೆ’ ಎಂದು ಮೂಲಗಳು ತಿಳಿಸಿವೆ.

‘ಗಿಣಿರಾಮ’ ಧಾರಾವಾಹಿ ಬ್ಯಾಂಕಿಂಗ್‌ ಕೊರತೆಯಿಂದಾಗಿ ಕಳೆದ ವಾರ ಸಂಚಿಕೆಗಳನ್ನು ಸ್ಥಗಿತಗೊಳಿಸಿತ್ತು. ಇದೀಗ ಈ ತಂಡವೂ ಮತ್ತೆ ಚಿತ್ರೀಕರಣ ಆರಂಭಿಸಿದ್ದು, ಗುರುವಾರದಿಂದ(ಮೇ 27) ಸಂಚಿಕೆಗಳು ಪುನರಾರಂಭವಾಗಿವೆ.‘ಕೋವಿಡ್‌ ಕಾರಣ ನಾವು ಚಿತ್ರೀಕರಣ ನಿಲ್ಲಿಸಿದ್ದೆವು, ಹೀಗಾಗಿ ಸಂಚಿಕೆಗಳೂ ಸ್ಥಗಿತಗೊಂಡಿದ್ದವು. ಜನರಿಗೆ ಮನರಂಜನೆಯನ್ನು ನೀಡಬೇಕು ಎಂದು ಸುರಕ್ಷಿತವಾದ ಸ್ಥಳದಲ್ಲಿ, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ಪುನರಾರಂಭಿಸಿದ್ದೇವೆ’ ಎಂದು ನಟ ರಿತ್ವಿಕ್‌ ಮಠದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT