ನಾಟ್ಯದಿಂದ ನಟನೆಯತ್ತ

7

ನಾಟ್ಯದಿಂದ ನಟನೆಯತ್ತ

Published:
Updated:
ಶ್ವೇತಾ 

ಆ ಕೆ ಭರತನಾಟ್ಯ ಕಲಾವಿದೆ. ಬಾಲ್ಯದಿಂದಲೂ ನೃತ್ಯವನ್ನೇ ಉಸಿರಾಗಿಸಿಕೊಂಡು ಬಂದಿದ್ದ ಆಕೆಗೆ ನೃತ್ಯಗಾತಿಯಾಗಬೇಕು ಎಂಬುದೇ ಕನಸಾಗಿತ್ತು. ಆದರೂ ಆಕಸ್ಮಿಕವಾಗಿ ನಟನೆಗೆ ಕಾಲಿರಿಸಿದರು. ಮೊದಮೊದಲು ಕಿರುಚಿತ್ರ ಹಾಗೂ ಟಿ.ವಿ ಜಾಹೀರಾತುಗಳಲ್ಲಿ ನಟಿಸುತ್ತಿದ್ದ ಇವರು ‘ಸರಯೂ’ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದರು. ಈಗ ‘ಉದಯ ವಾಹಿನಿ’ಯಲ್ಲಿ ಪ್ರಸಾರವಾಗುತ್ತಿರುವ ‘ಮಾಯಾ’ ಧಾರಾವಾಹಿಯಲ್ಲೂ ನಾಯಕಿಯಾಗಿ ನಟಿಸುತ್ತಿರುವ ಇವರು ಹೊನ್ನಾವರದ ಶ್ವೇತಾ ಹೆಗಡೆ. ಈಗ ನೆಲೆಸಿರುವುದು ಬೆಂಗಳೂರಿನಲ್ಲಿ.

ಬೆಂಗಳೂರಿನಲ್ಲಿಯೇ ಬೆಳೆದ ಶ್ವೇತಾ ಬಿ.ಎಸ್ಸಿ ಪದವೀಧರೆ. ತಂದೆ–ತಾಯಿ ಇಬ್ಬರಿಗೂ ನಟನೆಯ ಹಿನ್ನೆಲೆ ಇಲ್ಲ. ಕುಟುಂಬದಲ್ಲಿ ಹಾಡುವವರು, ನೃತ್ಯ ಮಾಡುವವರು, ಕತೆ ಬರೆಯುವವರು, ಕವಿತೆ ಬರೆಯುವವರು – ಹೀಗೆ ವಿಭಿನ್ನ ಕಲಾಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿದ್ದರು. ಆ ಕಾರಣಕ್ಕೆ ಶ್ವೇತಾಗೂ ಕಲೆಯ ನಂಟು ಅಂಟಿತ್ತು.

ಬಿಡುವಿನ ವೇಳೆಯಲ್ಲಿ ಟಿ.ವಿ. ಧಾರಾವಾಹಿಗಳಿಗೆ ಆಡಿಷನ್ ಕೊಡುತ್ತಿದ್ದ ಶ್ವೇತಾ ‘ಸರಯೂ’ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದರು. ಆ ಧಾರಾವಾಹಿ ಮುಗಿದ ತಿಂಗಳಲ್ಲೇ ಅದೃಷ್ಟ ಎಂಬಂತೆ ‘ಮಾಯಾ’ ಧಾರಾವಾಹಿಗೂ ನಾಯಕಿಯಾಗುವ ಅವಕಾಶ ಗಿಟ್ಟಿಸಿಕೊಂಡರು.

‘ನಾನು ಭರತನಾಟ್ಯ ಪ್ರದರ್ಶನ ನೀಡಿರುವುದರಿಂದ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದರಿಂದ ನನಗೆ ನಟನೆ ಅಂದರೆ ಏನು, ಅದು ಹೇಗಿರುತ್ತದೆ ಎಂಬುದರ ಅರಿವಿತ್ತು. ಅಭಿವ್ಯಕ್ತಿ, ಹಾವಭಾವ, ಕ್ಯಾಮೆರಾ ಎದುರಿಸುವುದು ಇವೆಲ್ಲವೂ ಕರಗತವಾಗಿತ್ತು, ಹಾಗಾಗಿ ಅಷ್ಟೊಂದು ಭಯ ಇರಲಿಲ್ಲ. ಆದರೂ ಧಾರಾವಾಹಿ ವಿಷಯಕ್ಕೆ ಬಂದಾಗ ಕೆಲವು ದೃಶ್ಯಗಳಲ್ಲಿ ನಟಿಸುವುದು ತಿಳಿಯುತ್ತಿರಲಿಲ್ಲ. ಸರಯೂ ಧಾರಾವಾಹಿಯಲ್ಲಿ ಎಲ್ಲರೂ ನನಗೆ ಸಂಪೂರ್ಣ ಸಹಕಾರ ನೀಡಿದ್ದರು. ಯಾರೂ ಬೈಯೋದು, ಕಿರಚೋದು ಮಾಡಲಿಲ್ಲ. ಎಲ್ಲರೂ ಸ್ನೇಹದಿಂದ ಇದ್ದರು. ಇದು ನನಗೆ ಕಿರುತೆರೆಯ ಆಳವನ್ನು ಅರಿಯಲು ಸಹಾಯ ಮಾಡಿತು. ಜೊತೆಗೆ ನಟನೆಯನ್ನು ಕರಗತ ಮಾಡಿಕೊಳ್ಳಲು ಸಹಾಯವಾಯಿತು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಈ ಸುಂದರಿ.

‘ಮಾಯಾ’ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುವ ಇವರು ‘ಇದು ಕಾದಂಬರಿ ಆಧಾರಿತ ಧಾರಾವಾಹಿ. ಫ್ಯಾಂಟಸಿ ಪರಿಕಲ್ಪನೆಯಲ್ಲಿ ಇದರ ಕತೆ ಸಾಗುತ್ತದೆ. ಉಳಿದ ಧಾರಾವಾಹಿಗಳಂತೆ ನಾಯಕ–ನಾಯಕಿ, ಅತ್ತೆ–ಮಾವ, ವಿಲನ್ ಹೀಗೆ ಒಂದು ಕುಟುಂಬ ಹಾಗೂ ಊರಿನ ಸುತ್ತ ಸುತ್ತುವ ಕತೆಯಲ್ಲ. ಇದು ದೇವರು ಹಾಗೂ ದೆವ್ವದ ನಡುವೆ ನಡೆಯುವ ಕತೆ. ದೇವರ ಶಕ್ತಿ ಹಾಗೂ ದೆವ್ವದ ಶಕ್ತಿಯ ನಡುವೆ ಯಾರು ಯಾವುದನ್ನು ಆರಿಸಿಕೊಳ್ಳುತ್ತಾರೆ, ಯಾವುದು ಗೆಲ್ಲುತ್ತದೆ ಎಂಬುದೆಲ್ಲಾ ಇದರಲ್ಲಿ ಅಡಕವಾಗಿದೆ. ದೇವರು ಹಾಗೂ ದೆವ್ವದ ಶಕ್ತಿಯ ನಡುವಣ ಸಮರದ ಕತೆ ಹೇಳುವ ಈ ಧಾರಾವಾಹಿಯಲ್ಲಿ ಗ್ರಾಫಿಕ್ಸ್‌ಗಳನ್ನು ಹೆಚ್ಚು ಬಳಸಲಾಗಿದೆ. ಇದು ಜನ್ಮಾಂತರಗಳ ನಡುವೆ ನಡೆಯುವ ಕತೆ. ಅಂದರೆ ಒಂದು ಸಕಾರಾತ್ಮಕ ಹಾಗೂ ಒಂದು ನಕಾರಾತ್ಮಕ ಶಕ್ತಿಯ ನಡುವೆ ಹೆಣೆದ ಕತೆ. ಈ ಧಾರಾವಾಹಿಯ ಬಗ್ಗೆ ನನಗೆ ಅಪಾರ ನಿರೀಕ್ಷೆ ಇದೆ’ ಎನ್ನುತ್ತಾರೆ.  

‘ಮಾಯಾ’ದಲ್ಲಿನ ತಮ್ಮ ಪಾತ್ರವನ್ನು ಶ್ವೇತಾ ವಿವರಿಸುವುದು ಹೀಗೆ: ‘ಇಲ್ಲಿ ನಾನು ಸಹಸ್ರಮಾನಗಳಷ್ಟು ಹಿಂದಿನ ಶಾತವಾಹನರ ರಾಣಿಯಾಗಿರುತ್ತೇನೆ. ಆಮೇಲೆ ಪುನರ್ಜನ್ಮ ಪಡೆದು ದರ್ಶನಿಯಾಗಿ ಹುಟ್ಟಿರುತ್ತೇನೆ. ಆದರೆ ಯಾವುದೋ ಒಂದು ಆಗೋಚರ ಶಕ್ತಿ ಈ ಜನ್ಮದಲ್ಲಿ ನನ್ನ ಹಿಂದಿನವರನ್ನೆಲ್ಲಾ ಮತ್ತೆ ಭೇಟಿಯಾಗುವಂತೆ ಮಾಡುತ್ತದೆ. ಹೀಗೆ ನನ್ನ ಪಾತ್ರ ಸಾಗುತ್ತದೆ. ಕನ್ನಡ, ತಮಿಳು, ಮಲಯಾಳ, ತೆಲುಗು ಈ ನಾಲ್ಕು ಭಾಷೆಗಳಲ್ಲಿ ಧಾರಾವಾಹಿ ಪ್ರಸಾರವಾಗುತ್ತಿರುವುದು ನಿಜಕ್ಕೂ ನನಗೆ ಅತೀವ ಸಂತೋಷ ತಂದಿದೆ. ಜೊತೆಗೆ ವಿಭಿನ್ನ ಪಾತ್ರವುಳ್ಳ ಈ ಧಾರಾವಾಹಿಯಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ.’

ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಿದ್ದರೂ ಇವರಿಗೆ ಸೂಕ್ತ ಎನ್ನಿಸುವಂತಹ ಪಾತ್ರಗಳು ಸಿಕ್ಕಿರಲಿಲ್ಲ. ಆ ಕಾರಣಕ್ಕೆ ಈವರೆಗೂ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಒಳ್ಳೆಯ ಬ್ಯಾನರ್‌ ಅಡಿ, ಒಳ್ಳೆಯ ಕತೆಗಾಗಿ ಹಂಬಲಿಸಿರುವ ಶ್ವೇತಾ, ‘ಜನರ ಮನಸ್ಸಿನಲ್ಲಿ ಸದಾ ಉಳಿಯುವ ಕತೆ ಹೊಂದಿರುವ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವೆ’ ಎಂಬ ಆಸೆ ವ್ಯಕ್ತಪಡಿಸುತ್ತಾರೆ.

‘ನಟನೆಗೆ ಬಾರದೆ ಇರುತ್ತಿದ್ದರೆ ಪೂರ್ತಿಯಾಗಿ ನೃತ್ಯದಲ್ಲೇ ತೊಡಗಿಸಿಕೊಳ್ಳುತ್ತಿದ್ದೆ. ನಾನು ಓದು ಮುಗಿಸಿದ ನಂತರ ಕೆಲವು ತಿಂಗಳು ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದೆ. ಆ ಕೆಲಸ ಬಿಟ್ಟ ಮೇಲೆ ಸಂಪೂರ್ಣವಾಗಿ ನೃತ್ಯವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದೆ, ಕೊರಿಯೋಗ್ರಫಿ ಮಾಡಿಕೊಂಡು, ದೇಶದ ನಾನಾ ಕಡೆ ಹೋಗಿ ನೃತ್ಯ ಕಾರ್ಯಕ್ರಮ ನೀಡುತ್ತಿದ್ದೆ. ಇಂದಿಗೂ ನೃತ್ಯವೇ ನನ್ನ ಉಸಿರು’ ಎಂದು ಮಾತು ಮುಗಿಸುತ್ತಾರೆ ಈ ಬೆಡಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !