ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದಿ’ಯಾಗಿ ಶರತ್‌ ಹಾದಿ

Last Updated 12 ನವೆಂಬರ್ 2020, 16:51 IST
ಅಕ್ಷರ ಗಾತ್ರ

ಕೆಲವೊಮ್ಮೆ ಅದೃಷ್ಟ ಹಾಗೂ ಅವಕಾಶಗಳು ಜೀವನದ ದಿಕ್ಕನ್ನೇ ಬದಲಿಸುತ್ತವೆ. ಅವಕಾಶದ ಬಾಗಿಲು ತೆರೆದಾಗ ಸಿಕ್ಕ ಅವಕಾಶವನ್ನು ಬಳಸಿಕೊಂಡು ಮುಂದೆ ಸಾಗಬೇಕು. ಆಗ ಯಶಸ್ಸು ಖಂಡಿತ ನಮ್ಮದಾಗುತ್ತದೆ ಎನ್ನುವುದಕ್ಕೆ ಸಾಕ್ಷಿ ಈ ನಟ. ಎಂಜಿನಿಯರ್‌ ಆಗಿದ್ದ ಇವರು ಪ್ರವೃತ್ತಿಯಾಗಿ ಗ್ರಾಫಿಕ್‌ ಡಿಸೈನಿಂಗ್ ವೃತ್ತಿಯನ್ನೂ ಆರಿಸಿಕೊಂಡಿದ್ದರು. ಈಗ ಕಿರುತೆರೆಯಲ್ಲಿ ಸ್ಟಾರ್ ನಟ. ಅವರೇ ಜೀ ಕನ್ನಡ ವಾಹಿನಿಯ ‘ಪಾರು’ ಧಾರಾವಾಹಿಯ ಆದಿ ಪಾತ್ರಧಾರಿ ಶರತ್‌ ಪದ್ಮನಾಭ್‌.

ಚಿಕ್ಕಮಗಳೂರು ಮೂಲದ ಶರತ್‌ ನಟನೆಯ ಕನಸು ಕಂಡವರಲ್ಲ. ಆಕಸ್ಮಿಕವಾಗಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡವರು. ಫೇಸ್‌ಬುಕ್‌ನಲ್ಲಿ ಇವರ ಫೋಟೊ ನೋಡಿದ್ದ ಸುವರ್ಣ ವಾಹಿನಿ ತಂಡವರು ಇವರಿಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ನೀಡಿದ್ದರು. ಕ್ರಿಕೆಟ್ ಪ್ರೇಮಿಯಾಗಿದ್ದ ಇವರು ಮೊದಲ ಬಾರಿ ನಟಿಸಿದ್ದು ದಿಲೀಪ್‌ರಾಜ್ ಅವರ ಪ್ರೊಡಕ್ಷನ್‌ನ ‘ಜಸ್ಟ್‌ ಮಾತ್‌ ಮಾತಲ್ಲಿ’ ಧಾರಾವಾಹಿಯಲ್ಲಿ. ನಂತರ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‍‘ಪುಟ್ಮಲ್ಲಿ’ ಧಾರಾವಾಹಿಯಲ್ಲೂ ನಟಿಸಿದ್ದರು. ಸದ್ಯ ಆದಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಶರತ್ ‘ಪ್ರಜಾಪ್ಲಸ್’ ಜೊತೆ ಮಾತನಾಡಿದ್ದಾರೆ.

ನಟನೆಯ ಆರಂಭದ ದಿನಗಳು...

‘ನಟನೆಯ ಗಂಧಗಾಳಿ ಗೊತ್ತಿಲ್ಲದೇ ಈ ಕ್ಷೇತ್ರಕ್ಕೆ ಬಂದವನು ನಾನು. ಧಾರಾವಾಹಿಯಲ್ಲಿ ನಟಿಸಲು ಆರಂಭಿಸುವ 15 ದಿನಗಳ ಮೊದಲು ನನಗೆ ನಟನೆಯ ಕುರಿತು ವರ್ಕ್‌ಶಾಪ್ ಮಾಡಿದ್ದರು. ಮೊದ ಮೊದಲು ಕ್ಯಾಮೆರಾ ಹೇಗೆ ಎದುರಿಸಬೇಕು, ಡೈಲಾಗ್ ಹೇಗೆ ಹೇಳಬೇಕು ಎಂಬುದು ಏನೂ ತಿಳಿದಿರಲಿಲ್ಲ. ಆದರೆ ಪ್ರತಿಯೊಂದನ್ನೂ ಆಳದಿಂದ ಕಲಿತು ಅದನ್ನು ರೂಢಿಸಿಕೊಂಡು ಇಂದು ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ನಾನು ಸಂಪೂರ್ಣವಾಗಿ ಎಲ್ಲವನ್ನೂ ಇಲ್ಲಿಗೆ ಬಂದ ಮೇಲೆ ಕಲಿತದ್ದು. ಈಗಲೂ ಕಲಿಯುತ್ತಲೇ ಇದ್ದೇನೆ. ಕಿರುತೆರೆಯಲ್ಲಿ ಕಲಿಯುವುದು ಸಾಕಷ್ಟಿದೆ.

ಪಾರು ಧಾರಾವಾಹಿ ಬಗ್ಗೆ..

‘ಪಾರು’ ನನಗೆ ತುಂಬಾನೇ ಹೆಸರು ತಂದುಕೊಟ್ಟ ಧಾರಾವಾಹಿ. ಈ ಧಾರಾವಾಹಿಯಲ್ಲಿ ಇಡೀ ತಂಡದ ಒಗ್ಗಟ್ಟು, ಶ್ರಮವಿದೆ. ಇದರಲ್ಲಿ ನನ್ನದು ಬ್ಯುಸಿನೆಸ್‌ ಮ್ಯಾನ್‌ ಪಾತ್ರ. ತಾಯಿಗೆ ಒಳ್ಳೆಯ ಮಗ, ತಮ್ಮನಿಗೆ ಸ್ನೇಹಿತನಂತಹ ಅಣ್ಣ, ಉತ್ತಮ ವ್ಯಕ್ತಿತ್ವ ಹೊಂದಿದವನು ಆದಿ. ನಾನು ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೆ. ಈ ಹಿಂದೆ ಎರಡು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದ ಅನುಭವವೂ ನನಗೆ ಸಹಾಯಮಾಡಿತ್ತು. ಅದರೊಂದಿಗೆ ನಮ್ಮ ನಿರ್ಮಾಪಕರಾದ ದಿಲೀಪ್‌ರಾಜ್‌ ಹಾಗೂ ನಿರ್ದೇಶಕರಾದ ಗುರುಪ್ರಸಾದ್ ಅವರು ಕೂಡ ಈ ಪಾತ್ರ ಇಷ್ಟು ಹಿಟ್ ಆಗಲು ಕಾರಣ. ಆದಿ ಪಾತ್ರವನ್ನು ಜನ ತುಂಬಾನೇ ಇಷ್ಟಪಟ್ಟಿದ್ದಾರೆ. ನನ್ನ ನಿಜಜೀವನಕ್ಕೂ ಆದಿ ಪಾತ್ರಕ್ಕೂ ತುಂಬಾನೇ ಹೋಲಿಕೆ ಇದೆ. ಒಟ್ಟಾರೆ ಈ ಪಾತ್ರ ನನ್ನ ವೃತ್ತಿಬದುಕಿಗೆ ತುಂಬಾನೇ ಯಶಸ್ಸು ತಂದುಕೊಟ್ಟಿದೆ.

ಸಿನಿಮಾ ಅವಕಾಶಗಳು...

ಮೊದಲನೇ ಧಾರಾವಾಹಿ ಮುಗಿದ ತಕ್ಷಣ ‘ನೀವು ಕರೆ ಮಾಡಿದ ಚಂದಾದಾರರು’ ಎಂಬ ಸಿನಿಮಾದಲ್ಲಿ ನಟಿಸಿದ್ದೆ. ಸಿನಿಮಾಗಳಿಂದ ಈಗಲೂ ಅವಕಾಶ ಬರುತ್ತಿದೆ. ಆದರೆ ಯಾವುದೇ ಕಥೆ ನನಗೆ ಇಷ್ಟವಾಗಿಲ್ಲ. ಸುಮ್ಮನೆ ಮಾಡಬೇಕು ಎಂಬ ಕಾರಣಕ್ಕೆ ಸಿನಿಮಾ ಮಾಡುವುದು ನನಗೆ ಇಷ್ಟವಿಲ್ಲ. ಧಾರಾವಾಹಿಯಲ್ಲಿ ಜನ ನನ್ನನ್ನು ಇಷ್ಟಪಟ್ಟಿದ್ದಾರೆ ಎಂದರೆ ಸಿನಿಮಾದಲ್ಲಿ ನನ್ನಿಂದ ಅದಕ್ಕೂ ಹೆಚ್ಚಿನದ್ದನ್ನು ನಿರೀಕ್ಷೆ ಮಾಡುತ್ತಿರುತ್ತಾರೆ. ಆ ಕಾರಣಕ್ಕೆ ಅವರಿಗೆ ಇಷ್ಟವಾಗುವ ರೀತಿ ಕೆಲಸ ಮಾಡಬೇಕು. ಹೀರೊ ಆಗಿ ಎನ್ನುವುದಕ್ಕಿಂತ ಒಂದು ಪಾತ್ರವಾಗಿ ಮಾಡಬೇಕು. ಅಂತಹ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT