ಕಲರ್ಸ್‌ ಸೂಪರ್‌ ತಿಂಗಳು: ಎರಡು ಹೊಸ ಧಾರಾವಾಹಿಗಳು!

7

ಕಲರ್ಸ್‌ ಸೂಪರ್‌ ತಿಂಗಳು: ಎರಡು ಹೊಸ ಧಾರಾವಾಹಿಗಳು!

Published:
Updated:
ರಾಜಾ ರಾಣಿ

‘ಜೂನ್‌ ತಿಂಗಳು, ಸೂಪರ್‌ ತಿಂಗಳು’ ಎನ್ನುವ ಘೋಷವಾಕ್ಯದ ಅಡಿ ಒಂದು ತಿಂಗಳ ಅವಧಿಯಲ್ಲಿ ಎಂಟು ಹೊಸ ಕಾರ್ಯಕ್ರಮಗಳನ್ನು ಆರಂಭಿಸುವುದಾಗಿ ಹೇಳಿರುವ ಕಲರ್ಸ್‌ ಸೂಪರ್‌ ವಾಹಿನಿಯು ಈಗಾಲೇ ಕೆಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಗಿದೆ. ಈಗ ಇನ್ನೆರಡು ಹೊಸ ಧಾರಾವಾಹಿಗಳು ಆರಂಭ ಆಗುತ್ತಿವೆ.

ಸೋಮವಾರದಿಂದ (ಜೂನ್‌ 25) ‘ರಾಜಾ ರಾಣಿ’ ಮತ್ತು ‘ಮಾಂಗಲ್ಯಂ ತಂತುನಾನೇನ’ ಎನ್ನುವ ಎರಡು ಧಾರಾವಾಹಿಗಳು ‘ಕಲರ್ಸ್‌ ಸೂಪರ್‌’ ತೆರೆಯ ಮೇಲೆ ಕಾಣಿಸಿಕೊಳ್ಳಲಿವೆ. ಈ ಎರಡೂ ಧಾರಾವಾಹಿಗಳು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ಏಳು ಗಂಟೆಯಿಂದ ಎಂಟು ಗಂಟೆಯ ನಡುವಿನ ಅವಧಿಯಲ್ಲಿ ಪ್ರಸಾರ ಆಗಲಿವೆ.

‘ರಾಜಾ ರಾಣಿ’ ಧಾರಾವಾಹಿಯನ್ನು ಎಂ. ಸುಬ್ರಹ್ಮಣ್ಯ ಅವರು ನಿರ್ಮಾಣ ಮಾಡಿದ್ದಾರೆ. ‘ರಾಧಾ ರಮಣ’ ಧಾರಾವಾಹಿ ನಿರ್ಮಾಪಕರೂ ಇವರೇ. ‘ರಾಜಾ ರಾಣಿ ಧಾರಾವಾಹಿಯ ಮುಖ್ಯ ಪಾತ್ರಧಾರಿಯ ಹೆಸರು ಚುಕ್ಕಿ. ಈಕೆಗೆ ತನ್ನ ಅಕ್ಕ ಗಗನಾ ಅಂದರೆ ಜೀವದ ಮೇಲಿರುವಷ್ಟು ಪ್ರೀತಿ. ಆದರೆ ಚುಕ್ಕಿಯಿಂದಾಗುವ ಎಡವಟ್ಟುಗಳಿಂದಾಗಿ ಗಗನಾಳಿಗೆ ಬರುವ ಮದುವೆ ಸಂಬಂಧಗಳು ಮುರಿದು ಬೀಳುತ್ತಿರುತ್ತವೆ. ಧಾರಾವಾಹಿಯ ಮುಖ್ಯ ಪಾತ್ರಧಾರಿ ಓಂಕಾರ್ ನಿವೃತ್ತ ಯೋಧ. ಕಟ್ಟುನಿಟ್ಟಿನ ಮನುಷ್ಯ ಓಂಕಾರ್ ಮತ್ತು ಎಡವಟ್ಟು ರಾಣಿ ಚುಕ್ಕಿ ಹೇಗೆ ಒಂದುಗೂಡುತ್ತಾರೆ ಎನ್ನುವುದು ಈ ಧಾರಾವಾಹಿಯ ಕಥಾಹಂದರ’ ಎಂದು ವಾಹಿನಿ ಹೇಳಿದೆ.

‘ಮಾಂಗಲ್ಯಂ ತಂತುನಾನೇನ’ ಧಾರಾವಾಹಿಯನ್ನು ರಘುಚರಣ್ ಅವರು ನಿರ್ದೇಶಿಸುತ್ತಿದ್ದಾರೆ. ಈ ಧಾರಾವಾಹಿಯ ಕಥಾನಾಯಕಿಯ ಹೆಸರು ಶ್ರಾವಣಿ. ಈಕೆಗೆ ಸಿದ್ಧಿವಿನಾಯಕ ಅಂದ್ರೆ ವಿಪರೀತ ಪ್ರೀತಿ, ಭಕ್ತಿ. ‘ಶ್ರಾವಣಿಯ ಬದುಕಿನಲ್ಲಿ ಎಲ್ಲವೂ ಅಂದುಕೊಂಡಂತೆಯೇ ಆಗುತ್ತದೆ. ಆದರೆ, ಮದುವೆ ಆಗುವ ಹುಡುಗನ ವಿಷಯದಲ್ಲೂ ಇದೇ ರೀತಿ ಆಗುತ್ತದೆಯೇ? ಕಂಕಣಬಲಕ್ಕಾಗಿ ಕಾಯುತ್ತಿರುವ ಶ್ರಾವಣಿಗೆ ತೇಜಸ್ವಿ ಹೇಗೆ ಸಿಗುತ್ತಾನೆ’ ಎನ್ನುವುದು ಈ ಧಾರಾವಾಹಿಯ ಮುಖ್ಯ ಅಂಶ.

‘ರಾಜಾ ರಾಣಿ ಧಾರಾವಾಹಿಯಲ್ಲಿ, ಉತ್ತರ-ದಕ್ಷಿಣ ಧ್ರುವಗಳಂತೆ ಇರುವ ಎರಡು ಜೀವಗಳು ಹೇಗೆ ಒಂದಾಗುತ್ತವೆ ಎನ್ನುವುದನ್ನು ಭಿನ್ನವಾಗಿ ತೋರಿಸಲಾಗುತ್ತದೆ. ಮಾಂಗಲ್ಯಂ ತಂತುನಾನೇನ ಧಾರಾವಾಹಿಯು ಮಾಂಗಲ್ಯದ ಮಹತ್ವ ಸಾರುತ್ತಾ, ಮದುವೆಯ ಪ್ರಾಮುಖ್ಯತೆ ತಿಳಿಸುತ್ತಾ ಸಾಗುವ ಕಥೆ ಹೊಂದಿದೆ’ ಎನ್ನುತ್ತಾರೆ ‘ಕಲರ್ಸ್ ಸೂಪರ್’ ವಾಹಿನಿಯ ಪ್ರೋಗ್ರಾಮಿಂಗ್ ಹೆಡ್ ವೈಷ್ಣವಿ ಹಲಗ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !