ಉಘೇ... ಉಘೇ... ಮಾದೇಶ್ವರ

7

ಉಘೇ... ಉಘೇ... ಮಾದೇಶ್ವರ

Published:
Updated:
Deccan Herald

ಚಾಮರಾಜನಗರ ಜಿಲ್ಲೆ ಮತ್ತು ಅದರ ಸುತ್ತಮುತ್ತ ‘ಮಲೆ ಮಾದೇಶ್ವರ ಕಾವ್ಯ’ ಜನರ ಬಾಯಲ್ಲಿ ಸದಾ ಇರುವಂಥದ್ದು. ಈ ಕಾವ್ಯ ಆಧರಿಸಿ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ರೂಪುಗೊಂಡಿದೆ. ಇದು ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಹೊಸದೊಂದು ಪ್ರಯೋಗ. ಈ ಧಾರಾವಾಹಿಯು ಶನಿವಾರದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಮಹಾಭಾರತ ಅಥವಾ ರಾಮಾಯಣದ ಕಥೆ ಪಠ್ಯದ ರೂಪದಲ್ಲಿ ಇದೆ. ಹಾಗಾಗಿ, ಅವುಗಳನ್ನು ಚಿತ್ರಕಥೆಯ ರೂಪಕ್ಕೆ ತರುವುದು ಅಷ್ಟೇನೂ ಕಷ್ಟದ ಕೆಲಸ ಅಲ್ಲ. ಆದರೆ, ಜಾನಪದ ಕಾವ್ಯವನ್ನು ಧಾರಾವಾಹಿ ಆಗಿಸುವುದು ಸವಾಲು. ಅದನ್ನು ಕೈಗೆತ್ತಿಕೊಂಡವರು ಕೆ. ಮಹೇಶ್ ಸುಖಧರೆ.

ಮಹೇಶ್ ಅವರು ಧಾರಾವಾಹಿ ನಿರ್ದೇಶನಕ್ಕೆ ಮುಂದಾಗಿರುವುದು ಇದೇ ಮೊದಲು. ‘ಮೊದಲ ಬಾರಿಯೇ ಇಂಥ ಧಾರಾವಾಹಿ ಮಾಡುತ್ತಿರುವುದು ಸಂತಸ ತಂದಿದೆ. ಇದೊಂದು ಸವಾಲೇ ಸರಿ’ ಎಂದು ಅವರು ಹೇಳುತ್ತಾರೆ. ‘ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ನನಗೆ ಅಪಘಾತ ಆಗಿತ್ತು. ಆಗ ನನಗೆ ಇನ್ನಿಬ್ಬರು ಕೊಟ್ಟಿದ್ದ, ಡಾ.ಪಿ.ಕೆ. ರಾಜಶೇಖರ ಬರೆದ ಜನಪದ ಮಹಾಕಾವ್ಯ ಕೃತಿ ನನ್ನನ್ನು ಕಾಡಿತ್ತು. ಅದೇ ನನ್ನನ್ನು ಇಂದು ಇಲ್ಲಿಗೆ ತಂದು ನಿಲ್ಲಿಸಿದೆ’ ಎನ್ನುತ್ತಾರೆ ಮಹೇಶ್.

‘ಇಂದು ಕನ್ನಡದಲ್ಲಿ ಪೌರಾಣಿಕ ಧಾರವಾಹಿ ಅಂದರೆ ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡುವುದು ಎಂಬಂತೆ ಆಗಿದೆ. ಆದರೆ, ಎಲ್ಲವೂ ಆ ರೀತಿಯಲ್ಲೇ ಆಗುತ್ತಿರಬಾರದು ಎಂಬ ಕಾರಣಕ್ಕೆ ಈ ಧಾರಾವಾಹಿ ಮಾಡುವ ಆಲೋಚನೆ ಹೊಳೆಯಿತು. ಮಾದೇಶ್ವರ ಕಾವ್ಯ ಇಂದಿಗೂ ಪ್ರಸ್ತುತ. ಜತೆಗೆ ಇದರಲ್ಲಿ ಸೌಂದರ್ಯವೂ ಇದೆ’ ಎಂದು ಕಾರಣ ವಿವರಿಸುತ್ತಾರೆ ಮಹೇಶ್. ಧಾರಾವಾಹಿಯ ಹಿಂದಿನ ತಯಾರಿ ಹಾಗೂ ಅದರ ಸವಾಲಿನ ಕುರಿತು ಹೇಳುವಾಗ, ‘ಈ ಕಥೆಗೆ ಆದಿ–ಅಂತ್ಯ ಇಲ್ಲ. ಒಬ್ಬೊಬ್ಬ ಹಾಡುಗಾರನೂ ಅಲ್ಲಿಯ ಪ್ರದೇಶ, ಅಲ್ಲಿನ ನಂಬಿಕೆಯ ಆಧಾರದಲ್ಲಿ ಹಾಡುತ್ತಾನೆ. ಇಡಿ ಕಥನವನ್ನು ಒಂದು ಸ್ಟೋರಿ ಲೈನ್‍ಗೆ ತರುವುದು, ಅದಕ್ಕೆ ಚಿತ್ರಕಥೆ, ಸಂಭಾಷಣೆ ಬರೆಯುವುದು ಸವಾಲಿನ ಕೆಲಸ. ಮಾದೇಶ್ವರ ಎಲ್ಲಿ ಹುಟ್ಟಿದ್ದು, ಎಲ್ಲಿ ಐಕ್ಯರಾಗಿದ್ದು ಎಂದು ಕೇಳಿದಾಗ, ಒಬ್ಬೊಬ್ಬ ಹಾಡುಗಾರ ಒಂದೊಂದು ರೀತಿಯ ಕಥೆ ಹೇಳಿದ’ ಎಂಬ ಮಾತು ಅವರಿಂದ ಬಂತು.

‘ಇವರೆಲ್ಲರ ಹಾಡಿನಲ್ಲಿ ಕೆಲವು ಸಮಾನ ಅಂಶಗಳೂ ಇದ್ದವು. ಆ ಸಮಾನ ಅಂಶಗಳನ್ನೇ ಇಟ್ಟುಕೊಂಡು ಕಥೆಯ ಎಳೆಯನ್ನು ರೂಪಿಸಲಾಯಿತು. ನನ್ನ ಅಧ್ಯಯನ ಫಲವಾಗಿ ನನ್ನಲ್ಲೇ ಮೂಡಿದ ಮಾದೇಶ್ವರ ಇವರು’ ಎಂದರು ಮಹೇಶ್.

ಹಳ್ಳಿಯ ಕಥೆ ಎಂದು ಶುರು ಆಗುತ್ತಿದ್ದ ಧಾರಾವಾಹಿಯ ಕಥೆಗಳು ನಂತರ ನಗರ ಕೇಂದ್ರಿತವಾಗುತ್ತವೆ. ನಗರದ ಮಹಿಳೆಯರನ್ನೇ ಹೆಚ್ಚು ಟಾರ್ಗೆಟ್ ಮಾಡಿ ಕಥೆ ಬರೆಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪಕ್ಕಾ ಗ್ರಾಮೀಣ ಭಾಗದ, ಜಾನಪದ ಸೊಗಡಿನ ಕಥೆಯನ್ನು ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಧಾರಾವಾಹಿ ಪ್ರಿಯರಲ್ಲಿ ಇರಬಹುದು. ಇದೇ ಪ್ರಶ್ನೆಯನ್ನು ಮಹೇಶ್ ಮುಂದಿಟ್ಟಾಗ, ‘ನನ್ನ ಉತ್ತರ ಇಷ್ಟೇ. ಜನರ ಮನಮುಟ್ಟುವ ಕಥೆ ಇರಬೇಕು. ನಗರ ಪ್ರದೇಶದಲ್ಲಿ ಇರುವ ಶೇಕಡ 90ರಷ್ಟು ಮಹಿಳೆಯರು ಗ್ರಾಮೀಣ ಭಾಗಗಳಿಂದ ಬಂದವರೇ ಆಗಿದ್ದಾರೆ. ಜತೆಗೆ, ಈ ಕಥನ ಕಾವ್ಯದಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಹಾಗಾಗಿ, ಮಹಿಳೆಯರು ಮಾತ್ರವೇ ಅಲ್ಲದೆ ಇದು ಎಲ್ಲರಿಗೂ ಇಷ್ಟವಾಗುತ್ತದೆ’ ಎಂದರು.

‘ಮಹದೇಶ್ವರನ ಪಾತ್ರ ನಿಭಾಯಿಸುವ ವ್ಯಕ್ತಿಗಾಗಿ ಬೇರೆ ಬೇರೆ ಕಡೆ ಆಡಿಷನ್ ಮಾಡಿದೆವು. ಹರ ಹರ ಮಹಾದೇವ, ಶನಿ ಅಂತಹ ಧಾರಾವಾಹಿಗಳು ಈಗಾಗಲೇ ಜನರ ಮನಸ್ಸಿನಲ್ಲಿ ಇವೆ. ಗುಣಮಟ್ಟದಲ್ಲಿ ಬೇರೆ ಧಾರಾವಾಹಿಗಳನ್ನು ಮೀರಿ ನಾವು ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಶತಮಾನಗಳಷ್ಟು ಹಿಂದಿನ ಕಾಲದ ಹಳ್ಳಿಗಳನ್ನು ಪುನಃ ಸೃಷ್ಟಿಸಬೇಕು, ವಸ್ತ್ರಾಲಂಕಾರ ಅದೇ ರೀತಿ ಇರಬೇಕು. ಇವೆಲ್ಲ ಕಷ್ಟಕರವಾಗಿಯೇ ಇದ್ದವು. ಬೆಂಗಳೂರು ಸಮೀಪದ ಕನಕಪುರ ರಸ್ತೆಯಲ್ಲಿ ಹಳ್ಳಿಯ ಸೆಟ್ ಹಾಕಿದ್ದೇವೆ’ ಎಂದು ಪಾತ್ರದ ಆಯ್ಕೆ ಹಾಗೂ ಶೂಟಿಂಗ್ ಕುರಿತು ಮಾಹಿತಿ ನೀಡಿದರು.

‘ಕಾವ್ಯದ ಮೇಲೆ ಇರುವ ಪ್ರೀತಿಯಿಂದ ಧಾರಾವಾಹಿ ಮಾಡಲಾಗಿದೇ ವಿನಾ ಹಣಗಳಿಕೆ ಅಷ್ಟೊಂದು ಮುಖ್ಯ ಅಲ್ಲ. ಇದು ಅಪ್ಪಟ ಕನ್ನಡ ನೆಲದ ಕಥೆ’ ಎನ್ನುತ್ತಾರೆ ಮಹೇಶ್.

ತಾರಾಗಣದಲ್ಲಿ ಯಾರಿದ್ದಾರೆ?
ವಿನಯ್ ಗೌಡ, ಮಾಸ್ಟರ್ ಅಮೋಘ, ಆರ್ಯನ್ ರಾಜ್ ಹಾಗೂ ಇತರರು.
ಸಂಶೋಧನೆ: ಡಾ. ಪಿ.ಕೆ. ರಾಜಶೇಖರ, ಮಹೇಶ್ ಹರವೆ, ಬಸವರಾಜ ಸೂಳೇರಿಪಾಳ್ಯ, ನಾಗಮಂಗಲ ಕೃಷ್ಣಮೂರ್ತಿ.

***
ಈ ಧಾರಾವಾಹಿ ‘ಜೀ ಕನ್ನಡ’ ತನ್ನ ವೀಕ್ಷಕರಿಗೆ ಕೊಡುವ ಬಹುದೊಡ್ಡ ಕೊಡುಗೆ. ಕನ್ನಡ ಜನಪದ ಕಾವ್ಯವೊಂದನ್ನು ಮೊಟ್ಟಮೊದಲ ಸಲ ತೆರೆಯ ಮೇಲೆ ತರುವ ಪ್ರಯತ್ನ ಇಲ್ಲಿ ನಡೆದಿದೆ.
ರಾಘವೇಂದ್ರ ಹುಣಸೂರು, ಬ್ಯುಸಿನೆಸ್‌ ಹೆಡ್‌, ಜೀ ಕನ್ನಡ ವಾಹಿನಿ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !