ಬುಧವಾರ, ಜೂನ್ 29, 2022
25 °C

ನೀರಿನೊಳಗೆ ಹೊಡೆದಾಡುತ್ತಾಳಂತೆ ‘ವಿಜಯದಶಮಿ’ಯ ನಾಯಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ರಾಘವೇಂದ್ರ ರಾಜ್‌ಕುಮಾರ್‌ ದಂಪತಿ ಹೊಸ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ‘ವಿಜಯದಶಮಿ’ ಧಾರಾವಾಹಿಯ ಚಿತ್ರೀಕರಣಕ್ಕೆ ಬೆಂಗಳೂರಿನ ಸ್ಯಾಂಕಿ ಆಂಜನೇಯ ದೇವಸ್ಥಾನದಲ್ಲಿ ಬುಧವಾರ ಮುಹೂರ್ತ ನೆರವೇರಿತು. 

ಧಾರಾವಾಹಿಯನ್ನು ಶಶಿಧರ ಎಸ್‌. ಕುಂದಾಪುರ ನಿರ್ದೇಶಿಸುತ್ತಿದ್ದಾರೆ. 

ವಿಜಯದಶಮಿಯಲ್ಲಿ ಏನಿದೆ?

‘ವಿಜಯ– ದಶಮಿ ಎರಡು ಪಾತ್ರಗಳ ಹೆಸರು. ವಿಹಾನ್‌ ನಾಯಕ. ವೈಭವಿ ಈಶ್ವರ್‌ ನಾಯಕಿ. ಧಾರಾವಾಹಿಯ ಕಥೆ ವಾರಾಣಸಿಯಿಂದ ಆರಂಭವಾಗುತ್ತದೆ. ಬಳಿಕ ಬೆಂಗಳೂರು, ತೀರ್ಥಹಳ್ಳಿ, ಶಿವಮೊಗ್ಗ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಸಾಕಷ್ಟು ಸಾಹಸ ದೃಶ್ಯಗಳು ಈ ಧಾರಾವಾಹಿಯಲ್ಲಿ ಇರಲಿವೆ. ಇಲ್ಲಿ ನಾಯಕಿಯೂ ಹೊಡೆದಾಡುವ ದೃಶ್ಯವಿದೆ. ನೀರಿನೊಳಗೆ ಹೊಡೆದಾಡುವ ದೃಶ್ಯದೊಂದಿಗೆ ನಾಯಕಿಯ ಪ್ರವೇಶವಾಗುತ್ತದೆ’ ಎಂದರು ನಿರ್ದೇಶಕ ಶಶಿಧರ. 

‘ಧಾರಾವಾಹಿಯಲ್ಲಿ ಅದ್ಧೂರಿತನವಿದೆ. ಪಾತ್ರದಿಂದ ಪಾತ್ರಕ್ಕೆ ವೇಷಭೂಷಣಗಳಲ್ಲಿ ಸಾಕಷ್ಟು ವ್ಯತ್ಯಾಸ ಕಾಣಬಹುದು. ಒಳ್ಳೆಯ ಕಂಟೆಂಟ್‌ ಇದೆ. ವೀಕ್ಷಕರು ಈ ಧಾರಾವಾಹಿಯನ್ನು ಸ್ವೀಕರಿಸುವ ಭರವಸೆ ಇದೆ’ ಎಂದು ಅವರು ಆಶಯ ವ್ಯಕ್ತಪಡಿಸಿದರು. 

ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ‘ಧಾರಾವಾಹಿ ನಿರ್ಮಾಣ ಬರೀ ವ್ಯಾಪಾರ ಅಲ್ಲ. ಇದು ಒಂದು ವಿಚಾರ ಅಷ್ಟೇ.  ಮೊದಲಿನಿಂದಲೂ ನಾವು ಒಂದು ಪರಂಪರೆಯನ್ನು ಹೊಂದಿದ್ದೇವೆ. ನಾವು ಅಭಿನಯಿಸುವುದಷ್ಟೇ ಅಲ್ಲ. ಇನ್ನೂ ನೂರಾರು ಜನರಿಗೆ ಕೆಲಸ ಕೊಡುವ ಅವಕಾಶಗಳನ್ನು ಸೃಷ್ಟಿಸಬೇಕು. ಇದನ್ನೇ ಅಪ್ಪಾಜಿ (ಡಾ.ರಾಜ್‌ಕುಮಾರ್‌) ಹೇಳುತ್ತಿದ್ದರು. ಆ ಆಶಯವನ್ನು ಮುಂದುವರಿಸಿದ್ದೇವೆ. ಇಲ್ಲಿ ಧಾರಾವಾಹಿ ತಂಡ ಒಂದು ಕುಟುಂಬವಾಗಿ ಬೆಳೆಯುತ್ತದೆ. ಇಲ್ಲಿಯೂ ನೂರಾರು ಜನ ಕೆಲಸ ಮಾಡುತ್ತಾರೆ. ಎಲ್ಲರಿಗೂ ಒಂದು ಅವಕಾಶ ಸಿಗುತ್ತದೆ. ಮುಂದೆ ಇದೇ ನಮ್ಮನ್ನು ಕರೆದುಕೊಂಡು ಹೋಗುತ್ತದೆ’ ಎಂದು ಹೇಳಿದರು. 

‘ಜೂನ್‌ ಕೊನೆಯ ವಾರದಲ್ಲಿ ಈ ಧಾರಾವಾಹಿ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ’ ಎಂದು ನಿರ್ದೇಶಕ ಶಶಿಧರ ಹೇಳಿದರು. 

ಸಿರಿ ಕನ್ನಡದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ರಾಜೇಶ್‌ ರಾಜಘಟ್ಟ, ರಾಘವೇಂದ್ರ ರಾಜ್‌ಕುಮಾರ್‌ ಅವರ ಪತ್ನಿ ಮಂಗಳಾ ರಾಘವೇಂದ್ರ ರಾಜ್‌ಕುಮಾರ್‌, ನಟಿಯರಾದ ಅಂಬುಜಾ, ಕೃತಿಕಾ ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು