ಮತ್ತೆ ಬಂದಿದೆ ‘ಯಾರಿಗುಂಟು ಯಾರಿಗಿಲ್ಲ’

7

ಮತ್ತೆ ಬಂದಿದೆ ‘ಯಾರಿಗುಂಟು ಯಾರಿಗಿಲ್ಲ’

Published:
Updated:

2006–07ರಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಜನರಿಗಾಗಿ ಆರಂಭವಾದ ರಿಯಾಲಿಟಿ ಗೇಮ್‌ ಶೋ ‘ಯಾರಿಗುಂಟು ಯಾರಿಗಿಲ್ಲ’. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮವನ್ನು ನಿರೂಪಕಿಯರಾದ ವರ್ಷಾ ಹಾಗೂ ಶ್ವೇತಾ ಚೆಂಗಪ್ಪ ನಡೆಸಿಕೊಡುತ್ತಿದ್ದರು. ಅಂದು ಜನಮೆಚ್ಚುಗೆ ಗಳಿಸಿದ್ದ ಈ ಶೋ ಇಂದು ಸಂಪೂರ್ಣ ಹೊಸತನದೊಂದಿಗೆ ಮತ್ತೆ ಪ್ರಸಾರವಾಗುತ್ತಿದೆ.

ಇಬ್ಬರು ಪುರುಷರು ಕಾರ್ಯಕ್ರಮ ನಿರೂಪಣೆ ಮಾಡುತ್ತಿರುವುದು ಈ ಸೀಸನ್‌ನ ವಿಶೇಷ. ಕಾಮಿಡಿ ಕಿಲಾಡಿಗಳು ಸೀಸನ್ 2ರ ರನ್ನರ್ ಅಪ್‌ಗಳಾದ ಸೂರಜ್ ಹಾಗೂ ಅಪ್ಪಣ್ಣ ಇದರ ನಿರೂಪಕರು.

ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6.30 ರಿಂದ 7.30ರವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮದ 4 ಕಂತುಗಳು ಈಗಾಗಲೇ ಜನರೆದುರು ಬಂದಿವೆ. ‘ರಿಯಾಲಿಟಿ ಶೋಗಳಲ್ಲಿ ಸೆಲೆಬ್ರಿಟಿಗಳು ಹಾಗೂ ಟ್ಯಾಲೆಂಟ್ ಇರುವವರಿಗೆ ಮಾತ್ರ ಭಾಗವಹಿಸುವ ಅವಕಾಶ ಸಿಗುತ್ತದೆ. ಸಾಮಾನ್ಯ ಜನರಿಗೆ ಟಿ.ವಿಯಲ್ಲಿ ಕಾಣಿಸಿಕೊಳ್ಳುವ ಆಸೆ ಇದ್ದರೂ ಅವಕಾಶವಿರುವುದಿಲ್ಲ.  ಆದರೆ ಈ ಶೋ ನಡೆಸುತ್ತಿರುವುದೇ ಸಾಮಾನ್ಯ ಜನರಿಗಾಗಿ. ಇದರಲ್ಲಿ ಆಟಗಳು, ಉಡುಗೊರೆಗಳು, ಹಾಸ್ಯ, ನಗು ಎಲ್ಲವೂ ಇವೆ...’ ಎನ್ನುತ್ತಾರೆ ನಿರೂಪಕರಲ್ಲೊಬ್ಬರಾದ ಅಪ್ಪಣ್ಣ.

ಇದು ಮಹಿಳಾ ಪ್ರಧಾನ ಶೋ ಆಗಿದ್ದು, ಇಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಮಖ್ಯ ನೀಡಲಾಗಿದೆ. ಮನರಂಜನೆಯೇ ಈ ಶೋನ ಜೀವಾಳವಾದರೂ ಇಲ್ಲಿ ಬುದ್ಧಿವಂತಿಕೆ ಹಾಗೂ ಅದೃಷ್ಟ ಕೂಡ ಕೆಲಸ ಮಾಡುತ್ತದೆ ಎನ್ನುತ್ತಾರೆ ಅವರು. ‘ಇದರಲ್ಲಿ ನಾವೇ ಹೊಸ ಹೊಸ ಆಟಗಳನ್ನು ಕಂಡುಹಿಡಿದು, ಅದನ್ನು ನಾವೇ ಆಡಿ, ಈ ಆಟ ಹಿಟ್ ಆಗುತ್ತದೋ ಇಲ್ಲವೋ, ಸ್ಪರ್ಧಿಗಳಿಗೆ ಇದರಿಂದ ತೊಂದರೆಗಳಾಗುವ ಸಂಭವ ಇದೆಯೇ ಎಂಬುವುದನ್ನೆಲ್ಲಾ ಪರಿಶೀಲಿಸುತ್ತೇವೆ. ಆಟವನ್ನು ಮೊದಲು ನಾವೇ ಆಡಿ, ಆಮೇಲೆ ಅದನ್ನು ಸ್ಪರ್ಧಿಗಳ ಕೈಯಿಂದ ಆಡಿಸುತ್ತೇವೆ. ಈ ಗೇಮ್ ಶೋನಲ್ಲಿ ಆಡಲು ಬಂದವರಿಗೂ, ಆಡಿಸುವವರಿಗೂ ಮನರಂಜನೆ ಸಿಗಬೇಕು ಎಂಬುದು ನಮ್ಮ ಧ್ಯೇಯ’ ಎನ್ನುತ್ತಾರೆ ಇನ್ನೊಬ್ಬ ನಿರೂಪಕ ಸೂರಜ್‌.

ಸಾಮಾನ್ಯವಾಗಿ ರಿಯಾಲಿಟಿ ಶೋಗಳ ನಿರೂಪಣೆಯ ಕೆಲಸವನ್ನು ನಿರೂಪಣಾ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದವರೇ ಮಾಡುತ್ತಾರೆ. ಆದರೆ ಈ ರಿಯಾಲಿಟಿ ಶೋದಲ್ಲಿ ಅನುಭವವೇ ಇಲ್ಲದ ನಿರೂಪಕರು ಕಾರ್ಯಕ್ರಮ ನಿರ್ವಹಿಸುತ್ತಿರುವುದು ವಿಶೇಷ. ‘ನಿರೂಪಣೆ ಎಂದರೆ ಹೀಗೆ ಇರಬೇಕು, ಹಾಗೇ ಇರಬೇಕು ಎಂಬುದೆಲ್ಲಾ ಇದೆ. ಆದರೆ ಇಲ್ಲಿ ಹಾಗಿಲ್ಲ. ನಾವು ಸಾಮಾನ್ಯ ಜನರ ಜೊತೆ ಸರಳವಾಗಿ, ಸಜ್ಜನಿಕೆಯನ್ನು ಬಿಟ್ಟುಕೊಡದೆ ಬೆರೆಯಬೇಕು. ಜನರಿಗೆ ತಾವು ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದೇವೆ ಎಂಬ ಭಾವನೆ ಬರಬಾರದು. ಅವರು ನಮ್ಮೊಂದಿಗೆ ಬೆರೆಯುವಂತೆ ಆಗಬೇಕು ಎಂಬುದು ಕಾರ್ಯಕ್ರಮದ ಆಯೋಜಕರ ಅಭಿಲಾಷೆ. ಅದನ್ನು ಈಡೇರಿಸುವ ಹೊಣೆ ನಮ್ಮ ಮೇಲಿದೆ. ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅಪ್ಪಣ್ಣ.

ಜೀವಂತ ಹಾವು, ಇಲಿ, ಮೊಲದಂತಹ ಪ್ರಾಣಿಗಳನ್ನು ಮುಟ್ಟಿ ನೋಡಿ ಆಡುವ ಆಟಗಳು ಇದರಲ್ಲಿವೆಯಂತೆ. ಆ ಆಟ ಆಡಿಸುವಾಗ ಸ್ಪರ್ಧಿಗಳಿಗಿಂತ ಹೆಚ್ಚು ನಿರೂಪಕರೇ ಭಯ ಪಟ್ಟಿದ್ದೂ ಇದೆಯಂತೆ. ದೈಹಿಕ ಶ್ರಮ ನೀಡುವ ಆಟಗಳ ಜೊತೆಗೆ ಕವಿತೆಗಳು, ಕವಿಗಳು ಹಾಗೂ ಹಾಡುಗಳನ್ನು ಪರಿಚಯಿಸುವುದನ್ನು ಶೋನಲ್ಲಿ ಮಾಡಲಾಗುತ್ತದೆ. ಆ ಮೂಲಕ ಕಲಿಕೆಯ ಜೊತೆಗೆ ಸಾಮಾಜಿಕ ಸಂದೇಶ ಸಾರುವ ಕೆಲಸವನ್ನೂ ಮಾಡುತ್ತಿದೆ ಈ ಶೋ.

ಸದ್ಯ ಕಾರ್ಯಕ್ರಮದ ಪ್ರಮೋಶನ್‌ಗಾಗಿ ಸೆಲೆಬ್ರೆಟಿಗಳ ಜೊತೆ ಎಂಟರಿಂದ ಹತ್ತು ಎಪಿಸೋಡ್‌ಗಳನ್ನು ಚಿತ್ರೀಕರಿಸಲಾಗಿದೆ. ಮುಂದೆ ಬರುವ ಶೋಗಳಲ್ಲಿ ಸಾಮಾನ್ಯ ಜನರಿಗೆ ಭಾಗವಹಿಸುವ ಅವಕಾಶ ನೀಡಲಾಗುತ್ತದೆ. ಅಂದಹಾಗೆ, ಇದು ಈಗ ಪ್ರಸಾರ ಆಗುತ್ತಿರುವುದು ಕೂಡ ಜೀ ಕನ್ನಡ ವಾಹಿನಿಯಲ್ಲೇ.

ನಿರೂಪಕನಾಗಿ ತಮ್ಮ ಅನುಭವದ ಬಗ್ಗೆ ಹೇಳುತ್ತಾ ಅಪ್ಪಣ್ಣ ‘ನನಗೆ ನಟಿಸುವುದು ಸುಲಭ ಎನ್ನಿಸುತ್ತದೆ. ನೀರು ಕುಡಿದಷ್ಟು ಲೀಲಾಜಾಲವಾಗಿ ನಟಿಸುತ್ತೇನೆ. ಕಾರಣ ಅಲ್ಲಿ ಒಂದಷ್ಟು ಡೈಲಾಗ್‌ಗಳು ಹಾಗೂ ಒಂದು ಸನ್ನಿವೇಶ ಇರುತ್ತದೆ. ಅದನ್ನು ಅಭ್ಯಾಸ ಮಾಡಿ ನಟಿಸಿದರೆ ಆಯ್ತ. ಆದರೆ, ನಿರೂಪಣೆ ಹಾಗಲ್ಲ. ಇದು ಸುಲಭವೂ ಅಲ್ಲ. ಕಾರ್ಯಕ್ರಮದ ಆಯೋಜಕರು ಹಾಗೆ ಮಾಡಿ, ಹೀಗೆ ಮಾಡಿ, ಹೀಗೆ ಹೇಳಿ, ಕಾರ್ಯಕ್ರಮವನ್ನು ಈ ರೀತಿಯಾಗಿ ತೆಗೆದುಕೊಂಡು ಹೋಗಿ ಎಂದು ಹಿಂದಿನಿಂದ ಹೇಳುತ್ತಲೇ ಇರುತ್ತಾರೆ. ಒಂದೇ ಸಮಯದಲ್ಲಿ ಎರಡು ಯೋಚನೆಗಳು ತಲೆಯಲ್ಲಿ ಓಡುತ್ತಿರಬೇಕು. ಒಂದು ಕಾರ್ಯಕ್ರಮ ನಿರೂಪಣೆ,  ಇನ್ನೊಂದು ಆಯೋಜಕರ ಮಾತು ಅದರ ಜೊತೆಗೆ ಭಾಷೆಯ ಮೇಲೆ ಹಿಡಿತ ಇರಿಸಿಕೊಂಡು ಹಾಸ್ಯಮಯವಾಗಿ ಕಾರ್ಯಕ್ರಮ ನಡೆಸಿಕೊಂಡು ಹೋಗುವುದು ನಿಜಕ್ಕೂ ಸವಾಲು’ ಎಂದು ಅನುಭವದ ಮಾತನ್ನು ಹೇಳುತ್ತಾ ಮಾತು ಮುಗಿಸಿದರು ಅಪ್ಪಣ್ಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !