ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನನಷ್ಟ ಮೊಕದ್ದಮೆ ದಾಖಲಿಸುವುದು ಖಚಿತ’

Last Updated 3 ಫೆಬ್ರುವರಿ 2018, 6:31 IST
ಅಕ್ಷರ ಗಾತ್ರ

ಮೂಡಲಗಿ: ‘ಮೂಡಲಗಿ ತಾಲ್ಲೂಕು ಹೋರಾಟದ ವೇದಿಕೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡವರ ಮೇಲೆ ಮಾತ್ರ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿರುವೆನೇ ಹೊರತು ಪ್ರಾಮಾಣಿಕ ಹೋರಾಟಗಾರರ ಮೇಲೆ ಅಲ್ಲ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ.

ತಾಲ್ಲೂಕು ಹೋರಾಟದ ಕೆಲವರು ನೀಡಿರುವ ಹೇಳಿಕೆಗೆ ಪ್ರತ್ಯುತ್ತರವನ್ನು ನೀಡಿರುವ ಅವರು ತಾಲ್ಲೂಕು ಹೋರಾಟದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ. ಆದರೆ ಕೆಲವರು ನನ್ನನ್ನೇ ಕೆಟ್ಟ ಶಬ್ದಗಳಿಂದ ನಿಂದಿಸಿರುವ ಆಡಿಯೋ ಮತ್ತು ವಿಡಿಯೋ ದಾಖಲೆಗಳು ನನ್ನ ಬಳಿ ಇವೆ. ಅವುಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸುವೆನು. 34 ದಿನಗಳ ಹೋರಾಟದಲ್ಲಿ ಯೋಗ್ಯವಲ್ಲದ ಪದಗಳಿಂದ ನನ್ನನ್ನು ನಿಂದಿಸಿ, ತೇಜೋವಧೆಗೆ ಕಾರಣರಾದ ವ್ಯಕ್ತಿಗಳನ್ನು ಎಂದಿಗೂ ಬಿಡುವದಿಲ್ಲ, ಅವರ ಮೇಲೆ ಕಾನೂನಿನ ಮೂಲಕ ಉತ್ತರ ನೀಡಲು ವಕೀಲರ ಮೂಲಕ ನ್ಯಾಯಾಲಯದಿಂದ ನೋಟಿಸ್‌ ಜಾರಿಗೊಳಿಸುವೆನು. ಅವರು ಸಾಮರ್ಥ್ಯವಿದ್ದರೆ ಪ್ರಕರಣ ಎದುರಿಸಲಿ ಎಂದು ಸವಾಲೆಸೆದಿದ್ದಾರೆ.

ಜನರನ್ನು ಹೆದರಿಸುವ ದೃಷ್ಟಿಯಿಂದ ಮೊಕದ್ದಮೆ ಹೂಡುತ್ತಿಲ್ಲ. ನನ್ನ ಮಾನಹಾನಿಗಾಗಿ ಮೊಕದ್ದಮೆ ಮಾಡುತ್ತಿದ್ದು, ಈ ಉದ್ದೇಶಕ್ಕಾಗಿ 8 ಜನರ ಮೇಲೆ ತಲಾ ₹ 3,57,125ರಂತೆ ಒಟ್ಟು ₹ 28.57 ಲಕ್ಷ ಹಣವನ್ನು ನ್ಯಾಯಾಲಯಕ್ಕೆ ಸಂದಾಯ ಮಾಡಿ ₹ 24 ಕೋಟಿ ಹಣ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತಿರುವೆನು. ಇದರಲ್ಲಿ ನಾನು ಖಂಡಿತ ಗೆಲ್ಲುತ್ತೇನೆ. ಕ್ಷುಲ್ಲಕವಾಗಿ ಮಾತನಾಡುವವರಿಗೆ ಒಬ್ಬರ ಮನಸ್ಸನ್ನು ನೋಯಿಸುವವರಿಗೆ ಕಾನೂನು ಬಗ್ಗೆ ಅರಿವು ಮೂಡಬೇಕು ಎಂದು ಹೇಳಿದ್ದಾರೆ.

ಭಯ ನನಗಲ್ಲ: ಬರುವ ಚುನಾವಣೆಯಲ್ಲಿ ಸೋಲುವ ಭೀತಿ ನನಗಿಲ್ಲ. ಸೋಲು ನನ್ನ ದಿನಚರಿಯಲ್ಲೇ ಇಲ್ಲ. ಜನರ ಆಶೀರ್ವಾದ ನನ್ನ ಮೇಲೆ ಇರುವಾಗ ಜಯ ನನ್ನದೇ ಆಗುವುದು. ವಿರೋಧಿಗಳಿಗೆ ಸೋಲಿನ ಹತಾಶೆ ಇರುವುದರಿಂದ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT