ಶನಿವಾರ, ಜೂನ್ 6, 2020
27 °C

ಪೂರ್ಣ ಪ್ರಮಾಣದ ಮನರಂಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾದೇವಿ’ ಧಾರಾವಾಹಿ ಹೊಸ ರೂಪ ಪಡೆದುಕೊಂಡಿದೆ. 900 ಸಂಚಿಕೆಗಳನ್ನು ಪೂರ್ಣಗೊಳಿಸಿದ್ದ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಹಿರಣ್ಮಯಿಯ ಪಾತ್ರಕ್ಕೆ 15ವರ್ಷ ತುಂಬಿದೆ. ದೊಡ್ಡವಳಾದ ಹಿರಣ್ಮಯಿಯ ಪಾತ್ರದಲ್ಲಿ ನಟಿ ಗಗನಾ ಕಾಣಿಸಿಕೊಂಡಿದ್ದಾರೆ. ‘ಒಂದು ಪಾತ್ರವಷ್ಟೇ ಅಲ್ಲ, ನನ್ನ ಪ್ರವೇಶದಿಂದ ಇಡೀ ಧಾರಾವಾಹಿ ಹೊಸ ರೂಪ ಪಡೆದುಕೊಳ್ಳುತ್ತಿದೆ’ ಎನ್ನುತ್ತಾರೆ ಹೊಸ ಹಿರಣ್ಮಯಿ ‘ಗಗನಾ’.

ಅಂತಿಮ ವರ್ಷದ ಬಿ.ಕಾಂ ಅಧ್ಯಯನ ಮಾಡುತ್ತಿರುವ ಗಗನಾಗೆ ‘ಮಹಾದೇವಿ’ ಮೂರನೇ ಪ್ರಾಜೆಕ್ಟ್‌. ಹಿಂದೆ ಒಂದು ಕನ್ನಡ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ಅವರ ನಟನೆಯ ತಮಿಳು ಧಾರಾವಾಹಿಯೊಂದು ಈಗ ಪ್ರಸಾರ ಕಾಣುತ್ತಿದೆ. ಜೊತೆಗೆ ಮಹಾದೇವಿಯಲ್ಲೂ ನಟಿಸುವ ಅವಕಾಶ ಲಭಿಸಿದೆ. ‘ಇದು ನಾನು ಈವರೆಗೆ ಮಾಡಿರುವ ಪಾತ್ರಗಳಿಂದ ಭಿನ್ನವಾದುದು. ಇದಕ್ಕಾಗಿ ಸಾಕಷ್ಟು ಅಧ್ಯಯನ, ಸಂಶೋಧನೆಗಳನ್ನು ಮಾಡಬೇಕಾಯಿತು. ಹೊಸ ಅನುಭವ ಖುಷಿಕೊಟ್ಟಿದೆ. ಜನರೂ ನನ್ನ ಪಾತ್ರವನ್ನು ಇಷ್ಟಪಟ್ಟಿದ್ದಾರೆ’ ಎಂದು ಖುಷಿಯಿಂದ ಹೇಳುತ್ತಾರೆ ಗಗನಾ.

‘ದೇವಿಯ ಭಕ್ತೆಯಾಗಿರುವ ಹಿರಣ್ಮಯಿ ಅತ್ಯಂತ ಸಹನೆ ತಾಳ್ಮೆಯನ್ನು ಹೊಂದಿರುವ ಹುಡುಗಿ. ಆದರೆ ನಾನು ಸ್ವಭಾವತಃ ಅಂಥ ಹುಡುಗಿ ಅಲ್ಲ. ನನಗೆ ಸಿಟ್ಟು ಬರುವುದಿದೆ, ತಾಳ್ಮೆ ಕೆಡುವುದೂ ಇದೆ. ಧಾರಾವಾಹಿಗಾಗಿ ಹಿರಣ್ಮಯಿಯನ್ನು ಆವಾಹಿಸಿಕೊಂಡು ಹೊಸ ರೂಪ ಧರಿಸಬೇಕಾಗಿದೆ. ಇದೆಲ್ಲ ಖುಷಿಕೊಡುವ ಅನುಭವ ಎನ್ನುತ್ತಾರೆ ಅವರು.

ತನ್ನವರನ್ನೆಲ್ಲ ಕಳೆದುಕೊಂಡ ಹಿರಣ್ಮಯಿಯು ಒಂಟಿಯಾಗಿ ಊರು ಬಿಟ್ಟು ದೂರ ಹೋಗುತ್ತಾಳೆ. ಅರ್ಚಕರೊಬ್ಬರ ನೆರವಿನಿಂದ ಅಪಾಯಕಾರಿ ಸರ್ಪವನ ದಾಟುತ್ತಿದ್ದಾಗ, ಕಾಡುದಾರಿಯಲ್ಲಿ ಕಾಲಿಗೆ ಮುಳ್ಳು ಚುಚ್ಚಿ ತೊಂದರೆ ಅನುಭವಿಸುತ್ತಿದ್ದ ಆನೆ ಮರಿಯನ್ನು ಕಂಡು, ಮುಳ್ಳು ತೆಗೆದು ಆನೆಯನ್ನು ಉಪಚರಿಸುತ್ತಾಳೆ. ಆ ಆನೆ ಮರಿಯು  ಆಕೆಯನ್ನೇ ಹಿಂಬಾಲಿಸಿ ಬರುತ್ತದೆ. ದೂರ ದಾರಿಯನ್ನು ಕ್ರಮಿಸಿ ಹಿರಣ್ಮಯಿಯು ಮೂಕಾಂಬಿಕೆ ದೇವಸ್ಥಾನಕ್ಕೆ ಬರುತ್ತಾಳೆ. ಅಲ್ಲಿ ಭಕ್ತಿಪರವಶಳಾಗಿ ಹಾಡುತ್ತಾಳೆ. ಆಕೆಯ ಗಾನ ಮಾಧುರ್ಯಕ್ಕೆ ಮನಸೋತ ಆ ದೇಗುಲದ ನಾದಸ್ವರ ವಾದಕ ವರದರಾಜ, ಆಕೆಯನ್ನು ದತ್ತುಪಡೆದು ಸಾಕುತ್ತಾರೆ. ತಮ್ಮ ಸಂಗೀತ ಜ್ಞಾನವನ್ನು ಧಾರೆ ಎರೆಯುತ್ತಾರೆ. ಬೆಳೆದು ದೊಡ್ಡವಳಾಗುತ್ತಾ ಹಿರಣ್ಮಯಿಯು ನಾದಸ್ವರ ವಾದಕಿಯಾಗಿ ಹೆಸರು ಗಳಿಸುತ್ತಾಳೆ.

ಹಿರಣ್ಮಯಿಯನ್ನು ಹಿಂಬಾಲಿಸಿ ಬಂದ ಆನೆಮರಿಯೂ ಅದೇ ದೇವಸ್ಥಾನದಲ್ಲಿ ಬೆಳೆದು, ಹಿರಣ್ಮಯಿಯ ಸುಖ ದುಃಖ ಹಂಚಿಕೊಳ್ಳುವ ಸ್ನೇಹಿತನಾಗಿ, ಕಾಪಾಡುವ ಸೋದರನಾಗಿ ದೇವಸ್ಥಾನದ ಆನೆಯಾಗಿ, ಹಿರಣ್ಮಯಿಯ ಜೀವನದ ಏಳುಬೀಳುಗಳಿಗೆ ಮೂಕಸಾಕ್ಷಿಯಾಗಿರುತ್ತದೆ. ಕಥೆ ಹೀಗೆ ಹೊಸ ಹೊಸ ಅಧ್ಯಾಯಗಳಲ್ಲಿ ತೆರೆದುಕೊಳ್ಳಲಿದೆಯಂತೆ.

‘ಮಹಿಳೆಯೊಬ್ಬಳು ನಾದಸ್ವರ ವಾದಕಿಯಾಗಿ ಕಾಣಿಸಿಕೊಳ್ಳುವುದು ಅಪರೂಪ. ಅದರದರಲ್ಲೂ ಹಿರಣ್ಮಯಿ ಮತ್ತು ಆಕೆಯ ತಂದ ಜೊತೆಯಾಗಿ ನಾದಸ್ವರ ನುಡಿಸುವ ಸನ್ನಿವೇಶವೂ ಧಾರಾವಾಹಿಯಲ್ಲಿ ಬರುತ್ತದೆ. ನಾನು ನೃತ್ಯ ಮಾಡಬಲ್ಲೆ, ಆದರೆ ಸಂಗೀತದ ಹಿನ್ನೆಲೆ ಇಲ್ಲ. ಇಂಥ ಪಾತ್ರ ನಿರ್ವಹಣೆ ಮಾಡುವಾಗ ಆಭಾಸ ಆಗಬಾರದಲ್ಲ, ಅದಕ್ಕಾಗಿ ನಿರ್ದೇಶಕರು ಸಾಕಷ್ಟು ರಿಹರ್ಸಲ್‌ ಮಾಡಿಸಿದ್ದಾರೆ. ಸ್ವತಃ ನಾದಸ್ವರ ವಾದಕರನ್ನು ಸೆಟ್‌ಗೆ ಆಹ್ವಾನಿಸಿ ಅವರ ಹಾವಭಾವಗಳನ್ನು ಗಮನಿಸುವಂತೆ ಹೇಳಿದ್ದರು. ನಾದಸ್ವರ ವಾದನದ ಕೆಲವು ಸಿನಿಮಾಗಳನ್ನೂ ನೋಡಬೇಕಾಯಿತು... ಇವೆಲ್ಲವೂ ಖುಷಿಕೊಟ್ಟಿವೆ’ ಎನ್ನುತ್ತಾರೆ ಗಗನಾ.

ಭಕ್ತಿ ಪ್ರಧಾನವಾದ ಧಾರಾವಾಹಿಗಳಲ್ಲಿ  ಗ್ಲ್ಯಾಮರ್‌ ಇರುವುದಿಲ್ಲವಲ್ಲ, ಹೇಗೆ ಒಪ್ಪಿಕೊಂಡಿರಿ ಎಂದರೆ, ‘ಇದೆ... ಈ ಧಾರಾವಾಹಿಯ ಹೀರೊ ಪಕ್ಕಾ ಪ್ಲೇಬಾಯ್‌. ನನ್ನದು ದೇವಿಯ ಭಕ್ತೆಯ ಪಾತ್ರವಾದರೂ, ಗ್ಲ್ಯಾಮರ್‌ಗೆ ಕೊರತೆ ಇಲ್ಲ. ಭಕ್ತಿ, ಸಂಗೀತಗಳ ಜೊತೆಜೊತೆಗೆ ಪೂರ್ಣ ಪ್ರಮಾಣದ ಎಂಟರ್‌ಟೇನ್‌ಮೆಂಟ್‌ ಈ ಧಾರಾವಾಹಿ ಎಂಬುದು ಗಗನಾ ಅಭಿಪ್ರಾಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.