ಭಗ್ನಪ್ರೇಮದ ಅಂಟು ಕಾಮಿಡಿಯೂ ಉಂಟು

7
ವಾಸು ನಾನ್ ಪಕ್ಕಾ ಕಮರ್ಷಿಯಲ್

ಭಗ್ನಪ್ರೇಮದ ಅಂಟು ಕಾಮಿಡಿಯೂ ಉಂಟು

Published:
Updated:
ನಿಶ್ವಿಕಾ ಮತ್ತು ಅನೀಶ್

‘ಈ ಸಿನಿಮಾ ಹಿಟ್ ಆಗಲೇ ಬೇಕು’ ಎಂದು ಪಣತೊಟ್ಟಂತಿದೆ ಅನೀಶ್ ತೇಜೇಶ್ವರ್. ಮಾಸ್ ಪ್ರೇಕ್ಷಕರನ್ನು ತೃಪ್ತಿಪಡಿಸಬೇಕು ಅಂದ್ರೆ ಕಮರ್ಷಿಯಲ್ ಅಂಶಗಳು ಸಾಕಷ್ಟಿರಬೇಕು ಎಂಬುದೂ ಅವರಿಗೆ ಮನವರಿಕೆಯಾಗಿದೆ. ಆದ್ದರಿಂದಲೇ ಚಿತ್ರದ ಶೀರ್ಷಿಕೆಯ ಮೂಲಕವೇ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಎಂದು ಹೇಳಿಕೊಂಡು ಬಂದಿದ್ದಾರೆ.

ಫಸ್ಟ್ ಲುಕ್, ಟೀಸರ್ ಎಲ್ಲವನ್ನೂ ಅದ್ದೂರಿಯಾಗಿಯೇ ಬಿಡುಗಡೆ ಮಾಡಿದ್ದ ಅವರೀಗ ಚಿತ್ರದ ಒಂದೊಂದು ವಿಡಿಯೊ ಹಾಡಿಗೂ ಒಂದೊಂದು ಕಾರ್ಯಕ್ರಮ ಮಾಡಿ, ಸೆಲೆಬ್ರಿಟಿಗಳ ಕೈಯಿಂದ ಬಿಡುಗಡೆ ಮಾಡಿಸಲು ನಿರ್ಧರಿಸಿದ್ದಾರೆ. ಚಿತ್ರದ ಮೊದಲ ಹಾಡನ್ನು ಇತ್ತೀಚೆಗೆ ಶ್ರೀಮುರಳಿ ಬಿಡುಗಡೆ ಮಾಡಿದರು.

ಕಾರ್ಯಕ್ರಮಕ್ಕೂ ಮುಂಚೆ ಬಿಡುಗಡೆಯಾದ ‘ಹೇಳು ಬಾ ಏನಾದೆ ನಾ’ ಹಾಡನ್ನು ಪ್ರದರ್ಶಿಸಲಾಯಿತು. ‘ವಿಐಪಿ’ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದ್ದ ಖ್ಯಾತ ನೃತ್ಯ ಸಂಯೋಜಕ ಬಾಬಾ ಭಾಸ್ಕರ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಒಂದು ಪೊಲೀಸ್ ಠಾಣೆಯ ಒಳಗಡೆಯೇ ಇಡೀ ಹಾಡು ಚಿತ್ರೀಕರಿಸಲಾಗಿರುವುದು ವಿಶೇಷ. ಭಗ್ನಪ್ರೇಮಿಯೊಬ್ಬನ ನೋವಿನ ಸೊಲ್ಲಾಗಿ ಆರಂಭವಾಗುವ ಹಾಡು ನೃತ್ಯದಲ್ಲಿ ಕೊನೆಗೆ ಕಾಮಿಡಿಯಾಗಿ, ಟಪ್ಪಾಂಗುಚ್ಚಿಯಾಗಿ ಬದಲಾಗುತ್ತದೆ. ವಂಚಿಸಿದ ಗೆಳತಿಯನ್ನು ದೂಷಿಸುತ್ತ, ಪ್ರೇಮದ ನೋವನ್ನು ಅರುಹುವ ಸಾಹಿತ್ಯಕ್ಕೆ ಕೆಲವು ಕಡೆ ಕಾಮಿಡಿ ಅನಿಸುವಂತ ನೃತ್ಯವನ್ನು ಸಂಯೋಜಿಸಲಾಗಿದೆ. ಇದೊಂದು ರೀತಿ ಮೆಣಸಿನಕಾಯಿ ಬಜ್ಜಿಯನ್ನು ಬೆಲ್ಲದಲ್ಲಿ ಅದ್ದಿ ಕೊಟ್ಟ ಹಾಗೆ!

ಹಾಡನ್ನು ಬಿಡುಗಡೆ ಮಾಡಿದ ಶ್ರೀಮುರಳಿ, ‘ಕೆಲವೇ ಜನರಿಗೆ ಡಾನ್ಸ್‌ನ ಜತೆಗೆ ಪರ್ಫಾರ್ಮೆನ್ಸ್‌ ಕೂಡ ಮಾಡಲು ಸಾಧ್ಯ. ಅಂಥ ಅಪರೂಪದವರಲ್ಲಿ ಅನೀಶ್‌ ಒಬ್ಬರು. ಈ ಹಾಡಿಗೆ ಅವರು ಮಾಡಿದ ನೃತ್ಯವನ್ನು ನೋಡಿದರೇ ಸಿನಿಮಾದೆಡೆಗೆ ಅವರ ವ್ಯಾಮೋಹ ಎಂಥದ್ದು ಎಂದು ತಿಳಿಯುತ್ತದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ’ ಎಂದು ಹಾರೈಸಿದರು.

‘ಈ ಹಾಡು ತಂತ್ರಜ್ಞರಿಂದಲೇ ರೂಪಿತವಾದ ಹಾಡು. ಬಾಬಾ ಭಾಸ್ಕರ್ ಇಲ್ಲದಿದ್ದರೆ ಈ ಹಾಡು ಸಾಧ್ಯವೇ ಇರುತ್ತಿರಲಿಲ್ಲ. ಆದ್ದರಿಂದಲೇ ಮೊದಲು ಇದೇ ಹಾಡಿನ ವಿಡಿಯೊವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆವು’ ಎಂದರು ಅನೀಶ್. ಈ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಅವರು ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಅಜಿತ್ ವಾಸನ್ ಉಗ್ಗಿನ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ ಮಾಡಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಯೋಚನೆ ತಂಡಕ್ಕಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !