ಬುಲೆವಾರ್ಡ್‌ನಲ್ಲಿ ರಾತ್ರಿ ಓಡಾಟಕ್ಕೆ ನಿರ್ಬಂಧ

7
ಭದ್ರತೆಗೆ ಗಸ್ತು ಹೆಚ್ಚಿಸುವುದನ್ನು ಬಿಟ್ಟು ಪ್ರವೇಶಕ್ಕೆ ತಡೆಯೊಡ್ಡಿದ್ದು ಏಕೆ: ಸಾರ್ವಜನಿಕರ ಪ್ರಶ್ನೆ

ಬುಲೆವಾರ್ಡ್‌ನಲ್ಲಿ ರಾತ್ರಿ ಓಡಾಟಕ್ಕೆ ನಿರ್ಬಂಧ

Published:
Updated:
Deccan Herald

ಬೆಂಗಳೂರು: ಎಂ.ಜಿ.ರಸ್ತೆಯ ಬುಲೆವಾರ್ಡ್‌ನಲ್ಲಿ ರಾತ್ರಿ 7 ಗಂಟೆ ನಂತರ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿದ್ದು, ಈ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

‘ನಗರದ ಕೇಂದ್ರ ಭಾಗದಲ್ಲಿರುವ ಎಂ.ಜಿ.ರಸ್ತೆಯಲ್ಲಿ ಮಧ್ಯರಾತ್ರಿ ನಂತರವೂ ಜನರ ಓಡಾಟ ಇರುತ್ತದೆ. ಇಂಥ ಸ್ಥಳದಲ್ಲಿ ಪೊಲೀಸರ ಗಸ್ತು ಹೆಚ್ಚಿಸಬೇಕು. ಅದನ್ನು ಬಿಟ್ಟು ಬುಲೆವಾರ್ಡ್‌ನಲ್ಲಿ ಓಡಾಡುವುದನ್ನೇ ನಿರ್ಬಂಧಿಸುವುದು ಯಾವ ನ್ಯಾಯ’ ಎಂದು ಈಶಾನ್ಯ ಬೆಂಗಳೂರು ನಿವಾಸಿಗಳ ಕಲ್ಯಾಣ ಸಂಘ (ನೆರ್ವಾ) ಅಧ್ಯಕ್ಷ ಡಿ.ಎಸ್‌. ರಾಜಶೇಖರ್‌ ಪ್ರಶ್ನಿಸಿದರು.

‘ನಿಲ್ದಾಣದ ಬಳಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಹಾಕಲಾಗಿದೆ. ಭದ್ರತಾ ಸಿಬ್ಬಂದಿ ಸಹ ಇದ್ದಾರೆ. ಇಷ್ಟೆಲ್ಲ ಇದ್ದರೂ ಓಡಾಟ ನಿರ್ಬಂಧಿಸುವುದು ಸರಿಯಲ್ಲ. ಬೇಕಾದರೆ, ಇನ್ನಷ್ಟು ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಒತ್ತಾಯಿಸಿದರು. 

‘ಎಂ.ಜಿ.ರಸ್ತೆಯಲ್ಲಿ ಹಸಿರು ಬಹುತೇಕ ಮಾಯವಾಗಿದೆ. ಬುಲೆವಾರ್ಡ್‌ನಲ್ಲಿ ಅಲ್ಪಸ್ವಲ್ಪ ಹಸಿರಿದೆ. ಅದನ್ನು ಆಸ್ವಾದಿಸಲು ಸಾರ್ವಜನಿಕರಿಗೆ ಸಮಯದ ಮಿತಿ ವಿಧಿಸಬಾರದು. ಪೊಲೀಸರು ತಮ್ಮ ಭದ್ರತಾ ವೈಫಲ್ಯವನ್ನು ಮುಚ್ಚಿಕೊಳ್ಳಲು ಓಡಾಟ ಬಂದ್‌ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಓಡಾಡದಂತೆ ನಿರ್ಬಂಧ ವಿಧಿಸಿದರೂ ಆಶ್ಚರ್ಯವಿಲ್ಲ’ ಎಂದು ಅವರು ವ್ಯಂಗ್ಯವಾಡಿದರು. 

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಬ್ಬನ್ ಪಾರ್ಕ್‌ ಠಾಣೆ ಪೊಲೀಸರು, ‘ಬುಲೆವಾರ್ಡ್‌ನಲ್ಲಿ ಕೆಲವು ದಿನಗಳ ಹಿಂದಷ್ಟೇ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ದುಷ್ಕರ್ಮಿಯೊಬ್ಬ, ಸರ ಕಿತ್ತೊಯ್ದಿದ್ದ. ಅದೇ ಕಾರಣಕ್ಕೆ ಬುಲೆವಾರ್ಡ್‌ನಲ್ಲಿ ರಾತ್ರಿ ವೇಳೆ ಓಡಾಟವನ್ನು ನಿರ್ಬಂಧ ಮಾಡುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಕುಂಬ್ಳೆ ವೃತ್ತದಿಂದ ನಿಲ್ದಾಣದ ಪ್ರವೇಶ ದ್ವಾರದವರೆಗೂ ಬುಲೆವಾರ್ಡ್‌ನಲ್ಲಿ ರಾತ್ರಿ ವೇಳೆ ಓಡಾಟಕ್ಕೆ ಅವಕಾಶವಿಲ್ಲ. ಬ್ಯಾರಿಕೇಡ್‌ಗಳನ್ನು ಹತ್ತಿ ಯಾರಾದರೂ ಬುಲೆವಾರ್ಡ್‌ನಲ್ಲಿ ಸಂಚರಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಅಧಿಕಾರಿಯೊಬ್ಬರು, ‘ಪೊಲೀಸರ ಸೂಚನೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಓಡಾಟ ತಡೆಯುವುದಕ್ಕಾಗಿ ಬುಲೆವಾರ್ಡ್‌ ಪ್ರವೇಶ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಅಳವಡಿಸುವುದನ್ನು ಭಾನುವಾರದಿಂದಲೇ ಪ್ರಾರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬೆಳಿಗ್ಗೆಯಿಂದ ರಾತ್ರಿ 7 ಗಂಟೆಯವರೆಗೂ ಮೇಲ್ಭಾಗದ ಬುಲೆವಾರ್ಡ್‌ನಲ್ಲಿ ಓಡಾಡಬಹುದು. ಜತೆಗೆ, ಕೆಳಭಾಗದ ಬುಲೆವಾರ್ಡ್‌ನಲ್ಲಿ ಓಡಾಡಲು ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದು ಹೇಳಿದರು.

ನಿಲ್ದಾಣದ ಭದ್ರತಾ ಸಿಬ್ಬಂದಿ, ‘ಸಾರ್ವಜನಿಕರ ಸುರಕ್ಷತೆ ಹಾಗೂ ಮುಂದಾಗುವ ಅನಾಹುತಗಳನ್ನು ತಡೆಗಟ್ಟಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರವೇಶ ಮಾರ್ಗಗಳಲ್ಲೇ ನಿಂತು ಸಾರ್ವಜನಿಕರನ್ನು ವಾಪಸ್‌ ಕಳುಹಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಬುಲೆವಾರ್ಡ್‌ನಲ್ಲಿ ಅಂದ ಹೆಚ್ಚಿಸುವ ಹಲವು ವಸ್ತುಗಳನ್ನು ಹಾಕಲಾಗಿದೆ. ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇದೆ. ಇದನ್ನು ಹಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಧೂಮಪಾನಿಗಳು ಇದನ್ನೇ ಅಡ್ಡೆ ಮಾಡಿಕೊಳ್ಳುತ್ತಿದ್ದಾರೆ. ಯುವಕ–ಯುವತಿಯರು ಇಲ್ಲಿಯೇ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಅದಕ್ಕೆ ಕಡಿವಾಣ ಬಿದ್ದಂತಾಗಿದೆ’ ಎಂದು ಅವರು ಹೇಳಿದರು. 

ಪೊಲೀಸರ ಪತ್ರಕ್ಕೆ ಸ್ಪಂದಿಸದ ಬಿಎಂಆರ್‌ಸಿಎಲ್:  ‘ಎಂ.ಜಿ.ರಸ್ತೆಯ ಬುಲೆವಾರ್ಡ್‌ನಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ. ಭದ್ರತಾ ಸಿಬ್ಬಂದಿಯೂ ಅಲ್ಲಿರುವುದಿಲ್ಲ’ ಎಂದು ಪೊಲೀಸರು ಹೇಳಿದರು.

‘ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಕ್ರಮ ಕೈಗೊಳ್ಳುವವರೆಗೂ ಓಡಾಟ ನಿರ್ಬಂಧಿಸುವಂತೆ ಹೇಳಿದ್ದೇವೆ’ ಎಂದು ಸ್ಪಷ್ಟಪಡಿಸಿದರು. 

ಪೊಲೀಸರ ಪತ್ರಕ್ಕೆ ಸ್ಪಂದಿಸದ ಬಿಎಂಆರ್‌ಸಿಎಲ್
‘ಎಂ.ಜಿ.ರಸ್ತೆಯ ಬುಲೆವಾರ್ಡ್‌ನಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ. ಭದ್ರತಾ ಸಿಬ್ಬಂದಿಯೂ ಅಲ್ಲಿರುವುದಿಲ್ಲ’ ಎಂದು ಪೊಲೀಸರು ಹೇಳಿದರು.

‘ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಕ್ರಮ ಕೈಗೊಳ್ಳುವವರೆಗೂ ಓಡಾಟ ನಿರ್ಬಂಧಿಸುವಂತೆ ಹೇಳಿದ್ದೇವೆ’ ಎಂದು ಸ್ಪಷ್ಟಪಡಿಸಿದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !