ದೀಪಾವಳಿ ಪರಿಸರ ಸ್ನೇಹಿಯಾಗಿರಲಿ

7

ದೀಪಾವಳಿ ಪರಿಸರ ಸ್ನೇಹಿಯಾಗಿರಲಿ

Published:
Updated:
Deccan Herald

ಗಣೇಶ ಹಬ್ಬವನ್ನು ಹೇಗೆ ಪರಿಸರ ಸ್ನೇಹಿಯಾಗಿ ಆಚರಿಸುತ್ತಿದ್ದೇವೆಯೋ ಹಾಗೇ ದೀಪಾವಳಿಯನ್ನೂ ಪರಿಸರ ಸ್ನೇಹಿಯನ್ನಾಗಿಸಬೇಕು. ಇದಕ್ಕಾಗಿ ಪ್ರತಿ ಮನೆಗಳ ಮುಂದೆ ಮತ್ತು ಬೀದಿಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು. ಸರ್ಕಾರ ಅಥವಾ ಸ್ಥಳೀಯ ಆಡಳಿತ ಸಂಸ್ಥೆಗಳೇ ಪಟಾಕಿ ಸಿಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ದೀಪಾವಳಿ ಹಬ್ಬದ ಮೂರು ದಿನವೂ ಪ್ರತಿ ವಾರ್ಡ್‌ನ ಆಟದ ಮೈದಾನಗಳಲ್ಲಿ ಸಂಜೆ ಸಮಯ ನಿಗದಿಪಡಿಸಿ ಬಾಣ ಬಿರುಸುಗಳ ಪಟಾಕಿ ಸಿಡಿಸಿ ಸಂಭ್ರಮಿಸಬೇಕು. ಇದರ ಸಂಪೂರ್ಣ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಬಾನಿನಲ್ಲಿ ಮೂಡುವ ಬಾಣ ಬಿರುಸುಗಳ ಚಿತ್ತಾರವನ್ನು ಕಣ್ತುಂಬಿಸಿಕೊಳ್ಳುವ ಮೂಲಕ ಸಾರ್ವಜನಿಕರು ದೀಪಾವಳಿ ಆಚರಿಸಬೇಕು. ಇದರಿಂದ ಶಬ್ದ ಮತ್ತು ವಾಯು ಮಾಲಿನ್ಯ ಕಡಿಮೆ ಆಗುತ್ತದೆ, ಪಟಾಕಿ ಖರೀದಿಸಲು ಆಗುವ ದುಂದು ವೆಚ್ಚಕ್ಕೂ ಕಡಿವಾಣ ಬೀಳುತ್ತದೆ. ಅನಾಹುತಗಳು ತಗ್ಗುತ್ತವೆ.

ಜಗದೀಶ್‌ ಹಿಶಿ, ಉದ್ಯೋಗಿ, ವಿಜಯನಗರ

**
ದೀಪಾವಳಿ ಆಚರಿಸುವ ನವೆಂಬರ್‌ ತಿಂಗಳಿನಲ್ಲಿ ಬೇಗ ಕತ್ತಲು ಆವರಿಸುತ್ತದೆ. ಅಂಥೆಯೇ ಚಳಿಯೂ ಹೆಚ್ಚಿರುತ್ತದೆ. ದೀಪಗಳ ಮೂಲಕ ಬೆಳಕನ್ನು ತರುವುದರ ಜತೆಗೆ ಬೆಚ್ಚನೆಯ ವಾತಾವರಣ ಸೃಷ್ಟಿಸುವುದು ಈ ಹಬ್ಬದ ಉದ್ದೇಶಗಳಲ್ಲಿ ಒಂದು. ಸಾಂಪ್ರದಾಯಿಕವಾಗಿಯೂ ಮಹತ್ವದ ಸಂದೇಶ ಹೊಂದಿರುವ ಈ ಹಬ್ಬ ಕ್ರಮೇಣ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ಶೋಚನೀಯ. ಈ ವಾರದಲ್ಲಿ ಸಿಡಿಸುವ ಪಟಾಕಿಯ ಶಬ್ದಗಳು ಹಿರಿಯ ನಾಗರಿಕರನ್ನು ಮತ್ತು ಸಾಕು ಪ್ರಾಣಿಗಳನ್ನು ಬೆಚ್ಚಿ ಬೀಳಿಸುತ್ತವೆ. ಅಲ್ಲದೆ ಅಸ್ತಮಾ, ಶ್ವಾಸಕೋಶ ಸೋಂಕು ಪೀಡಿತರನ್ನು ಇನ್ನಷ್ಟು ನರಳುವಂತೆ ಮಾಡುತ್ತವೆ. ಕೆಲವರು ದೃಷ್ಟಿ ಕಳೆದುಕೊಂಡರೆ, ಇನ್ನೂ ಕೆಲವರು ಕೇಳುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಹಾಗಾಗಿ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದು. ಅದರ ಪಾಲನೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ದೀಪಗಳನ್ನು ಬೆಳಗಿಸುವ ಮೂಲಕವೇ ‘ಪರಿಸರ ಸ್ನೇಹಿ ದೀಪಾವಳಿ’ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ. ಹಲವು ವರ್ಷಗಳಿಂದ ನಮ್ಮ ಮನೆಯಲ್ಲಿ ಇದೇ ರೀತಿ ಆಚರಿಸುತ್ತಿದ್ದೇವೆ. 

ಯಶಸ್ವಿನಿ ಶರ್ಮ, ಆರ್ಕಿಟೆಕ್ಟ್‌, ಗಾಯತ್ರಿನಗರ

**

ದೀಪಗಳಿಗೆ ಆದ್ಯತೆ ನೀಡಿ, ಪಟಾಕಿ ರಹಿತವಾಗಿ ಪರಿಸರಸ್ನೇಹಿ ದೀಪಾವಳಿ ಆಚರಿಸಬೇಕು. ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದೇನೆ. ಅಲ್ಲದೆ ಸರ್ಕಾರದ ಸೂಚನೆ ಮೇರೆಗೆ, ವಾರದಿಂದ ಶಾಲೆಗಳ ಪ್ರಾರ್ಥನಾ ಸಮಯದಲ್ಲಿ ಈ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ನಮ್ಮ ಪರಿಸರ ನಮಗೆಷ್ಟು ಮುಖ್ಯ ಎಂಬುದನ್ನು ಮಕ್ಕಳಿಗೆ ತಿಳಿ ಹೇಳಲಾಗುತ್ತಿದೆ.

ಡಾ. ಆರ್‌. ಶಿವಕುಮಾರ್‌, ಶಿಕ್ಷಣ ಸಂಯೋಜಕ, ಕೆ.ಆರ್‌.ಪುರ

**

ಪಟಾಕಿ ಸುಡುವುದ ಬಿಟ್ಟು ದೀಪಾವಳಿ ಆಚರಿಸಬೇಕು. ಗ್ರಾಮೀಣ ಭಾಗದಲ್ಲಿ ಸೆಗಣಿಯಲ್ಲಿ ಹೂವು, ತೆನೆಯಿಟ್ಟು, ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಲಾಗುತ್ತದೆ. ಅಂದರೆ ದೀಪ ಮತ್ತು ಪರಿಸರದ ಜತೆಗಿನ ಸಂಬಂಧಗಳನ್ನು ಬೆಸೆಯುವ ಮೂಲಕ ಈ ಹಬ್ಬ ಕಳೆಕಟ್ಟುತ್ತದೆ. ಕೆಂಗೇರಿಯಲ್ಲಿರುವ ನಮ್ಮ ಮನೆಯಲ್ಲೂ ಇದೇ ರೀತಿ ಗ್ರಾಮೀಣ ಸೊಗಡಿನ ಪರಿಸರ ಸ್ನೇಹಿ ದೀಪಾವಳಿ ಆಚರಿಸುತ್ತೇವೆ.

ಡಾ. ಕುರುವ ಬಸವರಾಜ್‌, ಜಾನಪದ ತಜ್ಞ, ಕೆಂಗೇರಿ

**

ಉಲ್ಲಂಘಿಸಿದರೆ ಕಾನೂನು ಕ್ರಮ

ಮೂರು ನಾಲ್ಕು ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ (ಒಂದು ವಾರ) ಆಗುವ ವಾಯು ಮಾಲಿನ್ಯದ ಪ್ರಮಾಣವನ್ನು ಮಾಲಿನ್ಯ ನಿಯಂತ್ರಣ ಮಂಡಳಿ (ಪಿಸಿಬಿ)  ಗಮನಿಸುತ್ತಿದೆ. ಸಾಮಾನ್ಯವಾಗಿ ಹಬ್ಬದ ಎರಡು ಮತ್ತು ಮೂರನೇ ದಿನಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಿರುತ್ತದೆ. ಇದು ಸಹಜ ಸ್ಥಿತಿಗೆ ಬರಲು ಕನಿಷ್ಠ 10 ದಿನಗಳು ಬೇಕಾಗುತ್ತವೆ. ಈ ಬಾರಿಯೂ ಹಬ್ಬದ ಹಿಂದಿನ ವಾರ, ಹಬ್ಬ ನಡೆಯುವ ವಾರ ಮತ್ತು ಹಬ್ಬ ನಂತರದ ವಾರದ ಪರಿಸರ ಮಾಲಿನ್ಯದ ಪ್ರಮಾಣವನ್ನು ಲೆಕ್ಕ ಹಾಕಿ ವಿಶ್ಲೇಷಿಸುತ್ತೇವೆ. 

ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ ಮಹತ್ವದ್ದು. ಅದರ ಪಾಲನೆಗೆ ಪಿಸಿಬಿ ಬದ್ಧ. ಈಗಾಗಲೇ ಪೊಲೀಸ್‌, ಸ್ಥಳೀಯ ಆಡಳಿತ ಮತ್ತು ವಾರ್ತಾ ಇಲಾಖೆ ಜತೆಗೂಡಿ ಕೆಲ ಸಭೆಗಳನ್ನು ನಡೆಸಿ, ತೀರ್ಪಿನ ಪಾಲನೆಗೆ ರೂಪುರೇಷೆ ಸಿದ್ಧಪಡಿಸಿದ್ದು, ಅದರ ಅನುಷ್ಠಾನಕ್ಕೆ ನಗರದಾದ್ಯಂತ ಕೆಲ ತಂಡಗಳನ್ನು ರಚಿಸಲಾಗಿದೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಒಂದು ವೇಳೆ ಯಾರಾದರೂ ಸುಪ್ರೀಂಕೋರ್ಟ್‌ನ ತೀರ್ಪನ್ನು ಉಲ್ಲಂಘಿಸಿ ಪಟಾಕಿಗಳನ್ನು ಸಿಡಿಸಿದರೆ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ.

- ಲಕ್ಷ್ಮಣ್‌, ಅಧ್ಯಕ್ಷರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !