ಅಂಧ ಅಭಿವೃದ್ಧಿ ಯುಗದ ಮೃತ್ಯುಚುಂಬನ

ಸೋಮವಾರ, ಮೇ 20, 2019
31 °C
ಪರಿಸರ ಸಂರಕ್ಷಣೆಯ ಸಂಶೋಧನೆ, ಆಡಳಿತ ನೀತಿ ಮತ್ತು ಕಾನೂನುಗಳಿಗಿಲ್ಲ ಮಾನ್ಯತೆ

ಅಂಧ ಅಭಿವೃದ್ಧಿ ಯುಗದ ಮೃತ್ಯುಚುಂಬನ

Published:
Updated:

ನಾಡಿನ ಜನಜೀವನದ ವಿದ್ಯಮಾನಗಳನ್ನು ಗಮನಿಸಿದರೆ, ನೈಸರ್ಗಿಕ ಪರಿಸರದಲ್ಲಿ ಆಗುತ್ತಿರುವ ವಿಪ್ಲವಗಳ ಅರಿವಾಗುತ್ತದೆ. ಊರುಕೇರಿಗಳ ತ್ಯಾಜ್ಯಗಳಿಂದಾಗಿ ಕೆರೆಗಳು ಮಲಿನವಾಗುವುದನ್ನು, ಅಂತರ್ಜಲ ಬರಿದಾಗುತ್ತಿರುವುದನ್ನು ನಿಯಂತ್ರಿಸಲು ಸರ್ಕಾರಿಯಂತ್ರಕ್ಕೆ ಸಾಧ್ಯವಾಗುತ್ತಿಲ್ಲ. ಮಲೆನಾಡಿನ ಮಳೆಕಾಡಿನ ನಾಶವನ್ನೋ ಅಥವಾ ಕಂದಾಯಭೂಮಿ ಅರಣ್ಯದ ಅತಿಕ್ರಮಣವನ್ನೋ ಕಠಿಣ ಕಾನೂನುಗಳೂ ತಡೆಯಲಾಗುತ್ತಿಲ್ಲ. ಸಮುದ್ರದ ಜಲಚರಗಳನ್ನಾಗಲೀ ಅಥವಾ ಜೀವನದಿಗಳನ್ನಾಗಲೀ ಪೋಷಿಸುವುದಕ್ಕೆ ಸರ್ಕಾರಿ ನೀತಿಗಳಲ್ಲೇ ಪರಿಣಾಮಕಾರಿ ಮಾರ್ಗಗಳು ದೊರಕುತ್ತಿಲ್ಲ. ಹವಾಮಾನ ಬದಲಾವಣೆಯು ತರುತ್ತಿರುವ ಹೊಸರೋಗಗಳಂಥ ಅಪಾಯಗಳನ್ನು ಅರ್ಥೈಸಿಕೊಳ್ಳಲು ಸಂಶೋಧನಾ ಕ್ಷೇತ್ರವೂ ವಿಫಲವಾಗುತ್ತಿದೆ.

ಇವೆಲ್ಲವುಗಳಿಂದಾಗಿ, ಸಮುದ್ರದಲ್ಲೇ ಮೀನು ಬರಿದಾಗುತ್ತಿದೆ, ಮಲೆನಾಡಿನಲ್ಲಿ ಜಲಮೂಲಗಳೇ ಒಣಗುತ್ತಿವೆ ಮತ್ತು ಆಹಾರ ಬೆಳೆಯ ಬಟ್ಟಲಂತಿರುವ ಬಯಲುಸೀಮೆಯಲ್ಲಿಯೇ ಕೃಷಿ ದುಸ್ತರವಾಗುತ್ತಿದೆ. ನಾಗರಿಕರಿಗೆಲ್ಲ ಕನಿಷ್ಠ ಕುಡಿಯುವ ನೀರು ಹಾಗೂ ಶುದ್ಧ ಗಾಳಿಯನ್ನು ಪೂರೈಸುವುದೂ ಅಸಾಧ್ಯ ಎಂಬ ಹಂತಕ್ಕೆ ದೇಶ ತಲುಪಿದೆ. ಈ ದಾರುಣ ಸ್ಥಿತಿಯನ್ನು ದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರವು ಪ್ರಕಟಿಸಿದ ‘ಭಾರತ ಪರಿಸರ ಪರಿಸ್ಥಿತಿ- 2018’ ವೈಜ್ಞಾನಿಕ ವರದಿಯು ಎಳೆಎಳೆಯಾಗಿ ತೆರೆದಿಟ್ಟಿದೆ. ಪರಿಸರ ಆರೋಗ್ಯದ ದೃಷ್ಟಿಯಿಂದ ಜಗತ್ತಿನ 180 ದೇಶಗಳಲ್ಲಿ ಭಾರತದ್ದು ಈಗ 177ನೇ ಸ್ಥಾನ!

ಅರಣ್ಯ ಮತ್ತು ಪರಿಸರ ನಿರ್ವಹಣೆಗಾಗಿ ಬಹಳಷ್ಟು ನೀತಿಗಳು ಮತ್ತು ಕಾನೂನುಗಳೇನೋ ಇವೆ. ಅವನ್ನು ಅನುಷ್ಠಾನಗೊಳಿಸಲು ಇಲಾಖೆಗಳು, ಯೋಜನೆಗಳು ಮತ್ತು ಅನುದಾನಗಳೂ ಇವೆ. ಇವಕ್ಕೆಲ್ಲ ವೈಜ್ಞಾನಿಕ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರ ಸೂಚಿಸಲು ಸಂಶೋಧನಾ ವಲಯವೇ ಇದೆ. ವಿಪರ್ಯಾಸವೆಂದರೆ, ಈ ಬಗೆಯ ವಿಸ್ತೃತ ಸಂರಕ್ಷಣಾ ವಿಧಿವಿಧಾನಗಳು ಇಲ್ಲದೆಯೂ, ಅನೇಕ ಬಡ ದೇಶಗಳು ಪರಿಸರ ಸುರಕ್ಷತೆ ದೃಷ್ಟಿಯಿಂದ ಭಾರತಕ್ಕಿಂತ ಅದೆಷ್ಟೋ ಉತ್ತಮ ಸ್ಥಿತಿಯಲ್ಲಿವೆ! ತಮ್ಮ ಪರಿಸರವನ್ನು ಕಾಪಾಡಿಕೊಳ್ಳಬೇಕೆಂಬ ವಿವೇಕವು ಭಾರತೀಯ ಜನಮಾನಸದಲ್ಲೇನೋ ಯಾವಾಗಲೂ ಇದೆ. ಹಾಗಾದರೆ, ಈ ಜನಾಶಯಕ್ಕೆ ಸ್ಪಂದಿಸಲು ಆಡಳಿತನೀತಿ, ಕಾನೂನು, ಯೋಜನೆ, ಅನುದಾನಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಹಾರಗಳು- ಎಲ್ಲವೂ ಏಕೆ ಸೋಲುತ್ತಿವೆ? ಇದಕ್ಕೆ ಉತ್ತರ ಕಂಡುಕೊಳ್ಳುವ ಜರೂರತ್ತಿದೆ.

90ರ ದಶಕದಲ್ಲಿ ದೇಶವು ಮಾರುಕಟ್ಟೆ ಆರ್ಥಿಕ ನೀತಿಯನ್ನು ಅಪ್ಪಿಕೊಂಡಿತಷ್ಟೇ. ಉದ್ಯೋಗ ಸೃಷ್ಟಿ, ಆರೋಗ್ಯ ಸುಧಾರಣೆಯಂಥ ಮೂಲಭೂತ ಅಂಶಗಳಲ್ಲಿ ಸಾಧಿಸುವುದು ಬಹಳಷ್ಟಿದೆಯಾದರೂ, ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ವಾರ್ಷಿಕ ಶೇ 7ಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿರುವುದೇ ಸಾಧನೆಯೆಂದು ಸರ್ಕಾರಗಳು ಈಗಲೂ ಬಿಂಬಿಸುತ್ತಿವೆ. ಸತ್ಯವೇನೆಂದರೆ, ಆರ್ಥಿಕಾಭಿವೃದ್ಧಿಯ ಮೂಲಧಾತುಗಳಾದ ಮಾನವ ಸಂಪತ್ತು, ಶಕ್ತಿಮೂಲ, ನೈಸರ್ಗಿಕ ಸಂಪನ್ಮೂಲಗಳು ಯಥೇಚ್ಛವಾಗಿ ಅಗ್ಗದಲ್ಲಿ ದೊರಕಿದ್ದರಿಂದಾಗಿಯೇ, ಈ ವೇಗದ ಆರ್ಥಿಕ ಬೆಳವಣಿಗೆ ಸಾಧ್ಯವಾಯಿತೆಂದು ಅಧ್ಯಯನಗಳು ಸಾಬೀತುಪಡಿಸಿವೆ. ಆದರೆ, ಈ  ಸಂಪನ್ಮೂಲಗಳ ವಿವೇಕಹೀನ ಬಳಕೆಯ ಪರಿಣಾಮಗಳು ಮಾತ್ರ ಅಪಾಯಕಾರಿಯಾಗಿವೆ. ಜನಸಂಪನ್ಮೂಲವನ್ನು ಅಗ್ಗದ ಕೂಲಿಯನ್ನಾಗಿ ಮಾತ್ರ ಬಳಸಿಕೊಂಡಿದ್ದರಿಂದ, ಬಡ ಸಮುದಾಯಗಳ ಸಮಾಜೋ-ಆರ್ಥಿಕ ಸ್ಥಿತಿ ಉತ್ತಮವಾಗುತ್ತಿಲ್ಲ. ಕಲ್ಲಿದ್ದಲು, ಪೆಟ್ರೋಲಿನಂಥ ಮಾಲಿನ್ಯಕಾರಕ, ವೆಚ್ಚದಾಯಕ ಶಕ್ತಿಮೂಲಗಳನ್ನೇ ಉತ್ಪಾದನೆ, ಸೇವಾ ಕ್ಷೇತ್ರಗಳು ಅವಲಂಬಿಸಿರುವುದರಿಂದ, ಆರ್ಥಿಕ ಹೊರೆ, ಮಾಲಿನ್ಯದ ಪ್ರಮಾಣ ಮಿತಿಮೀರುತ್ತಿದೆ. ಪರಿಸರ ನಾಶದ ಘೋರ ಪರಿಣಾಮದಿಂದ ಜೀವನ ದುಸ್ತರವಾಗುತ್ತಿದೆ.

ಇವನ್ನೆಲ್ಲ ವಸ್ತುನಿಷ್ಠವಾಗಿ ದಾಖಲಿಸುವ ಜವಾಬ್ದಾರಿ ಸಂಶೋಧನಾ ಕ್ಷೇತ್ರದ್ದು. ಸರ್ಕಾರವೇ ಅನುದಾನ ನೀಡುವ ಸಂಶೋಧನಾ ವಲಯ (ಜಿಡಿಪಿಯ ಶೇ 1) ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳು (ಜಿಡಿಪಿಯ ಶೇ 4.5), ವೈಜ್ಞಾನಿಕ ಸಲಹೆ ಮತ್ತು ತಂತ್ರಜ್ಞಾನದ ಪರಿಹಾರಗಳನ್ನು ಸೂಚಿಸಬೇಕು. ಆದರೆ, ಬಹುಪಾಲು ಸಂಶೋಧನೆಗಳು ಯೋಜನಾ ವರದಿ ಮತ್ತು ವೈಜ್ಞಾನಿಕ ಲೇಖನಗಳನ್ನೂ ಮೀರಿ, ನಿರ್ದಾಕ್ಷಿಣ್ಯವಾಗಿ ಖಚಿತ ಸಲಹೆಗಳನ್ನು ಸರ್ಕಾರದ ಮುಂದಿಡುವುದೇ ಇಲ್ಲ. ನೀಡಿದ ಸೂಕ್ತ ಶಿಫಾರಸುಗಳನ್ನಾದರೂ ಅನುಷ್ಠಾನಗೊಳಿಸಲು ಸರ್ಕಾರವು ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಇನ್ನೂ ಅಪರೂಪ. ಕುಸಿಯುತ್ತಿರುವ ನೈಸರ್ಗಿಕ ತಳಹದಿಗೆ ಸಂಶೋಧನಾ ವಲಯವು ಮೂಕಪ್ರೇಕ್ಷಕವಾಗುತ್ತಿದೆ!

ಆಡಳಿತ ನೀತಿಗಳ ಕಥೆ ಇನ್ನೊಂದು ಬಗೆಯದು. ಸಂವಿಧಾನದ 21ನೇ ವಿಧಿಯೇನೋ ಎಲ್ಲ ನಾಗರಿಕರಿಗೂ ಉತ್ತಮ ಪರಿಸರದ ಹಕ್ಕನ್ನು ನೀಡಿದೆ. ಈ ಆಧಾರದಲ್ಲಿಯೇ ಅರಣ್ಯ, ನೀರು, ಪರಿಸರ, ಅದಿರು, ಸಾರ್ವಜನಿಕ ಆರೋಗ್ಯ ಇತ್ಯಾದಿಗಳೆಲ್ಲದರ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ರಾಷ್ಟ್ರೀಯ ನೀತಿಗಳು ರಚನೆಯಾಗಿವೆ. ನೀತಿ ಆಯೋಗ, ಸಂಸತ್ತಿನ ಸಮಿತಿಗಳು, ಉನ್ನತ ಆಯೋಗಗಳು, ತಜ್ಞರ ಸಮಿತಿಗಳು- ಇವೆಲ್ಲ ಸರ್ಕಾರಕ್ಕೆ ನಿರಂತರವಾಗಿ ವರದಿಗಳನ್ನು ಸಲ್ಲಿಸುತ್ತಲೂ ಇವೆ. ನ್ಯಾಯಾಂಗವಂತೂ ಅಮೂಲ್ಯ ತೀರ್ಮಾನ ಮತ್ತು ನಿರ್ದೇಶನಗಳನ್ನು ನೀಡುತ್ತಲೇ ಇದೆ. ಆದರೆ, ಇವೆಲ್ಲ ಸೂಕ್ತ ಕಾನೂನುಗಳಾಗಿ ರೂಪುಗೊಳ್ಳುತ್ತಲೇ ಇಲ್ಲ. ಸಂರಕ್ಷಣಾ ನೀತಿಗಳೆಲ್ಲ ಕೇವಲ ‘ಬೌದ್ಧಿಕ ಕಸರತ್ತಿಗೆ’ ಸೀಮಿತವಾಗುತ್ತಿವೆಯೇ?

ಇರುವ ಕಾನೂನುಗಳ ಅನುಷ್ಠಾನವಾದರೂ ಹೇಗಿದೆ? ಅರಣ್ಯ, ವನ್ಯಜೀವಿ ರಕ್ಷಣೆ, ಪರಿಸರ ಸಂರಕ್ಷಣೆ, ಜೀವವೈವಿಧ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಕಾನೂನುಗಳೆಲ್ಲ ಅದೆಷ್ಟು ಉಲ್ಲಂಘನೆಯಾಗುತ್ತಿವೆಯೆಂದರೆ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮತ್ತು ಉನ್ನತ ನ್ಯಾಯಾಲಯಗಳಿಗೆ ಅವನ್ನೆಲ್ಲ ಕಾಲಮಿತಿಯಲ್ಲಿ ನಿರ್ವಹಿಸಲಾಗುತ್ತಿಲ್ಲ. ಬಹುಪಾಲು ತೀರ್ಮಾನಗಳು ಅಂತಿಮವಾಗಿ ಉದ್ಯಮಕ್ಷೇತ್ರ ನಿರ್ದೇಶಿತ ‘ಅಭಿವೃದ್ಧಿ ಯೋಜನೆ’ಗಳ ಪರವಾಗಿಯೇ ಬರುತ್ತಿರುವುದನ್ನೂ ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಸಂಶೋಧನೆಗಳ ಅನನ್ಯ ಕಾಣ್ಕೆಗಳು, ಅಮೂಲ್ಯ ಸರ್ಕಾರಿ ನೀತಿಗಳು ಹಾಗೂ ಸಕಲರ ಹಿತ ಕಾಯುವ ಕಾನೂನುಗಳೆಲ್ಲವೂ ಖಾಸಗೀಕರಣ ಮತ್ತು ವ್ಯಾಪಾರೀಕರಣವು ಹುಟ್ಟುಹಾಕಿರುವ ‘ಅಭಿವೃದ್ಧಿ ಯಂತ್ರ’ಕ್ಕೆ ಬಲಿಯಾಗುತ್ತಿವೆ.

ಸ್ವಾತಂತ್ರ್ಯ ಬಂದಾಗ ಆಹಾರ ಮತ್ತು ಸೂರು ಒದಗಿಸಿ ಬಡತನ ನೀಗಿಸುವ ಸವಾಲಿತ್ತು. ಆ ಕಾಲಘಟ್ಟವು ಪರಿಸರ ಜಾಗೃತಿಯಿರದ ‘ಕತ್ತಲ ಯುಗ’ವಾಗಿದ್ದು ಸಹಜವೆ. 70ರ ದಶಕದ ನಂತರ ಹೆಚ್ಚಿದ ಶಿಕ್ಷಣ ಮಟ್ಟ ಹಾಗೂ ಸಂಶೋಧನೆ, ಚುರುಕಾದ ನ್ಯಾಯಾಂಗ, ಪರಿಸರ ಚಳವಳಿಗಳು, ಸಮೂಹ ಮಾಧ್ಯಮದ ವಿಸ್ತರಣೆ ಇವೆಲ್ಲವುಗಳಿಂದಾಗಿ ಸಮಾಜ ಹೆಚ್ಚು ‘ಜಾಗೃತಾವಸ್ಥೆ’ಗೆ ತಲುಪಿದ್ದು ಗಮನಾರ್ಹ. ಆದರೆ, ಕಾಲುಶತಮಾನದಿಂದೀಚೆಗೆ ಉದಾರೀಕರಣವು ಹೊತ್ತುತಂದ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಸಮಾಜವೇ ಬಂದಿಯಾದಂತಿದೆ. ನೈಸರ್ಗಿಕ ಸಂಪನ್ಮೂಲಗಳನ್ನೆಲ್ಲ ಧ್ವಂಸ ಮಾಡಿ ಸುಖದ ಭ್ರಮೆ ಹುಟ್ಟಿಸುತ್ತಿರುವ ‘ಅಂಧ ಅಭಿವೃದ್ಧಿ ಯುಗ’ವಿದು! ಭೂಇತಿಹಾಸದಲ್ಲಿ ಈಗಾಗಲೇ ಐದು ಬಾರಿ ಜೀವಸಂಕುಲಗಳ ಸಾಮೂಹಿಕ ನಾಶವಾಗಿದ್ದು, ಜೀವವೈವಿಧ್ಯವನ್ನೆಲ್ಲ ಒಮ್ಮೆಲೇ ಕಳೆದುಕೊಳ್ಳುತ್ತಿರುವ ‘ಆರನೇ ಸಾಮೂಹಿಕ ವಿನಾಶ’ದಲ್ಲಿ ನಾವೀಗ ಸಿಲುಕಿಕೊಂಡಿದ್ದೇವೆ ಎಂದು ಸಂಶೋಧನೆಗಳು ಸಾರುತ್ತಿವೆ. ಈ ‘ಅಂಧ ಅಭಿವೃದ್ಧಿ ಯುಗ’ದಿಂದಾಗಿ ನಾವೆಲ್ಲ ಸಾಗುತ್ತಿರುವುದು ಅಂಥ ಸಾಮೂಹಿಕ ಆತ್ಮಹತ್ಯೆಯೆಡೆಗಲ್ಲದೆ, ಇನ್ನೆಲ್ಲಿಗೆ?

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !