ವಾಯು ಮಾಲಿನ್ಯ ಕಡಿತಕ್ಕೆ ಕೇಂದ್ರದ ಅಭಿಯಾನ

7
ಬೆಂಗಳೂರು, ದಾವಣಗೆರೆ, ಕಲ್ಬುರ್ಗಿ, ಹುಬ್ಬಳ್ಳಿ– ಧಾರವಾಡ ನಗರ ಆಯ್ಕೆ

ವಾಯು ಮಾಲಿನ್ಯ ಕಡಿತಕ್ಕೆ ಕೇಂದ್ರದ ಅಭಿಯಾನ

Published:
Updated:

ನವದೆಹಲಿ: ರಾಜ್ಯದ ಬೆಂಗಳೂರು, ದಾವಣಗೆರೆ, ಕಲಬುರ್ಗಿ ಮತ್ತು ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿನ ವಾಯು ಮಾಲಿನ್ಯವನ್ನು ಮುಂದಿನ ಮೂರು ವರ್ಷಗಳಲ್ಲಿ ಶೇಕಡ 35ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಪರಿಸರ ಸಚಿವಾಲಯವು ಮಾಲಿನ್ಯ ವಿರೋಧಿ ಅಭಿಯಾನ ಹಮ್ಮಿಕೊಳ್ಳಲಿದೆ.

ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದಡಿ ದೇಶದ 100 ನಗರಗಳಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಮಾಲಿನ್ಯವನ್ನು ಶೇಕಡ 50ರಷ್ಟು ಕಡಿತಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಕೇಂದ್ರದ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ.

ಅತಿ ಹೆಚ್ಚು ಕಲುಷಿತಗೊಂಡಿರುವ ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿರುವ ರಾಷ್ಟ್ರ ರಾಜಧಾನಿ ವಲಯದಲ್ಲೂ ವಾಯು ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಅಭಿಯಾನ ನಡೆಯಲಿದೆ.

ದೇಶದ 55 ನಗರಗಳಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುಪರ್ದಿಯಲ್ಲಿ ಮಾಲಿನ್ಯ ಮಾಪನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಅನೇಕ ನಗರಗಳಲ್ಲಿ ಕೇವಲ ಒಂದು ಕೇಂದ್ರ ಮಾತ್ರ ಇರುವುದರಿಂದ ಸಮರ್ಪಕವಾದ ಮಾಹಿತಿ ಲಭ್ಯವಾಗುತ್ತಿಲ್ಲ. ದೆಹಲಿ ಮತ್ತಿತರ ಕಡೆಗಳಲ್ಲಿ 10 ಮಾಪಕ ಕೇಂದ್ರಗಳಿವೆ ಎಂದು ಅವರು ಹೇಳಿದರು.

ಪ್ರತಿ ನಗರದಲ್ಲಿ ವಾಯು ಮಾಲಿನ್ಯ ಮಾಪಕ ಕೇಂದ್ರಗಳ ಉಸ್ತುವಾರಿ ಕೊರತೆ ನೀಗಿಸುವಿಕೆಯ ದೃಷ್ಟಿಯಿಂದ ಜಾಲದ ವಿಸ್ತರಣೆ, ವಾಯು ಮಾಲಿನ್ಯದಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಕುರಿತ ಅಧ್ಯಯನ, ವಾಯು ಮಾಹಿತಿ ವ್ಯವಸ್ಥೆಯ ಅಳವಡಿಕೆ, ಮೇಲ್ವಿಚಾರಣೆ ಸಂಸ್ಥೆಗಳ ಪ್ರಮಾಣೀಕರಣ ಮತ್ತು ಗಾಳಿಯ ಗುಣಮಟ್ಟದ ಮುನ್ಸೂಚನೆಗೆ ಈ ಕಾರ್ಯಕ್ರಮದಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ವಾಯು ಮಾಲಿನ್ಯದ ಕಾರಣ ಅರಿಯುವ ನಿಟ್ಟಿನಲ್ಲಿ ಅಧ್ಯಯನ ನಡೆಸುವುದಲ್ಲದೆ, ಅಂತರರಾಷ್ಟ್ರೀಯ ಸಹಕಾರ ವರ್ಧನೆ ಉದ್ದೇಶದಿಂದಲೂ ಈ ನಗರಗಳಲ್ಲಿನ ಮಾಲಿನ್ಯ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ.

ದಕ್ಷಿಣ ಭಾರತದ ಆಂಧ್ರಪ್ರದೇಶದ 5, ತಮಿಳುನಾಡಿನ 1 ಹಾಗೂ ತೆಲಂಗಾಣದ 3 ನಗರಗಳನ್ನು ಅಭಿಯಾನದಡಿ ಆಯ್ಕೆ ಮಾಡಲಾಗಿದ್ದು, ಅಧಿಕ ವಾಯು ಮಾಲಿನ್ಯ ಹೊಂದಿರುವ ಉತ್ತರ ಪ್ರದೇಶ (15) ಹಾಗೂ ಮಹಾರಾಷ್ಟ್ರದ (17) ಹೆಚ್ಚು ನಗರಗಳನ್ನು ಈ ಕಾರ್ಯಕ್ರಮದಡಿ ಸೇರಿಸಲಾಗಿದೆ.

ರಾಜ್ಯದ ಬೆಂಗಳೂರು, ತುಮಕೂರು, ದಾವಣಗೆರೆ, ಬೀದರ್ ಹಾಗೂ ರಾಯಚೂರು ನಗರಗಳಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಇದೆ ಎಂದು ಗ್ರೀನ್‌ಪೀಸ್ ಸಂಘಟನೆ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿತ್ತು.

ಹುಬ್ಬಳ್ಳಿ– ಧಾರವಾಡ, ಕೋಲಾರ, ಕಲಬುರ್ಗಿ ಮತ್ತು ಬೆಳಗಾವಿ ನಗರಗಳು ನಂತರದ ಸ್ಥಾನದಲ್ಲಿದ್ದು, ಹೆಚ್ಚು ಸಾಂದ್ರತೆಯಿಂದ ಕೂಡಿರುವ ದೂಳಿನ ಕಣಗಳು (ಪಿಎಂ) ಶ್ವಾಸಕೋಶ ಪ್ರವೇಶಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ವರದಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry