ಬಂಗಾರ ಕೊಂಡವರ ಪುಳಕ

ಭಾನುವಾರ, ಮೇ 19, 2019
32 °C

ಬಂಗಾರ ಕೊಂಡವರ ಪುಳಕ

Published:
Updated:
Prajavani

ಫು ಟ್‌ಪಾತ್‌ನಿಂದಲೇ ಶುರುವಾಗುವ ಕೆಂಪು ನೆಲಹಾಸಿನ ಮೇಲೆ ಎರಡು ಹೆಜ್ಜೆ ನಡೆಯುತ್ತಿದ್ದಂತೆ ಪ್ರವೇಶದ್ವಾರದಲ್ಲಿ ಸಿಹಿಖಾದ್ಯ ಹಿಡಿದು ನಿಂತ ತರುಣಿಯರು, ಜ್ಯೂಸ್ ಕುಡಿಯಿರಿ ಎಂಬ ಕೋರಿಕೆ. ಅಕ್ಷಯ ತೃತೀಯಾ ನೆಪದಲ್ಲಿ ದಾಂಗುಡಿಯಿಟ್ಟ ಗ್ರಾಹಕರಿಗೆ ಚಿನ್ನಾಭರಣ ಅಂಗಡಿಗಳಲ್ಲಿ ತರಹೇವಾರಿ ಆದರಾತಿಥ್ಯ. 

ಬಹುತೇಕ ಚಿನ್ನದ ಮಳಿಗೆಗಳು ಅಕ್ಷಯಾ ತೃತೀಯಕ್ಕೆ ಶೃಂಗರಿಸಿಕೊಂಡಿದ್ದವು. ದೀಪ, ಹೂವಿನ ಅಲಂಕಾರದಿಂದ ಅಂಗಡಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದವು.  ಜನರೂ ಹಬ್ಬದ ರೀತಿ ಸಿಂಗರಿಸಿಕೊಂಡು ಚಿನ್ನ ಕೊಳ್ಳಲು ಮುಂಜಾನೆ 7 ಗಂಟೆಯಿಂದಲೇ ಮುಗಿಬಿದ್ದಿದ್ದರು. ಎಂ.ಜಿ ರಸ್ತೆಯ ನವರತನ್ ಮಳಿಗೆಯಲ್ಲಿ ಸಿಬ್ಬಂದಿ, ಅತಿಥಿಗಳು ಹಾಗೂ ಗ್ರಾಹಕರಿಗೆ ಊಟಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಆ್ಯಂಟಿಕ್, ಪೂಲ್ಕಿ ಆಭರಣಗಳಿಗೆ ಬೇಡಿಕೆ ಹೆಚ್ಚಿತ್ತು ಎನ್ನುತ್ತಾರೆ ನವರತನ್ ಮಳಿಗೆಯ ನಿರ್ದೇಶಕರೊಬ್ಬರ ಪುತ್ರ ಅಕ್ಷಯ್. ಮಾರಾಟವಾದ ಆಭರಣಗಳಲ್ಲಿ ಚಿನ್ನದ ನೆಕ್ಲೆಸ್‌ ಅನ್‌ಕಟ್ ಡೈಮಂಡ್‌ ನೆಕ್ಲೆಸ್‌ಗಳಿಗೆ ಅಗ್ರಸ್ಥಾನವಂತೆ.

ಈ ಬಾರಿ ಗ್ರಾಹಕರ ಸಂಖ್ಯೆ ಕೊಂಚವೇ ಕಡಿಮೆ ಎನ್ನುತ್ತಾರೆ ಎಂ.ಜಿ.ರಸ್ತೆಯ ಜೋಯಾಲುಕ್ಕಾಸ್ ಮಳಿಗೆಯ ಮಾರುಕಟ್ಟೆ ಮುಖ್ಯಸ್ಥ ಮ್ಯಾಥ್ಯೂ. ಆದರೆ ಹೊಸ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ವ್ಯಾಪಾರ ಭರ್ಜರಿಯಾಗಿಯೇ ಇತ್ತು. ಸಂಜೆ ಒಂದೂವರೆ ಗಂಟೆ ಅವಧಿಯ ರಾಹುಕಾಲ ಇದ್ದಿದ್ದರಿಂದ ಆ ಸಮಯದಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಕತ್ತಲು ಕವಿಯುತ್ತಿದ್ದಂತೆ ಜನರೂ ಬರಲಾರಂಭಿಸಿದರು ಎಂದು ವಹಿವಾಟುವಿನ ವಿವರ ನೀಡಿದರು. 

ಯುವರಾಣಿಗೊಂದು ಪುಟ್ಟ ನೆಕ್ಲೆಸ್

ತಮ್ಮ ಒಂದೂವರೆ ವರ್ಷದ ಪುಟ್ಟ ಕಂದನಿಗೆ ಏನಾದರೊಂದು ಆಭರಣ ಖರೀದಿಸಬೇಕೆಂಬ ಹಂಬಲದಿಂದ ಬಂದಿದ್ದವರು ಅನ್ಬಳಗನ್ ಹಾಗೂ ಅಮುದಾ ದಂಪತಿ. ಮೊಮ್ಮಗಳ ಮೇಲಿನ ಅಕ್ಕರೆ ಅವರನ್ನು ಜೋಯಾಲುಕ್ಕಾಸ್ ಚಿನ್ನದಂಗಡಿಗೆ ಕರೆತಂದಿತ್ತು. ಸಮೃದ್ಧಿ ತರುವ ಅಕ್ಷಯ ತೃತೀಯಾದಂದು ತಮ್ಮ ಪುಟ್ಟ ಯುವರಾಣಿಗೆ ಪುಟ್ಟದೊಂದು ನೆಕ್ಲೆಸ್ ಖರೀದಿಯಲ್ಲಿ ಅವರು ಬ್ಯುಸಿಯಾಗಿದ್ದರು. 

ಅಕ್ಷಯ ತೃತೀಯಾದಂದು ತುಂಬಾ ಜನರಿರುತ್ತಾರೆ ಎಂಬ ಕಾರಣಕ್ಕೆ ಮುನಿರಾಜು ಎಂಬುವರು ಒಂದು ದಿನ ಮುನ್ನವೇ ಬುಕ್ಕಿಂಗ್ ಮಾಡಿದ್ದರು. ಹಬ್ಬದ ದಿನ ಮನೆಗೆ ಕೊಂಡೊಯ್ಯಲು ಅವರು ಅಂಗಡಿಗೆ ಬಂದಿದ್ದರು. ಮನೆಯವರಿಗೆ ನೆಕ್ಲೆಸ್ ಖರೀದಿಸಿದ ಖುಷಿ ಅವರ ಮೊಗದಲ್ಲಿತ್ತು. ನವರತನ್‌ನಲ್ಲಿ ಕಲೆಕ್ಷನ್ ಆಕರ್ಷಕವಾಗಿತ್ತು ಎಂದರು. 

ಚಿಕ್ಕಮಗಳೂರು ಮೂಲದ, ಬೆಂಗಳೂರಿನಲ್ಲಿ ನೆಲೆಯಾಗಿರುವ ರಾಘವೇಂದ್ರ ಶೆಟ್ಟಿ ಅವರಿಗೆ ತಮ್ಮ ಪತ್ನಿಗೆ ಬ್ರೇಸ್ಲೇಟ್ ಉಡುಗೊರೆ ನೀಡಿದ ಪುಳಕ. ಮಳಿಗೆ ಪ್ರವೇಶದ್ವಾರದ ಹೂವಿನ ಅಲಂಕಾರದ ಎದುರು ಫೋಟೋ ತೆಗೆಸಿಕೊಂಡು ಸಂಭ್ರಮವನ್ನು ಆ ದಂಪತಿ ಇಮ್ಮಡಿಗೊಳಿಸಿಕೊಂಡರು.

2000 ಕೆ.ಜಿ. ಚಿನ್ನ ಮಾರಾಟ: ಮಲಬಾರ್‌ ನಿರೀಕ್ಷೆ

ಅಕ್ಷಯಾ ತೃತೀಯಾದಂದು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಸಂಸ್ಥೆ ದೇಶ ಮತ್ತು ವಿದೇಶಗಳಲ್ಲಿರುವ ತನ್ನ ಮಳಿಗೆಗಳಲ್ಲಿ ಒಟ್ಟು 2000 ಕೆ.ಜಿ. ಚಿನ್ನ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿತ್ತು. 

ಕರ್ನಾಟಕದ ಎಲ್ಲ ಮಲಬಾರ್‌ ಮಳಿಗೆಗಳಲ್ಲಿ ಚಿನ್ನಾಭರಣಗಳ ಮೇಕಿಂಗ್‌ ಚಾರ್ಜ್‌ ಮೇಲೆ ಶೇ 50ರಷ್ಟು ಮತ್ತು ವಜ್ರಾಭರಣಗ ಮೇಕಿಂಗ್‌ ಚಾರ್ಜ್‌ ಮೇಲೆ ಶೇ 20ರಷ್ಟು ರಿಯಾಯ್ತಿ ಘೋಷಿಸಿದೆ. ಮಂಗಳವಾರ ಬೆಳಿಗ್ಗೆ ಏಳು ಗಂಟೆಯಿಂದಲೇ ಎಲ್ಲ ಮಳಿಗೆಗಳನ್ನು ತೆರೆಯಲಾಗಿತ್ತು. ರಾತ್ರಿ ತಡಹೊತ್ತಿನವರೆಗೂ ವಹಿವಾಟು ನಡೆಸಲಾಯಿತು. ಕಳೆದ ಬಾರಿಯ ವಹಿವಾಟು ಗಮನಿಸಿದಾಗ ಈ ಬಾರಿ ಮಲಬಾರ್‌ ಸಂಸ್ಥೆ 2000 ಕೆ.ಜಿ. ಚಿನ್ನದ ವಹಿವಾಟು ನಡೆಸುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ಚೇರ್‌ಮನ್‌ ಎಂ.ಪಿ. ಅಹಮ್ಮದ್‌ ತಿಳಿಸಿದ್ದಾರೆ.

ಎರಾ, ಮೈನ್‌, ಎಥ್ನಿಕ್ಸ್‌, ಪ್ರೆಸಿಯಾ, ಡಿವೈನ್‌ ಮತ್ತು ಸ್ಟಾರ್ಲೆಟ್‌ ಬ್ರಾಂಡ್‌ನ ಅಡಿ ಬಗೆ,ಬಗೆಯ ಹೊಸ ವಿಶೇಷ ವಿನ್ಯಾಸಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ. 

ಸ್ವರ್ಣ ಆಕರ್ಷಣ ಭೈರವ 

ಚಿನ್ನ ಮತ್ತು ವಜ್ರಾಭರಣ ತಯಾರಿಕೆ ಮತ್ತು ಮಾರಾಟದಲ್ಲಿ 150 ವರ್ಷಗಳ ಇತಿಹಾಸ ಹೊಂದಿರುವ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ ಆಫ್‌ ಜುವೆಲರ್ಸ್‌ ಅಕ್ಷಯಾ ತೃತೀಯಾ ದಿನಕ್ಕಾಗಿಯೇ ವಿಶೇಷವಾಗಿ ಸ್ವರ್ಣ ಆಕರ್ಷಣ ಭೈರವ ಮೂರ್ತಿಯನ್ನು ತಯಾರಿಸಿದೆ. ವಜ್ರ,ಚಿನ್ನ ಮತ್ತು ಬೆಳ್ಳಿಯ ಮೂರ್ತಿಗಳನ್ನು ತಯಾರಿಸಲು ಆರು ತಿಂಗಳ ಕಾಲಾವಕಾಶ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆಯ ಡಾ. ಸಿ. ವಿನೋದ್‌ ಹಯಗ್ರೀವ ತಿಳಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !