ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದ ನಾಲಿಗೆಯ ಆರ್ಡ್‌ವಾರ್ಕ್‌

Last Updated 25 ಜೂನ್ 2019, 19:45 IST
ಅಕ್ಷರ ಗಾತ್ರ

ಮೂತಿ ನೋಡಿದರೆ ಹಂದಿಮರಿಯಂತೆಯೂ ದೇಹದ ಆಕಾರದಲ್ಲಿ ಕಾಂಗೂರುವಿನಂತೆಯೂ ಕಾಣುವ ಆರ್ಡ್‌ವಾರ್ಕ್‌ ಆಫ್ರಿಕಾ ಮೂಲದ ಸಸ್ತನಿ. ಸ್ಥಳೀಯವಾಗಿ ಇದನ್ನು ‘ಅರ್ಥ್‌ ಪಿಗ್‌’ ಎಂದು ಕರೆಯುತ್ತಾರೆ. ಆದರೆ, ಇದಕ್ಕೂ ಹಂದಿ ಮರಿಗೂ ಯಾವುದೇ ಸಾಮ್ಯತೆ ಇಲ್ಲ. ಇದರ ವೈಜ್ಞಾನಿಕ ಹೆಸರು ಒರಿಕ್ಟೆರೊಪಸ್‌ ಅಫರ್ (Orycteropus afer), ಮ್ಯಾಮಿಲಿಯಾ ವರ್ಗಕ್ಕೆ ಸೇರುತ್ತದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತೆ?

ಬಾಗಿದ ಬೆನ್ನು, ಉದ್ದ ಮೂತಿ, ದಪ್ಪ ಕಾಲುಗಳನ್ನು ಹೊಂದಿರುವ ಆರ್ಡ್‌ವಾರ್ಕ್‌ ಹಲ್ಲುಗಳು ವಿಶಿಷ್ಟವಾಗಿ ರಚನೆಯಾಗಿದೆ. ಈ ಪ್ರಾಣಿಗೆ ದಂತಕುಳಿ ಇರುವುದಿಲ್ಲ. ಬದಲಿಗೆ ಹಲ್ಲಿನ ಭಾಗದಲ್ಲಿ ದಂತ ದ್ರವ್ಯ ಇರುವ ಕೊಳವೆಯಾಕಾರದ ಚರ್ಮ ಇರುತ್ತದೆ. ದವಡೆಯ ಸಹಾಯದಿಂದ ಆಹಾರವನ್ನು ಜಗಿಯುತ್ತವೆ. ಮೈ ಮೇಲೆ ವಿರಳವಾಗಿ ಒರಟು ಕೂದಲುಗಳಿರುತ್ತದೆ. ಕಾಲುಗಳು ಮಧ್ಯಮ ಗಾತ್ರದಲ್ಲಿದ್ದು, ಪಾದದಲ್ಲಿ ಹೆಬ್ಬೆರಳು ಇರುವುದಿಲ್ಲ.

ಸಲಿಕೆಯಾಕಾರದಲ್ಲಿರುವ ಪಂಜಗಳು ಬಹಳ ಬಲಿಷ್ಠವಾಗಿದ್ದು, ಭೂಮಿಯನ್ನು ಕೊರೆಯಲು ಸಹಕಾರಿಯಾಗಿದೆ. ಇದರ ಕಿವಿಗಳು ಉದ್ದವಾಗಿದ್ದು, ಬಾಲ ದಪ್ಪವಾಗಿರುತ್ತದೆ. ದಪ್ಪ ಕತ್ತನ್ನು ಹೊಂದಿರುತ್ತದೆ. ಈ ಪ್ರಾಣಿಗೆ ತೆಳುವಾದ, 30 ಸೆಂ.ಮೀ ಉದ್ದವಾದ ಹೊರಚಾಚಿದಂತ ನಾಲಿಗೆ ಇರುತ್ತದೆ. ಆಹಾರವನ್ನು ಅರಸಲು ಇದು ಪೂರಕವಾಗಿದೆ. ಮಸುಕು ಹಳದಿ ಬಣ್ಣದಲ್ಲಿರುವ ಈ ಪ್ರಾಣಿಯು ಮಣ್ಣಿನಲ್ಲಿಯೇ ಇರುವುದರಿಂದ ಅದರ ಮೈಬಣ್ಣ ಮಣ್ಣಿನ ಬಣ್ಣವಾಗಿರುತ್ತದೆ.

* ಉದ್ದ – ಮೂರರಿಂದ ನಾಲ್ಕು ಅಡಿ
* ಗಾತ್ರ – 40ರಿಂದ 60 ಕೆ.ಜಿ.
* ಬಾಲದ ಉದ್ದ – 70 ಸೆಂ.ಮೀ

ಜೀವನ ಕ್ರಮ ಮತ್ತು ವರ್ತನೆ

ನಿಶಾಚಾರಿಯಾಗಿದ್ದು, ರಾತ್ರಿ ಹೊತ್ತು ಚಟುವಟಿಕೆಯಿಂದ ಇರುತ್ತದೆ. ಸಂಜೆಯಾಗುತ್ತಿದ್ದಂತೆ ತನ್ನ ಬಿಲದಿಂದ ಹೊರಬರುವ ಆರ್ಡ್‌ವಾರ್ಕ್, 10ರಿಂದ 30 ಕಿ.ಮೀ ವರೆಗೂ ನಡೆದುಕೊಂಡು ಬೇಟೆಯಾಡುತ್ತದೆ. ಉದ್ದ ಮೂಗಿನಿಂದ ಆಹಾರ ವಾಸನೆಯನ್ನು ಗ್ರಹಿಸುತ್ತದೆ. ಚಿರತೆ, ಹುಲಿ, ಸಿಂಹದಂಥ ಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸದಾ ತನ್ನ ಕಿವಿಯನ್ನು ನೆಟ್ಟಗೆ, ಚುರುಕಾಗಿ ಇಟ್ಟುಕೊಂಡಿರುತ್ತದೆ. ಬಲು ವೇಗವಾಗಿ ಭೂಮಿ ಅಗೆಯುವ ಇದು ಬಹಳ ನಿಧಾನವಾಗಿ ನಡೆಯುತ್ತದೆ. 13 ಮೀಟರ್‌ನಷ್ಟು ಉದ್ದದ ಹಲವು ದ್ವಾರಗಳಿರುವ ಬಿಲವನ್ನು ಕಟ್ಟಿಕೊಳ್ಳುತ್ತದೆ.

ಆವಾಸಸ್ಥಾನ

ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುವ ಆರ್ಡ್‌ವಾರ್ಕ್‌ ಹಲ್ಲುಗಾವಲು, ಮರದಿಮ್ಮಿಗಳಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಮ್ಮೆ ಮಳೆಕಾಡುಗಳಲ್ಲಿ, ಮರುಭೂಮಿಗಳಲ್ಲಿಯೂ ಇರುವುದರ ಬಗ್ಗೆ ಕುರುಹುಗಳು ಕಂಡುಬರುತ್ತದೆ. ನೆಲದಡಿ ಬಿಲ ಕೊರೆದು ವಾಸಿಸಬಲ್ಲದು.

ಸಂತಾನೋತ್ಪತ್ತಿ

ಆರ್ಡ್‌ವಾರ್ಕ್‌ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ಏಳು ತಿಂಗಳ ಕಾಲ ಗರ್ಭ ಧರಿಸುತ್ತದೆ. ಪ್ರತಿ ಮರಿಯು 2 ಕೆ.ಜಿ. ತೂಗುತ್ತದೆ. ಹುಟ್ಟುವಾಗ ಇದಕ್ಕೆ ಕೂದಲುಗಳಿರುವುದಿಲ್ಲ. ತಿಳಿಗುಲಾಬಿ ಬಣ್ಣದಲ್ಲಿರುತ್ತದೆ. ಎರಡು ವಾರಗಳ ಕಾಲ ಬಿಲದಿಂದ ಹೊರಕ್ಕೆ ಬರುವುದಿಲ್ಲ. ತಾಯಿಯ ಎದೆಹಾಲು ಬಿಟ್ಟರೆ ಮೂರು ತಿಂಗಳವರೆಗೆ ಗಟ್ಟಿ ಆಹಾರವನ್ನು ತಿನ್ನುವುದಿಲ್ಲ. ತನ್ನದೇ ಬಿಲ ತೋಡಲು ಆರು ತಿಂಗಳ ಮರಿ ಸಶಕ್ತ. ಒಂದು ವರ್ಷದ ತರುವಾಯ ಸಂತಾನೋತ್ಪತ್ತಿ ನಡೆಸಲು ಆರಂಭಿಸುತ್ತದೆ.

ಆಹಾರ ಪದ್ಧತಿ

ಸಣ್ಣ ಕೀಟಗಳು, ಹುಳುಗಳನ್ನು ತಿಂದು ಬದುಕುತ್ತದೆ. ಆದರೆ, ಹಣ್ಣಿನಲ್ಲಿ ಸೌತೇಕಾಯಿಯನ್ನು ತಿನ್ನುತ್ತದೆ. ಒಂದೇ ಬಾರಿಗೆ 50 ಸಾವಿರಕ್ಕೂ ಹೆಚ್ಚು ಹುಳುಗಳನ್ನು ತನ್ನ ಉದ್ದ ನಾಲಿಗೆಯ ಸಹಾಯದಿಂದ ಭಕ್ಷಿಸುವ ಸಾಮರ್ಥ್ಯ ಇದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT