ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಳ ಕೋಡುಗಳ ಕಾಡು ಮೇಕೆಆಲ್ಪೈನ್ ಐಬೆಕ್ಸ್‌

Last Updated 30 ಜುಲೈ 2019, 13:58 IST
ಅಕ್ಷರ ಗಾತ್ರ

ಮೇಕೆ ಮತ್ತು ಕುರಿಗಳು ಬಹುತೇಕ ಸಾಕು ಪ್ರಾಣಿಗಳಾಗಿಯೇ ನಮಗೆಲ್ಲರಿಗೂ ಪರಿಚಯ. ಆದರೆ ಕಾಡುಗಳಲ್ಲಿ ವಾಸಿಸುವ ಮೇಕೆ ಮತ್ತು ಕುರಿಗಳ ಕೆಲವು ಪ್ರಭೇದಗಳೂ ಇವೆ. ಅಂತಹ ಪ್ರಭೇದಗಳಲ್ಲಿ ಆಲ್ಪೈನ್ ಐಬೆಕ್ಸ್‌ (Alpine Ibex) ಕೂಡ ಒಂದು. ಇಂದಿನ ಪ್ರಾಣಿ ಪ್ರಪಂಚದಲ್ಲಿ ಈ ಅಪರೂಪದ ಮೇಕೆಯ ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಕ್ಯಾಪ್ರಾ ಐಬೆಕ್ಸ್‌ (Capra ibex). ಇದು ಸಸ್ಯಾಹಾರಿ ಪ್ರಾಣಿಗಳ ಬೋವಿಡೆ (Bovidae) ಕುಟುಂಬಕ್ಕೆ ಮತ್ತು ಕ್ಯಾಪ್ರಿನೆ (Caprinae) ಎಂಬ ಉಪ‍ ಕುಟುಂಬಕ್ಕೆ ಸೇರಿದೆ.

ಹೇಗಿರುತ್ತದೆ?

ಸಾಕು ಮೇಕೆಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಕಂದು, ಕಪ್ಪು, ಬಿಳಿ ಬಣ್ಣದ ತುಪ್ಪಳದಿಂದ ದೇಹ ಆವರಿಸಿರುತ್ತದೆ. ಚಳಿಗಾಲದಲ್ಲಿ ತುಪ್ಪಳ ಹೆಚ್ಚು ಮಂದವಾಗಿ ಬೆಳೆಯುತ್ತದೆ. ಬೇಸಿಗೆಯಲ್ಲಿ ತುಪ್ಪಳದ ಕೂದಲು ಹೆಚ್ಚಾಗಿ ಉದುರುತ್ತದೆ. ಮಾಂಸಖಂಡಗಳು ದೃಢವಾಗಿರುತ್ತವೆ. ಕಾಲುಗಳು ಕುದುರೆಗಿರುವಂತೆ ಬಲಿಷ್ಠವಾಗಿದ್ದು, ಎರಡು ಗೊರಸುಗಳು ಇರುತ್ತವೆ. ಬಾಲ ಪುಟ್ಟದಾಗಿರುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಂದು ಬಣ್ಣದಲ್ಲಿರುತ್ತವೆ. ಎಲೆಯಾಕಾರದ ಕಿವಿಗಳು ಪುಟ್ಟದಾಗಿದ್ದು, ಸದಾ ಸೆಟೆದುಕೊಂಡಿರುತ್ತವೆ. ಕೋಡುಗಳು ನೀಳವಾಗಿ, ದೊಡ್ಡದಾಗಿದ್ದು, ಆಕರ್ಷಕವಾಗಿ ಕಾಣುತ್ತವೆ. ಕೋಡುಗಳ ಮೇಲೆ ಸುರುಳಿಯಾಕಾರದ ಗುರುತುಗಳು ಇರುತ್ತವೆ. ಬೆಳೆದಂತೆಲ್ಲಾ ಬಾಗಿ, ತುದಿಯಲ್ಲಿ ಚೂಪಾಗಿರುತ್ತವೆ. ಗಾತ್ರದಲ್ಲಿ ಹೆಣ್ಣಿಗಿಂತ ಗಂಡು ಐಬೆಕ್ಸ್‌ ತುಸು ದೊಡ್ಡದಾಗಿರುತ್ತದೆ. ಗಲ್ಲದ ಕೆಳಗೆ ಪುಟ್ಟ ಗಡ್ಡ ಬೆಳೆದಿರುತ್ತದೆ.

ಎಲ್ಲಿದೆ?

ಫ್ರಾನ್ಸ್‌ನ ಮರಿನೇ ವ್ಯಾಲಿ ಮತ್ತು ಇಟಲಿಯ ಗ್ರ್ಯಾನ್ ಪ್ಯಾರಡಿಸೊ ರಾಷ್ಟ್ರೀಯ ಉದ್ಯಾನದಲ್ಲಿ ಮಾತ್ರ ಈ ಆಡುಗಳು ಇರುತ್ತಿದ್ದವು. ನಂತರ ಯುರೋಪ್‌ನ ಆಲ್ಪ್‌ ಪರ್ವತ ಶ್ರೇಣಿ ಪ್ರದೇಶಕ್ಕೂ ಇದರ ಸಂತತಿ ವಿಸ್ತರಿಸಿತು. ಈಗ ಈ ಪ್ರದೇಶದಲ್ಲೇ ಈ ಆಡುಗಳು ಹೆಚ್ಚಾಗಿವೆ. ಸ್ವಿಟ್ಜರ್ಲೆಂಡ್‌, ಆಸ್ಟ್ರೀಯಾ, ಜರ್ಮನಿ, ಬಲ್ಗೇರಿಯಾ, ಸ್ಲೊವೇನಿಯಾ ರಾಷ್ಟ್ರಗಳಲ್ಲೂ ಇವನ್ನು ಕಾಣಬಹುದು. ಸಮುದ್ರ ಮಟ್ಟದಿಂದ ಸುಮಾರು 15 ಸಾವಿರ ಅಡಿ ಎತ್ತರದಲ್ಲಿ ಇದು ವಾಸಿಸುತ್ತದೆ. ಪರ್ವತ ಪ್ರದೇಶಗಳೇ ಇದರ ನೆಚ್ಚಿನ ವಾಸಸ್ಥಾನ. ದುರ್ಗಮವಾದ ಪರ್ವತಗಳನ್ನೂ ಸುನಾಯಸವಾಗಿ ಏರುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಗಂಪಿನಲ್ಲಿ ವಾಸಿಸಲು ಇಷ್ಟಪಡುವ ಪ್ರಾಣಿ. ಗುಂಪಿನಲ್ಲಿ ಪ್ರಬಲವಾದ ಒಂದು ಗಂಡು ಮೇಕೆ ಮತ್ತು 10ರಿಂದ 20 ಹೆಣ್ಣು ಮೇಕೆಗಳು ಮತ್ತು ಮರಿಗಳು ಇರುತ್ತವೆ. ಶ್ರೇಣಿಕೃತ ಜೀವನ ವ್ಯವಸ್ಥೆ ನಡೆಸುತ್ತದೆ. ಪ್ರಬಲ ಆಡುಗಳು ಉಳಿದವುಗಳ ಮೇಲೆ ಪಾರಮ್ಯ ಮೆರೆಯುತ್ತವೆ. ಮುಂಜಾನೆ ಮತ್ತು ಸಂಜೆ ಇದು ಹೆಚ್ಚು ಚುರುಕಾಗಿರುತ್ತದೆ. ಮಧ್ಯಾಹ್ನದ ವೇಳೆಯಲ್ಲಿ ನೆರಳಿನಲ್ಲಿ ವಿಶ್ರಾಂತಿ ಪಡೆದು ಮೆಲುಕು ಹಾಕುತ್ತದೆ. ಋತುವಿಗೆ ತಕ್ಕಂತೆ ವಾಸಸ್ಥಾನವನ್ನು ಬದಲಾಯಿಸುತ್ತಿರುತ್ತದೆ. ಇತರೆ ಆಡುಗಳಿಗೆ ಹೋಲಿಸಿದರೆ ಇದು ಸ್ವಲ್ಪ ಸೋಮಾರಿ. ಒಮ್ಮೆ ಆಹಾರ ದೊರತರೆ ಒಂದೇ ಕಡೆ ಹೆಚ್ಚು ಹೊತ್ತು ಕುಳಿತು ಕಾಲ ಕಳೆಯುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಹುಲ್ಲು, ಹೂಗಳು, ಪೊದೆ ಗಿಡಗಳು, ಇತರೆ ಗಿಡಗಳ ಎಲೆಗಳೇ ಇದರ ಪ್ರಮುಖ ಆಹಾರ. ಬೇಸಿಗೆಯಲ್ಲಿ ನೀರು ಹೆಚ್ಚಾಗಿ ಸಿಗುವ ಪ್ರದೇಶಗಳನ್ನು ಹುಡುಕಿಕೊಂಡು ಹೋಗುತ್ತದೆ. ಇದು ನೀರು ಹೆಚ್ಚಾಗಿ ಕುಡಿಯುತ್ತದೆ.

ಸಂತಾನೋತ್ಪತ್ತಿ

ಗುಂಪಿನ ಪ್ರಬಲ ಐಬೆಕ್ಸ್ ಎಲ್ಲ ಹೆಣ್ಣು ಮೇಕೆಗಳೊಂದಿಗೆ ಜೊತೆಯಾಗುತ್ತದೆ. ಶರತ್ಕಾಲದಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಹೆಣ್ಣು ಆಡುಗಳು ಸುಮಾರು 6 ತಿಂಗಳು ಗರ್ಭಧರಿಸಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಒಂದು ಮರಿಗೆ ಜನ್ಮ ನೀಡುತ್ತವೆ. ಮರಿಗಳು ಜನಿಸಿದ ಕೆಲವೇ ಗಂಟೆಗಳಲ್ಲಿ ಎದ್ದು ಓಡಾಡಲು ಆರಂಭಿಸುತ್ತವೆ. ಗುಂಪಿನ ಇತರೆ ಮರಿಗಳೊಂದಿಗೆ ಸೇರಿ ನಲಿಯುತ್ತವೆ. 8 ತಿಂಗಳಿನಿಂದ 1 ವರ್ಷ ಪೂರೈಸುವ ಹೊತ್ತಿಗೆ ವಯಸ್ಕ ಹಂತ ತಲುಪುತ್ತವೆ. 2ರಿಂದ 3 ವರ್ಷಗಳ ನಂತರ ಸಂತಾನೋತ್ಪತ್ತಿ ನಡೆಸುತ್ತವೆ.

ಸ್ವಾರಸ್ಯಕರ ಸಂಗತಿಗಳು

ಗ್ಯಾಕಲ್ಸ್‌ ಎಂಬ ಕಾಗೆಯನ್ನು ಹೋಲುವ ಹಕ್ಕಿಗಳು ಐಬಿಕ್ಸ್ ಮೈ ಮೇಲಿನ ಹುಳುಗಳನ್ನು ಹೆಕ್ಕಿ ತಿಂದು ಅವುಗಳಿಗೆ ಆರೋಗ್ಯ ಸಮಸ್ಯೆಗಳು ಕಾಡದಂತೆ ಸಹಾಯ ಮಾಡುತ್ತಿವೆ.

8ನೇ ಶತಮಾನದಲ್ಲಿ ಯುರೋಪಿಯನ್ನರು ಇದನ್ನು ‘ಮಾಯಾ ಮೇಕೆ’ ಎಂದು ಭಾವಿಸಿದ್ದರು.

ದುರ್ಗಮವಾದ ಪ್ರದೇಶಗಳಲ್ಲೂ ಸುಲಭವಾಗಿ ಚಲಿಸುವ ಸಾಮರ್ಥ್ಯ ಇದಕ್ಕಿದೆ.

6 ಅಡಿಗಳಷ್ಟು ದೂರದ ವರೆಗೆ ನೆಗೆಯುವ ಜಿಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT