ಸುಂದರ ಹಕ್ಕಿ ಆಂಡಿಯನ್ ಕೋಕ್ ಆಫ್ ರಾಕ್

7
ಪಕ್ಷಿ ಪ್ರಪಂಚ

ಸುಂದರ ಹಕ್ಕಿ ಆಂಡಿಯನ್ ಕೋಕ್ ಆಫ್ ರಾಕ್

Published:
Updated:

ನೋಡಿದ ಕೂಡಲೇ ಗಮನ ಸೆಳೆಯುವಂತಹ ಹಕ್ಕಿಗಳು ಹಲವು ಇವೆ. ಇವುಗಳ ಸೌಂದರ್ಯದ ಸೊಬಗು ಆಕರ್ಷಿಸುವಂಥದ್ದು. ಅಂತಹ ಅಪರೂಪದ ಸುಂದರ ಹಕ್ಕಿಗಳಲ್ಲಿ ಆಂಡಿಯನ್ ಕೋಕ್ ಆಫ್ ರಾಕ್ ಕೂಡ ಒಂದು. ಈ ಹಕ್ಕಿಯು ಕೊಟಿಂಗ್ಡೆ (Cotingidae) ಕುಟುಂಬಕ್ಕೆ ಸೇರಿದೆ.

ಈ ಹಕ್ಕಿಯ ವೈಜ್ಞಾನಿಕ ಹೆಸರು (Rupicola peruvianus)  ರುಪಿಕೋಲಾ ಪರ್ವಿಯನ್ಸ್. ಇದು ಪೆರು ದೇಶದ ರಾಷ್ಟ್ರೀಯ ಪಕ್ಷಿ.  ಇವುಗಳಲ್ಲಿ ಈವರೆಗೆ 1,800ಕ್ಕೂ ಹೆಚ್ಚು ತಳಿಗಳನ್ನು ಗುರುತಿಸಲಾಗಿದೆ.  ಇಂದಿನ
ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ? 

ಗಂಡು ಮತ್ತು ಹೆಣ್ಣು ಪಕ್ಷಿಗಳ ಬಣ್ಣ, ಆಕಾರ, ಗಾತ್ರದಲ್ಲಿ ಹಲವು ವ್ಯತ್ಯಾಸಗಳು ಇರುತ್ತವೆ.

ಗಂಡು: ಇದು ನೀಳವಾದ ದೇಹವನ್ನು ಹೊಂದಿದ್ದು, ಕಿತ್ತಳೆ, ಕಪ್ಪು ಮತ್ತು ಬೂದು ಬಣ್ಣದ ಪುಕ್ಕದಿಂದ ದೇಹ ಆವರಿಸಿರುತ್ತದೆ. ತಲೆಯ ಮೆಲ್ಭಾಗದಲ್ಲಿ ಸುಂದರವಾದ ಜುಟ್ಟು ರಚನೆಯಾಗಿರುತ್ತದೆ. ಈ ಜುಟ್ಟು ಕತ್ತಿನ ಭಾಗದಿಂದ ಹಿಡಿದು ಪುಟ್ಟದಾದ ಕೊಕ್ಕಿನವರೆಗೆ ಆವರಿಸಿರುತ್ತದೆ. ರೆಕ್ಕೆಗಳು ಕಪ್ಪು ಮತ್ತು ಬೂದುಬಣ್ಣದಲ್ಲಿದ್ದರೆ, ತಲೆ, ಮುಖ, ಕತ್ತು ಮತ್ತು ಹೊಟ್ಟೆಯ ಭಾಗ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸುತ್ತದೆ. ಉಳಿದ ಪಕ್ಷಿಗಳಲ್ಲಿ ಕಾಣಿಸುವಂತೆ ಇದರ ಕೊಕ್ಕು ಕಾಣಿಸುವುದಿಲ್ಲ. ಬಾಯಿ ಕೂಡ ಪುಟ್ಟದಾಗಿರುತ್ತದೆ. ಕಣ್ಣುಗಳು ದೊಡ್ಡದಾಗಿ ಮತ್ತು ಆಕರ್ಷಕವಾಗಿರುತ್ತವೆ.

ಹೆಣ್ಣು: ಇದರ ದೇಹ ರಚನೆ ಗಂಡು ಪಕ್ಷಿಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಕಂದು ಮತ್ತು ಕಿತ್ತಳೆ ಮಿಶ್ರಿತ ಬಣ್ಣದ ಪುಕ್ಕದಿಂದ ದೇಹ ಆವರಿಸಿರುತ್ತದೆ. ಕಪ್ಪು, ಬೂದು ಮತ್ತು ಗಾಢ ಗೋದಿ ಬಣ್ಣದ ರೆಕ್ಕೆಗಳು ಇರುತ್ತವೆ. ಗಂಡಿಗಿರುವಂತೆ ಸುಂದರವಾದ ಜುಟ್ಟು ಇರುವುದಿಲ್ಲ. ಕೊಕ್ಕು ಚೂಪಾಗಿದ್ದು, ಎದ್ದು ಕಾಣಿಸುತ್ತದೆ.  ಕಣ್ಣುಗಳು ದೊಡ್ಡದಾಗಿ ವೃತ್ತಾಕಾರದಲ್ಲಿರುತ್ತವೆ. ಗಾತ್ರದಲ್ಲಿ ಗಂಡಿಗಿಂತ ಚಿಕ್ಕದಾಗಿದ್ದು, ಗಂಡಿನಷ್ಟು ಸುಂದರವಾಗಿ ಕಾಣುವುದಿಲ್ಲ.  

ಎಲ್ಲೆಲ್ಲಿವೆ? 

ಪೆರು, ಕೊಲಂಬಿಯಾ, ವೆನಿಜುವೆಲಾ ಮತ್ತು ದಕ್ಷಿಣ ಅಮೆರಿಕದಲ್ಲಿ ಇ‌ದರ ಸಂತತಿ ಹೆಚ್ಚಾಗಿ ವಿಸ್ತರಿಸಿದೆ. ಇದು ಬೆಟ್ಟಗಳ ಮೇಲೆ ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ.

ಆಹಾರ 

ಇದು ಮಿಶ್ರಹಾರಿಯಾಗಿದೆ. ಸಣ್ಣ ಕೀಟ, ಕಶೇರುಕ, ಬೀಜ ಮತ್ತು ಹಣ್ಣುಗಳನ್ನು ಸೇವಿಸುತ್ತದೆ. ಇದರ ಮುಖ್ಯ ಆಹಾರ ಹಣ್ಣು. ಕೆಲವೊಮ್ಮೆ ಹಣ್ಣುಗಳನ್ನು ತಿಂದ ನಂತರ ಬೀಜಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಉಗುಳುತ್ತವೆ. ಹೀಗೆ ಉಗುಳುವ ಬೀಜಗಳು ಸಸಿಗಳಾಗಿ ಮೊಳಕೆಯೊಡುತ್ತವೆ. ಹೀಗೆ ಅರಣ್ಯ ಅಭಿವೃದ್ಧಿಗೆ ಇದು ಪರೋಕ್ಷವಾಗಿ ಸಹಾಯ ಮಾಡುತ್ತಿದೆ. 

ಜೀವನ ಕ್ರಮ ಮತ್ತು ವರ್ತನೆ

ಈ ಪಕ್ಷಿ ಬಹುತೇಕ ಸಮಯ ಒಂಟಿಯಾಗಿ ಕಳೆಯುತ್ತದೆ. ಜೀವಿತಾವಧಿಯ ಬಹುತೇಕ ಸಮಯ ಎತ್ತರದ ಪ್ರದೇಶಗಳಲ್ಲಿಯೇ ವಾಸಿಸುತ್ತದೆ. ಅಂದಾಜು 1,600 ರಿಂದ 8,000 ಅಡಿ ಎತ್ತರದಲ್ಲಿ ಇದು ಹಾರಾಟ ನಡೆಸುತ್ತದೆ.

ಹದ್ದು, ಗೀಜಗ ಮತ್ತು ಕಾಡಿನಲ್ಲಿರುವ ಪರಭಕ್ಷಕ ಪ್ರಾಣಿಗಳು ಇವನ್ನು ಹೆಚ್ಚಾಗಿ ಬೇಟೆಯಾಡುತ್ತವೆ. ಪ್ರಸ್ತುತ ಈ ಹಕ್ಕಿ ಅಳಿವಿನಂಚಿನಲ್ಲಿದೆ.

ಸಂತಾನೋತ್ಪತ್ತಿ

ಹೆಣ್ಣು ಪಕ್ಷಿಗಳನ್ನು ಆಕರ್ಷಿಸಲು ಗಂಡು ಪಕ್ಷಿಗಳು ನೃತ್ಯ ಮಾಡುತ್ತವೆ. ಹೆಣ್ಣು ಪಕ್ಷಿ ಒಂದು ಬಾರಿಗೆ ಎರಡು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳನ್ನು ತಾಯಿ ಪಕ್ಷಿ ಅತ್ಯಂತ ಕಾಳಜಿಯಿಂದ ಕಾಪಾಡಿಕೊಳ್ಳುತ್ತದೆ. ಮೊಟ್ಟೆಗಳು 20 ರಿಂದ 28 ದಿನಗಳಲ್ಲಿ ಮರಿಗಳಾಗುತ್ತವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !