ಉದ್ದ ಕೋಡಿನ ಅಪರೂಪದ ಆಡು

ಮಂಗಳವಾರ, ಏಪ್ರಿಲ್ 23, 2019
27 °C

ಉದ್ದ ಕೋಡಿನ ಅಪರೂಪದ ಆಡು

Published:
Updated:
Prajavani

ಹಲವು ವರ್ಷಗಳಿಂದ ಮಾನವನ ಒಡನಾಟದಲ್ಲಿರುವ ನಾಯಿ, ಬೆಕ್ಕು, ಹಸು, ಎಮ್ಮೆಯಂತಹ ಸಾಕು ಪ್ರಾಣಿಗಳು ಹಲವು ಇವೆ. ಇವುಗಳಲ್ಲಿ ಕೆಲವು ಮಾನವನಿಗೆ ಆರ್ಥಿಕವಾಗಿಯೂ ನೆರವಾಗುತ್ತಿವೆ. ಅಂತಹ ಪ್ರಾಣಿಗಳಲ್ಲಿ ಮೇಕೆ, ಕುರಿ ಅಗ್ರಸ್ಥಾನದಲ್ಲಿವೆ. ವಿಶ್ವದ ಹಲವು ಪ್ರದೇಶಗಳಲ್ಲಿ ಭಿನ್ನ ಮೇಕೆ ತಳಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ‘ನ್ಯುಬಿಯನ್ ಮೇಕೆ’ ಕೂಡ ಒಂದು.

ಇದನ್ನು ಇಂಗ್ಲಿಷ್‌ನಲ್ಲಿ ನ್ಯಬಿಯನ್ ಐಬೆಕ್ಸ್‌ (Nubian Ibex) ಎನ್ನುತ್ತಾರೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ. ನ್ಯೂಬಿಯನ್ ಮೇಕೆಯ ವೈಜ್ಞಾನಿಕ ಹೆಸರು ಕ್ಯಾಪ್ರ ನ್ಯೂಬಿಯಾನಾ (Capra nubiana). ಇದು ಹಸು, ಎಮ್ಮೆಯಂತಹ ಸಸ್ಯಾಹಾರಿ ಪ್ರಾಣಿಗಳ ಬೊವಿಡೆ (Bovidae) ಕುಟುಂಬಕ್ಕೆ ಸೇರಿದೆ.

ಹೇಗಿರುತ್ತದೆ?
ಇದರ ದೇಹ ರಚನೆ ಭಾರತದಲ್ಲಿ ಕಾಣಸಿಗುವ ಮೇಕೆಗಳನ್ನೇ ಹೋಲುತ್ತದೆ. ಕಂದು, ಕಪ್ಪು ಮತ್ತು ಬಿಳಿ ಬಣ್ಣದ ತುಪ್ಪಳದಿಂದ ದೇಹ ಆವರಿಸಿರುತ್ತದೆ. ಉದರ ಮತ್ತು ಒಳಕಾಲುಗಳು, ಗಲ್ಲ, ಮೂಗಿನ ಸುತ್ತಲಿನ ಭಾಗ ಮಾತ್ರ ಬಿಳಿ ಬಣ್ಣದಲ್ಲಿದ್ದರೆ, ಉಳಿದ ಭಾಗ ಕಂದು ಮತ್ತು ಕಪ್ಪು ಮಿಶ್ರಿತ ತುಪ್ಪಳದಿಂದ ಕೂಡಿರುತ್ತದೆ. ಬೆನ್ನಿನ ಮೇಲಿನ ಕೂದಲು ಸದಾ ಸೆಟೆದು ನಿಂತಿರುತ್ತವೆ. ಗಡ್ಡ ನೀಳವಾಗಿ ಬೆಳೆದಿರುತ್ತದೆ.

ಕಣ್ಣುಗಳು ದೊಡ್ಡದಾಗಿದ್ದು, ಕಣ್ಣಾಲಿಗಳು ಹಳದಿ ಅಥವಾ ಕಂದು ಬಣ್ಣದಲ್ಲಿರುತ್ತವೆ. ಕಿವಿಗಳು ಎಲೆಯಾಕಾರದಲ್ಲಿದ್ದು ಸದಾ ಸೆಟೆದು ನಿಂತಿರುತ್ತವೆ. ಬಾಲ ಪುಟ್ಟದಾಗಿರುತ್ತದೆ. ಉಳಿದ ಮೇಕೆ ಪ್ರಭೇದಗಳಿಗೆ ಹೋಲಿಸಿದರೆ ಅತಿ ದೊಡ್ಡ ಆಕರ್ಷಕ ಕೋಡುಗಳನ್ನು ಹೊಂದಿದೆ. ಕೋಡುಗಳ ಮೇಲೆ ಬಳೆಯಾಕಾರಾದ ಗುರುತುಗಳು ಇರುತ್ತವೆ.

ಸ್ವಾರಸ್ಯಕರ ಸಂಗತಿಗಳು
* ಇದರ ಕೋಡುಗಳು 4 ಅಡಿಗಳವರೆಗೆ ಬೆಳೆಯುತ್ತವೆ.
* ಇದರ ತುಪ್ಪಳ ಜಲನಿರೋಧಕದಂತೆ ಕೆಲಸ ಮಾಡಿ, ಮಳೆಗಾಲದಲ್ಲಿ ರಕ್ಷಣೆ ನೀಡುತ್ತದೆ.
* ಗಂಡು ಮತ್ತು ಹೆಣ್ಣು ಎರಡಕ್ಕೂ ಕೋಡುಗಳು ಬೆಳೆಯುತ್ತವೆ. ಹೆಣ್ಣಿಗಿಂತ ಗಂಡಿನ ಕೋಡುಗಳು ಹೆಚ್ಚು ನೀಳವಾಗಿ ಮತ್ತು ದೊಡ್ಡದಾಗಿರುತ್ತವೆ.

ಆಹಾರ
ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಎಲೆಗಳು, ಹುಲ್ಲು, ಹಣ್ಣುಗಳೇ ಇದರ ಪ್ರಮುಖ ಆಹಾರ.

ಜೀವನಕ್ರಮ ಮತ್ತು ವರ್ತನೆ
ಅತಿ ಹೆಚ್ಚು ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ವಿಶ್ವದ ಏಕೈಕ ಮೇಕೆ ಪ್ರಭೇದ ಇದು. ದುರ್ಗಮವಾದ ಮತ್ತು ಬಂಡೆಗಲ್ಲುಗಳಿಂದ ಕೂಡಿರುವ ಪರ್ವತ ಪ್ರದೇಶಗಳಿಗೆ ಹೊಂದಿಕೊಂಡಿದ್ದು, ಅನಾಯಾಸವಾಗಿ ಪರ್ವತಗಳಲ್ಲಿ ಅಲೆದಾಡಬಲ್ಲದು. ಆಹಾರ ಬೇಕೆನಿಸಿದಾಗ ಮಾತ್ರ ಬಯಲು ಪ್ರದೇಶಗಳಲ್ಲಿ ಅಲೆಯುತ್ತದೆ. ಚಳಿ ಮತ್ತು ಮಳೆಗಾದಲ್ಲಿ ಬೆಟ್ಟಗಳ ಗುಹೆಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತದೆ.

ಹಗಲಿನಲ್ಲಿ ಮಾತ್ರ ಚುರುಕಾಗಿದ್ದು ಆಹಾರಕ್ಕಾಗಿ ಅಲೆಯುತ್ತದೆ. ಕತ್ತಲಾಗುತ್ತಿದ್ದಂತೆಯೇ ಗುಂಪಿನ ಎಲ್ಲ ಐಬೆಕ್ಸ್‌ಗಳು ಒಂದೆಡೆ ಕೂಡಿ ನಿದ್ರಿಸುತ್ತವೆ. ಒಂದು ಗುಂಪಿನಲ್ಲಿ ಸುಮಾರು 20 ಐಬೆಕ್ಸ್‌ಗಳು ಇರುತ್ತವೆ.

ಎಲ್ಲಿದೆ?
ಪೂರ್ವ ಈಜಿಪ್ಟ್‌ನ ನೈಲ್‌ ನದಿಯ ತೀರ ಪ್ರದೇಶ, ಉತ್ತರ ಸುಡಾನ್‌, ಉತ್ತರ ಇಥಿಯೋಪಿಯಾ, ಪಶ್ಚಿಮ ಎರಿಟ್ರಿಯಾ, ಇಸ್ರೇಲ್‌, ಪಶ್ಚಿಮ ಜೋರ್ಡಾನ್, ಕೇಂದ್ರ ಸೌದಿ ಅರೇಬಿಯಾ, ಯೆಮೆನ್ ಮತ್ತು ದಕ್ಷಿಣ ಒಮನ್ ದೇಶಗಳ ಪ್ರದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಪರ್ವತ ಪ್ರದೇಶಗಳು, ಮರುಭೂಮಿಯಂತಹ ಶುಷ್ಕ ವಾತಾವರಣ ಇರುವ ಪ್ರದೇಶಗಳು, ಕಣಿವೆಗಳಲ್ಲಿ ಇದು ವಾಸಿಸುತ್ತದೆ.

ಸಂತಾನೋತ್ತತ್ತಿ
ಜನಿಸಿದ ಮೂರು ವರ್ಷಗಳ ನಂತರ ವಯಸ್ಕ ಹಂತಕ್ಕೆ ತಲುಪುತ್ತದೆ. ದೊಡ್ಡದಾದ ಮತ್ತು ಆಕರ್ಷಕ ಕೋಡುಗಳನ್ನು ಹೊಂದಿರುವ ಗುಂಪಿನ ಗಂಡು ಐಬೆಕ್ಸ್‌ಗಳು ಹೆಣ್ಣನ್ನು ಹೆಚ್ಚು ಆಕರ್ಷಿಸುತ್ತವೆ. ಕಿವಿಗಳ ಚಲನೆಗಳ ಮತ್ತು ವಿವಿಧ ಭಂಗಿಗಳ ಮೂಲಕ ಸಂವಹನ ನಡೆಸುತ್ತದೆ. ಸುಮಾರು 5 ತಿಂಗಳು ಗರ್ಭಧರಿಸಿ ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !